Skip to content
Opens in a new window
Listen to this chapter • 6:34

[1] ಯೆಹೋವ ದೇವರ ವಾಕ್ಯವು ನನಗೆ ಬಂದಿತು:

[2] “ಮನುಷ್ಯಪುತ್ರನೇ, ಈಗ ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ? ಹಾಗಾದರೆ ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವೆ.

[3] ಆಮೇಲೆ ನೀನು ಹೇಳಬೇಕಾದದ್ದೇನೆಂದರೆ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪಟ್ಟಣವು ಅದರ ಮಧ್ಯದಲ್ಲಿ ಅದರ ದಂಡನೆಯ ಕಾಲ ಬರುವಂತೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧಮಾಡುವಂತೆ ತನ್ನಲ್ಲಿ ವಿಗ್ರಹ ಮಾಡಿಕೊಂಡಿದೆ.

[4] ನೀನು ಚೆಲ್ಲಿದ ನಿನ್ನ ರಕ್ತದಿಂದ ನೀನು ಅಪರಾಧಿಯಾದೆ; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧನಾದೆ; ನಿನ್ನ ದಿನಗಳನ್ನು ಸಮೀಪಿಸಿರುವೆ; ಮತ್ತು ನಿಮ್ಮ ವರ್ಷಗಳ ಅಂತ್ಯವು ಬಂದಿದೆ. ಆದ್ದರಿಂದ ನಿನ್ನನ್ನು ಇತರ ಜನಾಂಗಗಳಿಗೆ ನಾಚಿಕೆಯಾಗಿಯೂ, ಎಲ್ಲಾ ದೇಶಗಳಿಗೂ ನಿಂದೆಯಾಗಿಯೂ ಮಾಡಿದ್ದೇನೆ.

[5] ಕುಖ್ಯಾತ ನಗರವೇ, ಬಹಳ ತೊಂದರೆಗೊಳಗಾದವಳೇ, ನಿನ್ನನ್ನು ಹತ್ತಿರದವರೂ, ದೂರದವರೂ ಅಪಹಾಸ್ಯ ಮಾಡುವರು.

[6] “ ‘ಇಸ್ರಾಯೇಲಿನ ಅರಸರು ಪ್ರತಿಯೊಬ್ಬನು ತಮ್ಮ ತಮ್ಮ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾರೆ.

[7] ನಿನ್ನಲ್ಲಿ ತಂದೆಯನ್ನೂ, ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ. ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ. ನಿನ್ನಲ್ಲಿ ದಿಕ್ಕಿಲ್ಲದವನನ್ನೂ, ವಿಧವೆಯನ್ನೂ ಪೀಡಿಸಿದ್ದಾರೆ.

[8] ನೀನು ನನ್ನ ಪರಿಶುದ್ಧ ಸಂಗತಿಗಳನ್ನು ತಿರಸ್ಕರಿಸಿ, ನನ್ನ ಸಬ್ಬತ್ ದಿನಗಳನ್ನು ಅಪವಿತ್ರ ಪಡಿಸಿದ್ದಿ.

[9] ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಚಾಡಿ ಹೇಳುವವರು ಇದ್ದಾರೆ; ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನುತ್ತಾರೆ; ನಿನ್ನಲ್ಲಿ ಅವರು ದ್ರೋಹವನ್ನು ಮಾಡಿದ್ದಾರೆ.

[10] ನಿಮ್ಮಲ್ಲಿ ತಂದೆಯ ಹಾಸಿಗೆಯನ್ನು ಅವಮಾನಿಸುವವರು ಇದ್ದಾರೆ, ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ.

[11] ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ಅಸಹ್ಯಕರವಾದದ್ದನ್ನು ಮಾಡಿದ್ದಾನೆ; ಮತ್ತೊಬ್ಬನು ಅತ್ಯಾಚಾರದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಮಾನಭಂಗಪಡಿಸಿದ್ದಾನೆ.

[12] ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚ ತೆಗೆದುಕೊಂಡಿದ್ದಾರೆ. ಬಡ್ಡಿಯನ್ನು ಲಾಭವನ್ನೂ ತೆಗೆದುಕೊಂಡಿದ್ದಾರೆ. ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭ ಮಾಡಿಕೊಂಡಿದ್ದಾರೆ. ನನ್ನನ್ನು ಮರೆತುಬಿಟ್ಟಿದ್ದಾರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[13] “ ‘ಆದ್ದರಿಂದ ನೀನು ಮಾಡಿದ ಈ ದುರ್ಲಾಭದಿಂದಲೂ, ನಿನ್ನಲ್ಲಿರುವ ನಿನ್ನ ರಕ್ತಾಪರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ.

[14] ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವುದೋ? ನಿನ್ನ ಕೈಗಳು ಬಲವಾಗಿರುವುವೋ? ಯೆಹೋವ ದೇವರಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುವೆನು.

[15] ನಿನ್ನನ್ನು ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು. ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು.

[16] ಆಗ ನೀನು ಇತರ ಜನಾಂಗಗಳ ಮುಂದೆ ನಿನ್ನಷ್ಟಕ್ಕೆ ನೀನೇ ಅಪಕೀರ್ತಿಗೆ ಗುರಿಯಾಗುವಿ; ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.’ ”

[17] ಯೆಹೋವ ದೇವರ ವಾಕ್ಯವು ನನಗೆ ಬಂದಿತು:

[18] “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ ಕಸದ ಹಾಗಾದರೂ, ಅವರೆಲ್ಲರೂ ಗುಹೆಯಲ್ಲಿರುವ ತಾಮ್ರ, ತವರ, ಕಬ್ಬಿಣದ ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಸದ ಹಾಗೆಯೂ ಇದ್ದಾರೆ.

[19] ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀವೆಲ್ಲರೂ ಕೆಟ್ಟವರಾಗಿರುವುದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ.

[20] ಅವರು ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒರೆಯೊಳಗೆ ಕೂಡಿಸಿ, ಅದಕ್ಕೆ ಬೆಂಕಿಯನ್ನು ಊದಿ ಕರಗಿಸುವರೋ, ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿ ಮತ್ತು ನನ್ನ ರೋಷದಲ್ಲಿ ಒಟ್ಟುಗೂಡಿಸಿ ನಿಮ್ಮನ್ನು ನಗರದೊಳಗೆ ಹಾಕಿ ಕರಗಿಸುತ್ತೇನೆ.

[21] ನಾನು ನಿಮ್ಮನ್ನು ಕೂಡಿಸಿ, ನನ್ನ ರೋಷದ ಬೆಂಕಿಯನ್ನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿಹೋಗುವಿರಿ.

[22] ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗುವಿರಿ. ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದವರು ಯೆಹೋವ ದೇವರಾದ ನಾನೇ ಎಂದು ನಿಮಗೆ ತಿಳಿಯುತ್ತದೆ.’ ”

[23] ಯೆಹೋವ ದೇವರ ವಾಕ್ಯವು ಮತ್ತೆ ನನಗೆ ಬಂದಿತು,

[24] “ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು, ‘ದೇವರ ರೌದ್ರದ ದಿವಸದಲ್ಲಿ ನೀನು ಶುದ್ಧಿಯಾಗದ ದೇಶವಾಗಿಯೂ, ಮಳೆಯಿಲ್ಲದ ದೇಶವಾಗಿಯೂ ಇರುವೆ.’

[25] ಬೇಟೆಯನ್ನು ಸುಲಿದುಕೊಳ್ಳುವ ಗರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಅವಳ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ, ಸಂಪತ್ತನ್ನೂ, ಅಮೂಲ್ಯವಾದ ವಸ್ತುವನ್ನೂ ದೋಚಿಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ.

[26] ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ. ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ. ಅವರು ಪರಿಶುದ್ಧವಾದದ್ದಕ್ಕೂ, ಅಪವಿತ್ರವಾದದ್ದಕ್ಕೂ ಬೇಧವೆಣಿಸಲಿಲ್ಲ. ಶುದ್ಧ, ಅಶುದ್ಧಗಳ ವ್ಯತ್ಯಾಸವಿಲ್ಲ ಎಂದು ಬೋಧಿಸಿದರು. ನನ್ನ ಸಬ್ಬತ್ ದಿನಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದ್ದರಿಂದ ನಾನು ಅವರಲ್ಲಿ ಅಪಕೀರ್ತಿಗೆ ಗುರಿಯಾಗಿದ್ದೇನೆ.

[27] ಅಲ್ಲಿಯ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ಪ್ರಾಣಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿದ್ದಾರೆ.

[28] ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಯೆಹೋವ ದೇವರು ಮಾತನಾಡದಿದ್ದರೂ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ’ ಎಂದು ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ.

[29] ದೇಶದ ಜನರು ಬಲಾತ್ಕಾರದಿಂದ ಸೂರೆಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ, ದರಿದ್ರರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯ ಕೊಡದೆ ವಿದೇಶಿಯರನ್ನು ಬಲಾತ್ಕಾರ ಪಡಿಸಿದ್ದಾರೆ.

[30] “ಗೋಡೆಯನ್ನು ಕಟ್ಟಿ ನಾಡನ್ನು ನಾನು ಹಾಳುಮಾಡದಂತೆ ನಾಡಿನ ಪರವಾಗಿ ಪೌಳಿಗೋಡೆಯ ಬಿರುಕಿನಲ್ಲಿ ನಿಲ್ಲುವ ಒಬ್ಬ ಮನುಷ್ಯನನ್ನು ಅವರೊಳಗೆ ನಾನು ಹುಡುಕಿದೆನು. ಆದರೆ ಯಾರೂ ಸಿಕ್ಕಲಿಲ್ಲ.

[31] ಆದ್ದರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ. ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ. ಅವರ ದುರ್ನಡತೆಯ ಹೊಣೆಯನ್ನು ಅವರ ತಲೆಗಳ ಮೇಲೆ ಹೊರಿಸಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

ಯೆಹೆಜ್ಕೇಲನು — Chapters