[1] ಆರನೆಯ ವರ್ಷದ ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ, ಯೆಹೂದದ ಹಿರಿಯರೂ ನನ್ನ ಮನೆಯಲ್ಲಿ ಕುಳಿತುಕೊಂಡಿರುವಾಗ, ಅಲ್ಲಿ ಸಾರ್ವಭೌಮ ಯೆಹೋವ ದೇವರ ಹಸ್ತ ನನ್ನ ಮೇಲೆ ಸ್ಪರ್ಶವಾಯಿತು.
[2] ಇಗೋ, ನಾನು ನೋಡುತ್ತಿದ್ದಂತೆ ಬೆಂಕಿ ಉರಿಯುತ್ತದೋ ಎಂಬಂತೆ ಮನುಷ್ಯಾಕೃತಿಯೊಂದು ಕಾಣಿಸಿತು. ಸೊಂಟದ ಕೆಳಗಿನ ರೂಪವು ಬೆಂಕಿಯಂತಿತ್ತು ಮತ್ತು ಅವನ ಸೊಂಟದ ಮೇಲಿನ ಭಾಗವು ಹೊಳೆಯುವ ಲೋಹದಂತೆ ಪ್ರಕಾಶಮಾನವಾಗಿತ್ತು.
[3] ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿದನು. ಆಗ ದೇವರಾತ್ಮರು ದೇವದರ್ಶನದಲ್ಲಿ ಯೆರೂಸಲೇಮಿನ ಉತ್ತರದ ಕಡೆಗೆ ಎದುರಾಗಿರುವ ಒಳ ಅಂಗಳದ ಕಡೆಗೆ, ರೋಷಗೊಳಿಸುವ ವಿಗ್ರಹವು ಇದ್ದಲ್ಲಿಗೆ ನನ್ನನ್ನು ಎತ್ತಿಕೊಂಡು ಹೋದರು.
[4] ಇಸ್ರಾಯೇಲಿನ ದೇವರ ಮಹಿಮೆಯು, ನಾನು ಆ ಬಯಲುಸೀಮೆಯಲ್ಲಿ ನೋಡಿದ ಆಕಾರದ ಪ್ರಕಾರವೇ ಅಲ್ಲಿ ಇತ್ತು.
[5] ಆಗ ಅವರು ನನಗೆ, “ಮನುಷ್ಯಪುತ್ರನೇ, ಉತ್ತರಕ್ಕೆ ಕಣ್ಣೆತ್ತಿ ನೋಡು,” ಎಂದು ಹೇಳಿದರು; ಅಂತೆಯೇ ನಾನು ಉತ್ತರಕ್ಕೆ ಕಣ್ಣೆತ್ತಿ ನೋಡಿದೆ. ಇಗೋ ದೇವರನ್ನು ರೋಷಗೊಳಿಸುವ ಅದೇ ವಿಗ್ರಹವು ಬಲಿಪೀಠದ ಬಾಗಿಲ ಉತ್ತರದ ಪ್ರವೇಶದ್ವಾರದ ಮುಂದೆ ನಿಂತಿತ್ತು.
[6] ಅವರು ನನಗೆ, “ಮನುಷ್ಯಪುತ್ರನೇ, ಅವರು ಮಾಡುತ್ತಿರುವುದನ್ನು ನೋಡುತ್ತಿರುವೆಯಾ? ನಾನು ನನ್ನ ಪರಿಶುದ್ಧ ಸ್ಥಳವನ್ನು ಬಿಟ್ಟು ದೂರ ಹೋಗುವಹಾಗೆ, ಇಸ್ರಾಯೇಲಿನ ಮನೆತನದವರು ಇಲ್ಲಿ ನಡೆಸುತ್ತಿರುವ ದೊಡ್ಡ ಅಸಹ್ಯಗಳನ್ನು ನೋಡುತ್ತಿರುವೆಯಾ? ಆದರೆ ನೀನು ಇನ್ನೂ ಹೆಚ್ಚಿನ ಅಸಹ್ಯಗಳನ್ನು ನೋಡುವೆ,” ಎಂದನು.
[7] ಆಗ ಅವನು ನನ್ನನ್ನು ಅಂಗಳದ ಬಾಗಿಲಿಗೆ ತಂದನು ಮತ್ತು ನಾನು ನೋಡುವಾಗ, ಗೋಡೆಯಲ್ಲಿ ಒಂದು ರಂಧ್ರವನ್ನು ಕಂಡೆನು.
[8] ಆಮೇಲೆ ಆತನು ನನಗೆ, “ಮನುಷ್ಯಪುತ್ರನೇ, ಈಗ ಗೋಡೆಯಲ್ಲಿ ಕೊರೆ,” ಎಂದು ಹೇಳಿದನು. ನಾನು ಗೋಡೆಯನ್ನು ಕೊರೆದಾಗ ಒಂದು ಬಾಗಿಲನ್ನು ಕಂಡೆನು.
[9] ಆಗ ಆತನು ನನಗೆ, “ನೀನು ಒಳಗೆ ಹೋಗಿ ಜನರು ಇಲ್ಲಿ ನಡೆಸುವ ಅಸಹ್ಯ ದುಷ್ಕಾರ್ಯಗಳನ್ನು ನೋಡು,” ಎಂದನು. ನಾನು ಒಳಗೆ ಹೋಗಿ ನೋಡಿದೆನು.
[10] ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ, ಅಸಹ್ಯ ಮೃಗಗಳೂ, ಇಸ್ರಾಯೇಲರು ಪೂಜಿಸುವ ಸಕಲ ಮೂರ್ತಿಗಳೂ ಆ ಗೋಡೆಯ ಸುತ್ತಲೂ ಚಿತ್ರಿತವಾಗಿದ್ದವು.
[11] ಇಸ್ರಾಯೇಲಿನ ಮನೆತನದವರಲ್ಲಿ ಎಪ್ಪತ್ತು ಮಂದಿ ಹಿರಿಯರೂ, ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿದ್ದರು. ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾರತಿ ಇತ್ತು. ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು.
[12] ಆಗ ದೇವರು ನನಗೆ, “ಮನುಷ್ಯಪುತ್ರನೇ, ಇಸ್ರಾಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಯೆಹೋವ ದೇವರು ನಾಡನ್ನು ತೊರೆದುಬಿಟ್ಟಿದ್ದಾರೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.
[13] ಇದಲ್ಲದೆ ಅವರು, “ಮತ್ತೊಂದು ಸಾರಿ ತಿರುಗಿಕೋ. ಅವರು ಮಾಡುವ ಇನ್ನೂ ಮಹಾ ಅಸಹ್ಯ ಕಾರ್ಯಗಳನ್ನು ನೋಡುವೆ,” ಎಂದರು.
[14] ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಉತ್ತರದ ಕಡೆಗೆ ಎದುರಾಗಿದ್ದ ಬಾಗಿಲಿನ ಕಡೆಗೆ ತಂದನು. ಅಲ್ಲಿ ತಮ್ಮೂಜ್ ದೇವತೆಗೋಸ್ಕರ ಅಳುವ ಹೆಂಗಸರು ಕೂತಿದ್ದರು.
[15] ಆಮೇಲೆ ಅವನು ನನಗೆ, “ಮನುಷ್ಯಪುತ್ರನೇ, ನೋಡಿದೆಯಾ? ಮತ್ತೊಂದು ಸಾರಿ ತಿರುಗಿಕೋ. ಇವುಗಳಿಂದ ಇನ್ನೂ ಅಸಹ್ಯವಾದವುಗಳನ್ನು ಕಾಣುವೆ,” ಎಂದು ಹೇಳಿದನು.
[16] ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಬಂದನು. ಇಗೋ, ಯೆಹೋವ ದೇವರ ಮಂದಿರದ ಬಾಗಿಲಲ್ಲಿ ದ್ವಾರಾಂಗಳಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಸುಮಾರು ಇಪ್ಪತ್ತೈದು ಮಂದಿಯು ಯೆಹೋವ ದೇವರ ಮಂದಿರಕ್ಕೆ ಬೆನ್ನುಹಾಕಿ, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನಿಟ್ಟು, ಸೂರ್ಯನಮಸ್ಕಾರ ಮಾಡುತ್ತಿದ್ದರು.
[17] ಆಗ ಅವರು ನನಗೆ, “ಮನುಷ್ಯಪುತ್ರನೇ, ನೋಡಿದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದ ಮನೆತನದವರಿಗಲ್ಲವೇ? ಏಕೆಂದರೆ ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ, ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರಲ್ಲವೇ? ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟುಕೊಳ್ಳುತ್ತಾರೆ.
[18] ಆದ್ದರಿಂದ ನಾನು ಸಹ ರೋಷದಿಂದಲೇ ಇರುವೆನು. ನಾನು ಅವರನ್ನು ಕನಿಕರಿಸುವುದೂ ಇಲ್ಲ, ನಾನು ಅವರನ್ನು ಉಳಿಸುವುದೂ ಇಲ್ಲ. ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರುಚಿದರೂ, ನಾನು ಅವರನ್ನು ಕೇಳಿಸಿಕೊಳ್ಳುವುದೂ ಇಲ್ಲ,” ಎಂದನು.