[1] ಆತನು ನನಗೆ, “ನರಪುತ್ರನೇ, ನಿನಗೆ ಸಿಕ್ಕಿದ ಈ ಸುರುಳಿಯನ್ನು ತಿನ್ನು; ಅನಂತರ ನೀನು ಹೋಗಿ (ಇದರಲ್ಲಿನ ಸಂಗತಿಗಳನ್ನು) ಇಸ್ರಾಯೇಲ್ ವಂಶದವರಿಗೆ ಸಾರು” ಎಂದು ಅಪ್ಪಣೆಕೊಟ್ಟನು.
[2] ನಾನು ಬಾಯಿ ತೆರೆದೆ, ಆತನು ಆ ಸುರುಳಿಯನ್ನು ನನಗೆ ತಿನ್ನಿಸಿದನು.
[3] ಆಗ ಆತನು ನನಗೆ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ” ಎಂದು ಹೇಳಲು ಅದನ್ನು ತಿಂದುಬಿಟ್ಟೆನು; ಅದು ನನ್ನ ಬಾಯಿಯಲ್ಲಿ ಜೇನಿನಂತೆ ಸಿಹಿಯಾಗಿತ್ತು.
[4] ಆಮೇಲೆ ಆತನು ನನಗೆ ಹೀಗೆಂದನು, “ನರಪುತ್ರನೇ, ನೀನು ಇಸ್ರಾಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು.
[5] ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಬಳಿಗೆ ಕಳುಹಿಸುತ್ತೇನೆಯೇ ಹೊರತು ಕಷ್ಟಕರವಾದ ಅನ್ಯಭಾಷೆಯ ಜನರ ಬಳಿಗೆ ಕಳುಹಿಸುವುದಿಲ್ಲ.
[6] ಹೌದು, ನಿನಗೆ ಅರ್ಥವಾಗದ ಕಷ್ಟಕರವಾದ ಅನ್ಯಭಾಷೆಯನ್ನಾಡುವ ನಾನಾ ಜನಾಂಗಗಳ ಬಳಿಗೆ ನಿನ್ನನು ಕಳುಹಿಸುವುದಿಲ್ಲ. ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ ಪಕ್ಷದಲ್ಲಿ ಅವರಾದರೂ ನಿಶ್ಚಯವಾಗಿ ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು.
[7] ಇಸ್ರಾಯೇಲ್ ವಂಶದವರೋ ನಿನಗೆ ಕಿವಿಗೊಡಲು ಸಿದ್ಧರಿಲ್ಲ; ನನಗೂ ಕಿವಿಗೊಡಲು ಸಿದ್ಧರಿಲ್ಲ; ಅವರೆಲ್ಲರೂ ನಾಚಿಕೆಗೆಟ್ಟವರೂ, ಹಟಮಾರಿಗಳು ಆಗಿದ್ದಾರೆ.
[8] ಇಗೋ, ನಾನು ಅವರ ಕಠಿಣ ಹೃದಯಕ್ಕೆ ವಿರುದ್ಧವಾಗಿ ನಿನ್ನ ಹೃದಯವನ್ನು ಕಠಿಣಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ.
[9] ನಿನ್ನ ನಿರ್ಧಾರವನ್ನು ಕಗ್ಗಲ್ಲಿಗಿಂತ ಗಟ್ಟಿಯಾದ ವಜ್ರದಂತೆ ಮಾಡಿದ್ದೇನೆ; ಅವರು ತಿರುಗಿ ಬೀಳುವ ಮನೆತನದವರು, ಅವರಿಗೆ ಭಯಪಡಬೇಡ; ಅವರ ಬಿರುನೋಟಕ್ಕೆ ಹೆದರದಿರು.”
[10] ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ನಿನಗೆ ಹೇಳುವ ಮಾತುಗಳನ್ನೆಲ್ಲಾ ಕಿವಿಯಿಂದ ಕೇಳಿ ಹೃದಯದಲ್ಲಿಟ್ಟುಕೋ.
[11] ಸೆರೆಯಾಗಿರುವ ನಿನ್ನ ಸ್ವಂತ ಜನರ ಬಳಿಗೆ ಹೋಗಿ ಅವರು ಕೇಳಿದರೂ, ಕೇಳದೆ ಹೋದರೂ ಅವರನ್ನು ಉದ್ದೇಶಿಸಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ಅವರಿಗೆ ಸಾರು.”
[12] ಆಮೇಲೆ ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಗಲಾಗಿ, “ಮಹಿಮೆಯುಳ್ಳ ಯೆಹೋವನಿಗೆ ಆತನ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ” ಎಂಬ ಮಹಾಶಬ್ದವು ನನ್ನ ಹಿಂದೆ ಕೇಳಿಸಿತು.
[13] ಜೀವಿಗಳ ರೆಕ್ಕೆಗಳು ಒಂದಕ್ಕೊಂದು ಬಡಿಯುವ ಸಪ್ಪಳ, ಅವುಗಳ ಪಕ್ಕದಲ್ಲಿ ಗರಗರನೆ ತಿರುಗುವ ಚಕ್ರಗಳ ಸದ್ದು, ಹೀಗೆ ಭೂಕಂಪದಂಥ ಮಹಾಶಬ್ದವು ನನ್ನ ಕಿವಿಗೆ ಬಿತ್ತು.
[14] ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಯಿತು. ನಾನು ಚಿಂತೆಯಿಂದ ಮನಸ್ತಾಪಪಡುತ್ತಾ ಹೋದೆನು. ಆದರೆ ಯೆಹೋವನ ಕೈ ನನ್ನ ಮೇಲೆ ಬಲವಾಗಿತ್ತು.
[15] ಆಗ ಸೆರೆಯಾಗಿ ಒಯ್ಯಲ್ಪಟ್ಟು ಕೆಬಾರ್ ನದಿಯ ಹತ್ತಿರ ತೇಲ್ ಆಬೀಬಿನಲ್ಲಿ ವಾಸವಾಗಿದ್ದವರ ಬಳಿಗೆ ಬಂದು, ಅವರು ಕುಳಿತುಕೊಂಡಿದ್ದ ಸ್ಥಳದಲ್ಲಿಯೇ ಕುಳಿತುಕೊಂಡೆನು; ಏಳು ದಿನಗಳವರೆಗೂ ಅಲ್ಲೇ ಅವರ ಮಧ್ಯದಲ್ಲಿ ಸ್ತಬ್ಧನಾಗಿ ಉಳಿದುಬಿಟ್ಟೆನು.
[16] ಏಳು ದಿನಗಳಾದ ಮೇಲೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
[17] “ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ಪರವಾಗಿ ಅವರನ್ನು ಎಚ್ಚರಿಸು.
[18] ನಾನು ದುಷ್ಟನಿಗೆ, ‘ನೀನು ಖಂಡಿತವಾಗಿ ಸಾಯುವೆ’ ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆಯೂ, ಅವನು ತನ್ನ ಕೆಟ್ಟಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆಯೂ ಇದ್ದರೆ ಆ ದುಷ್ಟನು ತನ್ನ ಅಪರಾಧದಿಂದ ಸಾಯಬೇಕಾಗುವುದು; ಅವನ ಮರಣಕ್ಕೆ ನೀನು ಹೊಣೆಯಾಗುವೆ.
[19] ನೀನು ದುಷ್ಟನನ್ನು ಎಚ್ಚರಿಸಿದರೂ, ಅವನು ತನ್ನ ದುಷ್ಟತನವನ್ನೂ, ಕೆಟ್ಟಮಾರ್ಗವನ್ನೂ ಬಿಡದೆಹೋದರೆ ತನ್ನ ಅಪರಾಧದಿಂದಲೇ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.
[20] ಇದಲ್ಲದೆ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯಮಾಡುವವನಾದರೆ, ಆಗ ನಾನು ಅವನ ಮುಂದೆ ಅಡಚಣೆಯನ್ನು ಒಡ್ಡುವೆನು, ಎಡವಿದರೆ ಅವನು ಸಾಯುವನು; ನೀನು ಅವನನ್ನು ಎಚ್ಚರಿಸದೆ ಹೋದಕಾರಣ ಅವನು ತನ್ನ ಪಾಪದಿಂದ ಸಾಯಬೇಕಾಯಿತು. ಅವನು ಮಾಡಿದ ಒಳ್ಳೆಕಾರ್ಯಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅವನ ಮರಣಕ್ಕೆ ನೀನು ಹೊಣೆಯಾಗುವೆ.
[21] ನೀನು ನೀತಿವಂತನನ್ನು ಪಾಪ ಮಾಡದಂತೆ ಎಚ್ಚರಿಸಿದ ಮೇಲೆ ಅವನು ಪಾಪಮಾಡದೆ ಎಚ್ಚರಗೊಂಡ ಕಾರಣ ಜೀವದಿಂದ ಉಳಿಯುವನು; ನೀನೂ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.”
[22] ಅದೇ ಸ್ಥಳದಲ್ಲಿ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು ಆತನು ನನಗೆ, “ನೀನು ಎದ್ದು, ಬಯಲು ಸೀಮೆಗೆ ಹೊರಡು, ಅಲ್ಲಿ ನಾನು ನಿನ್ನೊಂದಿಗೆ ಮಾತನಾಡುವೆನು” ಎಂದು ಹೇಳಿದನು.
[23] ನಾನು ಎದ್ದು ಬಯಲು ಸೀಮೆಗೆ ಹೊರಟುಹೋದೆನು. ಯೆಹೋವನ ಮಹಿಮೆಯು ಅಲ್ಲಿ ನಿಂತಿತ್ತು. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿತ್ತು. ಅದನ್ನು ಕಂಡು ಅಡ್ಡಬಿದ್ದೆನು.
[24] ದೇವರಾತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಎದ್ದು ನಿಂತುಕೊಳ್ಳುವಂತೆ ಮಾಡಿದ ಮೇಲೆ ಆತನು ನನಗೆ ಹೀಗೆ ಹೇಳಿದನು, “ನೀನು ಹೋಗಿ ನಿನ್ನ ಮನೆಯೊಳಗೆ ಅಡಗಿಕೋ.
[25] ನರಪುತ್ರನೇ, ಇಗೋ, ನಿನ್ನ ಸ್ವಜನರು ನಿನ್ನನ್ನು ಬಂಧಿಸಿ ಕಟ್ಟುವರು, ನೀನು ಹೊರಗೆ ಸಂಚರಿಸಲು ಆಗುವುದಿಲ್ಲ.
[26] ಇದಲ್ಲದೆ ನಿನ್ನ ನಾಲಿಗೆಯು ಸೇದಿ ಹೋಗಿ ನೀನು ಮೂಕನಾಗಿರುವಂತೆ ಮಾಡುವೆನು; ನೀನು ಅವರನ್ನು ಖಂಡಿಸಲಾರೆ; ಅವರು ತಿರುಗಿ ಬೀಳುವ ಮನೆತನದವರಾಗಿದ್ದಾರೆ.
[27] ನಾನು ನಿನ್ನೊಡನೆ ಮತ್ತೆ ಮಾತನಾಡುವಾಗ ನಾನು ನಿನ್ನ ಬಾಯಿಯನ್ನು ಬಿಚ್ಚುವೆನು; ಆಗ ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ಹೇಳಬೇಕು; ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ; ಅವರು ತಿರುಗಿ ಬೀಳುವ ವಂಶದವರೇ.”