[1] ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಪೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಖ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಿಯಾಗಿದ್ದಾಳೆ;
[2] ನೀವು ಆಕೆಯನ್ನು ದೇವಜನರಿಗೆ ತಕ್ಕ ಹಾಗೆ ಕರ್ತನ ಶಿಷ್ಯಳೆಂದು ಸೇರಿಸಿಕೊಂಡು, ಆಕೆಗೆ ಯಾವ ವಿಷಯದಲ್ಲಿ ಅಗತ್ಯವಿದೆಯೋ ಅದರಲ್ಲಿ ಸಹಾಯವನ್ನು ಮಾಡಿರಿ. ಆಕೆಯು ನನಗೂ ಮತ್ತು ಅನೇಕರಿಗೂ ಸಹಾಯಮಾಡಿದವಳು.
[3] ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಿಲ್ಲಳಿಗೂ ಮತ್ತು ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
[4] ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿಕೊಂಡಿದ್ದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.
[5] ಅವರ ಮನೆಯಲ್ಲಿ ಸೇರಿಬರುವ ಸಭೆಗೆ ಸಹ ನನ್ನ ವಂದನೆಯನ್ನು ತಿಳಿಸಿರಿ. ಆಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ನನ್ನ ಪ್ರಿಯನಾದ ಎಫೈನೆತನಿಗೆ ವಂದನೆ.
[6] ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ.
[7] ನನ್ನ ಸ್ವಜನರೂ ಹಾಗೂ ಜೊತೆ ಸೆರೆಯವರೂ ಆಗಿರುವ ಅಂದ್ರೋನಿಕನಿಗೂ, ಯೂನ್ಯನಿಗೂ ವಂದನೆ; ಅವರು ಅಪೊಸ್ತಲರಲ್ಲಿ ಪ್ರಸಿದ್ಧರಾಗಿದ್ದಾರಲ್ಲದೆ, ನನಗಿಂತ ಮೊದಲೇ ಕ್ರಿಸ್ತನನ್ನು ನಂಬಿದವರೂ ಆಗಿದ್ದರು.
[8] ಕರ್ತನಲ್ಲಿ ನನ್ನ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆ.
[9] ಕ್ರಿಸ್ತನ ಸೇವೆಯಲ್ಲಿ ನಮ್ಮ ಜೊತೆ ಕೆಲಸದವನಾದ ಉರ್ಬಾನನಿಗೂ, ನನ್ನ ಪ್ರಿಯನಾದ ಸ್ತಾಖುನಿಗೂ ವಂದನೆಗಳು.
[10] ಕ್ರಿಸ್ತನ ಸೇವೆಯಲ್ಲಿ ಮೆಚ್ಚಿಕೆಗೆಪಾತ್ರನಾದ ಅಪೆಲ್ಲನಿಗೆ ವಂದನೆ. ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು.
[11] ನನ್ನ ಸಂಬಂಧಿಕನಾದ ಹೆರೂಡಿಯೋನನಿಗೆ ವಂದನೆ. ನಾರ್ಕಿಸ್ಸನ ಮನೆಯವರೊಳಗೆ ಕ್ರಿಸ್ತನನ್ನು ನಂಬಿದವರಿಗೆ ವಂದನೆಗಳು.
[12] ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ, ತ್ರುಫೋಸಳಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ.
[13] ಕರ್ತನಲ್ಲಿ ಆರಿಸಿಕೊಳ್ಳಲ್ಪಟ್ಟವನಾದ ರೂಫನಿಗೂ, ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು.
[14] ಅಸುಂಕ್ರಿತನಿಗೂ, ಪ್ಲೆಗೋನನಿಗೂ, ಹೆರ್ಮೇಯನಿಗೂ, ಪತ್ರೋಬನಿಗೂ, ಹೆರ್ಮಾನನಿಗೂ, ಅವರೊಂದಿಗಿರುವ ಸಹೋದರರಿಗೂ ವಂದನೆಗಳು.
[15] ಫಿಲೊಲೊಗನಿಗೂ, ಯೂಲ್ಯಳಿಗೂ, ನೇರ್ಯನಿಗೂ, ಅವನ ತಂಗಿಗೂ, ಒಲುಂಪನಿಗೂ, ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು.
[16] ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳಲ್ಲಿರುವವರೆಲ್ಲರೂ ನಿಮ್ಮನ್ನು ವಂದಿಸುತ್ತಿದ್ದಾರೆ.
[17] ಪ್ರಿಯರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ, ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಸಿ ಅವರನ್ನು ಬಿಟ್ಟು ದೂರ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
[18] ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಮತ್ತು ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
[19] ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದ್ದರಿಂದ ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ. ನೀವು ಒಳ್ಳೆಯದನ್ನು ಮಾಡುವುದರಲ್ಲಿ ಜಾಣರೂ ಮತ್ತು ಕೆಟ್ಟತನದ ವಿಷಯದಲ್ಲಿ ಮೂರ್ಖರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ.
[20] ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿದು ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.
[21] ನನ್ನ ಜೊತೆಕೆಲಸದವನಾದ ತಿಮೊಥೆಯನೂ, ನನ್ನ ಸಂಬಂಧಿಕರಾದ ಲೂಕ್ಯನೂ, ಯಾಸೋನನೂ ಮತ್ತು ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ
[22] ಈ ಪತ್ರಿಕೆಯನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ.
[23] ನನಗೂ ಮತ್ತು ಸಮಸ್ತ ಸಭೆಗೂ ಅತಿಥಿಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ, ಸಹೋದರನಾದ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
[24] ನಮ್ಮ ಕರ್ತನಾದ ಯೇಸುಕ್ರಿಸ್ತನ ಕೃಪೆಯ ನಿಮ್ಮೊಂದಿಗಿರಲಿ. ಆಮೆನ್.
[25] ಅನಾದಿಯಿಂದ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಶಾಸ್ತ್ರಗಳ ಮೂಲಕ ಅನ್ಯಜನರೆಲ್ಲರಿಗೂ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವುದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪೂರ್ವಕಾಲಗಳಲ್ಲಿ ಮರೆಯಾಗಿದ್ದು ಈಗ ಬೆಳಕಿಗೆ ಬಂದಿರುವಂತಹದ್ದೂ, ಈ ಮರ್ಮಕ್ಕೆ ಅನುಸಾರ ಎಂದರೆ ಯೇಸು ಕ್ರಿಸ್ತನ ವಿಷಯವಾದಂಥ ಹಾಗೂ ನಾನು ಸಾರುವಂಥ ಸುವಾರ್ತೆಗನುಸಾರವಾಗಿ ನಿಮ್ಮನ್ನು ಸ್ಥಿರಪಡಿಸುವುದಕ್ಕೆ ಶಕ್ತನಾಗಿರುವ,
[27] ಜ್ಞಾನನಿಧಿಯಾದ ಒಬ್ಬನೇ ದೇವರಿಗೆ ಯೇಸು ಕ್ರಿಸ್ತನ ಮೂಲಕ ಯುಗಯುಗಾಂತರಗಳಲ್ಲಿಯೂ ಸ್ತೋತ್ರವಾಗಲಿ. ಆಮೆನ್.