Skip to content
Opens in a new window
Listen to this chapter • 7:46

[1] ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಯಾವ ಅಪರಾಧ ನಿರ್ಣಯವೂ ಇಲ್ಲ,

[2] ಯಾಕೆಂದರೆ ಕ್ರಿಸ್ತ ಯೇಸುವಿನ ಮೂಲಕ ಜೀವವನ್ನುಂಟುಮಾಡುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ವಿಮುಕ್ತಿಗೊಳಿಸಿತು.

[3] ಧರ್ಮಶಾಸ್ತ್ರವು ನಮ್ಮ ಶರೀರಾಧೀನಸ್ವಭಾವದ ನಿಮಿತ್ತ ದುರ್ಬಲವಾಗಿ ಯಾವ ಕೆಲಸವನ್ನು ಮಾಡಲಾರದೆ ಇತ್ತೋ, ಅದನ್ನು ದೇವರೇ ಮಾಡಿದನು. ಹೇಗೆಂದರೆ ಆತನು ಪಾಪನಿವಾರಣೆಗಾಗಿ ತನ್ನ ಮಗನನ್ನು ಪಾಪಾಧೀನವಾದ ಶರೀರ ರೂಪದಲ್ಲಿ ಕಳುಹಿಸಿಕೊಟ್ಟು ಶರೀರದಲ್ಲಿಯೇ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದನು.

[4] ಹೀಗಿರಲು ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮನಿಗನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವುದಕ್ಕಾಗಿ ಹಾಗೆ ಮಾಡಿದನು.

[5] ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮನನ್ನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ.

[6] ಶರೀರಭಾವದ ವಿಷಯಗಳ ಮೇಲೆ ಮನಸ್ಸಿಡುವುದು ಮರಣ; ಪವಿತ್ರಾತ್ಮನ ವಿಷಯಗಳ ಮೇಲೆ ಮನಸ್ಸಿಡುವುದು ನಿತ್ಯಜೀವವೂ ಮತ್ತು ಮನಶಾಂತಿಯೂ ಆಗಿದೆ.

[7] ಯಾಕೆಂದರೆ ಶರೀರಭಾವಗಳ ಮೇಲೆ ಮನಸ್ಸಿಡುವುದು ದೇವರಿಗೆ ವಿರುದ್ಧವಾಗಿದೆ; ಅಂಥ ಮನಸ್ಸು ಧರ್ಮನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ.

[8] ಶರೀರಭಾವಾಧೀನವಾಗಿರುವವರು ದೇವರನ್ನು ಮೆಚ್ಚಿಸಲಾರರು.

[9] ಆದಾಗ್ಯೂ, ನೀವೂ ದೇವರ ಆತ್ಮನ ಸ್ವಭಾವದ ಮೇಲೆ ಆತುಕೊಂಡು ಜೀವಿಸುವವರೇ ಹೊರತು ದೇಹಸ್ವಭಾವದವರಲ್ಲಾ. ನಿಮ್ಮಲ್ಲಿ ದೇವರ ಆತ್ಮನು ವಾಸವಾಗಿರುವುದಾದರೆ ನೀವು ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೀರಿ. ಯಾರಲ್ಲಿ ಕ್ರಿಸ್ತನ ಆತ್ಮನು ಇಲ್ಲವೋ ಅವನು ಕ್ರಿಸ್ತನವನಲ್ಲ.

[10] ಆದರೆ ಕ್ರಿಸ್ತನು ನಿಮ್ಮಲ್ಲಿರುವುದಾದರೆ ದೇಹವು ಪಾಪದ ದೆಸೆಯಿಂದ ಸತ್ತದ್ದಾಗಿದ್ದರೂ, ಆತ್ಮವು ನೀತಿಯ ದೆಸೆಯಿಂದ ಜೀವಸ್ವರೂಪವಾಗಿರುತ್ತದೆ.

[11] ಯೇಸುವನ್ನು ಸತ್ತವರೊಳಗಿಂದ ಜೀವಿತನಾಗಿ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯದೇಹಗಳನ್ನು ಸಹ ಬದುಕಿಸುವನು.

[12] ಹೀಗಿರಲಾಗಿ ಸಹೋದರರೇ, ನಾವು ಹಂಗಿನಲ್ಲಿದ್ದೇವೆ; ಆದರೆ ಪವಿತ್ರಾತ್ಮನ್ನನುಸರಿಸಿ ನಡೆಯುವ ಹಂಗಿನಲ್ಲಿದ್ದೇವೆಯೇ ಹೊರತು ಶರೀರಭಾವವನ್ನು ಅನುಸರಿಸಿ ಬದುಕಬೇಕೆಂಬ ಹಂಗಿನಲಿಲ್ಲ.

[13] ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ; ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶ ಮಾಡುವುದಾದರೆ ಜೀವಿಸುವಿರಿ.

[14] ಯಾರು ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು ದೇವರ ಮಕ್ಕಳಾಗಿದ್ದಾರೆ.

[15] ನೀವು ತಿರುಗಿ ಭಯದಲ್ಲಿ ಬೀಳುವ ಹಾಗೆ ದಾಸತ್ವದ ಆತ್ಮನನ್ನು ಹೊಂದಿದವರಲ್ಲ. ಅದರ ಬದಲಾಗಿ, ನಿಮ್ಮವು ದೇವರನ್ನು, “ಅಪ್ಪಾ, ತಂದೆಯೇ,” ಎಂದು ಕರೆಯುವ ಮಕ್ಕಳ ಆತ್ಮವನ್ನು ಹೊಂದಿದ್ದೀರಿ.

[16] ನಾವು ದೇವರ ಮಕ್ಕಳಾಗಿದ್ದೇವೆಂಬುದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ.

[17] ಮಕ್ಕಳಾಗಿದ್ದರೆ ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

[18] ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಾಪದವಿಯನ್ನು ಆಲೋಚಿಸಿದರೆ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ.

[19] ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಸೃಷ್ಟಿಯು ಬಹು ಕಾತುರದಿಂದ ಎದುರು ನೋಡುತ್ತಿದೆ.

[20] ಸೃಷ್ಟಿ ನಿರರ್ಥಕತೆಗೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ,

[21] ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನೆಂದರೆ ಆ ಸೃಷ್ಟಿಯೂ ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುತ್ತವೆಂಬುದೇ.

[22] ಸೃಷ್ಟಿಯೆಲ್ಲಾ ಇಂದಿನವರೆಗೂ ನರಳುತ್ತಾ, ಪ್ರಸವ ವೇದನೆಪಡುತ್ತಾ ಇದೆಯೆಂದು ನಾವು ಬಲ್ಲೆವು. ಇದು ಮಾತ್ರವಲ್ಲದೆ

[23] ಪ್ರಥಮ ಫಲವಾಗಿರುವ ಹಾಗೂ ಪವಿತ್ರಾತ್ಮವರವನ್ನು ಹೊಂದಿದ ನಾವೂ ಸಹ ದೇವರ ಮಕ್ಕಳ ಪದವಿಯನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೋಡುತ್ತಾ ನಮ್ಮೊಳಗೆ ನರಳುತ್ತಿದ್ದೇ.

[24] ಆ ನಿರೀಕ್ಷೆಯಿಂದಲೇ ನಾವು ರಕ್ಷಣೆಯನ್ನು ಹೊಂದಿದವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆ ಎನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ?

[25] ಆದರೆ ಕಾಣದಿರುವುದನ್ನು ನಾವು ಎದುರುನೋಡುವವರಾಗಿರುವುದರಿಂದ ತಾಳ್ಮೆಯಿಂದ ಕಾದುಕೊಂಡಿದ್ದೇವೆ.

[26] ಹಾಗೆ ಪವಿತ್ರಾತ್ಮನು ಸಹ ನಮ್ಮ ಬಲಹೀನತೆಯನ್ನು ನೋಡಿ ನಮಗೆ ಸಹಾಯಮಾಡುತ್ತಾನೆ. ಹೇಗೆಂದರೆ ನಾವು ಯಾವಾಗ ಏನು ಬೇಡಿಕೊಳ್ಳಬೇಕೋ ಎನ್ನುವುದು ನಮಗೆ ತಿಳಿದಿಲ್ಲದ್ದರಿಂದ ಪವಿತ್ರಾತ್ಮನು ತಾನೇ ಮಾತಿಲ್ಲದ ನರಳಾಟದಿಂದ ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಾನೆ.

[27] ಆದರೆ ಹೃದಯಗಳನ್ನು ಪರಿಶೋಧಿಸಿ ನೋಡುವಾತನಿಗೆ ಪವಿತ್ರಾತ್ಮನ ಮನೋಭಾವವು ಏನೆಂದು ತಿಳಿದಿದೆ; ಆ ಆತ್ಮನು ದೇವರ ಚಿತ್ತಾನುಸಾರವಾಗಿ ದೇವಜನರಿಗೋಸ್ಕರ ಬೇಡಿಕೊಳ್ಳುವನೆಂದು ಆತನು ಬಲ್ಲನು.

[28] ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಒಳ್ಳೆಯದಕ್ಕಾಗಿಯೇ ಆಗುವುದೆಂದು ನಮಗೆ ತಿಳಿದಿದೆ.

[29] ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡನೋ ಅವರನ್ನು ತನ್ನ ಮಗನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದನು.

[30] ಮತ್ತು ಯಾರನ್ನು ಮೊದಲು ನೇಮಿಸಿದನೋ ಅವರನ್ನು ಕರೆದನು. ಯಾರನ್ನು ಕರೆದನೋ ಅವರನ್ನು ನೀತಿವಂತರೆಂದು ನಿರ್ಣಯಿಸಿದನು. ಯಾರನ್ನು ನೀತಿವಂತರೆಂದು ನಿರ್ಣಯಿಸಿದನೋ ಅವರನ್ನು ಮಹಿಮಾಪದವಿಗೆ ಸೇರಿಸಿದನು.

[31] ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಜೊತೆಯಲ್ಲಿ ಇದ್ದರೆ ನಮ್ಮನ್ನು ಎದುರಿಸುವವರು ಯಾರು?

[32] ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ, ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೋ?

[33] ದೇವರು ಆದುಕೊಂಡವರ ಮೇಲೆ ಯಾರು ತಪ್ಪು ಹೊರಿಸುವವರು ಯಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವಾತನಾಗಿದ್ದಾನೆ.

[34] ಹಾಗಿದ್ದ ಮೇಲೆ ಅಪರಾಧಿಗಳೆಂದು ಖಂಡಿಸುವವರು ಯಾರು? ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿರುವ ಕ್ರಿಸ್ತ ಯೇಸುವೋ?

[35] ಈ ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ? ಸಂಕಟವೋ? ಹಿಂಸೆಯೋ? ಹಸಿವೋ? ವಸ್ತ್ರವಿಲ್ಲದಿರುವುದೋ? ಗಂಡಾಂತರವೋ? ಖಡ್ಗವೋ?

[36] “ದೇವರೇ ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗುತ್ತಿದ್ದೇವೆ. ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಎಣಿಸಿದರು.” ಎಂಬುದಾಗಿ ಬರೆದಿರುವಂತೆ ಆಗುತ್ತದಲ್ಲಾ.

[37] ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಜಯಶಾಲಿಗಳಾಗಿದ್ದೇವೆ.

[38] ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ,

[39] ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.

ರೋಮಾಪುರದವರಿಗೆ — Chapters