[1] ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
[2] “ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯದಲ್ಲಿ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.
[3] “ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೆ ಹೊರಡು ಅಂದರೆ ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿ ವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು.
[4] ನೀನು ನಿನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ, ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮದಲ್ಲಿ ಹೊರಟು ಹೋಗು.
[5] ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು.
[6] ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮುಖವನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಗುರುತನ್ನಾಗಿ ಮಾಡಿದ್ದೇನೆ.”
[7] ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆನು; ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಯನ್ನೋ ಎಂಬಂತೆ ಮನೆಯೊಳಗಿಂದ ಆಚೆಗೆ ಹಾಕಿ, ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯಲ್ಲಿ ಕಿಂಡಿಯನ್ನು ಮಾಡಿ, ಕತ್ತಲಲ್ಲಿ ಆ ಸಾಮಾನನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆನು.
[8] ಬೆಳಿಗ್ಗೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
[9] “ನರಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ?
[10] ನೀನು ಅವರಿಗೆ ಹೀಗೆ ನುಡಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಈ ಹೊರೆಯು ಯೆರೂಸಲೇಮಿನಲ್ಲಿರುವ ರಾಜನಿಗೂ, ಅಲ್ಲಿನ ಇಸ್ರಾಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ.’
[11] ಇದನ್ನೂ ನುಡಿ, ‘ನಾನು ನಿಮಗೆ ಗುರುತಾಗಿದ್ದೇನೆ; ನಾನು ಮಾಡಿದಂತೆಯೇ ಅವರಿಗಾಗುವುದು; ಅವರು ವಲಸೆಯಾಗಿ ಸೆರೆ ಹೋಗುವರು.
[12] ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಆಚೆಗೆ ಸಾಗಿಸುವರು; ಅವನು ಮುಖವನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸುವುದಿಲ್ಲ.’
[13] ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು; ಕಸ್ದೀಯರ ದೇಶವಾದ ಬಾಬಿಲೋನಿಗೆ ಅವನನ್ನು ಒಯ್ಯುವೆನು, ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡುವುದಿಲ್ಲ.
[14] ಅವನ ಸುತ್ತಲಿನ ಸಕಲ ಸಹಾಯಕರನ್ನೂ, ಅವನ ಸಮಸ್ತ ವ್ಯೂಹಗಳವರನ್ನೂ ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
[15] “ನಾನು ಅವರನ್ನು ಜನಾಂಗಗಳೊಳಗೆ ಚದರಿಸಿಬಿಟ್ಟು ಅನ್ಯದೇಶಗಳಲ್ಲಿ ಚೆಲ್ಲಾಪಿಲ್ಲಿ ಮಾಡುವಾಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.
[16] ನಾನು ಕೆಲವರನ್ನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಉಳಿಸಿ ಅವರು ತಮ್ಮ ಅಸಹ್ಯ ಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವುದಕ್ಕೆ ಅವಕಾಶ ಮಾಡುವೆನು; ನಾನೇ ಯೆಹೋವನು ಎಂದು ಆ ಜನಾಂಗಗಳಿಗೂ ಗೊತ್ತಾಗುವುದು.”
[17] ಇದಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
[18] “ನರಪುತ್ರನೇ, ನೀನು ಅನ್ನವನ್ನು ನಡುಗುತ್ತಾ ತಿನ್ನು ಮತ್ತು ನೀರನ್ನು ಹೆದರಿಕೆಯಿಂದ ಕುಡಿ.
[19] ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇಮಿನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ, ಅವರು ಅನ್ನವನ್ನು ನಡಗುತ್ತಾ ತಿನ್ನುವರು ಮತ್ತು ನೀರನ್ನು ಹೆದರಿಕೆಯಿಂದ ಕುಡಿಯುವರು; ಏಕೆಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವುದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ದೇಶವು ಬರಿದಾಗುವುದು.
[20] ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವುದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’”
[21] ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
[22] “ನರಪುತ್ರನೇ, ಕ್ಲುಪ್ತಕಾಲವು ದೂರ ಹೋಗುತ್ತಲಿದೆ; ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬುದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಮಾತು ಎಂಥದ್ದು?”
[23] ಅವರಿಗೆ ಹೀಗೆ ಹೇಳು, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಗಾದೆಯನ್ನು ಬಳಸುವುದನ್ನು ನಿಲ್ಲಿಸಿಬಿಡುವೆನು, ಅದು ಇಸ್ರಾಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಈ ಮಾತನ್ನು ಕೇಳಿರಿ, ‘ಕ್ಲುಪ್ತಕಾಲವು ಸಮೀಪಿಸಿದೆ, ದಿವ್ಯದರ್ಶನಗಳೆಲ್ಲಾ ಸಾರ್ಥಕವಾಗುವ ಕಾಲ ಸಮೀಪಿಸಿದೆ.
[24] ಇನ್ನು ಮೇಲೆ ಇಸ್ರಾಯೇಲ್ ವಂಶದವರಲ್ಲಿ ಯಾರಿಗೂ ಸುಳ್ಳು ದರ್ಶನವಾಗದು, ಮೋಸದ ಕಣಿಯೂ ಇರದು.
[25] ನಾನೇ ಯೆಹೋವನು; ನಾನು ನುಡಿದೇ ನುಡಿಯುವೆನು; ನಾನು ನುಡಿದ ಮಾತು ನೆರವೇರುವುದು, ಇನ್ನು ನಿಧಾನವಾಗದು; ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವುದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು’” ಇದು ಕರ್ತನಾದ ಯೆಹೋವನ ವಾಕ್ಯ.
[26] ಮತ್ತು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
[27] “ನರಪುತ್ರನೇ, ಇಗೋ, ಇಸ್ರಾಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ.
[28] “ಆದಕಾರಣ ನೀನು ಅವರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ನೆರವೇರದೆ ಇರದು; ನಾನಾಡುವ ಮಾತು ನೆರವೇರುವುದು ಖಂಡಿತ’ ಇದು ಕರ್ತನಾದ ಯೆಹೋವನ ನುಡಿ.”