Skip to content
Opens in a new window
Listen to this chapter • 5:16

[1] ಹನ್ನೊಂದನೆಯ ವರ್ಷ, ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು.

[2] “ಮನುಷ್ಯಪುತ್ರನೇ, ಟೈರ್, ಯೆರೂಸಲೇಮಿನ ವಿಷಯವಾಗಿ, ‘ಆಹಾ, ಜನರ ದ್ವಾರವಾಗಿದ್ದದ್ದು ಮುರಿದುಹೋಯಿತು, ಅದು ನನ್ನ ಕಡೆಗೆ ತೆರೆದುಕೊಂಡಿದೆ. ಯೆರೂಸಲೇಮು ಹಾಳಾದದ್ದರಿಂದ ನಾನು ವೃದ್ಧಿಗೊಳ್ಳುವೆನು,’

[3] ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಟೈರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವುದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು.

[4] ಅವರು ಟೈರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ಧೂಳನ್ನು ಒರಸಿ ಅದನ್ನು ಬೋಳು ಬಂಡೆಯಂತೆ ಮಾಡುವೆನು.

[5] ಅದು ಸಮುದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿರುವುದು. ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಅದು ಜನಾಂಗಗಳಿಗೆ ಕೊಳ್ಳೆಯಾಗಿರುವುದು,

[6] ಮತ್ತು ಪ್ರಧಾನ ಭೂಮಿಯಲ್ಲಿರುವ ಅದರ ಪುತ್ರಿಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವ ದೇವರೆಂದು ಎಲ್ಲರಿಗೂ ತಿಳಿಯುವುದು.

[7] “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ಉತ್ತರದ ರಾಜಾಧಿರಾಜನೂ ಬಾಬಿಲೋನಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡವೂ ಸವಾರರ ಸಂಗಡವೂ ರಥಗಳ ಸಂಗಡವೂ ಬಹುಜನರ ಸಂಗಡವೂ ಟೈರಿನ ಮೇಲೆ ತರುತ್ತೇನೆ.

[8] ಅವನು ಪ್ರಧಾನ ಭೂಮಿಯಲ್ಲಿನ ನಿನ್ನ ಪುತ್ರಿಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಗುರಾಣಿಯನ್ನು ಎತ್ತುವನು.

[9] ತನ್ನ ಯುದ್ಧ ಯಂತ್ರಗಳನ್ನು ನಿನ್ನ ಗೋಡೆಗಳಿಗೆ ತಾಕಿಸುವನು. ತನ್ನ ಆಯುಧಗಳಿಂದ ನಿನ್ನ ಗೋಪುರಗಳನ್ನು ಕೆಡವಿಬಿಡುವನು.

[10] ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಸುಕುವದು, ಒಡಕು ಬಿದ್ದ ಕೋಟೆಯೊಳಗೆ ಶತ್ರುಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲುಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವುವು.

[11] ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ನಿನ್ನ ಜನರನ್ನು ಖಡ್ಗದಿಂದ ಕೊಲ್ಲುವನು; ನಿನ್ನ ಬಲವಾದ ಕಂಬಗಳು ನೆಲಕ್ಕೆ ಬೀಳುವುವು.

[12] ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಒಡೆದು, ನಿನ್ನ ರಮ್ಯವಾದ ಮನೆಗಳನ್ನು ಕೆಡವಿ, ನಿನ್ನ ಕಲ್ಲುಗಳನ್ನೂ ನಿನ್ನ ಮರಗಳನ್ನೂ ಧೂಳನ್ನೂ ನೀರಿನಲ್ಲಿ ಹಾಕುವರು.

[13] ಆಗ ನಿನ್ನ ಹಾಡುಗಳ ಶಬ್ದವನ್ನು ನಿಲ್ಲಿಸುವೆನು. ನಿನ್ನ ಕಿನ್ನರಿಗಳ ಧ್ವನಿ ಇನ್ನು ಕೇಳಿಸುವುದಿಲ್ಲ.

[14] ನಿನ್ನನ್ನು ಬೋಳು ಬಂಡೆಯಂತೆ ಮಾಡುವೆನು. ನೀನು ಅಲ್ಲಿ ಬಲೆಹಾಸುವ ಸ್ಥಳವಾಗುವೆ. ನೀನು ಪುನಃ ಕಟ್ಟಲಾಗದೆ ಹೋಗುವಿ. ಯೆಹೋವ ದೇವರಾದ ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[15] “ಸಾರ್ವಭೌಮ ಯೆಹೋವ ದೇವರು ಟೈರಿಗೆ ಹೀಗೆ ಹೇಳುತ್ತಾರೆ: ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ಸಮುದ್ರತೀರದ ಪ್ರದೇಶಗಳು ನಡುಗುವುದಿಲ್ಲವೇ?

[16] ಆಮೇಲೆ ಸಮುದ್ರತೀರದ ಎಲ್ಲಾ ರಾಜಕುಮಾರರು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲುವಂಗಿಗಳನ್ನು ತೆಗೆದುಹಾಕುವರು, ಕಸೂತಿ ಕೆಲಸದಿಂದ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು. ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳುವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯವಾಗಿ ಭಯಭೀತರಾದರು.

[17] ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವುದೇನೆಂದರೆ: “ ‘ಸಮುದ್ರಗಳ ಬಳಿಯಲ್ಲಿ ವಾಸಿಸಿದವಳೇ, ಪ್ರಸಿದ್ಧ ಪಟ್ಟಣವೇ, ಸಮುದ್ರದ ಮೇಲೆ ಬಲಗೊಂಡ ನಗರವೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದೆ?

[18] ಈಗ ನೀನು ಬೀಳುವ ದಿವಸದಲ್ಲಿ ಸಮುದ್ರ ತೀರಗಳು ನಡುಗುವುವು. ಹೌದು, ನೀನು ಅಳಿದು ಹೋದುದ್ದಕ್ಕೆ ಸಮುದ್ರ ತೀರಗಳು ಗಾಬರಿಯಾಗುವುವು.’

[19] “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧ ಜಲರಾಶಿಯನ್ನು ನಿನ್ನ ಮೇಲೆ ಬರಮಾಡುವೆನು.

[20] ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವವುಳ್ಳವರ ಲೋಕದಲ್ಲಿ ನೆಲೆಗೊಳಿಸದೆ ನಿರ್ಜನವಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರೊಂದಿಗೆ ವಾಸಿಸುವಂತೆ ಸೇರಿಸುವೆನು.

[21] ನಾನೂ ನಿನ್ನನ್ನು ಭಯಂಕರವಾದ ಅಂತ್ಯಕ್ಕೆ ತರುವೆನು. ಇನ್ನು ಮೇಲೆ ನೀನು ಇರುವುದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡುಕಿದರೂ ನೀನು ಸಿಗುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

ಯೆಹೆಜ್ಕೇಲನು — Chapters