Skip to content
Opens in a new window
Listen to this chapter • 5:52

[1] ಯೆಹೋವ ದೇವರ ವಾಕ್ಯವು ನನಗೆ ಬಂದಿತು,

[2] “ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ “ಅಯ್ಯೋ ಆ ದಿನ!” ಎಂದು, ಅಳುತ್ತಾ ಹೇಳಿರಿ.

[3] ಏಕೆಂದರೆ ಆ ದಿನವು ಸಮೀಪವಾಯಿತು, ಯೆಹೋವ ದೇವರ ದಿನವು, ಆ ಕಾರ್ಮುಗಿಲಿನ ದಿನವು ಸಮೀಪವಾಯಿತು. ಅದೇ ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವದು.

[4] ಖಡ್ಗವು ಈಜಿಪ್ಟಿಗೆ ವಿರುದ್ಧವಾಗಿ ಬರುವುದು. ಕೂಷ್ ಪಟ್ಟಣವು ಸಂಕಟಪಡುವುದು. ಈಜಿಪ್ಟಿನಲ್ಲಿ ಕೊಲ್ಲಲಾದವರು ಬಿದ್ದಾಗ, ಅವಳ ಸಂಪತ್ತು ಸೂರೆಯಾಗುವುದು. ಅವಳ ಅಡಿಪಾಯಗಳು ಕಿತ್ತುಹೋಗುವವು.

[5] ಕೂಷ್ಯರು, ಪೂಟ್ಯರು, ಲೂದ್ಯರು, ಎಲ್ಲಾ ಅರಬ್ಬಿಯರೂ ಕೂಬ್ಯರೂ ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಅವರ ಸಂಗಡ ಖಡ್ಗದಿಂದ ಹತರಾಗುವರು.

[6] “ ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಈಜಿಪ್ಟಿನ ಸಹಾಯಕರು ಬೀಳುವರು. ಅದರ ಶಕ್ತಿಯ ಮದವು ಇಳಿದುಹೋಗುವುದು. ಅಲ್ಲಿಯ ಜನರು ಮಿಗ್ದೋಲಿನಿಂದ ಸೆವೇನೆಯ ಗೋಪುರದವರೆಗೆ ಖಡ್ಗದಿಂದ ಹತರಾಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

[7] ಆಗ ಅವರು ಹಾಳಾಗಿರುವ ದೇಶಗಳೊಳಗೆ ತಾವೂ ಹಾಳಾಗುವರು. ಹಾಳಾದ ಪಟ್ಟಣಗಳ ಮಧ್ಯದಲ್ಲಿ ಅದರ ಪಟ್ಟಣಗಳು ಹಾಳಾಗಿ ಇರುವುವು.

[8] ನಾನು ಈಜಿಪ್ಟಿನಲ್ಲಿ ಬೆಂಕಿಯಿಟ್ಟ ಮೇಲೆ ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ ಅವರಿಗೆ ನಾನೇ ಯೆಹೋವ ದೇವರೆಂದು ತಿಳಿಯುವುದು.

[9] “ ‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು. ಈಜಿಪ್ಟಿನ ದಿನದಲ್ಲಿ ಆದ ಹಾಗೆ ಅವರ ಮೇಲೆ ದೊಡ್ಡ ದುಃಖ ಉಂಟಾಗುವುದು, ಏಕೆಂದರೆ ಇಗೋ, ಆ ದಿನ ಬರುವುದು ನಿಶ್ಚಯ.

[10] “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ : “ ‘ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಈಜಿಪ್ಟಿನ ಜನಸಮೂಹವನ್ನು ಕೊನೆಗಾಣಿಸುವೆನು.

[11] ಆ ದೇಶವನ್ನು ನಾಶಪಡಿಸುವುದಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು. ಅವರು ಈಜಿಪ್ಟಿಗೆ ವಿರೋಧವಾಗಿ ಖಡ್ಗ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.

[12] ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ದೇಶವನ್ನೂ ಅದರಲ್ಲಿನ ಸಮಸ್ತವನ್ನೂ ವಿದೇಶಿಯರ ಕೈಯಿಂದ ನಾಶಮಾಡಿಸುವೆನು. ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ.

[13] “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನಾನು ಮೂರ್ತಿಗಳನ್ನು ನಾಶಮಾಡುವೆನು. ಮತ್ತು ನೋಫಿನ ವಿಗ್ರಹಗಳನ್ನು ಕೊನೆಗೊಳಿಸುವೆನು. ಈಜಿಪ್ಟ್ ದೇಶದ ರಾಜಕುಮಾರ ಇನ್ನು ಮುಂದೆ ಇರುವುದಿಲ್ಲ, ನಾನು ಈಜಿಪ್ಟ್ ದೇಶದಲ್ಲಿ ಭಯವನ್ನು ಉಂಟುಮಾಡುವೆನು.

[14] ನಾನು ಪತ್ರೋಸನ್ನು ನಾಶಮಾಡಿ, ಚೋವನ್ ಪಟ್ಟಣಕ್ಕೆ ಬೆಂಕಿಯಿಡುವೆನು. ತೆಬೆಸ್ ಪಟ್ಟಣವನ್ನು ದಂಡಿಸುವೆನು.

[15] ಈಜಿಪ್ಟಿಗೆ ರಕ್ಷಣೆಯ ಕೋಟೆಯಾದ ಪೆಲೂಸಿಯಮ್ ಪಟ್ಟಣದ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ತೆಬೆಸಿನ ನಿವಾಸಿಗಳನ್ನೆಲ್ಲಾ ಕಡಿದುಬಿಡುವೆನು.

[16] ನಾನು ಈಜಿಪ್ಟಿಗೆ ಕಿಚ್ಚನ್ನು ಹಚ್ಚಿಸಲು ಪೆಲೂಸಿಯಮ್ ಪ್ರಾಣಸಂಕಟ ಪಡುವುದು. ತೆಬೆಸವು ಬಿರುಗಾಳಿಯಿಂದ ತೆಗೆದುಕೊಳ್ಳಲಾಗುವುದು, ನೋಫಿನ ಮೇಲೆ ನಿರಂತರವಾಗಿ ಇಕ್ಕಟ್ಟು ಇರುವುದು.

[17] ಓನಿನ ಮತ್ತು ಪಿಬೇಸೆತಿನ ಯೌವನಸ್ಥರು ಖಡ್ಗದಿಂದ ಸಾಯುವರು. ಈ ಪಟ್ಟಣಗಳ ನಿವಾಸಿಗಳು ತಾವಾಗಿಯೇ ಸೆರೆಯಾಗಿ ಹೋಗುವುವು.

[18] ನಾನು ಈಜಿಪ್ಟಿನ ನೊಗಗಳನ್ನು ಮುರಿಯುವಾಗ ತಹಪನೇಸಿನಲ್ಲಿ ಹಗಲು ಕತ್ತಲಾಗುವುದು. ಅದರ ಶಕ್ತಿಯ ಮದವು ಅಡಗಿಹೋಗುವುದು. ಅದನ್ನು ಮೇಘವು ಮುಚ್ಚುವುದು. ಅದರ ಪುತ್ರಿಯರು ಸೆರೆಗೆ ಹೋಗುವರು.

[19] ಹೀಗೆ ನಾನು ಈಜಿಪ್ಟನ್ನು ದಂಡಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”

[20] ಇದಲ್ಲದೆ ಹನ್ನೊಂದನೆಯ ವರ್ಷದ ಮೊದಲನೆಯ ತಿಂಗಳಿನ, ಏಳನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ,

[21] “ಮನುಷ್ಯಪುತ್ರನೇ, ನಾನು ಈಜಿಪ್ಟಿನ ಅರಸನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ. ಇಗೋ, ಆ ದೇಶವನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ.

[22] ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈಜಿಪ್ಟ್ ದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿಯುತ್ತೇನೆ. ಅವನ ಕೈಯಿಂದ ಖಡ್ಗವನ್ನು ಬೀಳಿಸುತ್ತೇನೆ.

[23] ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.

[24] ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು.

[25] ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುತ್ತೇನೆ, ಆದರೆ ಫರೋಹನ ಕೈಗಳು ಬಲಹೀನವಾಗುವುವು. ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನ ಕೈಗೆ ಕೊಡುವೆನು. ಅವನು ಅದನ್ನು ಈಜಿಪ್ಟಿನ ವಿರೋಧವಾಗಿ ಪ್ರಯೋಗಿಸುವನು. ಆಗ ಅವರು ನಾನೇ ಯೆಹೋವ ದೇವರು ಎಂದು ತಿಳಿದುಕೊಳ್ಳುವರು.

[26] ನಾನು ಈಜಿಪ್ಟಿನವರನ್ನು ಜನಾಂಗಗಳೊಗೆ ಚದುರಿಸಿ ದೇಶಗಳಲ್ಲಿ ಹರಡಿಸುತ್ತೇನೆ; ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”

ಯೆಹೆಜ್ಕೇಲನು — Chapters