Skip to content
Opens in a new window
Listen to this chapter • 6:43

[1] ತರುವಾಯ ಆ ಪುರುಷನು ನನ್ನನ್ನು ಪವಿತ್ರಾಲಯದ ಪೂರ್ವದಿಕ್ಕಿನ ಹೊರಗಿನ ಹೆಬ್ಬಾಗಿಲಿಗೆ ತಿರುಗಿ ಕರೆದುಕೊಂಡು ಬಂದನು. ಅದು ಮುಚ್ಚಲ್ಪಟ್ಟಿತ್ತು.

[2] ಆಗ ಯೆಹೋವನು ನನಗೆ, “ಈ ಬಾಗಿಲು ಮುಚ್ಚಲ್ಪಟ್ಟಿರಬೇಕು, ಇದನ್ನು ತೆರೆಯಬಾರದು, ಇದರಿಂದ ಯಾರೂ ಪ್ರವೇಶಿಸಬಾರದು. ಇಸ್ರಾಯೇಲಿನ ದೇವರಾದ ಯೆಹೋವನು ಇದರಿಂದ ಪ್ರವೇಶಿಸಿದ್ದಾನೆ. ಆದುದರಿಂದ ಇದು ಮುಚ್ಚಿರಬೇಕು.

[3] ಇಸ್ರಾಯೇಲಿನ ಪ್ರಭುವೋ ಯೆಹೋವನ ಸನ್ನಿಧಿಯಲ್ಲಿ ಊಟ ಮಾಡುವುದಕ್ಕಾಗಿ ಇಲ್ಲಿ ಕುಳಿತುಕೊಳ್ಳಬಹುದು. ಅವನು ಹೆಬ್ಬಾಗಿಲ ಪಡಸಾಲೆಯ ಮಾರ್ಗವಾಗಿ ಪ್ರವೇಶಿಸಿ, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು” ಎಂದು ಹೇಳಿದನು.

[4] ಬಳಿಕ ಆ ಪುರುಷನು ಉತ್ತರದಿಕ್ಕಿನ ಹೆಬ್ಬಾಗಿಲಿನ ಮಾರ್ಗವಾಗಿ ನನ್ನನ್ನು ಆಲಯದ ಮುಂದೆ ಕರೆದುಕೊಂಡು ತಂದನು; ಆಹಾ, ನಾನು ನೋಡಿದ ಯೆಹೋವನ ಮಹಿಮೆಯೂ, ಯೆಹೋವನ ಆಲಯವನ್ನು ತುಂಬಿಕೊಂಡಿತು. ಅದನ್ನು ನೋಡಿ ನಾನು ಬೋರಲು ಬಿದ್ದೆನು.

[5] ಆಗ ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಯೆಹೋವನ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು ಮನದಟ್ಟು ಮಾಡಿಕೋ ಮತ್ತು ಪವಿತ್ರಾಲಯದ ಪ್ರವೇಶವನ್ನೂ, ಪರಿಶುದ್ಧ ಸ್ಥಳದ ಪ್ರತಿಯೊಂದು ಹಾಗುಹೋಗುಗಳನ್ನೂ ಗಮನಿಸು.

[6] ಇದಲ್ಲದೆ, ನೀನು ಆ ದ್ರೋಹಿಗಳಾದ ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ,

[7] ‘ಇಸ್ರಾಯೇಲ್ ವಂಶದವರೇ, ನೀವು ನನ್ನ ರೊಟ್ಟಿಯನ್ನೂ, ಕೊಬ್ಬನ್ನೂ, ರಕ್ತವನ್ನೂ ಅರ್ಪಿಸುವಾಗ, ಹೃದಯದಲ್ಲಿಯೂ, ಶರೀರದಲ್ಲಿಯೂ ಸುನ್ನತಿಹೀನರಾದ ಮ್ಲೇಚ್ಛರನ್ನು ನನ್ನ ಪವಿತ್ರಾಲಯದೊಳಗೆ ಬರಮಾಡಿ, ನನ್ನ ಮಂದಿರವನ್ನು ಅಪವಿತ್ರಗೊಳಿಸಿ, ನನ್ನ ಒಡಂಬಡಿಕೆಯನ್ನು ಭಂಗಪಡಿಸಿ, ನಿಮ್ಮ ದುರಾಚಾರಗಳ ಲೆಕ್ಕವನ್ನು ಹೆಚ್ಚಿಸಿದ್ದೀರಿ.

[8] ನೀವು ನನ್ನ ಪರಿಶುದ್ಧ ವಸ್ತುಗಳನ್ನು ಕಾಯಲಿಲ್ಲ. ಈ ಮ್ಲೇಚ್ಛರನ್ನು ನನ್ನ ಪವಿತ್ರಾಲಯದಲ್ಲಿ ನನ್ನ ವಸ್ತುಗಳನ್ನು ಕಾಯುವುದಕ್ಕಾಗಿ ನೇಮಿಸಿಕೊಂಡಿರಿ; ನಿಮ್ಮ ದುರಾಚಾರಗಳು ಇನ್ನು ಸಾಕು.’

[9] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಇಸ್ರಾಯೇಲರಲ್ಲಿ ಸೇರಿಕೊಂಡಿರುವ ಮ್ಲೇಚ್ಛರೊಳಗೆ ಹೃದಯದಲ್ಲಿಯೂ, ಶರೀರದಲ್ಲಿಯೂ ಸುನ್ನತಿಹೀನನಾದ ಯಾರೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಬಾರದು.

[10] “‘ಇಸ್ರಾಯೇಲರು ನನ್ನನ್ನು ತೊರೆದು, ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡು ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ದೋಷಫಲವನ್ನು ಅನುಭವಿಸುವರು.

[11] ಅವರು ನನ್ನ ಪವಿತ್ರಾಲಯದಲ್ಲಿ ಪರಿಚಾರಕರೂ, ಮಂದಿರ ದ್ವಾರಪಾಲಕರೂ ಆಗಿ ಮಂದಿರದಲ್ಲಿ ಸೇವೆಮಾಡಬೇಕು; ಜನರ ಪಕ್ಷವಾಗಿ ಸರ್ವಾಂಗಹೋಮ ಪಶುವನ್ನೂ, ಸಮಾಧಾನಯಜ್ಞ ಪಶುವನ್ನೂ ವಧಿಸಿ ಅವರಿಗೆ ಸೇವೆ ಮಾಡಲು ಸಿದ್ಧರಾಗಿರಬೇಕು.

[12] ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆ ಮಾಡಿ ಇಸ್ರಾಯೇಲ್ ವಂಶದವರಿಗೆ ಪಾಪಕಾರಿಯಾದ ವಿಘ್ನವಾದುದರಿಂದ ನಾನು ಅವರ ಮೇಲೆ ಕೈಯೆತ್ತಿದ್ದೇನೆ, ಅವರು ತಮ್ಮ ದೋಷಫಲವನ್ನು ಅನುಭವಿಸಲೇಬೇಕು.’ ಇದು ಕರ್ತನಾದ ಯೆಹೋವನ ನುಡಿ.

[13] ‘ಅವರು ನನಗೆ ಯಾಜಕಸೇವೆ ಮಾಡುವುದಕ್ಕೆ ನನ್ನ ಸನ್ನಿಧಿಗೆ ಬರಬಾರದು; ನನ್ನ ಅತಿ ಪವಿತ್ರವಾದ ಪರಿಶುದ್ಧ ವಸ್ತುಗಳಲ್ಲಿ ಯಾವುದನ್ನೂ ಸಮೀಪಿಸಬಾರದು; ತಮಗಾದ ಅವಮಾನವನ್ನೂ, ತಾವು ನಡೆಸಿದ ದುರಾಚಾರಗಳ ಫಲವನ್ನೂ ಅನುಭವಿಸುವರು.

[14] ದೇವಾಲಯದ ಸಕಲ ಸೇವೆಯಲ್ಲಿಯೂ, ಅಲ್ಲಿ ನಡೆಯುವ ಸಮಸ್ತ ಕಾರ್ಯಗಳಲ್ಲಿಯೂ ಸೇವಕ ವೃತ್ತಿಯನ್ನೇ ಅವರಿಗೆ ಕೊಡುವೆನು.

[15] “‘ಆದರೆ ಇಸ್ರಾಯೇಲರು ನನ್ನನ್ನು ತೊರೆದಾಗ, ಲೇವಿಯರೂ, ಚಾದೋಕನ ಸಂತಾನದವರೂ ಆದ ಯಾಜಕರು ನನ್ನ ಪವಿತ್ರಾಲಯದ ಪಾರುಪತ್ಯವನ್ನು ನೆರವೇರಿಸಿದ್ದರಿಂದ ಅವರು ನನ್ನನ್ನು ಸೇವಿಸಲು ನನ್ನ ಸನ್ನಿಧಿಗೆ ಸೇರುವರು, ನನಗೆ ಕೊಬ್ಬನ್ನೂ, ರಕ್ತವನ್ನೂ ಅರ್ಪಿಸಲು ನನ್ನ ಸಮ್ಮುಖದಲ್ಲಿ ನಿಂತುಕೊಳ್ಳುವರು’ ಇದು ಕರ್ತನಾದ ಯೆಹೋವನ ನುಡಿ.

[16] ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ, ನನ್ನ ಸೇವೆ ಮಾಡುವುದಕ್ಕೆ ನನ್ನ ಯಜ್ಞವೇದಿಯನ್ನು ಸಮೀಪಿಸಿ, ನನ್ನ ಆಲಯದ ಪಾರುಪತ್ಯವನ್ನು ವಹಿಸುವರು.

[17] “ಅವರು ಒಳಗಿನ ಅಂಗಳದ ಬಾಗಿಲುಗಳನ್ನು ಪ್ರವೇಶಿಸುವಾಗ, ನಾರುಬಟ್ಟೆಗಳನ್ನು ಧರಿಸಿರಬೇಕು; ಒಳಗಿನ ಅಂಗಳದ ಬಾಗಿಲುಗಳಲ್ಲಿಯೂ, ದೇವಸ್ಥಾನದಲ್ಲಿಯೂ ಸೇವೆಮಾಡುತ್ತಿರುವಾಗ ಯಾವ ಉಣ್ಣೆಯ ಉಡುಪೂ ಅವರ ಮೇಲೆ ಇರಬಾರದು.

[18] ಅವರು ತಲೆಗೆ ನಾರಿನ ಮುಂಡಾಸವನ್ನು, ಸೊಂಟಕ್ಕೆ ನಾರಿನ ಒಳಉಡುಪನ್ನು ಹಾಕಿಕೊಂಡಿರಬೇಕು; ಬೆವರುವ ಯಾವ ಉಡುಪನ್ನೂ ಉಟ್ಟುಕೊಳ್ಳಬಾರದು.

[19] ಅವರು ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೊರಡುವಾಗ ತಮ್ಮ ದೀಕ್ಷಾವಸ್ತ್ರಗಳನ್ನು ಅವರಿಗೆ ತಗುಲಿಸಿ, ಅವರನ್ನು ಪರಿಶುದ್ಧರನ್ನಾಗಿ ಮಾಡದಂತೆ. ಅವುಗಳನ್ನು ತೆಗೆದು ಪರಿಶುದ್ಧವಾದ ಕೋಣೆಗಳಲ್ಲಿ ಇಟ್ಟು, ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು.

[20] “ಅವರು ತಲೆಬೋಳಿಸಿಕೊಳ್ಳದೆ; ಕೂದಲನ್ನು ಬೆಳಸದೆ, ತಮ್ಮ ತಲೆ ಕೂದಲನ್ನು ಕತ್ತರಿಸಬೇಕು.

[21] ಒಳಗಿನ ಅಂಗಳವನ್ನು ಪ್ರವೇಶಿಸುವಾಗ, ಯಾವ ಯಾಜಕನೂ ದ್ರಾಕ್ಷಾರಸವನ್ನು ಕುಡಿಯಬಾರದು.

[22] ಯಾಜಕರು ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್ ವಂಶದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆ ಮಾಡಿಕೊಳ್ಳಬಹುದು.

[23] ಅವರು ನನ್ನ ಜನರಿಗೆ ಪವಿತ್ರವಾದದ್ದಕ್ಕೂ ಮತ್ತು ಅಪವಿತ್ರವಾದದ್ದಕ್ಕೂ ಇರುವ ವ್ಯತ್ಯಾಸವನ್ನು ಬೋಧಿಸಿ, ಅವರಿಗೆ ಶುದ್ಧ ಹಾಗೂ ಅಶುದ್ಧಗಳ ಭೇದವನ್ನು ತಿಳಿಸಲಿ.

[24] ವ್ಯಾಜ್ಯವಾಡುವಾಗ ಅವರ ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಬೇಕು. ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ತುಗಳನ್ನು ಪರಿಶುದ್ಧ ದಿನವೆಂದು ಆಚರಿಸಬೇಕು.

[25] “ಸತ್ತವರ ಹೆಣವನ್ನು ಸಮೀಪಿಸಿ, ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು; ಆದರೆ ಸತ್ತ ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗೋಸ್ಕರ ಒಬ್ಬನು ತನ್ನನ್ನು ಅಪವಿತ್ರ ಮಾಡಿಕೊಳ್ಳಬಹುದು.

[26] ಅಂಥವನನ್ನು ಶುದ್ಧನಾದ ಮೇಲೂ, ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.

[27] ಅವನು ಸೇವೆಮಾಡಲು ಪವಿತ್ರಾಲಯವನ್ನು ಪ್ರವೇಶಿಸಿ, ಒಳಗಿನ ಅಂಗಳಕ್ಕೆ ಸೇರುವ ದಿನದಲ್ಲಿ ತನ್ನ ದೋಷಪರಿಹಾರಕ್ಕಾಗಿ ಬಲಿಯನ್ನು ಅರ್ಪಿಸಬೇಕು.” ಇದು ಕರ್ತನಾದ ಯೆಹೋವನ ನುಡಿ.

[28] “ಅವರಿಗೆ ಇದು ಸ್ವಾಸ್ತ್ಯವಾಗುವುದು, ನಾನೇ ಅವರ ಸ್ವತ್ತು; ಇಸ್ರಾಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು; ನಾನೇ ಅವರಿಗೆ ಆಸ್ತಿ.

[29] ಅವರು ಧಾನ್ಯನೈವೇದ್ಯವನ್ನೂ ದೋಷಪರಿಹಾರಕ ಯಜ್ಞದ್ರವ್ಯವನ್ನೂ, ಪ್ರಾಯಶ್ಚಿತ್ತ ಯಜ್ಞದ್ರವ್ಯವನ್ನೂ ಅನುಭವಿಸಲಿ; ಕೇವಲ ಯೆಹೋವನದಾಗಿಯೇ ಇರಲೆಂದು ಇಸ್ರಾಯೇಲರಲ್ಲಿ ಹರಕೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.

[30] “ಎಲ್ಲಾ ಪ್ರಥಮಫಲಗಳಲ್ಲಿ ಉತ್ಕೃಷ್ಟವಾದದ್ದನ್ನು ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸುವ ಎಲ್ಲಾ ಪದಾರ್ಥಗಳೂ ಅವರಿಗಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು.

[31] ಯಾಜಕರು ತಾನಾಗಿ ಸತ್ತು ಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲ್ಪಟ್ಟ ಪಕ್ಷಿಯನ್ನಾಗಲಿ ಅಥವಾ ಪಶುವನ್ನಾಗಲಿ ತಿನ್ನಬಾರದು.”

ಯೆಹೆಜ್ಕೇಲನು — Chapters