Skip to content
Opens in a new window
Listen to this chapter • 3:32

[1] “ನರಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ಪಟ್ಟಣದ ನಕ್ಷೆಯನ್ನು ಬರೆ.

[2] ಆ ನಕ್ಷೆಯ ಸುತ್ತಲು ದಿಬ್ಬಹಾಕಿ, ಅಡ್ಡಕಟ್ಟಿ, ಪಾಳೆಯಗಳನ್ನು ಮಾಡಿ, ಕತ್ತರಿಸುವ ಯಂತ್ರಗಳನ್ನು ನಿಲ್ಲಿಸಿ, ಅದಕ್ಕೆ ಮುತ್ತಿಗೆ ಹಾಕು.

[3] ಆಮೇಲೆ ಕಬ್ಬಿಣದ ಹಂಚನ್ನು ತೆಗೆದುಕೊಂಡು ಅದನ್ನು ನಿನಗೂ ಮತ್ತು ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ ಆ ಪಟ್ಟಣದ ಮೇಲೆ ದೃಷ್ಟಿಯಿಡು; ಅದು ಮುತ್ತಿಗೆ ಹಾಕಲ್ಪಡುವುದು, ನೀನು ಅದನ್ನು ಮುತ್ತಿಗೆ ಹಾಕಿದಂತಾಗುವುದು. ಇದು ಇಸ್ರಾಯೇಲ್ ವಂಶದವರಿಗೆ ಒಂದು ಗುರುತು.

[4] “ಇದಲ್ಲದೆ, ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿಕೋ. ಇಸ್ರಾಯೇಲ್ ವಂಶದವರ ಪಾಪದ ಭಾರವನ್ನು ಅದರ ಮೇಲಿಡಬೇಕು. ನೀನು ಎಡಮಗ್ಗುಲಲ್ಲಿ ಮಲಗುವ ದಿನಗಳ ಪ್ರಕಾರ ಅವರ ಪಾಪದ ಭಾರವನ್ನು ಹೊತ್ತುಕೊಂಡಿರಬೇಕು.

[5] ನಾನು ದಿನಗಳ ಲೆಕ್ಕದ ಪ್ರಕಾರ ಅವರ ಪಾಪದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರತೊಂಬತ್ತು ದಿನಗಳಾಗಿವೆ. ಹೀಗೆ ನೀನು ಇಸ್ರಾಯೇಲ್ ವಂಶದವರ ಪಾಪವನ್ನು ನೀನು ಹೊರಬೇಕು.

[6] “ಅಷ್ಟು ದಿನಗಳು ತೀರಿದ ಮೇಲೆ ಬಲಮಗ್ಗುಲಲ್ಲಿ ಮಲಗಿಕೊಂಡು ಯೆಹೂದ ವಂಶದವರ ಪಾಪವನ್ನು ಅನುಭವಿಸಬೇಕು; ವರ್ಷ ಒಂದಕ್ಕೆ ಒಂದು ದಿನದ ಮೇರೆಗೆ ನಲ್ವತ್ತು ದಿನ ಅವರ ಪಾಪವನ್ನು ಹೊರಬೇಕೆಂದು ನಿನಗೆ ಗೊತ್ತುಮಾಡಿದ್ದೇನೆ.

[7] ನಿನ್ನ ತೋಳಿಗೆ ಹೊದಿಕೆಯಿಲ್ಲದೆ, ಮುತ್ತಿಗೆಯಾದ ಯೆರೂಸಲೇಮಿನ ಕಡೆಗೆ ಮುಖವನ್ನು ತಿರುಗಿಸಿ, ಅದರ ವಿಷಯವಾಗಿ ಅಶುಭವನ್ನು ಪ್ರವಾದಿಸು.

[8] ಇಗೋ, ನಿನ್ನ ಮುತ್ತಿಗೆಯ ದಿನಗಳು ತೀರುವ ತನಕ ನೀನು ಬಲಮಗ್ಗುಲಿಂದ ಎಡಮಗ್ಗುಲಿಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು.

[9] “ಇದಲ್ಲದೆ ನೀನು ಗೋದಿ, ಜವೆಗೋದಿ, ಅವರೆ, ಅಲಸಂದಿ, ನವಣೆ, ಕಡಲೆ, ಇವುಗಳನ್ನು ತೆಗೆದುಕೊಂಡು ಒಂದೇ ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿಯನ್ನು ಮಾಡಿಕೋ; ಮಗ್ಗುಲಲ್ಲಿ ಮಲಗಿಕೊಳ್ಳುವಷ್ಟು ದಿನ, ಅಂದರೆ ಮುನ್ನೂರತೊಂಬತ್ತು ದಿನ ಅದನ್ನು ತಿನ್ನು.

[10] ನಿನ್ನ ಆಹಾರವನ್ನು ತೂಕದ ಪ್ರಕಾರ ದಿನವೊಂದಕ್ಕೆ ಇಪ್ಪತ್ತು ತೊಲಾದಂತೆ (230 ಗ್ರಾಂ) ತಿನ್ನು; ಆಗಾಗ್ಗೆ ಸ್ವಲ್ಪ ಸ್ವಲ್ಪ ತಿನ್ನಬೇಕು.

[11] ನೀರನ್ನು ಅಳತೆಯ ಪ್ರಕಾರ ದಿನವೊಂದಕ್ಕೆ ಎರಡು ಬಟ್ಟಲಂತೆ ಕುಡಿ; ಆಗಾಗ್ಗೆ ಸ್ವಲ್ಪ ಸ್ವಲ್ಪ ಕುಡಿಯಬೇಕು.

[12] ನೀನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ, ನಿನ್ನ ಜನರ ಕಣ್ಣೆದುರಿಗೆ ಆ ಹಿಟ್ಟನ್ನು ರೊಟ್ಟಿಮಾಡಿ ಜವೆಗೋದಿಯ ರೊಟ್ಟಿಗಳಂತೆ ತಿನ್ನು.

[13] ಹಾಗೆಯೇ ಇಸ್ರಾಯೇಲ್ ವಂಶದವರು ನನ್ನಿಂದ ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಆ ದೇಶೀಯರ ನಡುವೆ ವಾಸಿಸುತ್ತಾ ತಮ್ಮ ಆಹಾರವನ್ನು ಹೊಲಸಾಗಿ ತಿನ್ನುವರು” ಇದು ಯೆಹೋವನ ನುಡಿ.

[14] ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದಂದಿನಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗವು ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ; ಯಾವ ಅಸಹ್ಯಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ” ಎಂದು ಅರಿಕೆಮಾಡಲು,

[15] ಆತನು ನನಗೆ, “ನೋಡು, ಮನುಷ್ಯರ ಮಲಕ್ಕೆ ಬದಲಾಗಿ ದನಗಳ ಸಗಣಿಯನ್ನು ನಿನಗೆ ಗೊತ್ತುಮಾಡಿದ್ದೇನೆ, ಇದನ್ನು ಉರಿಸಿ ನಿನ್ನ ರೊಟ್ಟಿಯನ್ನು ಸುಟ್ಟುಕೋ” ಎಂದು ಉತ್ತರಕೊಟ್ಟನು.

[16] ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ನಿಲ್ಲಿಸಿಬಿಡುವೆನು. ನಿವಾಸಿಗಳು ಅನ್ನವನ್ನು ತೂಕದ ಪ್ರಕಾರ ಕಳವಳದಿಂದ ತಿನ್ನುವರು, ನೀರನ್ನು ಅಳತೆಯ ಪ್ರಕಾರ ನಡುಗುತ್ತಾ ಕುಡಿಯುವರು.

[17] ಅವರಲ್ಲಿ ಪ್ರತಿಯೊಬ್ಬರೂ ಅನ್ನ ಮತ್ತು ನೀರಿನ ಕೊರತೆಯಿಂದ ಕುಗ್ಗಿ ತಮ್ಮ ಅಧರ್ಮದಿಂದ ನಾಶವಾಗಿ ಹೋಗುವರು.”

ಯೆಹೆಜ್ಕೇಲನು — Chapters