[1] “ಇಸ್ರಾಯೇಲಿನ ರಾಜರ ವಿಷಯವಾಗಿ ಈ ಶೋಕ ಗೀತೆಯನ್ನು ಹಾಡು,
[2] ‘ಆಹಾ, ನಿನ್ನ ತಾಯಿಯು ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನ್ನು, ಯುವ ಸಿಂಹಗಳ ನಡುವೆ ವಾಸಿಸಿ.
[3] ಅವಳು ಬೆಳೆಯಿಸಿದ ಒಂದು ಮರಿಯು ಪ್ರಾಯದ ಸಿಂಹವಾಗಿ, ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಲಾರಂಭಿಸಿತು.
[4] ಜನಾಂಗಗಳು ಈ ವಾರ್ತೆಯನ್ನು ಕೇಳಿ, ಅದಕ್ಕೆ ಗುಂಡಿ ತೋಡಲು ಅದು ಅಲ್ಲಿ ಸಿಕ್ಕಿಬಿದ್ದಿತು; ಅದನ್ನು ಸರಪಣಿಗಳಿಂದ ಬಿಗಿದು ಐಗುಪ್ತ ದೇಶಕ್ಕೆ ಒಯ್ದರು.
[5] ಆ ಸಿಂಹಿಣಿಯು ತಾನು ಕಾದುಕೊಂಡಿದ್ದರೂ, ತನ್ನ ನಿರೀಕ್ಷೆಯು ಹಾಳಾಯಿತೆಂದು ತನ್ನ ಮರಿಗಳಲ್ಲಿ ಇನ್ನೊಂದನ್ನು ತೆಗೆದು ಸಾಕಿ, ಪ್ರಾಯಕ್ಕೆ ತಂದಳು.
[6] ಅದು ಪ್ರಾಯದ ಸಿಂಹವಾಗಿ, ಸಿಂಹಗಳ ನಡುವೆ ತಿರುಗುತ್ತಾ ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಲಾರಂಭಿಸಿತು.
[7] ಅದು ಪಟ್ಟಣಗಳನ್ನು ಹಾಳುಮಾಡಿ, ಬಹಳ ಮಂದಿ ವಿಧವೆಯರಾದವರನ್ನು ಕೆಡಿಸಿತು, ಅದರ ಗರ್ಜನೆಯ ಶಬ್ದಕ್ಕೆ ದೇಶವು ಮತ್ತು ಅದರಲ್ಲಿದ್ದದ್ದೆಲ್ಲವೂ ಕ್ಷೀಣವಾದವು.
[8] ಆಗ ಜನಾಂಗಗಳು ಸುತ್ತಲಿನ ರಾಷ್ಟ್ರಗಳಿಂದ ಕೂಡಿ ಬಂದು, ಅದಕ್ಕೆ ವಿರುದ್ಧವಾಗಿ ನಿಂತು, ಬಲೆಯೊಡ್ಡಿ ಗುಂಡಿ ತೋಡಲು, ಅದು ಅಲ್ಲಿ ಸಿಕ್ಕಿಬಿದ್ದಿತು.
[9] ಅದನ್ನು ಸರಪಣಿಗಳಿಂದ ಬಿಗಿದು, ಪಂಜರದಲ್ಲಿ ಹಾಕಿ, ಬಾಬೆಲಿನ ಅರಸನ ಬಳಿಗೆ ತಂದವು. ಅದರ ಧ್ವನಿಯು ಇಸ್ರಾಯೇಲಿನ ಪರ್ವತಗಳಲ್ಲಿ ಇನ್ನು ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿ ಬಿಟ್ಟವು.
[10] “‘ನಿನ್ನ ಹೆತ್ತ ತಾಯಿ ನೀರಾವರಿಯಲ್ಲಿ ನಾಟಿಕೊಂಡಿದ್ದ ದ್ರಾಕ್ಷಾಲತೆಯಾಗಿದ್ದಳು, ಆ ಲತೆಯು ತುಂಬಾ ನೀರಾವರಿಯಿಂದ ಫಲವತ್ತಾಗಿಯೂ, ಪೊದೆಯಾಗಿಯೂ ಬೆಳೆದಿತ್ತು.
[11] ಅದರಲ್ಲಿ ಆಳುವವರ ರಾಜದಂಡಗಳಿಗೆ ಯೋಗ್ಯವಾದ ಗಟ್ಟಿಕೊಂಬೆಗಳಿದ್ದವು, ಅವುಗಳ ಎತ್ತರವು ಉಳಿದ ರೆಂಬೆಗಳಿಗಿಂತ ಹೆಚ್ಚಾಗಿತ್ತು, ಬಹಳ ರೆಂಬೆಗಳ ಮಧ್ಯದಲ್ಲಿ ಉದ್ದುದ್ದವಾಗಿ ಕಾಣಿಸಿದವು.
[12] ಆದರೆ ಆ ಲತೆಯು ರೋಷದಲ್ಲಿ ಕೀಳಲ್ಪಟ್ಟು, ನೆಲದ ಮೇಲೆ ಬಿಸಾಡಲ್ಪಟ್ಟಿತು, ಮೂಡಣ ಗಾಳಿಯು ಅದರ ಫಲವನ್ನು ಬಾಡಿಸಿತು, ಅದರ ಗಟ್ಟಿ ಕೊಂಬೆಗಳು ಮುರಿದು ಒಣಗಿ ಹೋದವು, ಬೆಂಕಿಯು ಅವುಗಳನ್ನು ನುಂಗಿತು.
[13] ಈಗ ಅದು ನೀರಿಲ್ಲದೆ ಬೆಂಗಾಡಿನಲ್ಲಿ ನಾಟಿಕೊಂಡಿದೆ.
[14] ಬೆಂಕಿಯು ಅದರ ಕೊಂಬೆಗಳಿಂದ ಹೊರಟು ಅದರ ಫಲವನ್ನು ನುಂಗಿ ಬಿಟ್ಟಿದೆ. ಆದುದರಿಂದ ರಾಜದಂಡಕ್ಕೆ ಯೋಗ್ಯವಾದ ಯಾವ ಗಟ್ಟಿ ಕೊಂಬೆಯೂ ಅದರಲ್ಲಿ ಉಳಿದಿಲ್ಲ.’ ಇದು ಶೋಕ ಗೀತೆ, ಶೋಕ ಗೀತೆಯಾಗಿ ವಾಡಿಕೆಯಲ್ಲಿದೆ.”