[1] ಯೆಹೋವ ದೇವರ ವಾಕ್ಯವು ನನಗೆ ಬಂದಿತು,
[2] “ಮನುಷ್ಯಪುತ್ರನೇ, ನೀನು ಸೇಯೀರ್ ಪರ್ವತಕ್ಕೆ ಅಭಿಮುಖನಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸಿ,
[3] ಅದಕ್ಕೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ಸೇಯೀರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
[4] ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವೆ; ಆಗ ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.
[5] “ ‘ನೀನು ಇಸ್ರಾಯೇಲರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕಾಲದಲ್ಲಿ ಅವರನ್ನು ಖಡ್ಗದ ಬಾಯಿಗೆ ಗುರಿಮಾಡಿದ ಕಾರಣ ಅವರ ಶಿಕ್ಷೆಯು ತಪ್ಪದು.
[6] ಆದುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು. ರಕ್ತಪಾತವು ನಿನ್ನನ್ನು ಬೆನ್ನಟ್ಟುವುದು. ನೀನು ರಕ್ತಪಾತಕ್ಕೆ ಹೇಸದೆ ಹೋದಕಾರಣ ರಕ್ತ ಪ್ರವಾಹವೇ ನಿನ್ನ ಬೆನ್ನು ಹತ್ತುವುದು.
[7] ಹೀಗೆ ನಾನು ಸೇಯೀರ್ ಪರ್ವತವನ್ನು ಸಂಪೂರ್ಣ ಹಾಳುಮಾಡುವೆನು. ಅದರೊಳಗೆ ಹಾದುಹೋಗುವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.
[8] ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿಸುವರು. ನಿನ್ನ ಖಡ್ಗದಿಂದ ಹತರಾದವರು ನಿನ್ನ ಹಳ್ಳಕೊಳ್ಳಗಳಲ್ಲಿಯೂ ಪರ್ವತಗಳ ಮೇಲೆಯೂ ಬೀಳುವರು.
[9] ನಾನು ನಿನ್ನನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ನಿನ್ನ ನಗರಗಳು ನಿರ್ಜನವಾಗುವುವು, ಆಗ ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.
[10] “ ‘ಯೆಹೋವ ದೇವರು ಅವುಗಳಲ್ಲಿದ್ದರೂ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನ ವಶವಾಗುವುವು. ಎಂದೂ ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ.
[11] ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ: ನನ್ನ ಜೀವದಾಣೆ, ನಾನು ನಿನ್ನ ಕೋಪದ ಪ್ರಕಾರವೂ ನೀನು ದ್ವೇಷದಿಂದ ಅವರಿಗೆ ವಿರುದ್ಧವಾಗಿ ನಡೆಸಿದ ಹೊಟ್ಟೆಕಿಚ್ಚಿನ ಪ್ರಕಾರವೂ ನಿನಗೆ ನ್ಯಾಯತೀರಿಸಿದಾಗ ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.
[12] ಆಗ ನಾನೇ ಯೆಹೋವನೆಂದು ನೀನು ತಿಳಿಯುವೆ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ, “ಅವು ಹಾಳಾಗಿವೆ ನಮಗೆ ನುಂಗುವುದಕ್ಕೆ ಕೊಡಲಾಗಿವೆ,” ಎಂದು ಹೇಳಿ ಮಾತನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಯೆಹೋವ ದೇವರೆಂಬ ನಾನೇ ಕೇಳಿರುವೆನೆಂದು ತಿಳಿಯುವೆ.
[13] ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.
[14] ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಯಾವಾಗ ಸಂಪೂರ್ಣ ಭೂಮಿಯು ಸಂತೋಷಪಡುತ್ತದೋ ಆಗ ನಾನು ನಿನ್ನನ್ನು ಹಾಳುಮಾಡುವೆನು.
[15] ಹೇಗೆ ನೀನು ಇಸ್ರಾಯೇಲರ ಸ್ವಾಸ್ತ್ಯದ ನಾಶನಕ್ಕೆ ಹೇಗೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಸೇಯೀರ್ ಪರ್ವತವೇ ಮತ್ತು ಸಮಸ್ತ ಎದೋಮೇ ಸಂಪೂರ್ಣವಾಗಿ ಹಾಳಾಗುವೆ. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು.’ ”