[1] ಸಹೋದರರೇ, ಧರ್ಮಶಾಸ್ತ್ರವನ್ನು ತಿಳಿದವರೊಂದಿಗೆ ನಾನು ಮಾತನಾಡುತ್ತಿದ್ದೇನೆ, ಒಬ್ಬ ಮನುಷ್ಯನು ಜೀವದಿಂದಿರುವವರೆಗೆ ಮಾತ್ರ ಅವನ ಮೇಲೆ ಧರ್ಮಶಾಸ್ತ್ರವು ನಿಯಂತ್ರಣ ಸಾಧಿಸುತ್ತದೆಂಬುದು ನಿಮಗೆ ಗೊತ್ತಿಲ್ಲವೇ?
[2] ಇದಕ್ಕೆ ದೃಷ್ಟಾಂತ, ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು. ಗಂಡನು ಸತ್ತರೆ ಮದುವೆಯ ನಿಯಮದಿಂದ ಅವಳು ಬಿಡುಗಡೆಯಾಗುತ್ತಾಳೆ.
[3] ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಸೇರಿದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಗಂಡನು ಸತ್ತ ಮೇಲೆ ಆಕೆ ಆ ನಿಯಮದಿಂದ ಬಿಡುಗಡೆಯಾದ್ದರಿಂದ, ಆಕೆ ಮತ್ತೊಬ್ಬ ಗಂಡನನ್ನು ಮದುವೆ ಮಾಡಿಕೊಂಡರೂ ವ್ಯಭಿಚಾರಿಣಿ ಎಂದೆನಿಸಿಕೊಳ್ಳುವುದಿಲ್ಲ.
[4] ಹಾಗೆಯೇ ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತಿದ್ದೀರಿ. ದೇವರಿಗೆ ಫಲಕೊಡುವುದಕ್ಕಾಗಿ ಮತ್ತೊಬ್ಬನನ್ನು ಅಂದರೆ ಸತ್ತು ಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿದ್ದೀರಿ.
[5] ನಾವು ಶರೀರಾಧೀನ ಸ್ವಭಾವವನ್ನು ಅನುಸರಿಸುತ್ತಿದ್ದಾಗ ಧರ್ಮಶಾಸ್ತ್ರದಿಂದಲೇ ಪ್ರೇರಿತವಾದ ಪಾಪಾದಾಶೆಗಳು ನಮ್ಮ ಅಂಗಗಳಲ್ಲಿ ಸಕ್ರಿಯವಾಗಿ ಮರಣಕ್ಕೆ ಫಲವನ್ನು ಹುಟ್ಟಿಸುತ್ತಿದ್ದವು.
[6] ಈಗಲಾದರೋ ನಮ್ಮನ್ನು ಬಂಧಿಸಿಟ್ಟಿದ್ದ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತವರಾದ ಕಾರಣ ಆ ಧರ್ಮಶಾಸ್ತ್ರದಿಂದ ಬಿಡುಗಡೆಹೊಂದಿದ್ದೇವೆ. ಹೀಗಿರಲಾಗಿ ಬರಹರೂಪದ ಹಿಂದಿನ ಶಾಸ್ತ್ರದ ರೀತಿಯಲ್ಲಿ ನಾವು ದೇವರಿಗೆ ಸೇವೆ ಸಲ್ಲಿಸದೆ, ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ಆತನ ಸೇವೆ ಮಾಡುವವರಾಗಿದ್ದೇವೆ.
[7] ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರವು ಪಾಪಸ್ವರೂಪವೋ? ಎಂದಿಗೂ ಅಲ್ಲ. ಧರ್ಮಶಾಸ್ತ್ರವಿಲ್ಲದಿದ್ದರೆ ಪಾಪವೆಂದರೆ ಏನೆಂದು ನನಗೆ ಗೊತ್ತಾಗುತ್ತಿರಲಿಲ್ಲ. ದೃಷ್ಟಾಂತವಾಗಿ “ದುರಾಶೆ ಪಾಪವೆಂದು” ಎಂದು ಧರ್ಮಶಾಸ್ತ್ರವು ಹೇಳದಿದ್ದರೆ ದುರಾಶೆಯಂದರೆ ಏನೆಂದು ನನಗೆ ತಿಳಿಯುತ್ತಿರಲಿಲ್ಲ.
[8] ಆದರೆ ಪಾಪವು ಈ ಆಜ್ಞೆಯನ್ನು ಉಪಯೋಗಿಸಿಕೊಂಡು ಸಕಲ ವಿಧವಾದ ದುರಾಶೆಗಳನ್ನು ನನ್ನಲ್ಲಿ ಹುಟ್ಟಿಸಿತು. ಧರ್ಮಶಾಸ್ತ್ರವು ಇಲ್ಲದಿರುವಾಗ ಪಾಪವು ಸತ್ತಂತೆ.
[9] ಮೊದಲು ನಾನು ಧರ್ಮಶಾಸ್ತ್ರವಿಲ್ಲದವನಾಗಿದ್ದು ಜೀವದಿಂದಿದ್ದೆನು. ಆಜ್ಞೆಯು ಬಂದಾಗ ಪಾಪಕ್ಕೆ ಜೀವ ಬಂದಿತು. ನಾನು ಸತ್ತೆನು.
[10] ಜೀವಿಸುವುದಕ್ಕಾಗಿ ಕೊಟ್ಟಿರುವ ಆಜ್ಞೆಯೇ ಮರಣಕ್ಕೆ ಕಾರಣವಾಯಿತೆಂದು ನನಗೆ ಕಂಡು ಬಂದಿತು.
[11] ಹೇಗೆಂದರೆ, ಆಜ್ಞೆಯ ಮೂಲಕವೇ ಪಾಪವು ಸಮಯ ಸಾಧಿಸಿ ನನ್ನನ್ನು ವಂಚಿಸಿತು; ಆ ಕಟ್ಟಳೆಯ ಮೂಲಕವೇ ನನ್ನನ್ನು ಕೊಂದು ಹಾಕಿತು.
[12] ಹೀಗಿರಲಾಗಿ ಧರ್ಮಶಾಸ್ತ್ರವು ಪರಿಶುದ್ಧವಾದದ್ದು. ಮತ್ತು ಆಜ್ಞೆಯು ಪರಿಶುದ್ಧವೂ, ನ್ಯಾಯವೂ ಮತ್ತು ಒಳ್ಳೆಯದೇ ಆಗಿದೆ.
[13] ಹಾಗಾದರೆ ಒಳ್ಳೆಯದೆ ನನಗೆ ಮರಣಕ್ಕೆ ಕಾರಣವಾಯಿತೋ? ಹಾಗೆ ಎಂದಿಗೂ ಅಲ್ಲ. ಪಾಪವೇ ಮರಣಕ್ಕೆ ಕಾರಣವಾದದ್ದು. ಅದು ಹಿತವಾದದರ ಮೂಲಕ ನನಗೆ ಮರಣವನ್ನು ಉಂಟುಮಾಡಿದ್ದರಿಂದ ಪಾಪವೇ ಎಂದು ಕಾಣಿಸಿಕೊಂಡಿತು. ಮತ್ತು ಆಜ್ಞೆಯ ಮೂಲಕ ಪಾಪವು ಕೇವಲ ಪಾಪಸ್ವರೂಪವೇ ಎಂದು ಸ್ಪಷ್ಟವಾಯಿತು.
[14] ಧರ್ಮಶಾಸ್ತ್ರವು ಆತ್ಮೀಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ದೇಹಧರ್ಮಕ್ಕೆ ಒಳಗಾದವನೂ, ಪಾಪದ ಅಧೀನದಲ್ಲಿ ಗುಲಾಮನಾಗಿರುವುದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.
[15] ಹೇಗೆಂದರೆ ನಾನು ಮಾಡುವುದು ನನಗೇ ತಿಳಿಯುತ್ತಿಲ್ಲ, ಯಾವುದನ್ನು ಮಾಡಬೇಕೆಂದು ನಾನು ಇಚ್ಚಿಸುತ್ತೇನೋ ಅದನ್ನು ಮಾಡದೇ ಅದಕ್ಕೆ ವಿರುದ್ಧವಾದದ್ದನ್ನು ಮಾಡುತ್ತೇನೆ.
[16] ಆದರೆ ನಾನು ಮಾಡುವಂಥದಕ್ಕೆ ನನ್ನ ಮನಸ್ಸು ಒಪ್ಪದಿದ್ದರೆ ಧರ್ಮಶಾಸ್ತ್ರವು ಉತ್ತಮವಾದದ್ದೆಂದು ಒಪ್ಪಿಕೊಂಡ ಹಾಗಾಯಿತು.
[17] ಹೀಗಿರಲಾಗಿ ಆ ಅಸಹ್ಯವಾದದ್ದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ.
[18] ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂದು ನನಗೆ ತಿಳಿದಿದೆ ಒಳ್ಳೆಯದನ್ನು ಮಾಡುವುದಕ್ಕೆ ನನಗೇನೋ ಮನಸ್ಸುಂಟು ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು.
[19] ನಾನು ಮೆಚ್ಚುವ ಒಳ್ಳೆಯ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.
[20] ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು.
[21] ಹೀಗಿರಲಾಗಿ ಯಾವುದು ಒಳ್ಳೆಯದೋ ಅದನ್ನು ಮಾಡಬೇಕೆಂದಿದ್ದೇನೆ ಆದರೆ ಕೆಟ್ಟದ್ದೇ ನನ್ನೊಳಗೆ ನೆಲೆಸಿದೆಯೆಂದು ನನಗೆ ಕಾಣಬರುತ್ತದೆ.
[22] ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದ ಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ಕಾಣುತ್ತದೆ.
[23] ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಒಪ್ಪಿಸುವಂಥದ್ದಾಗಿದೆ.
[24] ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?
[25] ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಮಾಡುತ್ತೇನೆ. ಹೀಗಿರಲಾಗಿ, ನಾನು ಬುದ್ಧಿಯಿಂದ ದೇವರ ನಿಯಮಕ್ಕೆ ದಾಸನಾಗಿಯೂ, ಮತ್ತೊಂದು ಕಡೆ ಶರೀರದಿಂದ ಪಾಪದ ನಿಯಮಕ್ಕೆ ಆಳಾಗಿಯೂ ನಡೆದುಕೊಳ್ಳುವವನಾಗಿದ್ದೇನೆ.