[1] “ಮನುಷ್ಯಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು, ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ನಗರದ ನಕ್ಷೆಯನ್ನು ಬರೆ.
[2] ಆ ನಕ್ಷೆಯ ಸುತ್ತಲು ದಿಬ್ಬ ಹಾಕಿ, ಒಡ್ಡು ಕಟ್ಟಿ, ಪಾಳೆಯಗಳನ್ನು ಮಾಡಿ, ಭಿತ್ತಿಭೇದಕ ಯಂತ್ರಗಳನ್ನು ನಿಲ್ಲಿಸಿ, ಅದನ್ನು ಮುತ್ತಿಗೆ ಹಾಕು.
[3] ಆಮೇಲೆ ಕಬ್ಬಿಣದ ಹಂಚನ್ನು ತೆಗೆದುಕೊಂಡು, ಅದನ್ನು ನಿನಗೂ, ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ, ಆ ಪಟ್ಟಣದ ಮೇಲೆ ದೃಷ್ಟಿಯಿಡು, ಅದು ಮುತ್ತಲಾಗುವುದು. ನೀನು ಅದನ್ನು ಮುತ್ತಿದಂತಾಗುವುದು. ಇದು ಇಸ್ರಾಯೇಲಿನ ಜನರಿಗೆ ಒಂದು ಸಂಕೇತ.
[4] “ನೀನು ನಿನ್ನ ಎಡಗಡೆಯಲ್ಲಿ ಮಲಗಿ, ಇಸ್ರಾಯೇಲಿನ ಜನರ ಅಕ್ರಮಗಳನ್ನು ನಿಮ್ಮ ಮೇಲಿಡಬೇಕು. ನೀನು ಎಡಗಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮಗಳನ್ನು ನಿಮ್ಮ ಮೇಲೆ ಹೊತ್ತುಕೊಂಡಿರಬೇಕು.
[5] ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರ ತೊಂಬತ್ತು ದಿವಸಗಳಾಗಿವೆ. ಹೀಗೆ ನೀನು ಇಸ್ರಾಯೇಲಿನ ಜನರ ಅಕ್ರಮಗಳನ್ನು ಹೊರಬೇಕು.
[6] “ನೀನು ಇವುಗಳನ್ನು ಮಾಡಿದ ಮೇಲೆ ಇನ್ನೊಂದು ಸಾರಿ ಬಲಗಡೆಯಲ್ಲಿ ಮಲಗಿ, ಯೆಹೂದ ಜನರ ಅಕ್ರಮವನ್ನು ನಲವತ್ತು ದಿವಸ ಹೊರಬೇಕು. ನಾನು ನಿನಗೆ ಒಂದೊಂದು ದಿನವನ್ನು ಒಂದೊಂದು ವರ್ಷಕ್ಕೆ ನೇಮಿಸಿದ್ದೇನೆ.
[7] ನೀನು ಯೆರೂಸಲೇಮಿನ ಮುತ್ತಿಗೆಯ ಕಡೆಗೆ ನಿನ್ನ ಮುಖವನ್ನು ಇಡಬೇಕು. ನಿನ್ನ ಭುಜವನ್ನು ನೀನು ಬರಿದುಮಾಡಿಕೊಂಡು, ಅದಕ್ಕೆ ವಿರೋಧವಾಗಿ ಪ್ರವಾದಿಸಬೇಕು.
[8] ನಾನು ನಿನ್ನ ಮೇಲೆ ಹಗ್ಗಗಳನ್ನು ಇಡುತ್ತೇನೆ. ನೀನು ನಿನ್ನ ಮುತ್ತಿಗೆಯ ದಿವಸಗಳು ಮುಗಿಯುವವರೆಗೂ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು.
[9] “ನೀನು ಗೋಧಿ, ಜವೆಗೋಧಿ, ಅವರೆ, ಅಲಸಂದಿ, ನವಣೆ, ಸಜ್ಜೆಗಳನ್ನು ತೆಗೆದುಕೊಂಡು, ಅವುಗಳನ್ನು ಒಂದು ಮಡಿಕೆಯಲ್ಲಿಟ್ಟು, ನೀನು ಒಂದು ಕಡೆಯಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ನಿನಗಾಗಿ ರೊಟ್ಟಿಯನ್ನು ಮಾಡಿಕೊಂಡು, ಮುನ್ನೂರ ತೊಂಬತ್ತು ದಿನಗಳು ಅವರಿಂದಲೇ ತಿನ್ನಬೇಕು.
[10] ನೀನು ತಿನ್ನುವ ಆಹಾರದ ತೂಕದ ಪ್ರಕಾರ ಅದು ಒಂದು ದಿನಕ್ಕೆ 230 ಗ್ರಾಂ ಇರಲಿ, ನೀನು ಅದನ್ನು ಆಗಾಗ್ಗೆ ತಿನ್ನಬೇಕು.
[11] ನೀನು ನೀರನ್ನು ಸಹ ಅಳತೆಯ ಪ್ರಕಾರ ಸುಮಾರು ಅರ್ಧ ಲೀಟರ್ ಕಾಲಕಾಲಕ್ಕೆ ಸರಿಯಾಗಿ ಕುಡಿಯಬೇಕು.
[12] ಇದಲ್ಲದೆ ನೀನು ಆಹಾರವನ್ನು ಜವೆಗೋಧಿಯ ರೊಟ್ಟಿಗಳಂತೆ ತಿನ್ನಬೇಕು. ಅದನ್ನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ ಅವರ ಕಣ್ಣುಗಳ ಮುಂದೆ ಅಡಿಗೆ ಮಾಡಬೇಕು.”
[13] ಯೆಹೋವ ದೇವರು ಹೇಳಿದ್ದೇನೆಂದರೆ, “ಈ ರೀತಿಯಾಗಿ ಇಸ್ರಾಯೇಲಿನ ಜನರು ನಾನು ಅವರನ್ನು ಓಡಿಸುವ ಜನಾಂಗಗಳ ನಡುವೆ ಅಶುದ್ಧ ಆಹಾರವನ್ನು ತಿನ್ನುವರು.”
[14] ಅದಕ್ಕೆ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದ ದಿನದಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗ ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ. ಯಾವ ಅಸಹ್ಯ ಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ,” ಎಂದು ಅರಿಕೆಮಾಡಿದೆ.
[15] ಆಗ ಅವರು ನನಗೆ, “ಇಗೋ, ಮನುಷ್ಯನ ಮಲಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ಬಳಸಲು ನಿನಗೆ ಅನುಮತಿಸಿದ್ದೇನೆ. ಅದರಿಂದ ನೀನು ರೊಟ್ಟಿಯನ್ನು ತಯಾರಿಸಬಹುದು,” ಎಂದನು.
[16] ಇದಾದ ಮೇಲೆ ಅವರು ನನಗೆ, “ಮನುಷ್ಯಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ಮುರಿಯುವೆನು. ಅವರು ತೂಕದ ಪ್ರಕಾರ ಚಿಂತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ನಿರಾಶೆಯಿಂದ ಕುಡಿಯುವರು.
[17] ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಸ್ತಬ್ಧರಾಗಿ, ಒಬ್ಬರ ಸಂಗಡ ಒಬ್ಬರು ತಮ್ಮ ಪಾಪಗಳಿಗಾಗಿ ಕ್ಷಯಿಸಿ ಹೋಗುವರು.