Skip to content
Opens in a new window
Listen to this chapter • 6:09

[1] ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,

[2] “ನರಪುತ್ರನೇ, ನೀನು ತೂರಿನ ವಿಷಯದಲ್ಲಿ ಶೋಕ ಗೀತೆಯನ್ನೆತ್ತು, ಅದಕ್ಕೆ ಹೀಗೆ ನುಡಿ,

[3] ‘ಸಮುದ್ರ ದ್ವಾರದಲ್ಲಿ ವಾಸಿಸುತ್ತಾ, ಜನಾಂಗಗಳಿಗಾಗಿ ಅನೇಕ ದ್ವೀಪಗಳೊಂದಿಗೆ ವ್ಯಾಪಾರ ಮಾಡುವ ನಗರಿಯೇ!’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ತೂರೇ, ‘ನಾನು ಪರಿಪೂರ್ಣ ಸುಂದರಿಯಾಗಿದ್ದೇನೆ’ ಎಂದು ನೀನು ಅಂದುಕೊಂಡಿದ್ದೀ!

[4] ನಿನ್ನ ನೆಲೆಯು ಸಮುದ್ರದ ಮಧ್ಯವೇ; ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.

[5] ಸೆನೀರಿನ ತುರಾಯಿ ಮರದಿಂದ ನಿನ್ನ ಹಲಗೆಗಳನ್ನು ಮಾಡುವುದಕ್ಕೆ ಮತ್ತು ನಿನ್ನ ಸ್ತಂಭವನ್ನು ರಚಿಸುವುದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.

[6] ನಿನ್ನ ಹುಟ್ಟುಗೋಲನ್ನು ಬಾಷಾನಿನ ಓಕ್ ಮರದಿಂದ ಮಾಡಿ, ಕಿತ್ತೀಮ್ ದ್ವೀಪದ ಹಲಿಗೆಯಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಕೆತ್ತಿದ್ದಾರೆ.

[7] ನಿನ್ನ ಹಾಯಿಯು ನಿನಗೆ ಧ್ವಜವಾಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರು ಬಟ್ಟೆಯಿಂದ ಮಾಡಿದರು. ನಿನ್ನ ಮೇಲ್ಕಟ್ಟನ್ನು ಎಲೀಷ ಕರಾವಳಿಯ ಧೂಮ್ರ ರಕ್ತವರ್ಣಗಳಿಂದ ಚಿತ್ರಿತವಾಗಿದೆ.

[8] ಚೀದೋನಿನ, ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವರು; ತೂರೇ, ನಿನ್ನಲ್ಲಿನ ವಿವೇಕಿಗಳು ನಿನ್ನ ನಾವಿಕರು.

[9] ನಿನ್ನಲ್ಲಿ ಸೇರಿಕೊಂಡಿದ್ದ ಗೇಬಾಲಿನ ಹಿರಿಯರೂ ಮತ್ತು ಜಾಣರೂ ನಿನ್ನ ಬಿರುಕುಗಳನ್ನು ಮುಚ್ಚಿದ್ದಾರೆ. ಸಮುದ್ರದ ಸಕಲ ನಾವೆಗಳ ಮತ್ತು ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು, ನಿನಗೆ ಸರಕುಗಳನ್ನು ತಂದೊಪ್ಪಿಸಿದ್ದಾರೆ.

[10] ಪಾರಸಿಯರೂ, ಲೂದ್ಯರೂ, ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು. ಗುರಾಣಿಯನ್ನು ಮತ್ತು ಶಿರಸ್ತ್ರಾಣವನ್ನು ನಿನ್ನಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು!

[11] ಅರ್ವಾದಿನವರೂ ಮತ್ತು ಹೆಲೆಕರು ನಿನ್ನ ಸೈನಿಕರ ಸಂಗಡ ನಿನ್ನ ಗೋಡೆಗಳ ಸುತ್ತಲೂ ನಿಂತಿದ್ದರು. ಗಮ್ಮಾದ್ಯರು ನಿನ್ನ ಕೊತ್ತಲುಗಳಲ್ಲಿ ಕಾವಲಾಗಿದ್ದರು. ಎಲ್ಲರೂ ತಮ್ಮ ಗುರಾಣಿಗಳನ್ನು ಸುತ್ತಮುತ್ತಲು ನಿನ್ನ ಗೋಡೆಗಳ ಮೇಲೆ ನೇತುಹಾಕಿ, ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು!

[12] “ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸಗಳನ್ನು ಒದಗಿಸುತ್ತಿದ್ದರು.

[13] ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ಗುಲಾಮರನ್ನೂ ಮತ್ತು ತಾಮ್ರದ ಪಾತ್ರೆಗಳನ್ನೂ ನಿನಗೆ ಸರಬರಾಜು ಮಾಡುತ್ತಿದ್ದರು.

[14] “ತೋಗರ್ಮ ವಂಶದವರು ಕುದುರೆಗಳಿಂದಲೂ, ಕುದುರೆ ಸವಾರಿಗಳಿಂದಲೂ, ಹೇಸರಗತ್ತೆಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.

[15] ದೇದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತ ಕೊಂಬು ಮತ್ತು, ಕಪ್ಪುಮರಗಳನ್ನೂ ನಿನಗೆ ಕಪ್ಪವಾಗಿ ಸಲ್ಲಿಸುತ್ತಿದ್ದರು.

[16] “ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮಿನವರೂ ನಿನ್ನವರಾಗಿ ವ್ಯಾಪಾರಮಾಡಿ, ಕೆಂಪರಲು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.

[17] “ಯೆಹೂದ್ಯರೂ, ಇಸ್ರಾಯೇಲ್ ದೇಶದವರೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋದಿಯಿಂದಲೂ, ಖಂಡಸಕ್ಕರೆ, ಜೇನು, ಎಣ್ಣೆ ಮತ್ತು ಸುಗಂಧತೈಲದಿಂದಲೂ ನಿನ್ನೊಂದಿಗೆ ವ್ಯಾಪಾರ ನಡೆಸಿದರು.

[18] “ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ, ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನೂ ಹಾಗು ಚಾಹರಿನ ಉಣ್ಣೆಯನ್ನೂ ನಿನ್ನಲ್ಲಿ ತುಂಬಿಸುತ್ತಿದ್ದರು.

[19] “ದಾನಿನವರೂ ಮತ್ತು ಯಾವಾನಿನವರೂ ಊಜಾಲಿನಿಂದ ನಾನಾ ಸರಕುಗಳನ್ನು ತಂದು ನಿನಗೆ ಒಪ್ಪಿಸಿದರು.ಕಬ್ಬಿಣ, ಬಜೆ, ಲವಂಗ, ಚಕ್ಕೆ ಇವುಗಳು ನಿನಗೆ ಆಮದಾಗುತ್ತಿದ್ದವು.

[20] ದೇದಾನಿನವರು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿದ್ದರು.

[21] ಅರಬರು ಮತ್ತು ಕೇದಾರಿನ ಪ್ರಧಾನರೂ ನಿನ್ನ ಕೈಕೆಳಗಿನ ವರ್ತಕರಾಗಿದ್ದರು; ಕುರಿಮರಿಗಳಿಂದಲೂ, ಟಗರುಗಳಿಂದಲೂ, ಹೋತಗಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದ್ದರು.

[22] “ಶೆಬದವರೂ ಮತ್ತು ರಗ್ಮದವರೂ ನಿನ್ನ ಕಡೆಯ ವರ್ತಕರಾಗಿ, ಎಲ್ಲಾ ಶ್ರೇಷ್ಠವಾದ ಸುಗಂಧದ್ರವ್ಯದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ, ಚಿನ್ನದಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು.

[23] ಹಾರಾನ್, ಕನ್ನೆ, ಎದೆನ್ ಸ್ಥಳಗಳವರೂ, ಶೆಬ, ಅಶ್ಶೂರ್ ಕಿಲ್ಮದ್ ಪ್ರಾಂತ್ಯಗಳವರೂ ನಿನ್ನ ವರ್ತಕರಾಗಿದ್ದರು.

[24] ಅವರು ನಿನ್ನ ವ್ಯಾಪಾರಿಗಳಾಗಿ, ಉತ್ತಮ ಕಸೂತಿಯ ಧೂಮ್ರ ವರ್ಣದ ನಿಲುವಂಗಿ ಮೊದಲಾದ ಸರಕುಗಳನ್ನೂ, ಹಗ್ಗಗಳಿಂದ ಬಲವಾಗಿ ಬಿಗಿದ ವಿಚಿತ್ರ ವಸ್ತ್ರಗಳ ಪೆಟ್ಟಿಗೆಗಳನ್ನೂ ತಂದರು.

[25] ತಾರ್ಷೀಷಿನ ಹಡಗಿನ ಪ್ರಯಾಣಿಕರು ನಿನ್ನನ್ನು ನಿನ್ನ ಮಾರುಕಟ್ಟೆಯಲ್ಲಿ ಹೊಗಳುವರು. ನೀನು ಸಮುದ್ರ ಮಧ್ಯದಲ್ಲಿ ಬಹಳ ಘನವುಳ್ಳವಳಾದೆ.

[26] ಹುಟ್ಟುಹಾಕುವವರು ನಿನ್ನನ್ನು ಮಹಾ ತರಂಗಗಳಿಗೆ ಸಿಕ್ಕಿಸಿದ್ದಾರೆ; ಮೂಡಣ ಗಾಳಿಯು ನಿನ್ನನ್ನು ಸಾಗರದ ಮಧ್ಯದಲ್ಲಿ ಒಡೆದುಬಿಟ್ಟಿದೆ.

[27] ನಿನ್ನ ಆಸ್ತಿಯು, ನಿನ್ನ ವಸ್ತುಗಳು, ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಒಡಕುಗಳನ್ನು ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ನಿನ್ನಲ್ಲಿನ ಸಮಸ್ತ ಸೈನಿಕರು, ಅಂತು ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ಮುಳುಗಿ ಹೋಗುವರು.

[28] ನಿನ್ನ ನಾವಿಕರ ಕೂಗಾಟಕ್ಕೆ ಸಮೀಪದ ಪ್ರದೇಶಗಳು ನಡುಗುವುವು.

[29] ಹುಟ್ಟುಹಾಕುವವರೆಲ್ಲರೂ, ಅಂಬಿಗರೂ, ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದ ಇಳಿದು ನೆಲದ ಮೇಲೆ ನಿಂತುಕೊಳ್ಳುವರು.

[30] ನಿನ್ನ ನಿಮಿತ್ತ ದುಃಖದಿಂದ ಅರಚಿ, ತಲೆಗೆ ಧೂಳೆರಚಿಕೊಂಡು, ಬೂದಿಯಲ್ಲಿ ಬಿದ್ದು ಹೊರಳಾಡಿ,

[31] ನಿನಗಾಗಿ ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಂಡು, ಮನೋವ್ಯಥೆಯಿಂದ ಗೋಳಾಡಿ, ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.

[32] ಅವರು ರೋದನ ಮಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು, ‘ಸಮುದ್ರದ ನಡುವೆ ಹಾಳಾಗಿರುವ ತೂರಿಗೆ ಯಾವ ಪಟ್ಟಣ ಸಮಾನವಾಗಿದೆ?’

[33] ನಿನ್ನ ಸರಕುಗಳು ಸಮುದ್ರಗಳನ್ನು ದಾಟಿ ಹರಡಿಕೊಂಡವು, ಅವುಗಳಿಂದ ಅನೇಕ ಜನಾಂಗಗಳನ್ನು ತೃಪ್ತಿಪಡಿಸಿದಿ; ನಿನ್ನ ಅಪಾರವಾದ ಐಶ್ವರ್ಯದಿಂದಲೂ, ವ್ಯಾಪಾರದ ವಸ್ತುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದಿ.

[34] ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ, ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಅಗಾಧಜಲದಲ್ಲಿ ಮುಳುಗಿ ಹೋದರು.

[35] ಕರಾವಳಿಯ ಸಮಸ್ತ ನಿವಾಸಿಗಳು ನಿನ್ನ ಸ್ಥಿತಿಗೆ ಬೆಚ್ಚಿ ವಿಸ್ಮಯರಾಗಿದ್ದಾರೆ; ಅರಸರು ಭಯಪಟ್ಟಿದ್ದಾರೆ. ಅರಸರು ನಡುಗಿ ಭೀತಿಗೊಂಡಿದ್ದಾರೆ.

[36] ಜನಾಂಗಗಳ ವರ್ತಕರು ನಿನ್ನನ್ನು ನೋಡಿ, ಸಿಳ್ಳು ಹಾಕುತ್ತಾರೆ; ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.”

ಯೆಹೆಜ್ಕೇಲನು — Chapters