Skip to content
Opens in a new window
Listen to this chapter • 4:11

[1] ನಂಬಿಕೆಯಲ್ಲಿ ದೃಢವಿಲ್ಲದವರನ್ನು ಸೇರಿಸಿಕೊಳ್ಳಿರಿ, ಆದರೆ ಸಂದೇಹಾಸ್ಪದವಾದ ವಿಷಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ.

[2] ಒಬ್ಬನು ಯಾವುದನ್ನಾದರೂ ತಿನ್ನಬಹುದೆಂದು ನಂಬುತ್ತಾನೆ; ನಂಬಿಕೆಯಲ್ಲಿ ದೃಢವಿಲ್ಲದವನು ಕಾಯಿಪಲ್ಯಗಳನ್ನು ಮಾತ್ರ ತಿನ್ನುತ್ತಾನೆ.

[3] ತಿನ್ನುವವನು ತಿನ್ನದವನನ್ನು ಹೀನೈಸಬಾರದು; ತಿನ್ನದವನು ತಿನ್ನುವವನನ್ನು ದೋಷಿಯೆಂದು ಎಣಿಸಬಾರದು. ದೇವರು ಇಬ್ಬರನ್ನೂ ಸೇರಿಸಿಕೊಂಡಿದ್ದಾನಲ್ಲಾ?

[4] ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವುದಕ್ಕೆ ನೀನು ಯಾರು? ಅವನು ನಿರ್ದೋಷಿಯಾಗಿ ನಿಂತರೂ, ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಅವನು ನಿರ್ದೊಷಿಯಾಗಿ ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವುದಕ್ಕೆ ಕರ್ತನು ಶಕ್ತನಾಗಿದ್ದಾನೆ.

[5] ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ವಿಶೇಷವೆಂದೆಣಿಸುತ್ತಾನೆ; ಮತ್ತೊಬ್ಬನು ಎಲ್ಲಾ ದಿನಗಳನ್ನೂ ವಿಶೇಷವೆಂದೆಣಿಸುತ್ತಾನೆ; ಪ್ರತಿಯೊಬ್ಬನು ತನ್ನ ತನ್ನ ಮನಸ್ಸಿನಲ್ಲಿ ಚಂಚಲಪಡದೆ ದೃಢವಾಗಿರಲಿ.

[6] ದಿನವನ್ನು ಆಚರಿಸುವವನು ಕರ್ತನಿಗಾಗಿ ಅದನ್ನು ಆಚರಿಸುತ್ತಾನೆ. ತಿನ್ನುವವನು ಕರ್ತನಿಗಾಗಿ ತಿನ್ನುತ್ತಾನೆ; ಅವನು ದೇವರನ್ನು ಸ್ತುತಿಸುತ್ತಾನಲ್ಲಾ. ತಿನ್ನದವನು ಸಹ ಕರ್ತನಿಗಾಗಿಯೇ ತಿನ್ನದೆ ದೇವರನ್ನು ಸ್ತುತಿಸುತ್ತಾನೆ.

[7] ನಮ್ಮಲ್ಲಿ ಯಾರು ತನಗಾಗಿ ಬದುಕುವುದು ಇಲ್ಲ. ತನಗಾಗಿ ಸಾಯುವುದೂ ಇಲ್ಲ,

[8] ನಾವು ಬದುಕಿದರೆ ಕರ್ತನಿಗಾಗಿ ಬದುಕುತ್ತೇವೆ; ಸತ್ತರೆ ಕರ್ತನಿಗಾಗಿ ಸಾಯುತ್ತೇವೆ; ಬದುಕಿದರೂ ಸತ್ತರೂ ನಾವು ಕರ್ತನವರೇ.

[9] ಯಾಕೆಂದರೆ ಸತ್ತವರಿಗೂ, ಜೀವಿಸುವವರಿಗೂ ಒಡೆಯನಾಗಬೇಕಂತಲೇ ಕ್ರಿಸ್ತನು ಸತ್ತು ಜೀವಿತನಾದನು.

[10] ತಿನ್ನದವನೇ, ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವುದೇನು? ತಿನ್ನುವವನೇ, ನಿನ್ನ ಸಹೋದರನನ್ನು ನೀನು ಹೀನೈಸುವುದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕು.

[11] ಪವಿತ್ರ ಶಾಸ್ತ್ರದಲ್ಲಿ: “ನಾನು ಜೀವಿಸುವುದರಿಂದ ಪ್ರತಿಯೊಬ್ಬನೂ ನನ್ನ ಮುಂದೆ ಮೊಣಕಾಲೂರುವನು. ಪ್ರತಿಯೊಂದು ನಾಲಿಗೆಯೂ ನನ್ನನ್ನು ದೇವರೆಂದು ಆರಿಕೆಮಾಡುವರು ಎಂದು ಕರ್ತನು ಹೇಳುತ್ತಾನೆ” ಎಂದು ಬರೆದಿದೆ.

[12] ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.

[13] ಆದಕಾರಣ, ಇನ್ನು ಮೇಲೆ ಒಬ್ಬರ ವಿಷಯದಲ್ಲೊಬ್ಬರು ತೀರ್ಪುಮಾಡದೆ ಇರೋಣ. ಅದಕ್ಕೆ ಬದಲಾಗಿ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ, ಅಡೆತಡೆಯನ್ನಾಗಲಿ ಹಾಕಬಾರದೆಂದು ತೀರ್ಮಾನಿಸಿಕೊಳ್ಳಿರಿ.

[14] ಯಾವ ಪದಾರ್ಥವೂ ಸ್ವತಃ ಅಶುದ್ಧವಾದದ್ದಲ್ಲವೆಂದು ಕರ್ತನಾದ ಯೇಸುವಿನಲ್ಲಿದ್ದುಕೊಂಡು ದೃಢವಾಗಿ ನಂಬಿದ್ದೇನೆ; ಆದರೆ ಯಾವುದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವಾಗಿರಲಿ.

[15] ನೀನು ತೆಗೆದುಕೊಳ್ಳುವ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾದರೆ ನೀನು ಪ್ರೀತಿಗೆ ತಕ್ಕಂತೆ ನಡೆಯುವವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಪ್ರಾಣಕೊಟ್ಟನೋ ಅವನನ್ನು ನಿನಗೆ ಇಷ್ಟವಾದ ಆಹಾರದ ನಿಮಿತ್ತ ಕೆಡಿಸಬಾರದು.

[16] ನಿಮಗಿರುವ ಉತ್ತಮ ಕ್ರಮಗಳು ದೂಷಣೆಗೆ ಆಸ್ಪದವಾಗಬಾರದು.

[17] ಯಾಕೆಂದರೆ ತಿನ್ನುವುದೂ, ಕುಡಿಯುವುದೂ ದೇವರ ರಾಜ್ಯವಲ್ಲ ನೀತಿಯೂ, ಸಮಾಧಾನವೂ, ಪವಿತ್ರಾತ್ಮನಿಂದಾಗುವ ಆನಂದವೂ ಆಗಿದೆ.

[18] ಈ ಪ್ರಕಾರವಾಗಿ ಕ್ರಿಸ್ತನ ಸೇವೆಯನ್ನು ಮಾಡುವವನು ದೇವರನ್ನು ಮೆಚ್ಚಿಸುವವನೂ, ಮನುಷ್ಯರಿಗೆ ಒಳ್ಳೆಯದನ್ನು ಮಾಡುವವನೂ ಆಗಿರಲಿ.

[19] ಆದ್ದರಿಂದ ನಾವು ಸಮಾಧಾನಕ್ಕೂ, ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವಂಥವುಗಳನ್ನು ಸಾಧಿಸಿಕೊಳ್ಳೋಣ.

[20] ದೇವರು ಕಟ್ಟಿದ್ದನ್ನು ನೀನು ಆಹಾರದ ನಿಮಿತ್ತವಾಗಿ ಕೆಡವಬೇಡ. ಎಲ್ಲಾ ಪದಾರ್ಥಗಳೂ ಶುದ್ಧವೇ; ಆದರೆ ತಿಂದು ಮತ್ತೊಬ್ಬರಿಗೆ ವಿಘ್ನವನ್ನುಂಟುಮಾಡುವುದು ಕೆಟ್ಟದ್ದು.

[21] ಮಾಂಸ ತಿನ್ನುವುದನ್ನಾಗಲಿ, ದ್ರಾಕ್ಷಾರಸ ಕುಡಿಯುವುದಾಗಲಿ, ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವುದನ್ನಾಗಲಿ ಬಿಟ್ಟುಬಿಡುವುದೇ ಒಳ್ಳೆಯದು.

[22] ನಿನಗಿರುವ ನಂಬಿಕೆಯು ದೇವರಿಗೆ ಮಾತ್ರ ಗೋಚರವಾಗಿ ಅದು ನಿನ್ನ ಮಟ್ಟಿಗೆ ಮಾತ್ರ ಇರಲಿ. ತಾನು ಒಪ್ಪಿದ ವಿಷಯದಲ್ಲಿ ಸಂಶಯ ಪಡದವನೇ ಧನ್ಯನು.

[23] ಸಂಶಯಪಟ್ಟು ಊಟಮಾಡುವವನು ಸಂಶಯದಿಂದ ತಿನ್ನುವ ಕಾರಣ ತನ್ನ ಊಟದ ವಿಷಯದಲ್ಲಿ ನಂಬಿಕೆಯಿಲ್ಲದೆ ದೋಷಿಯಾಗಿದ್ದಾನೆ. ನಂಬಿಕೆಯ ಆಧಾರವಿಲ್ಲದಿರುವುದೆಲ್ಲವೂ ಪಾಪವೇ ಆಗಿದೆ.

ರೋಮಾಪುರದವರಿಗೆ — Chapters