[1] ಯೆಹೋವ ದೇವರ ವಾಕ್ಯವು ನನಗೆ ಬಂದಿತು:
[2] “ನೀವು ಇಸ್ರಾಯೇಲ್ ದೇಶದ ವಿಷಯವಾಗಿ ಈ ಗಾದೆಯನ್ನು ಉಲ್ಲೇಖಿಸುವುದರ ಅರ್ಥವೇನು: “ ‘ಪಿತೃಗಳು ಹುಳಿದ್ರಾಕ್ಷಿಗಳನ್ನು ತಿಂದರು, ಮಕ್ಕಳ ಹಲ್ಲು ಚಳಿತು ಹೋಯಿತು.’
[3] “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವುದಿಲ್ಲ.
[4] ಎಲ್ಲಾ ಪ್ರಾಣಗಳು ನನ್ನವೇ, ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ. ಪಾಪ ಮಾಡುವವನೇ ಸಾಯುವನು.
[5] “ಆದರೆ ಒಬ್ಬ ಮನುಷ್ಯನು ನೀತಿವಂತನಾಗಿದ್ದು, ನೀತಿಯನ್ನೂ ನ್ಯಾಯವನ್ನೂ ನಡೆಸಿ,
[6] ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ, ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಾಗಿರುವ ಸ್ತ್ರೀಯನ್ನು ಸಮೀಪಿಸದೆ,
[7] ಯಾರನ್ನೂ ಉಪದ್ರವಪಡಿಸದೆ, ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು, ಹಿಂಸೆ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆಯಿರುವವನಿಗೆ ಬಟ್ಟೆಯನ್ನು ಹೊದಿಸಿ,
[8] ಬಡ್ಡಿಗೆ ಸಾಲ ಕೊಡದೆ, ಲಾಭವನ್ನು ತೆಗೆದುಕೊಳ್ಳದೆ, ಅನ್ಯಾಯದಿಂದ ತನ್ನ ಕೈಯನ್ನು ಹಿಂತೆಗೆದು ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ,
[9] ಸತ್ಯವನ್ನು ನಡೆಸುವುದಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಗೊಂಡು ಸತ್ಯಪರನಾಗಿ ನಡೆದರೆ, ಅವನು ನೀತಿವಂತನು ಮತ್ತು ನಿಶ್ಚಯವಾಗಿ ಬದುಕುವನು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ.
[10] “ಒಂದು ವೇಳೆ ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ,
[11] ಸುಕೃತ್ಯಗಳಲ್ಲಿ ಯಾವುದನ್ನೂ ನಡೆಸದೆ, “ಪರ್ವತಗಳ ಪೂಜಾಸ್ಥಳಗಳಲ್ಲಿ ತಿಂದು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿ,
[12] ಬಡವರನ್ನೂ, ದರಿದ್ರರನ್ನೂ ಉಪದ್ರವಗೊಳಿಸಿ, ಹಿಂಸಿಸಿ, ಸುಲಿಗೆ ಮಾಡಿ, ಒತ್ತೆಗಳನ್ನು ಹಿಂದೆ ಕೊಡದೆ, ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅಸಹ್ಯವಾದವುಗಳನ್ನು ಮಾಡಿ,
[13] ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭ ಪಡೆಯುವವನು ಆಗಿದ್ದರೆ, ಅವನು ಬದುಕುವನೋ? ಅವನು ಬದುಕುವುದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿದ್ದರಿಂದ ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ.
[14] “ಒಂದು ವೇಳೆ ಇವನು ಪಡೆದ ಮಗನು ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ಕಂಡು ಆಲೋಚಿಸಿ, ಇಂಥಾ ಕಾರ್ಯಗಳನ್ನು ನಡೆಸದೆ,
[15] “ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ, ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ,
[16] ಯಾರನ್ನೂ ಹಿಂಸಿಸದೆ, ಒತ್ತೆಯನ್ನು ಕೇಳದೆ, ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆಯಾದವನಿಗೆ ವಸ್ತ್ರವನ್ನು ಹೊದಿಸಿ,
[17] ತನ್ನ ಕೈಯನ್ನು ಪಾಪ ಮಾಡುವುದರಿಂದ ಹಿಂತೆಗೆದು ಬಡ್ಡಿಯನ್ನೂ, ಲಾಭವನ್ನೂ ತೆಗೆದುಕೊಳ್ಳದೆ, ನನ್ನ ವಿಧಿಗಳನ್ನು ಪಾಲಿಸಿ, ನನ್ನ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವುದಿಲ್ಲ, ಅವನು ನಿಶ್ಚಯವಾಗಿ ಬದುಕುವನು.
[18] ಇವನ ತಂದೆಯಾದರೊ ಸ್ವಜನರನ್ನು ಬಲಾತ್ಕಾರ ಮಾಡಿದ್ದರಿಂದಲೂ, ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ, ತನ್ನ ಜನರ ಮಧ್ಯದಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದಲೂ ಅವನು ತನ್ನ ಅಕ್ರಮದಲ್ಲಿ ಸಾಯುವನು.
[19] “ಆದರೂ ಇನ್ನೂ ನೀವು ಹೇಳುವುದೇನು? ‘ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲವೇ?’ ಎಂದು ಹೇಳುವಿರಿ. ಮಗನು ನ್ಯಾಯವನ್ನೂ, ನೀತಿಯನ್ನೂ ಮಾಡಿ, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು.
[20] ಪಾಪ ಮಾಡುವವನೇ ಸಾಯುವನು. ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲ; ನೀತಿವಂತನ ನೀತಿಯು ಅವನ ಮೇಲೆಯೇ ಇರುವುದು; ದುಷ್ಟನ ದುಷ್ಟತನವು ಅವನ ಮೇಲೆಯೇ ಇರುವುದು.
[21] “ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು, ನ್ಯಾಯವನ್ನೂ, ನೀತಿಯನ್ನೂ ನಡೆಸಿದರೆ, ಅವನು ಸಾಯದೆ ಖಂಡಿತವಾಗಿ ಬದುಕುವನು.
[22] ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು.
[23] ದುಷ್ಟನು ಸಾಯುವುದರಲ್ಲಿ ನನಗೆ ಸ್ವಲ್ಪ ಸಂತೋಷವಿರುವುದೋ?” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ. “ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ಬದುಕಿದರೆ ನನಗೆ ಸಂತೋಷವಲ್ಲವೇ?
[24] “ಆದರೆ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ, ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿರುವ ಎಲ್ಲಾ ಸುಕೃತ್ಯಗಳು ಅವನ ಲೆಕ್ಕಕ್ಕೆ ಸೇರುವುದಿಲ್ಲ. ಅವನು ಮಾಡಿರುವ ಅಪರಾಧದಿಂದಲೂ, ಪಾಪದಿಂದಲೂ ಅವುಗಳಲ್ಲಿಯೇ ಅವನು ಸಾಯುವನು.
[25] “ಆದರೆ ನೀವು, ‘ಯೆಹೋವ ದೇವರ ಮಾರ್ಗವು ಸರಿಯಲ್ಲ’ ಎಂದು ಹೇಳುತ್ತೀರಿ. ಇಸ್ರಾಯೇಲ್ ಜನರೇ, ಈಗ ಕೇಳಿರಿ, ನನ್ನ ಮಾರ್ಗವು ಸರಿಯಲ್ಲವೇ? ನಿಜಕ್ಕೂ ನಿಮ್ಮ ಮಾರ್ಗಗಳೇ ಸರಿಯಲ್ಲ.
[26] ಒಬ್ಬ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಪಾಪವನ್ನು ಮಾಡಿದರೆ, ಅವನು ಅದಕ್ಕಾಗಿ ಸಾಯಬೇಕು; ಹೌದು, ಅವನು ಮಾಡಿದ ಪಾಪದಿಂದಲೇ ಅವನು ಸಾಯಬೇಕು.
[27] ಒಬ್ಬ ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು, ನೀತಿನ್ಯಾಯವನ್ನು ಅನುಸರಿಸಿದರೆ, ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
[28] ಏಕೆಂದರೆ ಅವನು ತಾನು ಮಾಡಿದ ದುಷ್ಕೃತ್ಯಗಳನ್ನು ಯೋಚಿಸಿ, ಅವುಗಳನ್ನು ಬಿಟ್ಟು ತಿರುಗಿಕೊಳ್ಳುವುದರಿಂದ ಸಾಯದೆ ನಿಶ್ಚಯವಾಗಿ ಬದುಕುವನು.
[29] ಆದರೆ ಇಸ್ರಾಯೇಲ್ ಜನರು, ‘ಯೆಹೋವ ದೇವರ ಮಾರ್ಗ ನೀತಿಯುಕ್ತವಲ್ಲ,’ ಎನ್ನುತ್ತಾರೆ. ಇಸ್ರಾಯೇಲ್ ಜನರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಅನೀತಿಯ ಮಾರ್ಗಗಳಲ್ಲವೇ?
[30] “ಆದ್ದರಿಂದ ಇಸ್ರಾಯೇಲ್ ಜನರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ಪ್ರತಿಯೊಬ್ಬನಿಗೆ ನ್ಯಾಯತೀರಿಸುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ನಿಮ್ಮ ದುಷ್ಟತನಗಳನ್ನೆಲ್ಲಾ ಬಿಟ್ಟು ತಿರುಗಿಕೊಳ್ಳಿರಿ. ಆಗ ಪಾಪವು ನಿಮ್ಮ ಪತನಕ್ಕೆ ಕಾರಣವಾಗುವುದಿಲ್ಲ.
[31] ನೀವು ಮಾಡುವ ದುಷ್ಕೃತ್ಯಗಳನ್ನೆಲ್ಲಾ ನಿಮ್ಮಿಂದ ಎಸೆದುಬಿಡಿರಿ. ಹೊಸ ಹೃದಯವನ್ನೂ, ಹೊಸ ಆತ್ಮವನ್ನೂ ನೀವು ಪಡೆದುಕೊಳ್ಳಿರಿ. ಇಸ್ರಾಯೇಲಿನ ಮನೆತನದವರೇ, ನೀವು ಸಾಯುವುದೇಕೆ?
[32] ಏಕೆಂದರೆ ಯಾವುದೇ ವ್ಯಕ್ತಿಯ ಸಾವಿನಲ್ಲಿ ನನಗೆ ಸಂತೋಷವಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಆದಕಾರಣ ಮಾನಸಾಂತರಪಟ್ಟು ಬಾಳಿರಿ.