Skip to content
Opens in a new window
Listen to this chapter • 5:44

[1] ಹತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹನ್ನೆರಡನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು,

[2] “ನರಪುತ್ರನೇ, ನೀನು ಈಜಿಪ್ಟಿನ ಅರಸನಾದ ಫರೋಹನ ಕಡೆಗೆ ಮುಖಮಾಡಿ ಅವನಿಗೂ ಸಮಸ್ತ ಈಜಿಪ್ಟಿಗೂ ವಿರೋಧವಾಗಿ ಪ್ರವಾದಿಸು.

[3] ನೀನು ಮಾತನಾಡಿ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಈಜಿಪ್ಟಿನ ಅರಸನಾದ ಫರೋಹನೇ, ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು ಈ ನೈಲ್ ನದಿ ನನ್ನದು, ನಾನೇ ಅದನ್ನು ನನಗೋಸ್ಕರ ಮಾಡಿಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟಸರ್ಪವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.

[4] ಆದರೆ ನಿನ್ನ ದವಡೆಗಳಲ್ಲಿ ಗಾಳಗಳನ್ನು ಹಾಕಿ, ನಿನ್ನ ನದಿಗಳ ಮೀನುಗಳನ್ನು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ ನಿನ್ನನ್ನು ನಿನ್ನ ನದಿಯೊಳಗಿಂದ ಮೇಲೆ ಎಳೆದು ನಿನ್ನ ಮೀನುಗಳು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡುವೆನು.

[5] ನಿನ್ನನ್ನೂ ನಿನ್ನ ನದಿಗಳ ಮೀನುಗಳನ್ನೂ ಅರಣ್ಯದಲ್ಲಿ ಹಾಕುವೆನು. ನೀನು ಬಯಲುಗಳ ಮೇಲೆ ಬಿದ್ದಿರುವೆ; ನಿನ್ನನ್ನು ಯಾರೂ ಹೊರುವುದೂ ಇಲ್ಲ, ಸೇರಿಸುವುದೂ ಇಲ್ಲ. ನಿನ್ನನ್ನೂ ನಿನ್ನ ನದಿಯ ಎಲ್ಲಾ ಮೀನುಗಳನ್ನೂ ಕಾಡಿನ ಪಾಲುಮಾಡುವೆನು. ಭೂಮಿಯ ಮೇಲಿರುವ ಮೃಗಗಳಿಗೂ ಆಕಾಶದ ಪಕ್ಷಿಗಳಿಗೂ ನಿನ್ನನ್ನು ಆಹಾರವನ್ನಾಗಿ ಕೊಟ್ಟಿದ್ದೇನೆ.

[6] ಆಗ ಎಲ್ಲಾ ಈಜಿಪ್ಟಿನ ನಿವಾಸಿಗಳು ನಾನೇ ಯೆಹೋವನೆಂದು ತಿಳಿಯುವರು. “ ‘ಅವರು ಇಸ್ರಾಯೇಲರ ಮನೆತನದವರಿಗೆ ದಂಟಿನ ಊರುಗೋಲಾಗಿದ್ದರು.

[7] ಇಸ್ರಾಯೇಲರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದೆ; ಅವರು ನಿನ್ನನ್ನು ಆದರಿಸಿಕೊಂಡಾಗ ನೀನು ಮುರಿದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.

[8] “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾನೆ: ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ.

[9] ನೀನು, “ಆ ನೈಲ್ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು,” ಹೇಳಿಕೊಂಡದ್ದರಿಂದ, “ ‘ಈಜಿಪ್ಟ್ ದೇಶವು ಹಾಳು ಮರುಭೂಮಿಯಾಗುವುದು. ಆಗ ನಾನೇ ಯೆಹೋವ ದೇವರೆಂದು ಅವರು ತಿಳಿಯುವರು.

[10] ಆದ್ದರಿಂದ ಇಗೋ, ನಾನು ನಿನಗೂ ನಿನ್ನ ನದಿಗಳಿಗೂ ವಿರುದ್ಧವಾಗಿದ್ದೇನೆ. ಈಜಿಪ್ಟ್ ದೇಶವನ್ನು ಮಿಗ್ದೋಲಿನಿಂದ ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.

[11] ಯಾವ ಮನುಷ್ಯನ ಪಾದವಾದರೂ ಅದರಲ್ಲಿ ಹಾದು ಹೋಗುವುದಿಲ್ಲ. ಮೃಗಗಳ ಪಾದವೂ ಅದರಲ್ಲಿ ಹಾದು ಹೋಗುವುದಿಲ್ಲ ಅಥವಾ ನಲವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವುದಿಲ್ಲ.

[12] ನಾನು ಈಜಿಪ್ಟ್ ದೇಶವನ್ನು ಹಾಳುಬಿದ್ದಿರುವ ದೇಶಗಳಲ್ಲಿ ಸೇರಿಸುವೆನು. ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ನಡುವೆ ನಲವತ್ತು ವರ್ಷಗಳು ಹಾಳಾಗಿರುವುವು. ನಾನು ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದುರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.

[13] “ ‘ಆದರೂ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಲವತ್ತು ವರ್ಷಗಳ ಕೊನೆಯಲ್ಲಿ ನಾನು ಈಜಿಪ್ಟಿನವರನ್ನು ಚದುರಿರುವ ರಾಷ್ಟ್ರಗಳಿಂದ ಒಟ್ಟುಗೂಡಿಸುವೆನು.

[14] ನಾನು ಈಜಿಪ್ಟಿನವರನ್ನು ಸೆರೆಯಿಂದ ತಿರುಗಿ ಬಿಡಿಸಿ ಅವರನ್ನು ಪತ್ರೋಸ್ ದೇಶಕ್ಕೆ ಅಂದರೆ ಅವರ ಜನ್ಮದೇಶಕ್ಕೆ ಮತ್ತೆ ಬರಮಾಡುವೆನು. ಅಲ್ಲಿ ಅವರು ಕನಿಷ್ಠ ರಾಜ್ಯದವರಾಗಿರುವರು.

[15] ಆ ರಾಜ್ಯವು ಸಮಸ್ತ ರಾಜ್ಯಗಳಲ್ಲಿ ಕನಿಷ್ಠ ರಾಜ್ಯವೆನಿಸಿಕೊಳ್ಳುವುದು. ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆ ಎತ್ತದು. ಅದು ಜನಾಂಗಗಳ ಮೇಲೆ ದೊರೆತನ ಮಾಡಲಾಗದಂತೆ ಅದನ್ನು ಕ್ಷೀಣಗತಿಗೆ ತರುವೆನು.

[16] ಇನ್ನು ಅದು ಇಸ್ರಾಯೇಲ್ ವಂಶದವರ ಭರವಸೆಯಾಗದೆ, ಇವರು ಅವರ ಕಡೆಗೆ ನೋಡಿದಾಗ ಪಾಪವನ್ನು ಜ್ಞಾಪಕಕ್ಕೆ ತರುವರು. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”

[17] ಇಪ್ಪತ್ತೇಳನೆಯ ವರ್ಷದಲ್ಲಿ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು,

[18] “ಮನುಷ್ಯಪುತ್ರನೇ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಟೈರಿಗೆ ಮುತ್ತಿಗೆ ಹಾಕಿ ತನ್ನ ಸೈನಿಕರಿಂದ ಅತಿಶ್ರಮವಾದ ಸೇವೆಯನ್ನು ಮಾಡಿಸಿದನು. ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲೂ ಸುಲಿದು ಹೋಗಿದೆ. ಆದರೆ ಅವನು ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ ಅವನ ಸೈನಿಕರಿಗಾಗಲಿ ಟೈರನಿಂದ ಪ್ರತಿಫಲವೇನೂ ದೊರೆಯಲಿಲ್ಲ.

[19] ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಈಜಿಪ್ಟ್ ದೇಶವನ್ನು ಕೊಡುತ್ತೇನೆ, ಅವನು ಅದರ ಜನಸಮೂಹವನ್ನೂ ಅದರ ಕೊಳ್ಳೆಯನ್ನೂ ಅದರ ಸುಲಿಗೆಯನ್ನೂ ಸೂರೆಮಾಡುವನು. ಇದೇ ಅವನ ದಂಡು ಪಟ್ಟ ಶ್ರಮಕ್ಕೆ ಪ್ರತಿಫಲವಾಗುವುದು.

[20] ಅವನು ಅದಕ್ಕೆ ವಿರುದ್ಧವಾಗಿ ಪಟ್ಟ ಕಷ್ಟಗಳಿಗೋಸ್ಕರ ನಾನು ಅವನಿಗೆ ಈಜಿಪ್ಟ್ ದೇಶವನ್ನು ಕೊಟ್ಟಿದ್ದೇನೆ; ನನಗೋಸ್ಕರ ಸೇವೆಮಾಡಿದ್ದಾರೆ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[21] “ಆ ದಿನದಲ್ಲಿ ನಾನು ಇಸ್ರಾಯೇಲರ ಮನೆತನದವರ ಕೊಂಬನ್ನು ಚಿಗುರಿಸುವೆನು. ಅವರ ಮಧ್ಯದಲ್ಲಿ ನಿನ್ನ ಬಾಯನ್ನು ತೆರೆಯುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವ ದೇವರೆಂದು ತಿಳಿಯುವರು.”

ಯೆಹೆಜ್ಕೇಲನು — Chapters