[1] ಆಮೇಲೆ ದೇವರಾತ್ಮರು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿಗೆ, ನನ್ನನ್ನು ಎತ್ತಿಕೊಂಡು ಹೋದರು. ಪ್ರವೇಶದ್ವಾರದಲ್ಲಿ ಇಪ್ಪತ್ತೈದು ಮಂದಿ ಮನುಷ್ಯರು ಇದ್ದರು. ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗ ಯಾಜನ್ಯನನ್ನೂ, ಬೆನಾಯನ ಮಗ ಪೆಲಟೀಯನನ್ನೂ ನೋಡಿದೆನು.
[2] ಆಮೇಲೆ ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಈ ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ, ದುರಾಲೋಚನೆಗಳನ್ನು ಹೇಳಿಕೊಡುವವರು ಈ ಜನರೇ.
[3] ಅವರು, ‘ಇತ್ತೀಚಿಗೆ ನಮ್ಮ ಮನೆಗಳು ನಿರ್ಮಾಣವಾಗಿಲ್ಲವೇ? ಈ ಪಟ್ಟಣವು ಪಾತ್ರೆ, ಮತ್ತು ನಾವು ಅದರಲ್ಲಿರುವ ಮಾಂಸ,’ ಎನ್ನುತ್ತಾರೆ.
[4] ಆದ್ದರಿಂದ ಮನುಷ್ಯಪುತ್ರನೇ, ಅವರಿಗೆ ವಿರೋಧವಾಗಿ ಪ್ರವಾದಿಸು.”
[5] ಯೆಹೋವ ದೇವರ ಆತ್ಮವು ನನ್ನ ಮೇಲೆ ಬಂದು ತಿಳಿಸಲು ಹೇಳಿದ್ದೇನೆಂದರೆ: “ಇಸ್ರಾಯೇಲಿನ ಮನೆತನದವರೇ, ನೀವು ಹೀಗೆ ಹೇಳಿದ್ದೀರಿ. ಏಕೆಂದರೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಎಲ್ಲವುಗಳನ್ನು ನಾನು ಬಲ್ಲೆನು.
[6] ನೀವು ಈ ಪಟ್ಟಣದಲ್ಲಿ ನರಹತ್ಯೆಯನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
[7] “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಕೊಂದು ಹಾಕಿದವರ ದೇಹಗಳೇ ಮಾಂಸ, ಈ ಪಟ್ಟಣವು ಬೇಯಿಸುವ ಪಾತ್ರೆ. ಆದರೆ ನಾನು ನಿಮ್ಮನ್ನು ಅದರಿಂದ ಹೊರಗೆ ತರುತ್ತೇನೆ.
[8] ನೀವು ಖಡ್ಗಕ್ಕೆ ಭಯಪಟ್ಟಿರಿ. ನಾನು ನಿಮ್ಮ ಮೇಲೆ ಒಂದು ಖಡ್ಗವನ್ನು ತರುತ್ತೇನೆ. ಇದು ಸಾರ್ವಭೌಮ ಯೆಹೋವ ದೇವರ ನುಡಿ.
[9] ನಾನು ನಿಮ್ಮನ್ನು ಪಟ್ಟಣದ ಮಧ್ಯದಿಂದ ಹೊರಗೆ ತಂದು ಪರಕೀಯರ ಕೈಗಳಿಗೆ ಒಪ್ಪಿಸುವೆನು ಮತ್ತು ನ್ಯಾಯತೀರ್ಪುಗಳನ್ನು ನಡೆಸುವೆನು.
[10] ನೀವು ಖಡ್ಗದಿಂದ ನಾಶವಾಗುವಿರಿ. ನಾನು ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು.
[11] ಈ ಪಟ್ಟಣವು ಪಾತ್ರೆಯಾಗುವುದಿಲ್ಲ. ನೀವು ಅದರಲ್ಲಿ ಮಾಂಸವೂ ಆಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಾನು ನ್ಯಾಯತೀರಿಸುವೆನು.
[12] ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ. ಏಕೆಂದರೆ ನೀವು ನನ್ನ ನಿಯಮಗಳಂತೆ ನಡೆಯಲಿಲ್ಲ. ನನ್ನ ನ್ಯಾಯವಿಧಿಗಳನ್ನು ಪಾಲಿಸಲಿಲ್ಲ. ಆದರೆ ನಿಮ್ಮ ಸುತ್ತಲಿರುವ ಇತರ ಜನಾಂಗಗಳ ಆಚಾರಗಳ ಪ್ರಕಾರ ಮಾಡಿದ್ದೀರಿ.”
[13] ನಾನು ಪ್ರವಾದಿಸುತ್ತಿರುವಾಗ, ಬೆನಾಯನ ಮಗನಾದ ಪೆಲಟೀಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು, ಗಟ್ಟಿಯಾಗಿ ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನೀವು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀರೋ?” ಎಂದು ಹೇಳಿದನು.
[14] ಯೆಹೋವ ದೇವರ ವಾಕ್ಯವು ನನಗೆ ಬಂದಿತು:
[15] “ಮನುಷ್ಯಪುತ್ರನೇ, ನಿನ್ನ ಸಹೋದರರಿಗೆ, ನಿನ್ನ ಅಣ್ಣಂದಿರಿಗೆ, ನಿನ್ನ ನೆಂಟರಿಷ್ಟರಿಗೆ, ಅಂತು ಇಸ್ರಾಯೇಲ್ ವಂಶದ ಎಲ್ಲರಿಗೆ, ಯೆರೂಸಲೇಮಿನಲ್ಲೇ ಉಳಿದಿರುವವರು, ‘ಯೆಹೋವ ದೇವರ ಬಳಿಯಿಂದ ದೂರವಾಗಿ ತೊಲಗಿರಿ, ಈ ನಾಡು ನಮಗೇ ಸೊತ್ತಾಗಿ ಸಿಕ್ಕಿದೆ,’ ಎಂದು ಹೇಳಿ ಹೀನೈಸುತ್ತಿದ್ದಾರಲ್ಲವೇ?
[16] “ಆದ್ದರಿಂದ ನಾನು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಅವರನ್ನು ಇತರ ಜನಾಂಗಗಳಿಂದ ದೂರ ಹಾಕಿದರೂ, ದೇಶಗಳಲ್ಲಿ ಚದರಿಸಿದರೂ, ಅವರು ಹೋಗುವ ದೇಶಗಳಲ್ಲಿ ನಾನು ಸ್ವಲ್ಪ ಕಾಲದವರೆಗೆ ಪರಿಶುದ್ಧ ಸ್ಥಳವಾಗಿರುವೆನು.’
[17] “ಆದ್ದರಿಂದ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಶ್ಚಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ, ನೀವು ಚದರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ. ಇಸ್ರಾಯೇಲ್ ದೇಶವನ್ನು ನಿಮಗೆ ತಿರುಗಿ ಕೊಡುವೆನು.’
[18] “ಅವರು ಅಲ್ಲಿಗೆ ಹಿಂತಿರುಗಿ ಮತ್ತು ಅದರಲ್ಲಿರುವ ಎಲ್ಲಾ ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ತೆಗೆದುಹಾಕುತ್ತಾರೆ.
[19] ಅವರಿಗೆ ಒಂದೇ ಮನಸ್ಸನ್ನು ಕೊಡುವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು. ಅವರೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆಯುವೆನು. ಅವರಿಗೆ ಮೃದು ಹೃದಯವನ್ನು ಕೊಡುವೆನು.
[20] ಆಗ ಅವರು ನನ್ನ ನಿಯಮಗಳನ್ನು ಕೈಗೊಂಡು ಜಾಗರೂಕತೆಯಿಂದ ಪಾಲಿಸುವರು. ನನ್ನ ನಿಯಮಗಳನ್ನು ಕೈಗೊಳ್ಳುವರು. ಅವರು ನನ್ನ ಜನರಾಗುವರು, ನಾನು ಅವರ ದೇವರಾಗುವೆನು.
[21] ಆದರೆ ಯಾರ ಹೃದಯವು ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ಅನುಸರಿಸುತ್ತದೋ, ನಾನು ಅವರ ದುರ್ಮಾರ್ಗವನ್ನು ಅವರ ತಲೆಗೇ ಕಟ್ಟುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
[22] ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು. ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು.
[23] ಯೆಹೋವ ದೇವರ ಮಹಿಮೆಯು ಪಟ್ಟಣದ ಮಧ್ಯದೊಳಗಿಂದ ಮೇಲಕ್ಕೇರಿ, ಪಟ್ಟಣದ ಪೂರ್ವದಿಕ್ಕಿನಲ್ಲಿರುವ ಪರ್ವತದ ಮೇಲೆ ನಿಂತಿತು.
[24] ಅನಂತರ ದೇವರಾತ್ಮರು, ದೇವರ ಆತ್ಮರಿಂದಾದ ದರ್ಶನದಲ್ಲಿ ನನ್ನನ್ನು ಬಾಬಿಲೋನಿಯರ ದೇಶಕ್ಕೆ ಸೆರೆಯವರ ಬಳಿಗೆ ಎತ್ತಿಕೊಂಡು ಹೋದರು. ಆಗ ನಾನು ನೋಡಿದ ದರ್ಶನವು ನನ್ನಿಂದ ಮೇಲೆ ಹೋಯಿತು.
[25] ಆಮೇಲೆ ಯೆಹೋವ ದೇವರು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯಲ್ಲಿರುವವರಿಗೆ ಹೇಳಿದೆನು.