Skip to content
Opens in a new window
Listen to this chapter • 5:58

[1] ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:

[2] “ಮನುಷ್ಯಪುತ್ರನೇ, ಈ ದಿನದ, ಇದೇ ದಿನದ ಹೆಸರನ್ನು ಬರೆದುಕೋ. ಅದೇ ದಿನದಲ್ಲಿ ಬಾಬಿಲೋನಿನ ಅರಸನು ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಾನೆ.

[3] ದಂಗೆಕೋರ ಮನೆತನದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಹಂಡೆಯನ್ನು ಒಲೆಯ ಮೇಲಿಡು, ಮೇಲಿಟ್ಟು ಅದರಲ್ಲಿ ನೀರನ್ನು ಸುರಿ.

[4] ಮಾಂಸದ ತುಂಡುಗಳನ್ನೂ ತೊಡೆಯನ್ನೂ ಹೆಗಲನ್ನೂ ಎಲ್ಲಾ ಒಳ್ಳೆಯ ತುಂಡುಗಳನ್ನೂ ಒಟ್ಟಿಗೆ ಸೇರಿಸಿ ಒಳ್ಳೆಯ ಎಲುಬುಗಳ ಜೊತೆ ಅದನ್ನು ತುಂಬಿಸು.

[5] ಹಿಂಡಿನಲ್ಲಿ ಶ್ರೇಷ್ಠವಾದದ್ದನ್ನು ತೆಗೆದುಕೊಂಡು ಎಲುಬಿನ ರಾಶಿಯನ್ನೂ ಅದರ ಕೆಳಗೆ ಇಟ್ಟು ಅದನ್ನು ಚೆನ್ನಾಗಿ ಕುದಿಸು; ಆ ಎಲುಬುಗಳೂ ಅದರಲ್ಲಿ ಚೆನ್ನಾಗಿ ಬೇಯಲಿ.

[6] “ ‘ಆದಕಾರಣ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ರಕ್ತಮಯವಾದ ಆ ಪಟ್ಟಣಕ್ಕೆ ಕಷ್ಟ! ಯಾವುದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವುದೋ ಆ ಹಂಡೆಗೆ ಕಷ್ಟ! ಅದರಿಂದ ತುಂಡುತುಂಡಾಗಿ ಹೊರಗೆ ತೆಗೆ. ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.

[7] “ ‘ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ. ಧೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ.

[8] ಮುಯ್ಯಿಗೆ ಮುಯ್ಯಿ ತೀರಿಸುವುದಕ್ಕೆ ರೋಷವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿ ಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿದ್ದೇನೆ.

[9] “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಆ ರಕ್ತಾಪರಾಧವುಳ್ಳ ಪಟ್ಟಣಕ್ಕೆ ಕಷ್ಟ! ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.

[10] ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸವನ್ನು ಚೆನ್ನಾಗಿ ಬೇಯಿಸು; ಮಸಾಲೆ ಚೆನ್ನಾಗಿ ಇರಲಿ, ಎಲುಬುಗಳು ಸುಡಲಿ.

[11] ಆಮೇಲೆ ಹಂಡೆಯು ಕಾದು ತಾಮ್ರವು ಕೆಂಪಾಗಿ, ಒಳಗಣ ಕಲ್ಮಶವು ಕರಗಿ ಕಿಲುಬು ಇಲ್ಲವಾಗುವಂತೆ ಅದನ್ನು ಬರಿದುಮಾಡಿ ಕೆಂಡಗಳ ಮೇಲೆ ಇಡು.

[12] ಅದರ ಕಲ್ಮಶವು ನನ್ನಲ್ಲಿ ಆಯಾಸವನ್ನುಂಟು ಮಾಡೀತೆ ಹೊರತು ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ. ಅದು ಬೆಂಕಿಯಿಂದಲೂ ನೀಗಲಿಲ್ಲ.

[13] “ ‘ನಿನ್ನ ಅಶುದ್ಧತ್ವವು ದುಷ್ಕರ್ಮವುಳ್ಳದ್ದು. ನಾನು ನಿನ್ನನ್ನು ಪರಿಶುದ್ಧಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರದಿಂದ ಇನ್ನು ಶುದ್ಧವಾಗುವುದಿಲ್ಲ.

[14] “ ‘ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ. ನಾನು ಕೆಲಸ ಮಾಡುವ ಸಮಯ ಬಂದಿದೆ. ನಾನು ಅದನ್ನು ಮಾಡದೆ ಬಿಡುವುದಿಲ್ಲ. ಕಟಾಕ್ಷ ತೋರಿಸುವುದಿಲ್ಲ. ಹಿಂದೆಗೆಯೆನು. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯತೀರಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”

[15] ಯೆಹೋವ ದೇವರ ವಾಕ್ಯವು ನನಗೆ ಬಂದಿತು:

[16] “ಮನುಷ್ಯಪುತ್ರನೇ, ಒಂದೇ ಏಟಿನಿಂದ ನೇತ್ರಾನಂದವಾಗಿರುವುದನ್ನು ನಿನ್ನಿಂದ ತೆಗೆಯುತ್ತೇನೆ. ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ.

[17] ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖ ತೋರಿಸಬೇಡ. ಮುಂಡಾಸವನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ನಿನ್ನ ಮೀಸೆ ಮತ್ತು ಗಡ್ಡವನ್ನು ಮುಚ್ಚಿಕೊಳ್ಳಬೇಡ, ದುಃಖಿಸುವವರ ಸಾಂಪ್ರದಾಯಿಕ ಆಹಾರವನ್ನು ತಿನ್ನಬೇಡಿರಿ.”

[18] ಹಾಗೆಯೇ ನಾನು ಬೆಳಗಿನ ಜಾವದಲ್ಲಿ ಜನರೊಂದಿಗೆ ಮಾತನಾಡಿದೆನು. ಸಂಜೆ ನನ್ನ ಹೆಂಡತಿ ಸತ್ತಳು. ಮರುದಿನ ಬೆಳಿಗ್ಗೆ ನಾನು ಆಜ್ಞಾಪಿಸಿದಂತೆ ಮಾಡಿದೆನು.

[19] ಆಗ ಜನರು, “ನೀನು ಮಾಡುವ ಆ ಸಂಗತಿಗಳಿಂದ ನಮಗೆ ಪ್ರಯೋಜನವೇನೆಂದು ತಿಳಿಸುವುದಿಲ್ಲವೇ? ಯಾಕೆ ಹೀಗೆ ವರ್ತಿಸುತ್ತಿದ್ದೀಯಾ?” ಎಂದು ಕೇಳಿದರು.

[20] ಆದ್ದರಿಂದ ನಾನು ಅವರಿಗೆ ಹೀಗೆ ಹೇಳಿದೆನು, “ಯೆಹೋವ ದೇವರ ವಾಕ್ಯವು ನನಗೆ ಬಂದಿತು,

[21] ಇಸ್ರಾಯೇಲರ ಮನೆತನದವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ ಎಂದು ಹೇಳು: ಇಗೋ, ನಾನು ನನ್ನ ಪವಿತ್ರಾಲಯವನ್ನೂ, ನಿಮ್ಮ ಮುಖ್ಯಬಲವನ್ನೂ, ನಿಮ್ಮ ನೇತ್ರಾನಂದಕರವಾದದ್ದನ್ನೂ, ನಿಮ್ಮ ಮನಸ್ಸು ಅಭಿಲಾಷಿಸುವುದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳು ಖಡ್ಗದಿಂದ ಬೀಳುವರು.

[22] ನಾನು ಮಾಡಿದ ಹಾಗೆ ನೀವು ಮಾಡುವಿರಿ; ನಿಮ್ಮ ಮೀಸೆ ಮತ್ತು ಗಡ್ಡವನ್ನು ಮುಚ್ಚಿಕೊಳ್ಳುವುದಿಲ್ಲ ಅಥವಾ ದುಃಖಿಸುವವರ ಸಾಂಪ್ರದಾಯಿಕ ಆಹಾರವನ್ನು ತಿನ್ನುವುದಿಲ್ಲ.

[23] ನಿಮ್ಮ ಮುಂಡಾಸಗಳು ನಿಮ್ಮ ತಲೆಯ ಮೇಲೆಯೂ ನಿಮ್ಮ ಪಾದರಕ್ಷೆಯು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವುವು. ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರಳುವಿರಿ.

[24] ಹೀಗೆ ಯೆಹೆಜ್ಕೇಲನು ನಿಮಗೆ ಮುಂಗುರುತಾಗಿರುವನು; ಅವನು ಮಾಡಿದ ಎಲ್ಲವುಗಳ ಹಾಗೆ ನೀವು ಮಾಡುವಿರಿ. ಈ ರೀತಿ ಆದಾಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ತಿಳಿಯುವಿರಿ.’

[25] “ಮನುಷ್ಯಪುತ್ರನೇ, ಅವರ ಮಹತ್ತರ ಸಂತೋಷವನ್ನೂ ಅವರ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವುದನ್ನೂ ಅವರ ಪುತ್ರಪುತ್ರಿಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ ದಿನದಲ್ಲಿ,

[26] ಆ ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಕಿವಿಗಳಿಗೆ ಸುದ್ದಿಯನ್ನು ತರುವ ಹಾಗೆ ನಿನ್ನ ಬಳಿಗೆ ಬರುವನಲ್ಲವೆ?

[27] ಆ ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿ ತೆರೆದಿರುವುದು. ನೀನು ಇನ್ನು ಮೂಕನಾಗಿರದೆ ಮಾತನಾಡುವೆ ಮತ್ತು ಅವರಿಗೆ ಗುರುತಾಗಿರುವೆ, ಆಗ ನಾನೇ ಯೆಹೋವ ದೇವರೆಂದು ತಿಳಿಯುವರು.”

ಯೆಹೆಜ್ಕೇಲನು — Chapters