[1] ಯೆಹೋವನು ಮತ್ತೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
[2] “ನರಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು.
[3] ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಬಾಲ್ಯದಲ್ಲೇ ವ್ಯಭಿಚಾರ ಮಾಡಿದ್ದರಿಂದ ಅವರ ಸ್ತನಗಳು ಹಿಸುಕಲ್ಪಟ್ಟವು. ಎಳೆಯ ತೊಟ್ಟುಗಳು ನಸುಕಲ್ಪಟ್ಟವು.
[4] ಅವರ ಹೆಸರುಗಳೇನೆಂದರೆ: ಹಿರಿಯವಳ ಹೆಸರು ಒಹೊಲ ಮತ್ತು ಕಿರಿಯವಳ ಹೆಸರು ಒಹೊಲೀಬ. ಅವರು ನನ್ನವರಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೆತ್ತರು. ಒಹೊಲ ಸಮಾರ್ಯವನ್ನೂ, ಒಹೊಲೀಬ ಯೆರೂಸಲೇಮನ್ನೂ ಸೂಚಿಸತಕ್ಕ ಹೆಸರುಗಳಾಗಿವೆ.
[5] “ಒಹೊಲಳು ನನ್ನ ವಶವಾಗಿರುವಾಗಲೇ, ವ್ಯಭಿಚಾರ ಮಾಡಿದಳು. ಅವಳು ತನ್ನ ಪ್ರಿಯರನ್ನು, ತನ್ನ ನೆರೆಯವರಾದ ಅಶ್ಶೂರ್ಯರನ್ನು,
[6] ಅವರೆಲ್ಲರೂ ನೇರಳೆ ಬಣ್ಣದಿಂದ ಹೊದಿಸಲ್ಪಟ್ಟ ಯೋಧರೂ, ಅಧಿಕಾರಸ್ಥರೂ, ಅಪೇಕ್ಷಿಸತಕ್ಕ ಎಲ್ಲಾ ಯುವಕರೂ, ಕುದರೆಗಳ ಮೇಲೆ ಸವಾರಿಮಾಡುವ ರಾಹುತರೂ ಆಗಿರುವವರನ್ನು ಮೋಹಿಸಿದಳು.
[7] ಅವರಿಗೆ ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು; ಅವರೆಲ್ಲರೂ ಅಶ್ಶೂರ್ಯರಲ್ಲಿ ಉತ್ತಮೋತ್ತಮರು; ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರಪಡಿಸಿಕೊಂಡಳು.
[8] ಅವಳು ಐಗುಪ್ತದಲ್ಲಿ ವಾಸಿಸುವ ದಿನದವರೆಗೂ ತನ್ನ ವ್ಯಭಿಚಾರವನ್ನು ಬಿಡಲಿಲ್ಲ; ಅವಳ ಬಾಲ್ಯದಲ್ಲಿಯೇ ಅಲ್ಲಿನವರು ಅವಳೊಂದಿಗೆ ಮಲಗಿ, ಅವಳ ಎಳೆಯ ತೊಟ್ಟುಗಳನ್ನು ಒತ್ತಿ, ಅವಳ ಸಂಗಡ ವ್ಯಭಿಚಾರಿಕೆಯನ್ನು ಹೆಚ್ಚೆಚ್ಚಾಗಿ ನಡೆಸಿದರು.
[9] “ಆದಕಾರಣ ನಾನು ಅವಳನ್ನು ಅವಳ ಪ್ರಿಯರ ಕೈಗೆ ಅಂದರೆ ಅವಳು ಮೋಹಿಸಿದ ಅಶ್ಶೂರ್ಯರ ಕೈಗೆ ಒಪ್ಪಿಸಿದೆನು.
[10] ಇವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಮತ್ತು ಅವಳ ಗಂಡು, ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ ಅವರನ್ನು ಖಡ್ಗದಿಂದ ಸಂಹರಿಸಿದರು. ನ್ಯಾಯತೀರ್ಪು ಮಾಡುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.”
[11] “ಅವಳ ತಂಗಿಯಾದ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡು, ಅಕ್ಕನ ವ್ಯಭಿಚಾರಕ್ಕಿಂತ ಹೆಚ್ಚಾದ ವ್ಯಭಿಚಾರವನ್ನು ನಡೆಸಿ, ಅವಳನ್ನು ಮೀರುವಷ್ಟು ಕೆಟ್ಟವಳಾದಳು.
[12] ಇವಳು ತನ್ನ ನೆರೆಯವರಾದ ಅಶ್ಶೂರ್ಯರನ್ನೂ, ನಾಯಕರನ್ನೂ, ಅಧಿಕಾರಿಗಳನ್ನು ವಿಚಿತ್ರವಾಗಿ ಉಡುಪು ಧರಿಸಿ ಕುದರೆಗಳ ಮೇಲೆ ಸವಾರಿಮಾಡುವ ರಾಹುತರನ್ನು, ಸುಂದರವಾದ ಯುವಕರನ್ನು ಮೋಹಿಸಿದಳು.
[13] ಇವಳೂ ಅಪವಿತ್ರಳಾಗಿ ಹೋದದ್ದನ್ನು ನೋಡಿದೆನು. ಅವರಿಬ್ಬರು ಒಂದೇ ಮಾರ್ಗವನ್ನು ಹಿಡಿದವರು.
[14] “ಇವಳು ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು; ಗೋಡೆಯ ಮೇಲೆ ಚಿತ್ರಿಸಲ್ಪಟ್ಟ ಕಸ್ದೀಯರ ಪುರುಷರನ್ನು ನೋಡಿದಳು.
[15] ಅವರು ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ, ತಲೆಗೆ ರುಮಾಲನ್ನು ಧರಿಸಿ, ನೋಟಕ್ಕೆ ಸರದಾರರಂತಿದ್ದ ತಮ್ಮ ಸ್ವದೇಶವಾದ ಕಸ್ದೀಯಕ್ಕೆ ಸೇರಿದ ಬಾಬೆಲಿನ ಪುತ್ರರ ಹಾಗಿರುವ ಆಕಾರಗಳು ಗೋಡೆಯಲ್ಲಿ ಕಿರುಮಂಜಿಯಿಂದ ಚಿತ್ರಿಸಿರುವುದನ್ನು ನೋಡಿದ ಕೂಡಲೆ,
[16] ಇವಳು ಮೋಹಗೊಂಡು, ಕಸ್ದೀಯ ದೇಶಕ್ಕೆ ದೂತರನ್ನು ಕಳುಹಿಸಿದಳು.
[17] ಆಗ ಬಾಬೆಲಿನವರು ಇವಳ ಪ್ರೀತಿಯ ಮಂಚವನ್ನೇರಿ ತಮ್ಮ ವ್ಯಭಿಚಾರಿಕೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಅಪವಿತ್ರವಾಗಲು, ಅವಳಿಗೆ ಈ ಬಗ್ಗೆ ಜಿಗುಪ್ಸೆಯಾಯಿತು.
[18] ಹೀಗೆ ಇವಳು ವ್ಯಭಿಚಾರವನ್ನು ಮಾಡಿ, ತನ್ನ ಬೆತ್ತಲೆತನವನ್ನು ಬಯಲುಪಡಿಸಿಕೊಂಡಾಗ, ತನ್ನ ಪ್ರೀತಿಯು ಮೊದಲು ಇವಳ ಅಕ್ಕನಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.
[19] ಆದರೂ ಇವಳು ತಾನು ಐಗುಪ್ತ ದೇಶದಲ್ಲಿ ವ್ಯಭಿಚಾರಿಯಾಗಿದ್ದ ತನ್ನ ಎಳೆಯ ಪ್ರಾಯವನ್ನು ಜ್ಞಾಪಕಮಾಡಿಕೊಂಡು, ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು.
[20] ಕತ್ತೆಗಳಂತೆ ಬೆದೆಯುಳ್ಳವರೂ, ಕುದುರೆಗಳಂತೆ ದಾಟುವವರೂ ಆದ ಕಸ್ದೀಯ ವೀರರನ್ನು ಮೋಹಿಸಿದಳು.
[21] ಹೀಗೆ ಐಗುಪ್ತ್ಯರಿಂದ ನಿನ್ನ ಯೌವನದ ಸ್ತನಗಳ ತೊಟ್ಟುಗಳನ್ನು ಬತ್ತಿಸಿಕೊಂಡ, ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ.”
[22] ಆದುದರಿಂದ ಒಹೊಲೀಬಳೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಯಾರಿಂದ ನಿನ್ನ ಆಶೆ ತೊಲಗಿತೋ, ಆ ನಿನ್ನ ಪ್ರಿಯನನ್ನು ನಾನು ನಿನ್ನ ವಿರುದ್ಧವಾಗಿ ಎಬ್ಬಿಸುತ್ತೇನೆ. ನಾನು ಅವರನ್ನು ಪ್ರತಿಯೊಂದು ಕಡೆಯಲ್ಲಿಯೂ ನಿನ್ನ ವಿರುದ್ಧವಾಗಿ ತರುತ್ತೇನೆ.
[23] ಬಾಬಿಲೋನಿನವರು, ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು, ಕೋಯದವರು ಮತ್ತು ಎಲ್ಲಾ ಅಶ್ಶೂರ್ಯರೆಲ್ಲರೊಂದಿಗೂ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ, ಸೈನ್ಯಾಧಿಪತಿಗಳೂ, ಅಧಿಕಾರಸ್ಥರೂ, ಯುದ್ಧವೀರರು, ಖ್ಯಾತಿ ಹೊಂದಿದವರೂ, ಎಲ್ಲರೂ ಕುದರೆಗಳ ಮೇಲೆ ಬೀಳುವಂತೆ ಮಾಡುವೆನು.
[24] ಅವರು ರಥಗಳ ಸಂಗಡವಾಗಿಯೂ, ಬಂಡಿಗಳ ಸಂಗಡ ಜನಗಳ ಸಮೂಹದ ಸಂಗಡ, ಬಲವುಳ್ಳವರಾಗಿ ನಿನ್ನ ವಿರುದ್ಧವಾಗಿ ಬರುವರು; ಸುತ್ತಲೂ ಗುರಾಣಿಗಳನ್ನೂ, ಶಿರಸ್ತ್ರಾಣವನ್ನೂ, ಹಿಡಿದು ನಿನಗೆ ವಿರುದ್ಧವಾಗಿರುವೆನು. ಇದಲ್ಲದೆ ನಾನು ಅವರಿಗೆ ನ್ಯಾಯ ತೀರಿಸುವ ಅಧಿಕಾರವನ್ನು ಕೊಡುವೆನು. ಅವರು ತಮ್ಮ ನ್ಯಾಯಾನುಸಾರವಾಗಿ ನ್ಯಾಯತೀರಿಸುವರು.
[25] ನಾನು ನನ್ನ ರೋಷವನ್ನು ನಿನ್ನ ಮೇಲೆ ಸುರಿಯಲು, ಅವರು ನಿನ್ನಲ್ಲಿ ಕೋಪವನ್ನು ತೀರಿಸಿಕೊಳ್ಳುವರು; ನಿನ್ನ ಮೂಗು, ಕಿವಿಗಳನ್ನು ಕತ್ತರಿಸಿಬಿಡುವರು; ನಿನ್ನಲ್ಲಿ ಉಳಿದವರು ಖಡ್ಗಕ್ಕೆ ತುತ್ತಾಗುವುರು; ನಿನ್ನ ಗಂಡು ಮತ್ತು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನ ಜನಶೇಷವು ಅಗ್ನಿಗೆ ಆಹುತಿಯಾಗುವುದು.
[26] ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸುಂದರ ಒಡವೆಗಳನ್ನು ಕಸಿದುಕೊಳ್ಳುವರು.
[27] ಹೀಗೆ ನಾನು ನಿನ್ನ ದುಷ್ಕರ್ಮವನ್ನು, ನೀನು ಐಗುಪ್ತದಲ್ಲಿ ಇದ್ದಂದಿನಿಂದ ನಡೆದು ಬಂದ ನಿನ್ನ ವ್ಯಭಿಚಾರವನ್ನೂ ನಿನ್ನಿಂದ ತೊಲಗಿಸುವೆನು; ಆ ಮೇಲೆ ನೀನು ಅವರ ಕಡೆಗೆ ಇನ್ನು ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತಾರದೆ ಇರುವಿ.”
[28] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನೀನು ಯಾರನ್ನು ಹಗೆಮಾಡುತ್ತೀಯೋ, ನಿನ್ನ ಆಶೆಯು ಯಾರಿಂದ ಹಿಂದಿರುಗಿತೋ ಅವರ ಕೈಗೆ ನಿನ್ನನ್ನು ನಾನು ಒಪ್ಪಿಸಲು,
[29] ಅವರು ನಿನ್ನಲ್ಲಿ ಹಗೆ ತೀರಿಸಿಕೊಂಡು, ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬರಿದುಮಾಡಿ ಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ವ್ಯಭಿಚಾರವು, ಹೌದು, ನಿನ್ನ ದುಷ್ಕರ್ಮವು ಮತ್ತು ವ್ಯಭಿಚಾರವೂ ಬಯಲಿಗೆ ಬರುವುದು.
[30] “ಈ ವಿಪತ್ತುಗಳು ನಿನಗೆ ಸಂಭವಿಸುವುದಕ್ಕೆ, ನೀನು ಜನಾಂಗಗಳನ್ನು ಮೋಹಿಸಿ, ಅವರ ವಿಗ್ರಹಗಳಿಂದ ನಿನ್ನನ್ನು ಅಪವಿತ್ರ ಮಾಡಿಕೊಂಡದ್ದೇ ಕಾರಣ.
[31] ನೀನು, ನಿನ್ನ ಅಕ್ಕನ ಮಾರ್ಗದಲ್ಲಿ ನಡೆದುಕೊಂಡಿದ್ದರಿಂದ ಅವಳು ಕುಡಿದ ಪಾತ್ರೆಯನ್ನೇ ನಿನ್ನ ಕೈಗೆ ಕೊಡುವೆನು.”
[32] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಉದ್ದವೂ, ಅಗಲವೂ, ಬಹಳ ತುಂಬುವ, ನಿನ್ನ ಅಕ್ಕನ ಪಾತ್ರೆಯಲ್ಲಿ ನೀನು ಕುಡಿದು, ಹಾಸ್ಯಕ್ಕೂ, ಕುಚೋದ್ಯಕ್ಕೂ ಗುರಿಯಾಗುವಿ.
[33] ಸಮಾರ್ಯಳೆಂಬ ನಿನ್ನ ಅಕ್ಕನು ಕುಡಿದ ಪಾತ್ರೆಯಿಂದಲೇ ವಿಸ್ಮಯವೂ, ನಾಶವೂ ಆಗುವುದು. ನೀನು ಅಮಲಿನಿಂದಲೂ, ದುಃಖದಿಂದಲೂ ತುಂಬಿರುವೆ.
[34] “ನೀನು ಅದರಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿಯುವಿ. ಅದನ್ನು ಬೋಕಿಗಳ ಹಾಗೆ ಒಡೆದುಹಾಕುವೆ ಮತ್ತು ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವಿ. ಏಕೆಂದರೆ ನಾನೇ ಅದನ್ನು ಹೇಳಿದ್ದೇನೆ” ಎಂಬುದು ಕರ್ತನಾದ ಯೆಹೋವನ ನುಡಿ.
[35] ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ನನ್ನನ್ನು ಬೆನ್ನಿನ ಹಿಂದೆ ಮರೆಮಾಡಿ, ಮರೆತುಬಿಟ್ಟಿದ್ದರಿಂದ ನಿನ್ನ ದುಷ್ಕರ್ಮದ ಮತ್ತು ವ್ಯಭಿಚಾರದ ಫಲವನ್ನು ನೀನೇ ಅನುಭವಿಸಬೇಕು.”
[36] ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಒಹೊಲಳಿಗೂ, ಒಹೊಲೀಬಳಿಗೂ ನ್ಯಾಯತೀರುಸುವೆಯೋ? ಅವರ ದುರಾಚಾರಗಳನ್ನು ಅವರಿಗೆ ತಿಳಿಸು.
[37] ಅವರು ವ್ಯಭಿಚಾರ ಮಾಡಿದ್ದಾರೆ, ಅವರ ಕೈ ರಕ್ತಮಯವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರಮಾಡಿದ್ದಾರೆ, ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬದಲಾಗಿ ಆಹುತಿಕೊಟ್ಟಿದ್ದಾರೆ.
[38] ಇದನ್ನು ಮಾಡಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಅಪವಿತ್ರ ಪಡಿಸಿ, ನಾನು ನೇಮಿಸಿದ ಸಬ್ಬತ್ ದಿನವನ್ನು ಅಪವಿತ್ರ ಮಾಡಿದ್ದಾರೆ.
[39] ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರ ಮಾಡಿದರು; ಇಗೋ, ನನ್ನ ಮಂದಿರದ ಒಳಗೆ ಇದನ್ನು ನಡೆಸಿದ್ದಾರೆ.
[40] “ದೂತನನ್ನು ಕಳುಹಿಸಿ, ಪುರುಷರನ್ನು ದೂರದಿಂದ ಕರೆಯಿಸಿಕೊಂಡರು; ಇಗೋ, ಅವರು ಬಂದರು; ಎಲೈ ಹೆಂಗಸೇ, ಅವರಿಗಾಗಿ ನೀನು ಸ್ನಾನಮಾಡಿ ಕಣ್ಣಿಗೆ ಕಾಡಿಗೆ ಹಚ್ಚಿ, ನಿನ್ನನ್ನು ಆಭರಣಗಳಿಂದ ಶೃಂಗರಿಸಿಕೊಂಡೆ.
[41] ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.
[42] “ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನ ಶಬ್ದವು ಇತ್ತು. ಮರುಭೂಮಿಯಿಂದ ಕುಡುಕರನ್ನೂ ಕರೆಯಿಸಿಕೊಂಡು ಅವರು ನಾಡಿನ ಜನರೊಂದಿಗೆ ಸೇರಿ, ನಿನ್ನ ಕೈಗೆ ಕಡಗವನ್ನು ತೊಡಿಸಿ, ತಲೆಗೆ ಸುಂದರ ಕಿರೀಟವನ್ನಿಟ್ಟರು.
[43] ಆಗ ನಾನು, ‘ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ, ಅವಳು ಇವರೊಂದಿಗೆ ವ್ಯಭಿಚಾರ ಮಾಡುತ್ತಾರಲ್ಲಾ’ ಅಂದುಕೊಂಡೆನು.
[44] ವ್ಯಭಿಚಾರಿಯನ್ನು ಸೇರುವ ಹಾಗೆ ಈ ಜನರು ಅವಳನ್ನು ಸೇರಿದರು; ಹೌದು, ಕೆಟ್ಟ ಹೆಂಗಸರಾದ ಒಹೊಲಳನ್ನೂ ಮತ್ತು ಒಹೊಲೀಬಳನ್ನೂ ಸೇರಿದರು.
[45] ನೀತಿಯುಳ್ಳ ಮನುಷ್ಯರು ಅವರಿಗೆ ನ್ಯಾಯತೀರಿಸಿ, ವ್ಯಭಿಚಾರಿಣಿಯರಿಗೂ, ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಮಯವಾಗಿದೆ.”
[46] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಈ ಹೆಂಗಸರ ವಿರುದ್ಧವಾಗಿ ಸಭೆಯನ್ನು ಸೇರಿಸಿ, ಇವರನ್ನು ಸೂರೆಗೆ ಸಿಕ್ಕಿಸಿ, ಎಲ್ಲರಿಗೂ ಭಯಾಸ್ಪದವಾಗುವಂತೆ ಮಾಡುವೆನು.
[47] ಸಭೆಯವರು ಇವರ ಮೇಲೆ ಕಲ್ಲೆಸೆದು, ಕತ್ತಿಗಳಿಂದ ಇವರನ್ನು ಸಂಹರಿಸಿ, ಇವರ ಗಂಡು ಮತ್ತು ಹೆಣ್ಣು ಮಕ್ಕಳನ್ನು ಕೊಂದು, ಇವರ ಮನೆಗಳನ್ನು ಬೆಂಕಿಯಿಂದ ಸುಟ್ಟುಬಿಡುವರು.
[48] “ಹೀಗೆ ನಾನು ದೇಶದೊಳಗಿಂದ ದುಷ್ಕರ್ಮವನ್ನು ತೊಲಗಿಸುವೆನು; ಇದರಿಂದ ಸಮಸ್ತ ಸ್ತ್ರೀಯರಿಗೂ ನಿಮ್ಮ ದುಷ್ಕರ್ಮವನ್ನು ಅನುಸರಿಸಬಾರದೆಂದು ಬುದ್ಧಿ ಬರುವುದು.
[49] ನಿಮ್ಮ ದುಷ್ಕರ್ಮದ ಫಲವನ್ನು ನಿಮಗೇ ತಿನ್ನಿಸುವರು; ನಿಮ್ಮ ವಿಗ್ರಹಗಳಿಂದಾದ ನಿಮ್ಮ ಪಾಪವನ್ನು ನೀವು ಅನುಭವಿಸುವಿರಿ. ನಾನೇ ಕರ್ತನಾದ ಯೆಹೋವನು” ಎಂದು ತಿಳಿದುಕೊಳ್ಳುವಿರಿ.