[1] “ನರಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು. ಹೇಳು, ‘ಇಸ್ರಾಯೇಲ್ ಪರ್ವತಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
[2] ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಏಕೆಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ, “ಆಹಾ, ಪೂರ್ವದ ಉತ್ತಮ ಸ್ಥಳಗಳು ನಮ್ಮ ಸೊತ್ತಾದವು,” ಎಂದು ಹೇಳುವರು. ’
[3] ಆದ್ದರಿಂದ ನೀನು ಪ್ರವಾದಿಸಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರು ನಿನ್ನನ್ನು ಹಾಳು ಮಾಡಿ ಎಲ್ಲಾ ಕಡೆಗಳಿಂದಲೂ ನಿನ್ನನ್ನು ತುಳಿದುಬಿಟ್ಟರು. ನೀವು ಇತರ ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಗಾರರ ಬಾಯಿಗೆ ಬಿದ್ದು ಜನರ ನಿಂದೆಗೆ ಗುರಿಯಾಗಿದ್ದೀರಿ.
[4] ಆದ್ದರಿಂದ ಇಸ್ರಾಯೇಲ್ ಪರ್ವತಗಳೇ, ನೀವು ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ, ಪರ್ವತಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ
[5] ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಶ್ಚಯವಾಗಿ ನನ್ನ ರೋಷದ ಬೆಂಕಿಯಿಂದ ಇತರ ಜನಾಂಗಗಳಲ್ಲಿ ಉಳಿದವರಿಗೂ ಎದೋಮಿನವರೆಲ್ಲರಿಗೂ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡಿದ್ದಾರೆ. ಅವರು ಅದರ ಹುಲ್ಲುಗಾವಲನ್ನು ಸಹ ಸೂರೆಮಾಡಬೇಕೆಂದಿದ್ದಾರೆ.’
[6] ಆದ್ದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು. ಪರ್ವತಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ: ಇತರ ಜನಾಂಗಗಳ ಅವಮಾನವನ್ನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರದಿಂದಲೂ ಮಾತನಾಡಿದ್ದೇನೆ.
[7] ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನನ್ನ ಕೈಯೆತ್ತಿ ಪ್ರಮಾಣ ಮಾಡಿದ್ದೇನೆ, ನಿಶ್ಚಯವಾಗಿ ನಿನ್ನ ಮೇಲಿರುವ ಆ ಜನಾಂಗಗಳು ತಮ್ಮ ನಿಂದೆಯನ್ನು ಹೊರುವರು.
[8] “ ‘ಆದರೆ ಓ ಇಸ್ರಾಯೇಲ್ ಪರ್ವತಗಳೇ, ನೀವು ನಿಮ್ಮ ಕೊಂಬೆಗಳನ್ನು ಹರಡಿಸಿ ನನ್ನ ಜನರಾದ ಇಸ್ರಾಯೇಲರಿಗೆ ಫಲಕೊಡುವಿರಿ. ಏಕೆಂದರೆ ಅವರ ಬರುವಿಕೆಯು ಸಮೀಪವಾಗಿದೆ.
[9] ನಾನು ನಿಮ್ಮವನಾಗಿದ್ದೇನೆ ನಾನು ನಿಮ್ಮ ಕಡೆಗೆ ತಿರುಗಿಕೊಳ್ಳುತ್ತೇನೆ ಮತ್ತು ನಿಮ್ಮಲ್ಲಿ ಉಳುಮೆ ಮಾಡಿ ಬಿತ್ತಲಾಗುತ್ತದೆ.
[10] ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್ ಮನೆತನದವರನ್ನೂ ಎಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿಸುತ್ತೇನೆ. ಪಟ್ಟಣಗಳು ಜನಭರಿತವಾಗುವುವು. ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವುವು.
[11] ನಾನು ನಿಮ್ಮ ಮೇಲೆ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡುವೆನು. ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವುವು. ನಾನು ನಿಮ್ಮನ್ನು ಮೊದಲಿನ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.
[12] ನನ್ನ ಜನರಾದ ಇಸ್ರಾಯೇಲ್ಯರನ್ನು ನಿಮ್ಮಲ್ಲಿ ವಾಸಿಸುವಂತೆ ಮಾಡುವೆನು. ಅವರು ನಿನ್ನನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ನೀವು ಅವರ ಸೊತ್ತಾಗಿರುವಿರಿ; ನೀವು ಎಂದಿಗೂ ಅವರ ಮಕ್ಕಳಿಂದ ವಂಚಿತರಾಗುವುದಿಲ್ಲ.
[13] “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ಮನುಷ್ಯರನ್ನು ನುಂಗುವಂಥ ದೇಶ ಮತ್ತು ನಿನ್ನ ಜನಗಳನ್ನು ಮಕ್ಕಳಿಲ್ಲದಂಥ ಜನಾಂಗಗಳನ್ನಾಗಿ ಮಾಡುವಂಥದ್ದು ಆಗಿರುವೆ,” ಎಂದು ಅವರು ನಿನಗೆ ಹೇಳುವರು.
[14] ಆದ್ದರಿಂದ ಇನ್ನು ಮೇಲೆ ನೀನು ಮನುಷ್ಯರನ್ನು ನುಂಗುವುದಿಲ್ಲ. ಇನ್ನು ಮೇಲೆ ನಿನ್ನ ಜನಾಂಗದವರನ್ನೂ ಮಕ್ಕಳಿಲ್ಲದವರನ್ನಾಗಿ ಮಾಡುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
[15] ಅಲ್ಲದೆ ಇನ್ನು ಮೇಲೆ ನೀನು ಇತರ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗಗಳಿಂದ ಅವಮಾನ ಅನುಭವಿಸುವುದಿಲ್ಲ. ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
[16] ಯೆಹೋವ ದೇವರ ವಾಕ್ಯವು ನನಗೆ ಬಂದಿತು,
[17] “ಮನುಷ್ಯಪುತ್ರನೇ, ಯಾವಾಗ ಇಸ್ರಾಯೇಲರ ಮನೆತನದವರು ಸ್ವಂತ ದೇಶದಲ್ಲಿ ವಾಸಿಸಿದರೋ, ಆಗ ಅವರು ಅದನ್ನು ತಮ್ಮ ಸ್ವಂತ ಮಾರ್ಗಗಳಿಂದಲೂ ದುಷ್ಕಾರ್ಯಗಳಿಂದಲೂ ಅಶುದ್ಧಗೊಳಿಸಿದರು. ಅವರ ಆ ದುಷ್ಕಾರ್ಯಗಳು ನನ್ನ ಮುಂದೆ ಮುಟ್ಟಾಗಿರುವವಳ ಅಶುದ್ಧತ್ವದ ಹಾಗಿತ್ತು.
[18] ಆದ್ದರಿಂದ ಅವರು ದೇಶದಲ್ಲಿ ಚೆಲ್ಲಿದ ರಕ್ತದ ನಿಮಿತ್ತವಾಗಿಯೂ ಅವರು ಅದನ್ನು ಅಶುದ್ಧಪಡಿಸಿದ ಅವರ ವಿಗ್ರಹಗಳ ನಿಮಿತ್ತವಾಗಿಯೂ ನನ್ನ ರೋಷವನ್ನು ಅವರ ಮೇಲೆ ಸುರಿಸಿದೆನು.
[19] ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶಗಳಲ್ಲಿ ಚದರಿಹೋದರು. ಅವರ ದುರ್ಮಾರ್ಗ ದುರಾಚಾರಗಳಿಗೆ ಅನುಸಾರವಾಗಿ ಅವರನ್ನು ನ್ಯಾಯತೀರಿಸಿದೆನು.
[20] ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ ಇವರೇ, ‘ಯೆಹೋವ ದೇವರ ಜನರು ಮತ್ತು ಇವರು ಆತನ ದೇಶದಿಂದ ಹೊರಟು ಹೋದರು,’ ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡಿದರು.
[21] ಆದರೆ ಇಸ್ರಾಯೇಲಿನ ಮನೆತನದವರು ತಾವು ಹೋದ ಜನಾಂಗಗಳಲ್ಲಿ ಅಪವಿತ್ರಮಾಡಿದ ನನ್ನ ಪರಿಶುದ್ಧವಾದ ಹೆಸರನ್ನು ಕುರಿತು ಮನಮರುಗಿದೆನು.
[22] “ಆದ್ದರಿಂದ ನೀನು ಇಸ್ರಾಯೇಲರ ಮನೆತನದವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡುತ್ತಿಲ್ಲ. ಆದರೆ ನೀವು ಇತರ ಜನಾಂಗಗಳ ನಡುವೆ ಅಪವಿತ್ರಪಡಿಸಿದ ನನ್ನ ಪರಿಶುದ್ಧ ನಾಮಕ್ಕಾಗಿ ಮಾಡುತ್ತೇನೆ.
[23] ನೀನು ನನ್ನ ಮಹತ್ವದ ನಾಮವನ್ನು ಅಪವಿತ್ರತೆಗೆ ಗುರಿಮಾಡಿದ ಇತರ ಜನಾಂಗಗಳಲ್ಲಿ ನನ್ನ ಪವಿತ್ರ ನಾಮವನ್ನು ತೋರಿಸುವೆನು. ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮೂಲಕವಾಗಿ ನನ್ನನ್ನು ಪವಿತ್ರನೆಂದು ತೋರಿಸುವಾಗ ಅವರು ನಾನು ಯೆಹೋವ ದೇವರೆಂಬುದನ್ನು ತಿಳಿದುಕೊಳ್ಳುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
[24] “ ‘ನಾನು ನಿಮ್ಮನ್ನು ಇತರ ಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
[25] ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ, ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.
[26] ನಿಮಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮವನ್ನು ನಿಮ್ಮೊಳಗೆ ಇಡುವೆನು. ನಿಮ್ಮೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
[27] ನನ್ನ ಆತ್ಮವನ್ನು ನಿಮ್ಮೊಳಗೆ ಇಡುವೆನು. ನೀವು ನನ್ನ ನಿಯಮಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಜಾಗರೂಕತೆಯಿಂದ ಅನುಸರಿಸಿ ನಡೆಯುವಿರಿ.
[28] ನಾನು ನಿಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ವಾಸಿಸುವಿರಿ; ನೀವು ನನ್ನ ಜನರಾಗಿರುವಿರಿ. ನಾನು ನಿಮ್ಮ ದೇವರಾಗಿರುವೆನು.
[29] ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು. ಬೆಳೆ ಬೆಳೆಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವುದಿಲ್ಲ.
[30] ಜನಾಂಗಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನೂ ಹೆಚ್ಚಿಸುವೆನು.
[31] ಆಮೇಲೆ ನೀವು ನಿಮ್ಮ ನಿಮ್ಮ ದುರ್ಮಾರ್ಗಗಳನ್ನೂ ದುರಾಚಾರಗಳನ್ನೂ ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
[32] ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳಿಗೆ ನಾಚಿಕೆಪಟ್ಟು ಲಜ್ಜೆಹೊಂದಿರಿ.
[33] “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು. ಹಾಳಾಗಿರುವ ಸ್ಥಳಗಳಲ್ಲಿಯೂ ಕಟ್ಟಡಗಳು ಪುನಃ ಏಳುವುವು.
[34] ದೇಶವು ಅಲ್ಲಿ ಹಾದುಹೋಗುವ ಜನರೆಲ್ಲರ ಮುಂದೆ ಹಾಳುಬಿದ್ದ ಹಾಗೆ ಕಾಣದೆ ಉಳುಮೆಗೊಂಡಿರುವುದು.
[35] “ಹಾಳಾಗಿದ್ದ ಈ ದೇಶವು ಏದೆನಿನ ಉದ್ಯಾನವನದ ಹಾಗಾಯಿತೆಂದು ಮತ್ತು ಹಾಳಾಗಿ ಬಿದ್ದುಹೋಗಿ ಬೀಡಾಗಿ ನಶಿಸಿಹೋಗಿರುವ ಪಟ್ಟಣಗಳು ನಾಡಾಗಿ ಕೋಟೆಗಳಿಂದಲೂ ನಿವಾಸಿಗಳಿಂದಲೂ ತುಂಬಿವೆ,” ಎಂದು ಹೇಳುವರು.
[36] ಯೆಹೋವ ದೇವರಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ ಮತ್ತು ನಾನೇ ಇದನ್ನು ಮಾಡುತ್ತೇನೆ.’
[37] “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇನ್ನೊಂದು ವಿಷಯದಲ್ಲಿ, ಇಸ್ರಾಯೇಲರ ಮತ್ತೊಂದು ಕೋರಿಕೆಯನ್ನು ಆಲಿಸಿ ನೆರವೇರಿಸುವೆನು. ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.
[38] ಮೀಸಲಾದ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು. ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವುವು. ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”