Skip to content
Opens in a new window
Listen to this chapter • 5:59

[1] ಆಮೇಲೆ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದು ನನ್ನ ಮುಂದೆ ಕುಳಿತುಕೊಂಡರು.

[2] ಆಗ ಯೆಹೋವ ದೇವರ ವಾಕ್ಯವು ನನಗೆ ಬಂದಿತು:

[3] “ಮನುಷ್ಯಪುತ್ರನೇ, ಈ ಮನುಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ, ತಮ್ಮ ಅಕ್ರಮವಾದ ವಿಘ್ನಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವೆಲ್ಲವುಗಳಿಗಾಗಿ ನಾನು ಅವರನ್ನು ವಿಚಾರಿಸಬೇಕೇ?

[4] ಆದ್ದರಿಂದ ನೀನು ಅವರ ಸಂಗಡ ಮಾತನಾಡಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರ ಪ್ರತಿಯೊಬ್ಬನೂ ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲಿ ನೆಲೆಗೊಳಿಸಿ, ತಮ್ಮ ಅಕ್ರಮದ ವಿಘ್ನಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬರುವ ಅವನಿಗೆ ಯೆಹೋವ ದೇವರಾದ ನಾನು ಅವರ ವಿಗ್ರಹಗಳ ಸಮೂಹಕ್ಕೆ ತಕ್ಕ ಹಾಗೆ ಉತ್ತರಕೊಡುವೆನು.

[5] ತಮ್ಮ ವಿಗ್ರಹಗಳಿಗಾಗಿ ನನ್ನನ್ನು ತೊರೆದ ಇಸ್ರಾಯೇಲ್ ಜನರ ಹೃದಯಗಳನ್ನು ಪುನಃ ವಶಪಡಿಸಿಕೊಳ್ಳಲು ನಾನು ಇದನ್ನು ಮಾಡುತ್ತೇನೆ.’

[6] “ಆದ್ದರಿಂದ ಇಸ್ರಾಯೇಲಿನ ಮನೆತನದವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮಾನಸಾಂತರಪಟ್ಟು ನಿಮ್ಮ ವಿಗ್ರಹಗಳನ್ನು ಬಿಟ್ಟು ನೀವಾಗಿಯೇ ತಿರುಗಿಕೊಳ್ಳಿರಿ. ನಿಮ್ಮ ಅಸಹ್ಯವಾದವುಗಳನ್ನೆಲ್ಲಾ ಬಿಟ್ಟು, ನಿಮ್ಮ ಮುಖಗಳನ್ನು ತಿರುಗಿಸಿರಿ.

[7] “ ‘ಏಕೆಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಇಸ್ರಾಯೇಲಿನಲ್ಲಿ ನೆಲೆಸಿರುವ ವಿದೇಶಿಗಳಲ್ಲಾಗಲಿ, ಯಾವನಾದರೂ ನನ್ನಿಂದ ಅಗಲಿ ವಿಗ್ರಹಗಳನ್ನು ಹೃದಯದಲ್ಲಿ ನೆಲೆಗೊಳಿಸಿಕೊಂಡು ಪಾಪಕಾರಿಯಾದ ಆ ವಿಘ್ನವನ್ನು ತನ್ನ ಮುಂದೆಯೇ ಇಟ್ಟುಕೊಂಡು, ಪ್ರವಾದಿಯ ಬಳಿಗೆ ಬಂದು, ಅವನ ಮೂಲಕ ದೈವೋತ್ತರವನ್ನು ಕೇಳಿಕೊಂಡರೆ, ಯೆಹೋವ ದೇವರಾದ ನಾನೇ ಉತ್ತರಕೊಡುವೆನು.

[8] ನಾನು ಅಂಥವನ ಮೇಲೆ ಬಹುಕೋಪಗೊಂಡು, ಅವನನ್ನು ಗುರುತನ್ನಾಗಿಯೂ, ಗಾದೆಯನ್ನಾಗಿಯೂ ಮಾಡಿ, ನನ್ನ ಜನರ ಮಧ್ಯದೊಳಗಿಂದ ತೆಗೆದುಬಿಡುವೆನು. ಹೀಗೆ ನಾನೇ ಯೆಹೋವ ದೇವರು ಎಂದು ನಿಮಗೆ ಗೊತ್ತಾಗುವುದು.

[9] “ ‘ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ, ಯೆಹೋವ ದೇವರಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ. ನಾನು ನನ್ನ ಕೈಯನ್ನು ಅವನ ವಿರುದ್ಧವಾಗಿ ಚಾಚಿ, ನನ್ನ ಜನರಾದ ಇಸ್ರಾಯೇಲರ ಮಧ್ಯದೊಳಗಿಂದ ಅವನನ್ನು ನಾಶಪಡಿಸುವೆನು.

[10] ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು. ವಿಚಾರಿಸುವವನ ದಂಡನೆಯು ಹೇಗೆಯೋ ಹಾಗೆಯೇ, ಪ್ರವಾದಿಗೆ ದಂಡನೆಯೂ ಇರುವುದು.

[11] ಇಸ್ರಾಯೇಲಿನ ಮನೆತನದವರು ಇನ್ನು ಮೇಲೆ ನನ್ನನ್ನು ಬಿಟ್ಟು ತಿರುಗದೇ, ತಮ್ಮ ಎಲ್ಲಾ ದ್ರೋಹಗಳಿಂದ ಅಶುದ್ಧರಾಗದೆ ಇರುವುದರಿಂದ ಅವರು ನನ್ನ ಜನರಾಗಿರುವರು, ಅವರಿಗೆ ನಾನು ದೇವರಾಗಿರುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”

[12] ಯೆಹೋವ ದೇವರ ವಾಕ್ಯವು ನನಗೆ ಬಂದಿತು:

[13] “ಮನುಷ್ಯಪುತ್ರನೇ, ದೇಶವು ದೊಡ್ಡ ಅಪರಾಧದಿಂದ ನನಗೆ ವಿರುದ್ಧವಾಗಿ ಪಾಪಮಾಡಿದೆ, ನಾನು ಅದರ ಮೇಲೆ ನನ್ನ ಕೈಚಾಚಿ, ಅದರ ಜೀವನಾಧಾರವನ್ನು ತೆಗೆದುಹಾಕಿ, ಕ್ಷಾಮವು ಬರುವ ಹಾಗೆ ಮಾಡುವೆನು. ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಡುವೆನು.

[14] ನೋಹನೂ ದಾನಿಯೇಲನೂ ಯೋಬನೂ ಎಂಬ ಈ ಮೂವರು ಅದರಲ್ಲಿದ್ದರೂ ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಮಾತ್ರವೇ ಉಳಿಸಿಕೊಳ್ಳುತ್ತಿದ್ದರು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[15] “ನಾನು ದುಷ್ಟಮೃಗಗಳನ್ನು ದೇಶದಲ್ಲಿ ಹಾದುಹೋಗುವಂತೆ ಮಾಡಿ, ಅದನ್ನು ನಿರ್ಜನಪಡಿಸಿ, ಹಾಳು ಮಾಡಿ, ಯಾರೂ ಮೃಗಗಳ ನಿಮಿತ್ತ ಹಾದುಹೋಗದಂತೆ ಮಾಡಿದರೆ,

[16] ಈ ಮೂರು ಮನುಷ್ಯರಲ್ಲಿ ಅದರಲ್ಲಿ ಇದ್ದರೂ, ನನ್ನ ಜೀವದಾಣೆ ಅವರು ಪುತ್ರರನ್ನಾಗಲಿ, ಪುತ್ರಿಯರನ್ನಾಗಲಿ ಬಿಡಿಸಲು ಆಗುತ್ತಿರಲಿಲ್ಲ, ತಾವು ಮಾತ್ರ ತಪ್ಪಿಸಿಕೊಳ್ಳುವರು. ಆದರೆ ದೇಶವು ಹಾಳಾಗುವುದು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[17] “ಇಲ್ಲವೆ ನಾನು ಆ ದೇಶದ ಮೇಲೆ ಖಡ್ಗವನ್ನು ತರಿಸಿ, ‘ಖಡ್ಗವೇ, ಆ ದೇಶದಲ್ಲಿ ಹಾದುಹೋಗು,’ ಎಂದು ಹೇಳಿ, ಅದು ಮನುಷ್ಯರನ್ನೂ, ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟಾಗ,

[18] ಈ ಮೂವರು ಅದರಲ್ಲಿದ್ದರೂ, ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಪುತ್ರಪುತ್ರಿಯರನ್ನು ಉಳಿಸಿಕೊಳ್ಳುತ್ತಿರಲಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[19] “ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಮರಣದಂಡನೆಯಾಗಿ ಅದರ ಮೇಲೆ ನನ್ನ ರೋಷವನ್ನು ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ತೆಗೆದುಹಾಕುವಾಗ,

[20] ನೋಹನೂ, ದಾನಿಯೇಲನೂ, ಯೋಬನೂ ಅದರಲ್ಲಿದ್ದರೂ ನನ್ನ ಜೀವದಾಣೆ, ಅವರು ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರೇ ಹೊರತು ತಮ್ಮ ಪುತ್ರಪುತ್ರಿಯರನ್ನು ಉಳಿಸಿಕೊಳ್ಳುತ್ತಿರಲಿಲ್ಲ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[21] “ನಾನು ಖಡ್ಗ, ಬರಗಾಲ ಕ್ಷಾಮ, ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ, ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವುದು?

[22] ಆದರೂ ಅದರಲ್ಲಿ ಪುತ್ರಪುತ್ರಿಯರಲ್ಲಿ ಕೆಲವರು ಹೇಗೂ ತಪ್ಪಿಸಿಕೊಂಡು ಅಲ್ಲಿಂದ ಉಳಿದು ಒಯ್ಯಲಾಗುವರು. ಅವರು ನಿಮ್ಮ ಬಳಿಗೆ ಬಂದಾಗ, ನೀವು ಅವರ ದುರ್ಮಾರ್ಗ ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇಮಿನ ಮೇಲೆ ತಂದ ಕೇಡಿನ ವಿಷಯವಾಗಿಯೂ ಸಮಾಧಾನ ಹೊಂದುವಿರಿ.

[23] ನೀವು ಅವರ ದುರ್ಮಾರ್ಗಗಳನ್ನೂ ದುಷ್ಕೃತ್ಯಗಳನ್ನೂ ನೋಡುವಾಗ ಅದರಿಂದಲೇ ನಿಮಗೆ ಸಮಾಧಾನವಾಗುವುದು; ನಾನು ಅದರೊಳಗೆ ಮಾಡಿದ್ದೆಲ್ಲಾ ಕಾರಣವಿಲ್ಲದೆ ಮಾಡಲಿಲ್ಲವೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

ಯೆಹೆಜ್ಕೇಲನು — Chapters