Skip to content
Opens in a new window
Listen to this chapter • 6:31

[1] ಯೇಸು ಕ್ರಿಸ್ತನ ದಾಸನೂ, ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟವನೂ, ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಿಸಲ್ಪಟ್ಟವನೂ ಆಗಿರುವ ಪೌಲನು,

[2] ರೋಮಾಪುರದಲ್ಲಿ ದೇವರಿಗೆ ಪ್ರಿಯರೂ ಹಾಗು ದೇವಜನರಾಗುವುದಕ್ಕೆ ಕರೆಯಲ್ಪಟ್ಟವರೂ ಆಗಿರುವವರೆಲ್ಲರಿಗೆ ಬರೆಯುವ ಪತ್ರ;

[3] ನಮ್ಮ ತಂದೆಯಾಗಿರುವ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.

[4] ದೇವರು ಮುಂಚಿತವಾಗಿ ಪವಿತ್ರ ಗ್ರಂಥಗಳಲ್ಲಿ ತನ್ನ ಪ್ರವಾದಿಗಳ ಮೂಲಕ ತಿಳಿಸಲ್ಪಟ್ಟ ವಾಗ್ದಾನ ಮಾಡಿದ ಈ ಸುವಾರ್ತೆಯು ದೇವರ ಮಗನೂ ನಮ್ಮ ಕರ್ತನೂ ಆಗಿರುವ ಯೇಸು ಕ್ರಿಸ್ತನ ಕುರಿತಾದದ್ದು.

[5] ಆತನು ವಂಶಕ್ರಮದಿಂದ ದಾವೀದನ ಸಂತಾನದಲ್ಲಿ ಹುಟ್ಟಿದವನೂ ಪವಿತ್ರವಾದ ಆತ್ಮನ ಶಕ್ತಿಗನುಸಾರವಾಗಿ ಸತ್ತಮೇಲೆ ಜೀವಿತನಾಗಿ ಎದ್ದು ಬಂದು ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ.

[6] ಯೇಸು ಕ್ರಿಸ್ತನಲ್ಲಿ ಸೇರುವುದಕ್ಕೆ ಕರೆಯಲ್ಪಟ್ಟ ನೀವೂ ಸಹ ಆ ಅನ್ಯಜನರೊಳಗಿನವರಾದ್ದರಿಂದ ನಿಮಗೆ,

[7] ಆತನ ಹೆಸರಿನ ಪ್ರಸಿದ್ಧಿಗಾಗಿ ನಂಬಿಕೆಯೆಂಬ ವಿಧೇಯತ್ವವು ಉಂಟಾಗುವುದಕ್ಕೋಸ್ಕರ ನಾವು ಆತನ ಮೂಲಕವಾಗಿ ಕೃಪೆಯನ್ನೂ ಮತ್ತು ಅಪೊಸ್ತಲತನವನ್ನೂ ಹೊಂದಿದೆವು.

[8] ಮೊದಲು ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ.

[9] ನಾನು ಪ್ರಾರ್ಥನೆ ಮಾಡುವಾಗೆಲ್ಲಾ ಎಡೆಬಿಡದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತೇನೆ. ದೇವರ ಮಗನ ಸುವಾರ್ತೆಯನ್ನು ಸಾರುತ್ತಾ ದೈವಸೇವೆಯನ್ನು ಮನಃಪೂರ್ವಕವಾಗಿ ಮಾಡಿಕೊಂಡು ಬರುತ್ತಿರುವ ದೇವರೇ ನನಗೆ ಸಾಕ್ಷಿ.

[10] ದೈವಚಿತ್ತದಿಂದ ನಾನು ನಿಮ್ಮಲ್ಲಿಗೆ ಬರಲು ಈಗಲಾದರೂ ಅನುಕೂಲವಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.

[11] ನನ್ನ ಮುಖಾಂತರ ನಿಮಗೆ ಆತ್ಮೀಕ ವರವೇನಾದರೂ ದೊರಕಿ ನೀವು ದೃಢವಾಗುವುದಕ್ಕೋಸ್ಕರ ಅಂದರೆ ನಾನು ನಿಮ್ಮ ನಂಬಿಕೆಯಿಂದ ಮತ್ತು ನೀವು ನನ್ನ ನಂಬಿಕೆಯಿಂದ ಸಹಾಯ ಹೊಂದಿ ಈ ಪ್ರಕಾರ ನಿಮ್ಮೊಂದಿಗೆ ನಾನು ಧೈರ್ಯಗೊಳ್ಳುವುದಕ್ಕೋಸ್ಕರ ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.

[13] ಪ್ರಿಯರೇ, ನನ್ನ ಕೆಲಸವು ಇತರ ಅನ್ಯಜನಗಳಲ್ಲಿ ಸಫಲವಾದಂತೆ ನಿಮ್ಮಲ್ಲಿಯೂ ಸಫಲವಾದೀತೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಮನಸ್ಸು ಮಾಡಿಕೊಂಡಿದ್ದಾಗ್ಯೂ ಇಂದಿನವರೆಗೂ ಅಡ್ಡಿಯಾಯಿತೆಂಬುದು ನೀವು ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ.

[14] ಗ್ರೀಕರಿಗೂ ಇತರ ಜನಗಳಿಗೂ, ಜ್ಞಾನಿಗಳಿಗೂ, ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲಿದೆ.

[15] ಹೀಗಿರುವುದರಿಂದ ರೋಮಾಪುರದಲ್ಲಿರುವ ನಿಮಗೆ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನಂತೂ ಸಿದ್ಧವಾಗಿದ್ದೇನೆ.

[16] ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ಮೊದಲು ಯೆಹೂದ್ಯರಿಗೆ ಆ ಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವ ದೇವರ ಬಲಸ್ವರೂಪವಾಗಿದೆ.

[17] ಹೇಗೆಂದರೆ ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ತೋರಿಬರುತ್ತದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನೆಂಬ” ಶಾಸ್ತ್ರೋಕ್ತಿಯ ಪ್ರಕಾರ ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ವೃದ್ಧಿಪಡಿಸುವಂಥದಾಗಿದೆ.

[18] ಅನೀತಿಯಿಂದ ಸತ್ಯವನ್ನು ಅಡ್ಡಿಮಾಡುವವರಾದ ದುಷ್ಟಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ, ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ಇಳಿದುಬರುತ್ತದೆ,

[19] ಯಾಕೆಂದರೆ ದೇವರ ವಿಷಯವಾಗಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿ ತಿಳಿದಿದೆ. ಅದನ್ನು ಅವರಿಗೆ ದೇವರೇ ಸ್ಪಷ್ಟವಾಗಿ ತಿಳಿಸಿರುವನು.

[20] ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯೂ, ದೈವತ್ವವೂ, ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ. ಹೀಗಿರುವುದರಿಂದ ಅವರು ನೆಪವನ್ನು ಹೇಳಲು ಆಗುವುದಿಲ್ಲ.

[21] ಯಾಕೆಂದರೆ ದೇವರ ವಿಷಯವಾಗಿ ಅವರಿಗೆ ತಿಳಿವಳಿಕೆಯಿದ್ದರೂ ಅವರು ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ. ಆತನ ಉಪಕಾರಗಳನ್ನು ನೆನಸಿ ಆತನನ್ನು ಸ್ತುತಿಸಲಿಲ್ಲ. ಅವರು ಎಷ್ಟೇ ವಿಚಾರ ಮಾಡಿದರೂ ಫಲ ಕಾಣಲಿಲ್ಲ. ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಗಿಬಿಟ್ಟಿದೆ.

[22] ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚರಾದರು.

[23] ಲಯವಿಲ್ಲದ ದೇವರ ಮಹಿಮೆಯನ್ನು ಅವರು ನಾಶವಾಗುವ ಮನುಷ್ಯ, ಪಶು, ಪಕ್ಷಿ, ಸರಿಸೃಪಗಳು ಇತ್ಯಾದಿಗಳ ರೂಪಗಳೊಂದಿಗೆ ಬದಲಿಸಿಕೊಂಡರು.

[24] ಆದಕಾರಣ ಅವರು ಮನಸ್ಸಿನ ದುರಾಶೆಗಳಂತೆ ನಡೆದು ತಮ್ಮ ತಮ್ಮ ದೇಹಗಳನ್ನು ತಮ್ಮೊಳಗೆ ಮಾನಹೀನಮಾಡಿಕೊಳ್ಳಲಿ ಎಂದು ದೇವರು ಅವರನ್ನು ಹೊಲಸಾದ ಕೆಟ್ಟ ನಡತೆಗಳಿಗೆ ಒಪ್ಪಿಸಿಬಿಟ್ಟನು.

[25] ಅವರು ಸತ್ಯ ದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿ ಕರ್ತನನ್ನು ಆರಾಧಿಸದೆ ಸೃಷ್ಟಿಯನ್ನೇ ಪೂಜಿಸಿ ಆರಾಧಿಸುವವರಾದರು. ಆದರೆ, ಆತನೇ ನಿರಂತರ ಸ್ತುತಿ ಹೊಂದತಕ್ಕವನು, ಆಮೆನ್.

[26] ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗಳಿಗೆ ಒಪ್ಪಿಸಿಬಿಟ್ಟನು. ಅವರ ಹೆಂಗಸರು ಸ್ವಾಭಾವಿಕವಾದ ಭೋಗವನ್ನು ತೊರೆದು ಸ್ವಭಾವಕ್ಕೆ ವಿರುದ್ಧವಾದ ಕಾಮಕೃತ್ಯಗಳನ್ನು ಮಾಡಿದರು.

[27] ಅದರಂತೆ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಸಂಗವನ್ನು ತೊರೆದು ತಮ್ಮತಮ್ಮಲಿಯೇ ಕಾಮೋದ್ರೇಕಗೊಂಡರು; ಸಲಿಂಗಕಾಮಿಗಳಾದರು; ಲಜ್ಜಾಹೀನರಾಗಿ ವರ್ತಿಸಿದರು; ತಮ್ಮ ದುರ್ನಡತೆಗೆ ತಕ್ಕ ಶಿಕ್ಷೆಯನ್ನು ತಮ್ಮ ಮೇಲೆ ಬರಮಾಡಿಕೊಂಡರು.

[28] ಇದಲ್ಲದೆ ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ಮಾಡಬಾರದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟನು.

[29] ಹೇಗೆಂದರೆ ಅವರು ಸಕಲವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ ದುಷ್ಟತ್ವಗಳಿಂದಲೂ ಹೊಟ್ಟೆಕಿಚ್ಚು, ಕೊಲೆ, ಜಗಳ, ಮೋಸ, ಹಗೆತನಗಳಿಂದ ತುಂಬಿದವರಾದರು.

[30] ಅವರು ಸುಳ್ಳುಸುದ್ದಿ ಹಬ್ಬಿಸುವವರೂ, ಚಾಡಿಹೇಳುವವರೂ, ದೇವರನ್ನು ದ್ವೇಷಿಸುವವರೂ, ಸೊಕ್ಕಿನವರೂ, ಅಹಂಕಾರಿಗಳೂ, ಬಡಾಯಿಕೊಚ್ಚುವವರೂ, ಕೇಡನ್ನು ಕಲ್ಪಿಸುವವರೂ,

[31] ತಂದೆತಾಯಿಗಳ ಮಾತನ್ನು ಕೇಳದವರೂ ವಿವೇಕವಿಲ್ಲದವರೂ, ಮಾತಿಗೆ ತಪ್ಪುವವರೂ, ಮಮತೆಯಿಲ್ಲದವರೂ, ಕರುಣೆಯಿಲ್ಲದವರೂ ಆದರು.

[32] ಇಂಥವುಗಳನ್ನು ನಡಿಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೇವವಿಧಿಯು ಅವರಿಗೆ ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಮಾಡುವವರನ್ನೂ ಹೊಗಳುತ್ತಾ ಪ್ರೇರೇಪಿಸುತ್ತಾರೆ.

ರೋಮಾಪುರದವರಿಗೆ — Chapters