[1] ಯೆಹೋವ ದೇವರೇ, ನಮಗೆ ಏನು ಸಂಭವಿಸಿದೆ ಎಂದು ಜ್ಞಾಪಕಮಾಡಿಕೊಳ್ಳಿರಿ. ಪರಿಗಣಿಸಿ, ನಮ್ಮ ನಿಂದೆಯನ್ನು ನೋಡಿರಿ.
[2] ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ, ನಮ್ಮ ಮನೆಗಳು ಪರರಿಗೂ ವಶವಾದವು.
[3] ನಾವು ಅನಾಥರು, ತಂದೆ ಇಲ್ಲದವರು, ನಮ್ಮ ತಾಯಂದಿರು ವಿಧವೆಯರು.
[4] ನಾವು ನಮ್ಮ ನೀರನ್ನು ಹಣಕೊಟ್ಟು ಕುಡಿಯಬೇಕಾಗಿದೆ. ನಮ್ಮ ಸೌದೆಯು ನಮಗೇ ಮಾರಲಾಗಿದೆ.
[5] ನಮ್ಮನ್ನು ಹಿಂಬಾಲಿಸುವವರು ನಮ್ಮ ನೆರಳಿನಲ್ಲೇ ಇದ್ದಾರೆ; ನಾವು ದಣಿದಿದ್ದೇವೆ ಮತ್ತು ವಿಶ್ರಾಂತಿಯನ್ನು ಕಾಣುವುದಿಲ್ಲ.
[6] ಸಾಕಷ್ಟು ರೊಟ್ಟಿಯನ್ನು ಪಡೆಯಲು ನಾವು ಈಜಿಪ್ಟ್ ಮತ್ತು ಅಸ್ಸೀರಿಯಕ್ಕೆ ಅಧೀನರಾಗಿದ್ದೇವೆ.
[7] ನಮ್ಮ ತಂದೆಗಳು ಪಾಪಮಾಡಿ ಇಲ್ಲವಾದರು. ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
[8] ಆಳುಗಳು ನಮ್ಮ ಮೇಲೆ ಆಳಿದ್ದಾರೆ. ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವುದಿಲ್ಲ.
[9] ಅಡವಿಯ ಖಡ್ಗದ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
[10] ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
[11] ಅವರು ಚೀಯೋನಿನಲ್ಲಿ ಸ್ತ್ರೀಯರ ಮೇಲೆ ಮತ್ತು ಯೆಹೂದದ ನಗರಗಳಲ್ಲಿ ಕನ್ಯೆಯರ ದೌರ್ಜನ್ಯ ಮಾಡಲಾಗಿದೆ.
[12] ರಾಜಕುಮಾರರ ಕೈಗಳನ್ನು ಗಲ್ಲಿಗೆ ನೇತುಹಾಕಿದ್ದಾರೆ. ಹಿರಿಯರಿಗೆ ಗೌರವವಿಲ್ಲ.
[13] ಅವರು ಯೌವನಸ್ಥರನ್ನು ಅರೆಯುವುದಕ್ಕೆ ತೆಗೆದುಕೊಂಡರು ಮತ್ತು ಹುಡುಗರು ಕಟ್ಟಿಗೆಯ ಕೆಳಗೆ ಬಿದ್ದರು.
[14] ಪಟ್ಟಣದ ದ್ವಾರದಿಂದ ಹಿರಿಯರು ಹೋಗಿದ್ದಾರೆ. ಯುವಜನರು ತಮ್ಮ ಸಂಗೀತವನ್ನು ನಿಲ್ಲಿಸಿದ್ದಾರೆ.
[15] ನಮ್ಮ ಹೃದಯಾನಂದವು ತೀರಿತು. ನಮ್ಮ ನರ್ತನವು ಶೋಕವಾಗಿ ಮಾರ್ಪಟ್ಟಿತು.
[16] ಕಿರೀಟವು ನಮ್ಮ ತಲೆಯ ಮೇಲಿನಿಂದ ಬಿದ್ದುಹೋಯಿತು. ಅಯ್ಯೋ, ನಾವು ಪಾಪಮಾಡಿದ್ದೇವೆ.
[17] ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ. ಏಕೆಂದರೆ ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
[18] ಏಕೆಂದರೆ ಚೀಯೋನ್ ಪರ್ವತವು ಹಾಳಾಗಿರುವುದರಿಂದಲೇ ನರಿಗಳು ಅವುಗಳ ಮೇಲೆ ತಿರುಗಾಡುವುವು.
[19] ಯೆಹೋವ ದೇವರೇ, ನೀವು ಎಂದೆಂದಿಗೂ ಇರುತ್ತೀರಿ. ನಿಮ್ಮ ಸಿಂಹಾಸನವು ತಲತಲಾಂತರಗಳವರೆಗೂ ಇರುವುದು.
[20] ನೀವು ನಮ್ಮನ್ನು ಯಾವಾಗಲೂ ಮರೆಯುವುದೇಕೆ? ಇಷ್ಟುಕಾಲ ನಮ್ಮನ್ನು ಮರೆತಿರುವುದೇಕೆ?
[21] ಯೆಹೋವ ದೇವರೇ, ನಾವು ನಿಮ್ಮ ಕಡೆ ಹಿಂದಿರುಗುವಂತೆ, ನಮ್ಮನ್ನು ನಿಮ್ಮ ಕಡೆಗೆ ಪುನಃ ಸ್ಥಾಪಿಸಿಕೊಳ್ಳಿ. ನಮ್ಮ ದಿನಗಳನ್ನು ಹಿಂದಿನಂತೆಯೇ ನವೀಕರಿಸಿರಿ.
[22] ಯೆಹೋವ ದೇವರೇ, ನೀವು ನಮ್ಮ ಮೇಲೆ ಮಿತಿಮೀರಿ ಸಿಟ್ಟುಗೊಂಡಿರುವಿರೋ? ನಮ್ಮನ್ನು ಸಂಪೂರ್ಣವಾಗಿ ಕೈಬಿಟ್ಟಿರುವಿರೋ?