Skip to content
Opens in a new window
Listen to this chapter • 6:28

[1] ನಾನು ಸೆರೆಯವರ ಜೊತೆ ಕೆಬಾರ್ ನದಿಯ ಬಳಿಯಲ್ಲಿರುವಾಗ ಮೂವತ್ತನೆಯ ವರ್ಷದ, ನಾಲ್ಕನೆಯ ತಿಂಗಳಿನ, ಐದನೆಯ ದಿನದಲ್ಲಿ ಆಕಾಶ ತೆರೆಯಿತು. ನಾನು ದೇವರ ದರ್ಶನಗಳನ್ನು ಕಂಡೆನು.

[2] ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಕೀನನ ಸೆರೆಯ ಐದನೆಯ ವರ್ಷದಲ್ಲಿ,

[3] ಯೆಹೋವ ದೇವರ ವಾಕ್ಯವು ಬಾಬಿಲೋನಿಯರ ದೇಶದ ಕೆಬಾರ್ ನದಿಯ ಬಳಿಯಲ್ಲಿ, ಬೂಜಿಯ ಮಗ ಹಾಗೂ ಯಾಜಕ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು ಮತ್ತು ಅಲ್ಲಿ ಯೆಹೋವ ದೇವರ ಕೈ ಅವನ ಮೇಲಿತ್ತು.

[4] ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಝಗಝಗಿಸುವ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ ಜ್ವಾಲೆಯ ಮಧ್ಯೆ ಹೊಳೆಯುವ ಲೋಹ ಬೆಳಗಿತು.

[5] ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರಟಿತು. ಅವುಗಳಿಗೆ ಮನುಷ್ಯನ ರೂಪವಿತ್ತು.

[6] ಪ್ರತಿಯೊಂದಕ್ಕೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು.

[7] ಅವುಗಳ ಕಾಲುಗಳು ನೆಟ್ಟಗಿದ್ದು, ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು, ಕಂಚಿಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು.

[8] ಅವುಗಳ ರೆಕ್ಕೆಗಳ ಕೆಳಗೆ ನಾಲ್ಕು ಪಕ್ಕೆಗಳ ಮೇಲೆ ಮನುಷ್ಯನ ಕೈಗಳು ಇದ್ದವು. ಆ ನಾಲ್ಕಕ್ಕೂ ಮುಖಗಳು, ರೆಕ್ಕೆಗಳು ಇದ್ದವು.

[9] ಅವುಗಳ ರೆಕ್ಕೆಗಳು ಪರಸ್ಪರರ ರೆಕ್ಕೆಗಳನ್ನು ಸ್ಪರ್ಶಿಸುತ್ತಿದ್ದವು. ಪ್ರತಿಯೊಂದೂ ನೇರವಾಗಿ ಮುಂದೆ ಹೋಗುತ್ತಿದ್ದವು ಮತ್ತು ಅವರು ತಿರುಗದೆ ಮುಂದೆ ಸಾಗುತ್ತಿದ್ದರು.

[10] ಅವುಗಳ ಮುಖಗಳು ಹೀಗಿದ್ದವು: ಪ್ರತಿಯೊಂದರ ಮುಂದಿನ ನಾಲ್ಕು ಮುಖಗಳು ಮನುಷ್ಯನ ಮುಖದಂತಿತ್ತು; ಬಲಗಡೆಯ ನಾಲ್ಕು ಮುಖಗಳು ಸಿಂಹದ ಮುಖದಂತಿತ್ತು; ಎಡಗಡೆಯ ನಾಲ್ಕು ಮುಖಗಳು ಹೋರಿಯ ಮುಖದಂತಿತ್ತು; ಹಿಂದಿನ ನಾಲ್ಕು ಮುಖಗಳು ಗರುಡಪಕ್ಷಿಯ ಮುಖದಂತಿತ್ತು.

[11] ಅವುಗಳ ಮುಖಗಳು ಹೀಗಿದ್ದವು. ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಿಕೊಂಡಿದ್ದವು. ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು, ಒಂದಕ್ಕೊಂದು ಅಂಟಿಕೊಂಡಿದ್ದವು. ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು.

[12] ಅವೆಲ್ಲವೂ ನೆಟ್ಟಗೆ ಮುಂದಕ್ಕೆ ಹೋದವು. ಅವುಗಳ ಆತ್ಮವು ಎಲ್ಲಿಗೆ ಹೋಗಬೇಕಿತ್ತೋ, ಅಲ್ಲಿಗೇ ಹೋದವು, ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ.

[13] ಆ ಜೀವಿಗಳ ಮಧ್ಯೆ ಅದ್ಭುತ ಕಾಂತಿಯೊಂದು ಉರಿಯುವ ಕೆಂಡಗಳೋ, ಪಂಜುಗಳೋ ಎಂಬಂತೆ ಕಾಣಿಸಿತು. ಅದು ಆ ಜೀವಿಗಳ ನಡುವೆ ಓಲಾಡುತ್ತಿತ್ತು. ಆ ಉರಿ ತೇಜೋಮಯವಾಗಿತ್ತು. ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು.

[14] ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾಡುತ್ತಾ ಇದ್ದವು.

[15] ಆಗ ನಾನು ಆ ಜೀವಿಗಳನ್ನು ನೋಡಲಾಗಿ, ಜೀವಿಗಳ ಪಕ್ಕದಲ್ಲಿ ಭೂಮಿಯ ಮೇಲೆ ಒಂದು ಚಕ್ರವು ನಾಲ್ಕು ಮುಖವುಳ್ಳದ್ದಾಗಿರುವುದನ್ನು ನಾನು ನೋಡಿದೆನು.

[16] ಆ ಚಕ್ರಗಳ ಆಕಾರವೂ, ಅವುಗಳ ಕೆಲಸವೂ ಪೀತರತ್ನದ ವರ್ಣದ ಹಾಗಿದೆ. ಆ ನಾಲ್ಕಕ್ಕೆ ಒಂದೇ ಮಾದರಿಯಾಗಿದ್ದವು. ಅವುಗಳ ಆಕಾರವೂ, ಅವುಗಳ ಕೆಲಸವೂ ಚಕ್ರದ ಮಧ್ಯದೊಳಗೆ ಚಕ್ರವು ಇದ್ದ ಹಾಗಿತ್ತು.

[17] ಅವು ಚಲಿಸುವಾಗ ತಮ್ಮ ನಾಲ್ಕು ಪಕ್ಕೆಗಳ ಮೇಲೆ ಹೋದವು ಮತ್ತು ಅವು ಹೋಗುವಾಗ ತಿರುಗಲಿಲ್ಲ.

[18] ಅವುಗಳ ಚಕ್ರಗಳು ಎತ್ತರವಾಗಿಯೂ, ಭಯಂಕರವಾಗಿಯೂ ಇದ್ದವು. ಆ ನಾಲ್ಕು ಚಕ್ರಗಳ ಸುತ್ತಲೂ ಅನೇಕ ಕಣ್ಣುಗಳಿದ್ದವು.

[19] ಜೀವಿಗಳು ಹೋಗುವಾಗ ಆ ಚಕ್ರಗಳು ಅವುಗಳ ಬಳಿಯಲ್ಲೇ ಹೋದವು. ಆ ಜೀವಿಗಳು ಭೂಮಿಯಿಂದ ಮೇಲಕ್ಕೆ ಏಳುವಾಗ, ಚಕ್ರಗಳು ಮೇಲಕ್ಕೆ ಏಳುತ್ತಿದ್ದವು.

[20] ಆತ್ಮವು ಎಲ್ಲಿಗೆ ಹೋಗಬೇಕಿತ್ತೋ, ಅಲ್ಲಿಗೇ ಅವುಗಳು ಹೋದವು. ಚಕ್ರಗಳು ಸಹ ಅವುಗಳಿಗೆದುರಾಗಿ ಮೇಲಕ್ಕೆ ಏಳುತ್ತಿದ್ದವು. ಏಕೆಂದರೆ ಚಕ್ರಗಳಲ್ಲಿ ಆ ಜೀವಿಯ ಆತ್ಮವು ಇತ್ತು.

[21] ಆ ಜೀವಿಗಳು ಮುಂದುವರಿಯುವಾಗ, ಚಕ್ರಗಳೂ ಮುಂದುವರಿಯುತ್ತಿದ್ದವು. ಅವು ನಿಂತು ಹೋಗುವಾಗ, ಇವೂ ನಿಂತು ಹೋಗುತ್ತಿದ್ದವು. ಅವು ನೆಲದಿಂದ ಮೇಲಕ್ಕೆ ಏಳುವಾಗ, ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು. ಏಕೆಂದರೆ ಆ ಜೀವಿಗಳ ಆತ್ಮ ಚಕ್ರಗಳಲ್ಲಿಯೂ ಇತ್ತು.

[22] ಜೀವಿಯ ತಲೆಗಳ ಮೇಲೆ ಗಗನ ಮಂಡಲ ವಿಶಾಲ ರೂಪವು ವಜ್ರದಂತಿತ್ತು. ಮತ್ತು ಅದು ಅದ್ಭುತವಾಗಿತ್ತು.

[23] ಆ ಗಗನ ಮಂಡಲದ ಕೆಳಗೆ ಆ ಜೀವಿಗಳ ರೆಕ್ಕೆಗಳು ಒಂದರ ಕಡೆಗೆ ಒಂದರಂತೆ ಚಾಚಿದವು. ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.

[24] ಅವು ಚಲಿಸುವಾಗ, ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು. ಅದು ಜಲಪ್ರವಾಹದ ಶಬ್ದದಂತೆಯೂ, ಸರ್ವಶಕ್ತರ ಧ್ವನಿಯ ಹಾಗೆಯೂ, ಸೈನ್ಯದ ಶಬ್ದದ ಹಾಗೆಯೂ ಇತ್ತು. ಅವು ನಿಲ್ಲುವಾಗ ಅವುಗಳ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.

[25] ಅವುಗಳು ನಿಂತು, ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ, ಅವುಗಳ ತಲೆಗಳ ಮೇಲಿರುವ ಗಗನ ಮಂಡಲದೊಳಗಿಂದ ಒಂದು ಶಬ್ದವಾಯಿತು.

[26] ಅವುಗಳ ತಲೆಗಳ ಮೇಲಿರುವ ಗಗನ ಮಂಡಲದ ಮೇಲ್ಭಾಗದಲ್ಲಿ ನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.

[27] ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಲೋಹವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆನು.

[28] ಮಳೆ ಬೀಳುವ ದಿನದಲ್ಲಿ ಮೇಘದಲ್ಲಿ ಮಳೆಬಿಲ್ಲು ಹೇಗೆ ಕಾಣಿಸುವುದೋ ಹಾಗೆ ಅದರ ಸುತ್ತಲೂ ಆ ಪ್ರಕಾಶವು ಕಾಣಿಸಿತು. ಇದೇ ಯೆಹೋವ ದೇವರ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ಕಂಡಾಗ ನಾನು ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು ಮತ್ತು ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.

ಯೆಹೆಜ್ಕೇಲನು — Chapters