Skip to content
Opens in a new window
Listen to this chapter • 1:38

[1] ಯೆಹೋವ ದೇವರ ವಾಕ್ಯವು ನನಗೆ ಬಂದಿತು,

[2] “ಮನುಷ್ಯಪುತ್ರನೇ, ದ್ರಾಕ್ಷಿ ಗಿಡವು ಅಡವಿಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?

[3] ಇದರಿಂದ ಕಟ್ಟಿಗೆಯನ್ನು ತೆಗೆದುಕೊಂಡು ಯಾವ ಕೆಲಸವನ್ನಾದರೂ ಮಾಡುವರೋ ಅಥವಾ ಅದರ ಮೇಲೆ ಯಾವನನ್ನಾದರೂ ನೇತುಹಾಕುವುದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?

[4] ಇದನ್ನು ಬೆಂಕಿಗೆ ಸೌದೆಯಾಗಿ ಹಾಕುತ್ತಾರೆ. ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡುತ್ತದೆ. ಅದರ ಮಧ್ಯ ಭಾಗವು ಸುಟ್ಟು ಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವುದೋ?

[5] ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ, ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟುಹೋದ ಮೇಲೆ ಯಾವ ಕೆಲಸಕ್ಕೆ ಬಂದೀತು?”

[6] “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ವನವೃಕ್ಷಗಳಲ್ಲಿ ದ್ರಾಕ್ಷಿಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಯಾಗಿ ಮಾಡಿರುವೆನೋ ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ವಿನಾಶಕ್ಕೆ ಗುರಿಮಾಡಿದ್ದೇನೆ.

[7] ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಬೆಂಕಿಯೊಳಗಿಂದ ಹೊರಗೆ ಬಂದು ತಪ್ಪಿಸಿಕೊಂಡರೂ, ಮತ್ತೊಂದು ಬೆಂಕಿಯು ಅವರನ್ನು ದಹಿಸಿಬಿಡುವುದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ, ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.

[8] ಅವರು ದ್ರೋಹ ಮಾಡಿದ್ದರಿಂದ ನಾನು ಆ ದೇಶವನ್ನು ಹಾಳುಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

ಯೆಹೆಜ್ಕೇಲನು — Chapters