Skip to content
Opens in a new window
Listen to this chapter • 7:50

[1] ಯೆಹೋವ ದೇವರ ವಾಕ್ಯವು ನನಗೆ ಬಂದಿತು,

[2] “ಮನುಷ್ಯಪುತ್ರನೇ, ಈಗ ಟೈರಿನ ಬಗ್ಗೆ ನೀನು ಗೋಳಾಟವನ್ನೆತ್ತು;

[3] ಟೈರಿಗೆ ಹೇಳು, ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳ ಜನರ ನಡುವೆ ವ್ಯಾಪಾರವನ್ನು ನಡೆಸುವವಳೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, “ ‘ಟೈರ್ ನಗರಿಯೇ, “ನಾನು ಪೂರ್ಣ ಸೌಂದರ್ಯವತಿ,” ಎಂದು ನೀನು ಅಂದುಕೊಂಡಿದ್ದೀಯಲ್ಲಾ!

[4] ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ. ನಿನ್ನನ್ನು ಕಟ್ಟಿದವರು ನಿನ್ನನ್ನು ಸರ್ವಾಂಗ ಸುಂದರಿಯನ್ನಾಗಿಸಿದ್ದಾರೆ.

[5] ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿದ್ದಾರೆ. ನಿನಗೆ ಸ್ತಂಭಗಳನ್ನು ಮಾಡುವುದಕ್ಕೆ ಲೆಬನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.

[6] ನಿನ್ನ ಹುಟ್ಟುಗೋಲನ್ನು ಬಾಷಾನಿನ ಅಲ್ಲೋನ್ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಮ್ ದ್ವೀಪಗಳಿಂದ ತಂದ ಹಲಗೆಗಳಿಂದ ನಿನ್ನ ಹಡಗಿನ ಮೇಲ್ಮಾಳಿಗೆಯನ್ನು ಕಟ್ಟಿ, ಅದನ್ನು ದಂತದಿಂದ ಶೃಂಗರಿಸಿದ್ದಾರೆ.

[7] ಈಜಿಪ್ಟಿನ ಕಸೂತಿಯ ನಾರುಮಡಿಯಿಂದ ನಿನ್ನ ಪಟವನ್ನು ಮಾಡಿದರು ಮತ್ತು ಅದು ನಿನ್ನ ಧ್ವಜವಾಗಿತ್ತು. ನಿಮ್ಮ ಮೇಲ್ಕಟ್ಟುಗಳು ಎಲೀಷ ಕರಾವಳಿಯಿಂದ ನೀಲಿ ಮತ್ತು ನೇರಳೆ ಬಣ್ಣದ್ದಾಗಿದ್ದವು.

[8] ಸೀದೋನಿನ ಮತ್ತು ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವವರಾಗಿದ್ದಾರೆ. ಟೈರ್ ನಗರಿಯೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.

[9] ಗೆಬಾಲಿನ ಹಿರಿಯರೂ ಅದರ ಜ್ಞಾನಿಗಳೂ ನಿನ್ನ ಬಿರುಕುಗಳನ್ನು ಮುಚ್ಚುವವರಾಗಿ ನಿನ್ನಲ್ಲಿದ್ದಾರೆ. ಸಮುದ್ರದ ಸಕಲ ನಾವೆಗಳೂ ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸುತ್ತಿದ್ದವು.

[10] “ ‘ಪಾರಸಿಯರೂ ಲೂದ್ಯರೂ ಹಾಗೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು. ಗುರಾಣಿಯನ್ನೂ ಶಿರಸ್ತ್ರಾಣವನ್ನೂ ನಿನ್ನ ಗೋಡೆಯಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.

[11] ಅರ್ವಾದಿನವರು ಮತ್ತು ಹೆಲೆಕರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಇದ್ದರು. ಗಮ್ಮಾದ್ಯರು ನಿನ್ನ ಗೋಪುರಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.

[12] “ ‘ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.

[13] “ ‘ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ನರಪ್ರಾಣಿಗಳನ್ನೂ ಕಂಚಿನ ಪಾತ್ರೆಗಳನ್ನೂ ನಿನ್ನ ಬಜಾರಿನಲ್ಲಿ ಮಾರಾಟಕ್ಕಿಟ್ಟರು.

[14] “ ‘ತೋಗರ್ಮದ ಮನೆತನದವರು ಕುದುರೆಗಳಿಂದಲೂ ಕುದುರೆ ಸವಾರಿಗಳಿಂದಲೂ ಹೇಸರಗತ್ತೆಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.

[15] “ ‘ದೆದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತದ ಕೊಂಬುಗಳನ್ನೂ ಕರೀ ಮರಗಳನ್ನೂ ನಿನಗೆ ಕಾಣಿಕೆಯಾಗಿ ತರುತ್ತಿದ್ದರು.

[16] “ ‘ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮ್ಯರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.

[17] “ ‘ಯೆಹೂದವೂ ಇಸ್ರಾಯೇಲ್ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಮಿಠಾಯಿ, ಜೇನು, ಎಣ್ಣೆ ಮತ್ತು ಸುಗಂಧ ತೈಲದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು.

[18] “ ‘ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನು ಹಾಗೂ ಚಾಹರಿನ ಉಣ್ಣೆಯನ್ನು ನಿನ್ನಲ್ಲಿ ತುಂಬಿಸುತ್ತಿದ್ದರು.

[19] ವೆದಾನ್ ಮತ್ತು ಯಾವಾನ್ ಊರುಗಳು ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ, ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಬಜಾರಿನಲ್ಲಿ ಇದ್ದವು.

[20] “ ‘ದೆದಾನ್ ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.

[21] “ ‘ಅರೇಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ಗ್ರಾಹಕರಾಗಿದ್ದರು. ಕುರಿಮರಿಗಳಿಂದಲೂ ಹೋತಗಳಿಂದಲೂ ನಿನ್ನೊಡನೆ ವ್ಯಾಪಾರಮಾಡಿದರು.

[22] “ ‘ಶೆಬದವರು, ರಾಮದವರು ನಿನ್ನ ಕಡೆಯ ವರ್ತಕರಾಗಿ ಎಲ್ಲಾ ಶ್ರೇಷ್ಠವಾದ ಸುಗಂಧ ದ್ರವ್ಯದಿಂದಲೂ ಎಲ್ಲಾ ಬೆಲೆಯುಳ್ಳ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.

[23] “ ‘ಹಾರಾನ್, ಕನ್ನೆ, ಏದೆನ್, ಶೆಬ, ಅಸ್ಸೀರಿಯ ಮತ್ತು ಕಿಲ್ಮದ್ ನಿನ್ನ ವ್ಯಾಪಾರಿಗಳಾಗಿದ್ದರು.

[24] ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಎಂದರೆ ಸುಂದರವಾದ ಬಟ್ಟೆಗಳು, ನೀಲಿಬಟ್ಟೆಗಳು, ಕಸೂತಿಯ ಕೆಲಸ ಮತ್ತು ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು.

[25] “ ‘ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಗೆ ಸರಕುಗಳನ್ನು ತರುತ್ತಿದ್ದವು. ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದೆ.

[26] ಹುಟ್ಟು ಹಾಕುವವರು ನಿನ್ನನ್ನು ಸಿಕ್ಕಿಸಿದ್ದಾರೆ. ಪೂರ್ವದಿಕ್ಕಿನ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.

[27] ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಿನ್ನ ನಾವಿಕರೂ ನಿನ್ನ ಅಂಬಿಗರೂ ನಿನ್ನ ಒಡಕುಗಳನ್ನು ಮುಚ್ಚುವವರೂ ನಿನ್ನ ವ್ಯಾಪಾರಿಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.

[28] ನಿನ್ನ ನಾವಿಕರ ಕೂಗಾಟಕ್ಕೆ, ಸಮುದ್ರತೀರದ ಪ್ರದೇಶಗಳು ನಡುಗುವುವು.

[29] ಹುಟ್ಟುಹಾಕುವ ಅಂಬಿಗರೆಲ್ಲರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,

[30] ನಿನ್ನ ನಿಮಿತ್ತ ಧ್ವನಿಗೈದು ದುಃಖದಿಂದ, ತಲೆಗೆ ಧೂಳೆರಚಿಕೊಂಡು, ಬೂದಿಯಲ್ಲಿ ಹೊರಳಾಡಿ,

[31] ನಿನಗಾಗಿ ತಲೆ ಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.

[32] ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕಗೀತೆಯನ್ನೆತ್ತಿ ಹೀಗೆ ಪ್ರಲಾಪಿಸುವರು; “ಸಮುದ್ರದ ನಡುವೆ ಹಾಳಾಗಿರುವ ಟೈರ್‌ನಂಥ ಪಟ್ಟಣ ಯಾವುದು?”

[33] ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ. ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದೆ.

[34] ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಆಗಾಧಜಲದಲ್ಲಿ ಮುಳುಗಿ ಹೋದರು.

[35] ದ್ವೀಪದ ನಿವಾಸಿಗಳೆಲ್ಲಾ ನಿನ್ನ ಸ್ಥಿತಿಗೆ ಭಯಭೀತರಾಗಿದ್ದಾರೆ. ಅವರ ಅರಸರು ಬಹಳವಾಗಿ ಭಯಪಟ್ಟಿದ್ದಾರೆ. ರಾಜರು ನಡುಗಿ ಭೀತಿಗೊಂಡರು.

[36] ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸೀಳಿಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.’ ”

ಯೆಹೆಜ್ಕೇಲನು — Chapters