[1] ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ಧಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು. ಅದು ಮುಚ್ಚಿತ್ತು.
[2] ಆಮೇಲೆ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಬಾಗಿಲು ಮುಚ್ಚೇ ಇರಬೇಕು. ಇದು ತೆರೆಯಬಾರದು. ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು. ಏಕೆಂದರೆ ಇಸ್ರಾಯೇಲರ ಯೆಹೋವ ದೇವರು ಇದರಿಂದ ಪ್ರವೇಶಿಸಿದ್ದಾರೆ. ಆದ್ದರಿಂದ ಇದು ಮುಚ್ಚಿರಬೇಕು.
[3] ಇದು ಪ್ರಭುವಿಗಾಗಿ ಇದೆ; ಪ್ರಭುವು ಅವರೊಳಗೆ ಕುಳಿತುಕೊಂಡು, ಯೆಹೋವ ದೇವರ ಮುಂದೆ ರೊಟ್ಟಿಯನ್ನು ತಿನ್ನಬೇಕು. ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.”
[4] ಆಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿನ ಮಾರ್ಗವಾಗಿ ಆಲಯದ ಮುಂದೆ ಕರೆದುಕೊಂಡು ಹೋದನು. ನಾನು ನೋಡಿದೆ ಯೆಹೋವ ದೇವರ ಮಹಿಮೆಯು ಯೆಹೋವ ದೇವರ ಆಲಯವನ್ನು ತುಂಬಿಕೊಂಡಿತು, ನಾನು ಬೋರಲು ಬಿದ್ದೆನು.
[5] ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ಯೆಹೋವ ದೇವರ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿಯೂ ನಿಯಮದ ವಿಷಯವಾಗಿಯೂ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು ಮನದಟ್ಟು ಮಾಡಿಕೋ. ಆಲಯದೊಳಗಿನ ಪ್ರವೇಶವನ್ನೂ ಪರಿಶುದ್ಧಸ್ಥಳದ ಪ್ರತಿಯೊಂದು ಹಾದುಹೋಗುಗಳನ್ನೂ ಗಮನಿಸು.
[6] ತಿರುಗಿಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ.
[7] ಅವುಗಳಲ್ಲಿ ನೀವು ನನ್ನ ರೊಟ್ಟಿಯನ್ನೂ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವಾಗ ನಿಮ್ಮ ಎಲ್ಲಾ ಅಸಹ್ಯಗಳಿಗೋಸ್ಕರ ನನ್ನ ಒಡಂಬಡಿಕೆಯನ್ನು ಮೀರುವಂಥ ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದಂಥ ಪರಕೀಯರನ್ನು ನನ್ನ ಪರಿಶುದ್ಧ ಸ್ಥಳಕ್ಕೆ ಕರೆತಂದು ನನ್ನ ಆಲಯವನ್ನು ಅಪವಿತ್ರಪಡಿಸಿದಿರಿ.
[8] ನೀವು ನನ್ನ ಪರಿಶುದ್ಧ ವಸ್ತುಗಳನ್ನು ಕಾಯಲಿಲ್ಲ, ಬದಲಿಗೆ ಅನ್ಯದೇಶೀಯರನ್ನು ನನ್ನ ಪರಿಶುದ್ಧ ಸ್ಥಳದಲ್ಲಿ ನನ್ನ ವಸ್ತುಗಳ ಮೇಲೆ ಪಾರುಪತ್ಯಗಾರರನ್ನಾಗಿ ನೇಮಿಸಿದಿರಿ.
[9] ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲರೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಬಾರದು.
[10] “ ‘ಇಸ್ರಾಯೇಲರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರೂ ಸಹ ತಮ್ಮ ಪಾಪಗಳನ್ನು ಹೊರುವರು.
[11] ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿಸುವವರಾಗಿರುವರು. ಆಲಯದ ಬಾಗಿಲುಗಳ ಮೇಲ್ವಿಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು. ಅವರು ಜನರಿಗೋಸ್ಕರ ದಹನಬಲಿಯನ್ನೂ ಸಮಾಧಾನ ಬಲಿಯನ್ನೂ ಮಾಡಿ ಅವರಿಗೆ ಸೇವೆ ಮಾಡುವ ಹಾಗೆ ಅವರ ಮುಂದೆ ನಿಲ್ಲುವರು.
[12] ಆದರೆ ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾಯೇಲಿನ ಮನೆತನದವರಿಗೆ ಪಾಪದ ಆತಂಕವಾದದ್ದರಿಂದ, ನಾನು ಅವರಿಗೆ ವಿರುದ್ಧವಾಗಿ ನನ್ನ ಕೈಯನ್ನು ಚಾಚಿದ್ದೇನೆ. ಅವರು ತಮ್ಮ ಪಾಪವನ್ನು ಹೊರುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
[13] ಅವರು ಯಾಜಕರಾಗಿ ನನ್ನನ್ನು ಸಮೀಪಿಸದೆ ಮಹಾಪರಿಶುದ್ಧ ಸ್ಥಳದಲ್ಲಿ ನನ್ನ ಪರಿಶುದ್ಧವಾದವುಗಳಲ್ಲಿ ಒಂದನ್ನಾದರೂ ಸಮೀಪಿಸದೆ, ತಮ್ಮ ನಾಚಿಕೆಯನ್ನೂ ತಾವು ಮಾಡಿದ ಅಸಹ್ಯಗಳನ್ನೂ ಹೊರುವರು.
[14] ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆಗೋಸ್ಕರವೂ ಅದರಲ್ಲಿ ಮಾಡುವಂತಹ ಎಲ್ಲವುಗಳಿಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿಕೊಳ್ಳುವವರನ್ನಾಗಿ ಮಾಡುವೆನು.
[15] “ ‘ಆದರೆ ಇಸ್ರಾಯೇಲರು ನನ್ನನ್ನು ಬಿಟ್ಟುಹೋದಾಗ ನನ್ನ ಪರಿಶುದ್ಧಸ್ಥಳದ ಕಾಯಿದೆಯನ್ನು ಪಾಲಿಸಿದ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವಂತೆ ನನ್ನ ಸಮೀಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
[16] ಇವರು ಮಾತ್ರ ನನ್ನ ಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ಇವರು ಮಾತ್ರ ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಮೇಜಿನ ಬಳಿಗೆ ಬರುವರು ಮತ್ತು ನನಗೆ ಕಾವಲುಗಾರರಾಗಿ ಸೇವೆ ಸಲ್ಲಿಸಬೇಕು.
[17] “ ‘ಅವರು ಒಳಗಿನ ಅಂಗಳಗಳ ಬಾಗಿಲನ್ನು ಪ್ರವೇಶಿಸುವಾಗ ನಾರಿನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಅವರು ಒಳಗಿನ ಅಂಗಳದ ಬಾಗಿಲುಗಳಲ್ಲಿಯೂ ಒಳಗಡೆಯೂ ಸೇವಿಸುತ್ತಿರುವಾಗ ಅವರ ಮೇಲೆ ಉಣ್ಣೆಯ ಉಡುಪೂ ಇರಕೂಡದು.
[18] ಅವರ ತಲೆಗಳ ಮೇಲೆ ನಾರಿನ ಮುಂಡಾಸಗಳೂ, ಅವರ ಸೊಂಟಗಳ ಮೇಲೆ ನಾರಿನ ಒಳಉಡುಪುಗಳೂ ಇರಬೇಕು. ಅವರು ಬೆವರು ಬರುವಂಥವುಗಳನ್ನು ಕಟ್ಟಿಕೊಳ್ಳಬಾರದು.
[19] ಇದಲ್ಲದೆ ಅವರು ಹೊರಗಿನ ಅಂಗಳಕ್ಕೆ ತೀರಾ ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೋಗುವಾಗ ತಾವು ಸೇವೆಮಾಡಿದ ತಮ್ಮ ವಸ್ತ್ರಗಳನ್ನು ತೆಗೆದು ಪರಿಶುದ್ಧ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ತಮ್ಮ ವಸ್ತ್ರಗಳಿಂದ ಜನರನ್ನು ಪರಿಶುದ್ಧಗೊಳಿಸಬಾರದು.
[20] “ ‘ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳದೆ ಉದ್ದಕೂದಲನ್ನು ಬೆಳೆಸದೆ ತಮ್ಮ ತಲೆ ಕೂದಲುಗಳನ್ನು ಕತ್ತರಿಸಬೇಕು.
[21] ಯಾವ ಯಾಜಕನೇ ಆಗಲಿ, ಒಳಗಿನ ಅಂಗಳದಲ್ಲಿ ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿಯಬಾರದು.
[22] ಯಾಜಕರು ವಿಧವೆಯನ್ನಾಗಲಿ ಗಂಡನಿಂದ ಬಿಡಲಾದವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್ ಸಂತಾನದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆಮಾಡಿಕೊಳ್ಳಲಿ.
[23] ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಇರುವ ವ್ಯತ್ಯಾಸವನ್ನು ಬೋಧಿಸಿ, ಅವರಿಗೆ ಶುದ್ಧಾಶುದ್ಧ ವ್ಯತ್ಯಾಸವನ್ನೂ ವಿವರಿಸಬೇಕು.
[24] “ ‘ವ್ಯಾಜ್ಯವಾಗುವಾಗ ಅದನ್ನು ತೀರಿಸಲು ಯಾಜಕರು ನನ್ನ ನ್ಯಾಯಾನುಸಾರವಾಗಿ ನ್ಯಾಯಾಧಿಪತಿಗಳಾಗಿ ನ್ಯಾಯತೀರಿಸಲಿ. ಅವರು ನನ್ನ ತೀರ್ಪುಗಳನ್ನೂ, ನನ್ನ ನಿಯಮಗಳನ್ನೂ ನಾನು ನೇಮಿಸಿದ ಹಬ್ಬಗಳಲ್ಲಿಯೂ ನನ್ನ ಸಬ್ಬತ್ ದಿನಗಳಲ್ಲಿಯೂ ಪರಿಶುದ್ಧವಾಗಿ ಪಾಲಿಸಬೇಕು.
[25] “ ‘ಯಾಜಕರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆತಾಯಿ, ಮಗ, ಮಗಳು, ಸಹೋದರ, ಗಂಡನಿಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
[26] ಅವನು ಶುದ್ಧನಾದ ಮೇಲೆ ಅವನಿಗೆ ಏಳು ದಿವಸಗಳನ್ನು ಪ್ರತ್ಯೇಕಿಸಬೇಕು.
[27] ಅವನು ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವುದಕ್ಕೋಸ್ಕರ ಒಳಗಿನ ಅಂಗಳದ ಪರಿಶುದ್ಧ ಸ್ಥಳಕ್ಕೆ ಬರುವ ದಿನದಲ್ಲಿ ತನ್ನ ಪಾಪ ಪರಿಹಾರಕ ಬಲಿಯನ್ನು ಅರ್ಪಿಸಬೇಕೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
[28] “ ‘ಅದು ಅವರಿಗೆ ಬಾಧ್ಯತೆಯಾಗಿರುವುದು; ನಾನೇ ಅವರಿಗೆ ಬಾಧ್ಯನಾಗಿರುವೆನು. ನೀವು ಇಸ್ರಾಯೇಲಿನಲ್ಲಿ ಅವರಿಗೆ ಸ್ವಾಸ್ತ್ಯವನ್ನು ಕೊಡಬಾರದು. ಏಕೆಂದರೆ ನಾನೇ ಅವರಿಗೆ ಸ್ವಾಸ್ತ್ಯವಾಗಿರುವೆನು.
[29] ಧಾನ್ಯ ಸಮರ್ಪಣೆಯನ್ನು ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅವರು ತಿನ್ನಬೇಕು. ಇಸ್ರಾಯೇಲಿನಲ್ಲಿ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.
[30] ಇದಲ್ಲದೆ ಎಲ್ಲಾ ಪ್ರಥಮ ಫಲಗಳಲ್ಲಿ ಉತ್ಕೃಷ್ಟವಾದದ್ದೂ ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸಿದ ಎಲ್ಲಾ ಪದಾರ್ಥಗಳು ಯಾಜಕನದ್ದಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ನೀವು ಯಾಜಕರಿಗೆ ಕೊಡತಕ್ಕದ್ದು.
[31] ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲಾದ ಪಕ್ಷಿಯನ್ನಾಗಲಿ, ಪ್ರಾಣಿಯನ್ನಾಗಲಿ ತಿನ್ನಬಾರದು.