Skip to content
Opens in a new window
Listen to this chapter • 6:10

[1] ನೀವು ದೇಶವನ್ನು ಸ್ವತ್ತಾಗಿ ಹಂಚುವಾಗ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಬೇಕು. ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತು ಸಾವಿರ ಮೊಳ ಇರಲಿ. ಆ ಪ್ರಾಂತ್ಯವೆಲ್ಲಾ ಸುತ್ತುಮುತ್ತಲು ಪರಿಶುದ್ಧವಾಗಿರಬೇಕು.

[2] ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವುದು. ಅದರ ಸುತ್ತಲೂ ಐವತ್ತು ಮೊಳ ಅಗಲವಾದ ಭೂಮಿಯು ಇರುವುದು.

[3] ಮೊದಲು ಅಳೆದ ಕ್ಷೇತ್ರದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಮತ್ತು ಹತ್ತು ಸಾವಿರ ಮೊಳ ಅಗಲವಾಗಿಯೂ ಇರುವಂತೆ ನೀನು ಅಳೆಯಬೇಕು. ಇದರಲ್ಲಿ ಪರಿಶುದ್ಧವಾದ ಪವಿತ್ರಾಯಲವು ಇರಬೇಕು.

[4] ಇದು ದೇಶದಲ್ಲಿ ಪರಿಶುದ್ಧ ಭಾಗವೂ; ಯೆಹೋವನಿಗೆ ಸೇವೆ ಮಾಡಲು ಸಮೀಪಿಸುವಂತೆ, ಇದು ಪರಿಶುದ್ಧ ಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿಯೂ, ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿಯೂ ಇರುವುದು.

[5] ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಇಪ್ಪತ್ತೈದು ಸಾವಿರ ಮೊಳ ಉದ್ದವೂ ಮತ್ತು ಹತ್ತು ಸಾವಿರ ಮೊಳ ಅಗಲದ ಕ್ಷೇತ್ರವು ಅವರಿಗೆ ಸ್ವಾಸ್ತ್ಯವಾಗುವುದು.

[6] ನೀವು ನನಗೆ ಸಮರ್ಪಿಸುವ ಪರಿಶುದ್ಧ ಭಾಗದ ಪಕ್ಕದಲ್ಲಿ ಐದು ಸಾವಿರ ಮೊಳ ಅಗಲದ, ಇಪ್ಪತ್ತೈದು ಸಾವಿರ ಮೊಳ ಉದ್ದದ ಕ್ಷೇತ್ರವನ್ನು ಪಟ್ಟಣಕ್ಕೆ ಒಳಪಟ್ಟ ಭೂಮಿಯನ್ನಾಗಿ ನೇಮಿಸಬೇಕು. ಅದರಲ್ಲಿ ಇಸ್ರಾಯೇಲ್ ವಂಶದವರಿಗೆಲ್ಲಾ ಹಕ್ಕಿರುವುದು.

[7] ರಾಜನ ಸ್ವತ್ತು ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರಕ್ಕೂ, ಪಟ್ಟಣಕ್ಕೆ ಒಳಪಟ್ಟ ಭೂಮಿಗೂ ಎರಡು ಕಡೆಗಳಲ್ಲಿರುವುದು; ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಪಶ್ಚಿಮ ಕಡೆಯಲ್ಲಿ ಹರಡುವುದು, ಪೂರ್ವದಿಂದ ಪೂರ್ವಕ್ಕೂ ಹರಡುವುದು, ಅದರ ಉದ್ದವು ಪಶ್ಚಿಮದಿಂದ ಪೂರ್ವಕ್ಕೂ ಒಂದು ಕುಲದ ಸ್ವತ್ತಿನ ಉದ್ದಕ್ಕೆ ಸರಿಸಮಾನವಾಗಿರುವುದು.

[8] ಅದು ಅವನಿಗೆ ಇಸ್ರಾಯೇಲಿನಲ್ಲಿ ಭೂಸ್ವಾಸ್ತ್ಯವಾಗುವುದು; ಇನ್ನು ಮೇಲೆ ನನ್ನ ಪ್ರಭುಗಳು ನನ್ನ ಪ್ರಜೆಗಳನ್ನು ಹಿಂಸಿಸುವುದಿಲ್ಲ; ದೇಶದ ಭೂಮಿಯನ್ನು ಇಸ್ರಾಯೇಲರಿಗೆ ಕುಲಕ್ಕೆ ತಕ್ಕಂತೆ ಹಂಚುವರು.

[9] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲಿನ ಪ್ರಭುಗಳೇ, ಇನ್ನು ಸಾಕು, ಕೊಳ್ಳೆಯನ್ನೂ ಬಲಾತ್ಕಾರವನ್ನೂ ತ್ಯಜಿಸಿ, ನೀತಿನ್ಯಾಯಗಳನ್ನು ನಡೆಸಿರಿ. ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿರಿ. ಇದು ಕರ್ತನಾದ ಯೆಹೋವನ ನುಡಿ.

[10] ನಿಮ್ಮ ತಕ್ಕಡಿಯೂ, ಧಾನ್ಯದ ಅಳತೆಯೂ, ರಸದ್ರವ್ಯದ ಅಳತೆಯೂ ನ್ಯಾಯವಾಗಿಯೇ ಇರಬೇಕು.

[11] ಏಫಾ (ಧಾನ್ಯದ ಅಳತೆ) ಮತ್ತು ಬತ್ (ರಸದ್ರವ್ಯದ ಅಳತೆ) ಒಂದೇ ಪ್ರಮಾಣವಾಗಿರಬೇಕು. ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಏಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಎರಡೂ ಹೋಮೆರ್ ಅಳತೆಗೆ ಸಂಬಂಧವಾಗಿರಬೇಕು.

[12] ತೊಲೆಯು ಇಪ್ಪತ್ತು ಗೇರಾ ತೂಕವಾಗಿರಬೇಕು; ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು, ಇಪ್ಪತ್ತೈದು ಅಥವಾ ಹದಿನೈದು ತೊಲಾ ತೂಕದ್ದಾಗಿರಲಿ.”

[13] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ನಿಮ್ಮ ದೋಷಪರಿಹಾರಕ್ಕಾಗಿ ಧಾನ್ಯನೈವೇದ್ಯವನ್ನೂ, ಸರ್ವಾಂಗಹೋಮವನ್ನೂ, ಸಮಾಧಾನಯಜ್ಞವನ್ನೂ ಮಾಡುವುದಕ್ಕೋಸ್ಕರ ಸಮರ್ಪಿಸತಕ್ಕದು ಏನೆಂದರೆ ಒಂದು ಹೋಮೆರ್ ಅಳತೆಯ ಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು.

[14] ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟೆಂದರೆ ಒಂದು ಕೋರ್ ಅಂದರೆ ಹತ್ತು ಬತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬತ್ ಅಳತೆಯ ಹತ್ತನೆಯ ಒಂದು ಪಾಲು. (ಹತ್ತು ಬತ್ ಅಂದರೆ ಒಂದು ಹೋಮೆರ್)

[15] ಇನ್ನೂರು ಕುರಿಗಳಲ್ಲಿ ಇಸ್ರಾಯೇಲಿನ ನೀರಾವರಿಯ ಹುಲ್ಗಾವಲಿನ ಒಂದು ಕುರಿ; ಇವುಗಳನ್ನು ದೇಶದ ಸಕಲ ಜನರು ಇಸ್ರಾಯೇಲಿನ ಅರಸನಿಗೆ ಸರ್ವಾಂಗಹೋಮ ಮತ್ತು ಸಮಾಧಾನಬಲಿಯಾಗಿ ಒಪ್ಪಿಸಬೇಕು” ಇದು ಕರ್ತನಾದ ಯೆಹೋವನ ನುಡಿ.

[16] ದೇಶದ ಸಕಲ ಜನರು ಇಸ್ರಾಯೇಲಿನ ಅರಸನಿಗೆ ಈ ಕಾಣಿಕೆಯನ್ನು ಒಪ್ಪಿಸತಕ್ಕದ್ದು.

[17] ಉತ್ಸವಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಸಬ್ಬತ್ ದಿನಗಳಲ್ಲಿಯೂ ಇಸ್ರಾಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲಿಯೂ ಸರ್ವಾಂಗಹೋಮ ಪಶು, ಧಾನನೈವೇದ್ಯ ಪಾನನೈವೇದ್ಯ, ಇವುಗಳನ್ನು ಒದಗಿಸುವುದು ಅರಸನ ಕರ್ತವ್ಯವಾಗಿದೆ; ಇಸ್ರಾಯೇಲ್ ವಂಶದ ದೋಷ ನಿವಾರಣೆಗಾಗಿ ಅವನು ದೋಷಪರಿಹಾರಕ ಯಜ್ಞಪಶು, ಧಾನ್ಯನೈವೇದ್ಯ, ಸರ್ವಾಂಗಹೋಮ ಪಶು, ಸಮಾಧಾನ ಯಜ್ಞಪಶು, ಇವುಗಳನ್ನು ಒಪ್ಪಿಸತಕ್ಕದ್ದು.

[18] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀವು ಪೂರ್ಣಾಂಗವಾದ ಹೋರಿಯನ್ನು ಆರಿಸಿಕೊಂಡು ಪವಿತ್ರಾಲಯವನ್ನು ಶುದ್ಧೀಕರಿಸಬೇಕು.

[19] ಆಗ ಯಾಜಕನು ಆ ದೋಷಪರಿಹಾರಕ ಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ, ಯಜ್ಞವೇದಿಯ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಹೆಬ್ಬಾಗಿಲಿನ ಕಂಬಗಳಿಗೂ ಹಚ್ಚಬೇಕು.

[20] ಅದೇ ಮೇರೆಗೆ ಏಳನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀನು ಯಜ್ಞಮಾಡಿ, ಯಾರಾದರೂ ಆಕಸ್ಮಾತ್ತಾಗಿ ಮಾಡಿದ ತಪ್ಪಿನಿಂದಾಗಲಿ, ಬುದ್ಧಿಹೀನರ ಅವಿವೇಕದಿಂದಾಗಲಿ ದೇವಾಲಯಕ್ಕೆ ಸಂಭವಿಸಿದ ದೋಷವನ್ನೆಲ್ಲಾ ಪರಿಹರಿಸಬೇಕು.

[21] “ಮೊದಲನೆಯ ತಿಂಗಳಿನ, ಹದಿನಾಲ್ಕನೆಯ ದಿನದಲ್ಲಿ, ಏಳು ದಿನದ ಪಸ್ಕಹಬ್ಬವನ್ನು ಆಚರಿಸಬೇಕು; ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು.

[22] ಆ ದಿನದಲ್ಲಿ ಪ್ರಭುವು ತನ್ನ ನಿಮಿತ್ತವೂ, ದೇಶದ ಜನರೆಲ್ಲರ ನಿಮಿತ್ತವೂ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನು ಒಪ್ಪಿಸಲಿ.

[23] ಹಬ್ಬದ ಏಳು ದಿನಗಳಲ್ಲಿಯೂ ಯೆಹೋವನಿಗೆ ಸಮರ್ಪಿಸತಕ್ಕ ಸರ್ವಾಂಗಹೋಮಕ್ಕಾಗಿ ಅವನು ಏಳು ದಿನಗಳವರೆಗೆ ದಿನವೊಂದಕ್ಕೆ ಪೂರ್ಣಾಂಗವಾದ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಒದಗಿಸಲಿ ಮತ್ತು ದೋಷಪರಿಹಾರಕ ಯಜ್ಞವಾಗಿ ಪ್ರತಿ ದಿನವೂ ಒಂದು ಹೋತವನ್ನು ಕೊಡಲಿ.

[24] ಇದಲ್ಲದೆ ಒಂದೊಂದು ಹೋರಿಯ ಮತ್ತು ಟಗರಿನ ಸಂಗಡ ಮೂವತ್ತು ಸೇರು ಗೋದಿಹಿಟ್ಟನ್ನೂ, ಆರಾರು ಸೇರು ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒಪ್ಪಿಸಬೇಕು.

[25] “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿನಗಳಲ್ಲಿಯೂ ಅವನು ದೋಷಪರಿಹಾರಕ ಯಜ್ಞಪಶು, ಸರ್ವಾಂಗಹೋಮ ಪಶು, ಧಾನ್ಯನೈವೇದ್ಯ ಎಣ್ಣೆ, ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು.”

ಯೆಹೆಜ್ಕೇಲನು — Chapters