Skip to content
Opens in a new window
Listen to this chapter • 2:47

[1] “ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನರ ವಿಷಯವಾಗಿ ಈ ಪ್ರಲಾಪವನ್ನೆತ್ತಿ,

[2] ಹೀಗೆ ಹೇಳು: “ ‘ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ತನ್ನ ಮರಿಗಳನ್ನು ಸಾಕಿ, ಯುವ ಸಿಂಹಗಳ ನಡುವೆ ವಾಸಿಸಿತು.

[3] ಅವಳೂ ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು, ಇದು ಪ್ರಾಯದ ಸಿಂಹವಾಯಿತು. ಇದು ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಿಬಿಟ್ಟಿತು.

[4] ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು, ಅವರ ಗುಂಡಿಯಲ್ಲಿ ಇದನ್ನು ಹಿಡಿದುಕೊಂಡರು. ಸಂಕೋಲೆಗಳಿಂದ ಬಂಧಿಸಿ, ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.

[5] “ ‘ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕಳೆದುಕೊಂಡೆನೆಂದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು, ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು.

[6] ಅದೂ ಸಿಂಹಗಳ ನಡುವೆ ತಿರುಗಾಡಿ, ಪ್ರಾಯದ ಸಿಂಹವಾಗಿ ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಿಬಿಟ್ಟಿತು.

[7] ಅವರ ಅರಮನೆಗಳನ್ನು ಹಾಳುಮಾಡಿತು, ಅವರ ನಗರಗಳನ್ನೂ ನಾಶಮಾಡಿತು, ಅದರ ಘರ್ಜನೆಯ ಶಬ್ದದಿಂದಾಗಿ ದೇಶವೂ, ಅದರಲ್ಲಿದ್ದ ಎಲ್ಲರೂ ದಂಗಾದವು.

[8] ಆಗ ಜನಾಂಗಗಳು ಸುತ್ತಲಿನ ಪ್ರಾಂತಗಳೊಳಗಿಂದ ಕೂಡಿಬಂದು, ಅದಕ್ಕೆ ವಿರೋಧವಾಗಿ ನಿಂತು, ಅದರ ಮೇಲೆ ಬಲೆಯನ್ನೊಡ್ಡಿದರು, ಆಗ ಅದು ಅವರ ಗುಂಡಿಯಲ್ಲಿ ಸಿಕ್ಕಿಬಿದ್ದಿತು.

[9] ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಪಂಜರದಲ್ಲಿ ಹಾಕಿ, ಬಾಬಿಲೋನಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾಯೇಲಿನ ಪರ್ವತಗಳ ಮೇಲೆ ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿದರು.

[10] “ ‘ನಿನ್ನ ತಾಯಿ ನೀರಿನ ಬಳಿಯಲ್ಲಿ ನೆಟ್ಟ ದ್ರಾಕ್ಷಿ ಗಿಡದ ಹಾಗೆ ಇದ್ದಾಳೆ. ಅದು ಸಮೃದ್ಧಿಯಾದ ನೀರಾವರಿಯಿಂದ ಫಲವುಳ್ಳದ್ದಾಗಿಯೂ ಇದೆ.

[11] ಆಳುವವರ ರಾಜದಂಡಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ. ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ. ಹಾಗೆಯೇ ಅದು ಬಹು ಕೊಂಬೆಗಳ ಮಧ್ಯದಲ್ಲಿ ಎತ್ತರವಾಗಿ ಕಾಣಬರುತ್ತಿದೆ.

[12] ಆದರೆ ಆ ಲತೆಯನ್ನು ರೋಷದಲ್ಲಿ ಕಿತ್ತು ನೆಲಕ್ಕೆ ಬಿಸಾಡಿದರು. ಪೂರ್ವದಿಕ್ಕಿನ ಗಾಳಿಯು ಅದರ ಫಲವನ್ನು ಒಣಗಿಸಿತು. ಅದರ ಬಲವಾದ ಬಳ್ಳಿಗಳು ಮುರಿದು ಒಣಗಿಹೋದವು. ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.

[13] ಈಗ ಅದು ಮರುಭೂಮಿಯಲ್ಲಿ ಒಣಗಿ, ನೀರಿಲ್ಲದಂಥ ಪ್ರದೇಶದಲ್ಲಿ ನೆಡಲಾಗಿದೆ.

[14] ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು, ಅದರಲ್ಲಿ ಫಲವನ್ನು ತಿಂದುಬಿಟ್ಟಿದೆ. ಅದರಲ್ಲಿ ಆಳುವುದಕ್ಕೆ ರಾಜದಂಡಕ್ಕಾಗಿ ತಕ್ಕ ಬಲವುಳ್ಳ ಬಳ್ಳಿಯು ಈಗ ಇಲ್ಲ.’ ಇದು ಪ್ರಲಾಪವಾಗಿದೆ. ಪ್ರಲಾಪಕ್ಕಾಗಿಯೇ ಇದೆ.”

ಯೆಹೆಜ್ಕೇಲನು — Chapters