Skip to content
Opens in a new window
Listen to this chapter • 5:46

[1] ದೇವರ ಚಿತ್ತದಂತೆ ಯೇಸು ಕ್ರಿಸ್ತನಿಂದ ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟ ಪೌಲನೂ ಮತ್ತು ನಮ್ಮ ಸಹೋದರನಾದ ಸೊಸ್ಥೆನನೂ,

[2] ಕೊರಿಂಥದಲ್ಲಿನ ದೇವರ ಸಭೆಗೆ ಅಂದರೆ ಕ್ರಿಸ್ತ ಯೇಸುವಿನಲ್ಲಿ ಪ್ರತಿಷ್ಠಿತರಾದವರಿಗೂ, ಪರಿಶುದ್ಧರಾಗಿರಲು ಕರೆಯಲ್ಪಟ್ಟವರಿಗೂ, ನಮ್ಮ ಮತ್ತು ಅವರ ಕರ್ತನಾಗಿರುವ ಯೇಸು ಕ್ರಿಸ್ತನ ನಾಮಸ್ಮರಣೆಯನ್ನು ಮಾಡುವವರೆಲ್ಲಿದ್ದರೂ ಅವರೆಲ್ಲರಿಗೂ ಬರೆಯುವುದು ಏನೆಂದರೆ,

[3] ನಮ್ಮ ತಂದೆಯಾಗಿರುವ ದೇವರಿಂದಲೂ ಹಾಗೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಉಂಟಾಗಲಿ.

[4] ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ಯಾವಾಗಲೂ ನನ್ನ ದೇವರನ್ನು ಕೊಂಡಾಡುತ್ತೇನೆ.

[5] ಆತನು ಎಲ್ಲಾ ರೀತಿಯಲ್ಲಿಯೂ, ಎಲ್ಲಾ ನುಡಿಗಳಲ್ಲಿಯೂ, ಎಲ್ಲಾ ತಿಳಿವಳಿಕೆಯಲ್ಲಿಯೂ, ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ.

[6] ಕ್ರಿಸ್ತನ ಕುರಿತಾದ ಸಾಕ್ಷಿಯು ನಿಮ್ಮಲ್ಲಿ ದೃಢವಾಗಿರುವ ಹಾಗೆಯೇ ಆತನು ನಿಮ್ಮನ್ನು ಸಮೃದ್ಧಿಯುಳ್ಳವರನ್ನಾಗಿ ಮಾಡಿದ್ದಾನೆ.

[7] ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯನ್ನು ನೀವು ಎದುರುನೋಡುತ್ತಾ ಇರುವುದರಿಂದ ಆತ್ಮೀಕ ಕೃಪಾವರದ ಕೊರತೆಯೂ ನಿಮಗೆ ಉಂಟಾಗುವುದಿಲ್ಲ,

[8] ನಮ್ಮ ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ನೀವು ನಿರಪರಾಧಿಗಳಾಗಿರುವಂತೆ ಆತನು ನಿಮ್ಮನ್ನು ಕಡೆಯವರೆಗೂ ದೃಢಪಡಿಸುವನು.

[9] ತನ್ನ ಮಗನೂ ಹಾಗೂ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ಅನ್ಯೋನ್ಯತೆಗೆ ನಿಮ್ಮನ್ನು ಕರೆದ ದೇವರು ನಂಬಿಗಸ್ತನು.

[10] ಪ್ರಿಯರೇ, ನೀವೆಲ್ಲರೂ ಹೊಂದಾಣಿಕೆಯುಳ್ಳವರಾಗಿರಬೇಕೆಂದು, ನಿಮ್ಮಲ್ಲಿ ಭಿನ್ನತೆಗಳಿರಬಾರದೆಂದು, ನೀವು ಒಂದೇ ಮನಸ್ಸೂ ಮತ್ತು ಒಂದೇ ಉದ್ದೇಶವುಳ್ಳವರಾಗಿದ್ದು ಐಕ್ಯತೆಯಿಂದಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬುದ್ಧಿ ಹೇಳುತ್ತೇನೆ.

[11] ಯಾಕೆಂದರೆ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಜಗಳಗಳುಂಟೆಂದು ನಿಮ್ಮ ಬಗ್ಗೆ ಖ್ಲೋಯೆಯ ಜನರಿಂದ ನನಗೆ ತಿಳಿದು ಬಂದಿತು.

[12] ಹೀಗಾಗಿ ನಾನಿದನ್ನು ಹೇಳುತ್ತಿದ್ದೇನೆ, ನಿಮ್ಮೊಳಗೆ ಕೆಲವರು, “ನಾನು ಪೌಲನವನು,” ಇಲ್ಲವೆ, “ನಾನು ಅಪೊಲ್ಲೋಸನವನು,” ಅಥವಾ, “ನಾನು ಕೇಫನವನು,” ಇಲ್ಲವೆ, ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ.

[13] ಕ್ರಿಸ್ತನು ವಿಭಾಗಿಸಲ್ಪಟ್ಟಿದ್ದಾನೋ? ನಿಮಗೋಸ್ಕರ ಶಿಲುಬೆಗೇರಿದವನು ಪೌಲನೋ? ಪೌಲನ ಹೆಸರಿನಲ್ಲಿ ನೀವು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೀರೋ?

[14] ನಿಮ್ಮಲ್ಲಿ ಕ್ರಿಸ್ಪನಿಗೂ ಮತ್ತು ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ದೀಕ್ಷಾಸ್ನಾನ ಮಾಡಿಸಲಿಲ್ಲ.

[15] ಆದ್ದರಿಂದ ನೀವು ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೀರೆಂದು ಯಾರೂ ಹೇಳಲಾರರು. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರಮಾಡುತ್ತೇನೆ.

[16] ಇದಲ್ಲದೆ ಸ್ತೆಫನನ ಮನೆಯವರಿಗೆ ಸಹ ದೀಕ್ಷಾಸ್ನಾನಮಾಡಿಸಿದ್ದೇನೆ ಇದನ್ನು ಹೊರತು ಇನ್ನಾರಿಗೂ ನಾನು ದೀಕ್ಷಾಸ್ನಾನಮಾಡಿಸಿದಂತೆ ತೋರುವುದಿಲ್ಲ.

[17] ಕ್ರಿಸ್ತನು ನನ್ನನ್ನು ಕಳುಹಿಸಿದ್ದು ದೀಕ್ಷಾಸ್ನಾನಮಾಡಿಸುವುದಕ್ಕಲ್ಲ ಆದರೆ ಸುವಾರ್ತೆಯನ್ನು ಸಾರುವುದಕ್ಕಾಗಿಯೇ. ಅದನ್ನು ಮನುಷ್ಯಜ್ಞಾನದ ಮಾತುಗಳಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯ ಶಕ್ತಿಯು ಮಾತಿನ ಚತುರತೆಯಿಂದ ನಿರರ್ಥಕವಾಗಿ ಹೋಗುತ್ತದೆ.

[18] ಶಿಲುಬೆಯ ಸಂದೇಶವು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುತನವಾಗಿದೆ, ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗೆ ಇದು ದೇವರ ಶಕ್ತಿಯಾಗಿದೆ.

[19] “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ವಿಫಲಗೊಳಿಸುವೆನು.” ಎಂದು ಬರೆಯಲ್ಪಟ್ಟಿದೆ.

[20] ಜ್ಞಾನಿಯು ಎಲ್ಲಿ? ವಿದ್ವಾಂಸನು ಎಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕದ ಜ್ಞಾನವನ್ನು ಮೂರ್ಖತನವಾಗಿ ಮಾಡಿದ್ದಾನಲ್ಲವೇ?

[21] ಲೋಕವು ತನ್ನ ಜ್ಞಾನದಿಂದ ದೇವರನ್ನು ತಿಳಿದುಕೊಳ್ಳದೆ ಹೋದದ್ದರಿಂದ; ಮೂರ್ಖತನವೆನಿಸಿಕೊಂಡಿರುವ ನಮ್ಮ ಬೋಧನೆಯ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಹಿತವೆಂದು ತೋರಿತು.

[22] ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ;

[23] ನಾವಾದರೋ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ಸಾರುತ್ತೇವೆ; ಕ್ರಿಸ್ತನ ಸಂದೇಶವು ಯೆಹೂದ್ಯರಿಗೆ ವಿಘ್ನವೂ ಮತ್ತು ಗ್ರೀಕರಿಗೆ ಮೂರ್ಖತನವೂ ಆಗಿದೆ.

[24] ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ.

[25] ದೇವರ ಬುದ್ಧಿಹೀನತೆಯು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು, ದೇವರ ಬಲಹೀನತೆಯು ಮನುಷ್ಯರ ಬಲಕ್ಕಿಂತಲೂ ಶಕ್ತಿಯುಳ್ಳದ್ದಾಗಿದೆ.

[26] ಸಹೋದರರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದೀರೆಂದು ಆಲೋಚಿಸಿರಿ. ಮನುಷ್ಯರ ದೃಷ್ಟಿಯಲ್ಲಿ ನಿಮ್ಮೊಳಗೆ ಜ್ಞಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ, ಪ್ರಬಲರೂ ಅನೇಕರಿರಲಿಲ್ಲ, ಕುಲೀನರೂ ಅನೇಕರಿರಲಿಲ್ಲ.

[27] ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡನು; ದೇವರು ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಈ ಲೋಕದ ಅಶಕ್ತರನ್ನು, ಬಲಹೀನರನ್ನು ಆರಿಸಿಕೊಂಡನು.

[28] ದೇವರು ಈ ಲೋಕದಲ್ಲಿ ಕೀಳಾದವರನ್ನೂ ಹಾಗೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನು, ನಿಂದಿಸಲ್ಪಟ್ಟವರನ್ನು ಆರಿಸಿಕೊಂಡಿದ್ದಾನೆ.

[29] ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.

[30] ದೇವರು ಈ ರೀತಿ ಮಾಡಿದ್ದರಿಂದಲೇ ಈಗ ನೀವು ಕ್ರಿಸ್ತ ಯೇಸುವಿನಲ್ಲಿದ್ದೀರಿ. ಕ್ರಿಸ್ತ ಯೇಸು ದೇವರ ಕಡೆಯಿಂದ ನಮಗೆ ಜ್ಞಾನವೂ, ನೀತಿಯೂ, ಶುದ್ಧಿಯೂ, ಮತ್ತು ವಿಮೋಚನೆಯು ಆಗಿದ್ದಾನೆ.

[31] “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ” ಎಂಬ ವೇದೋಕ್ತಿ ನೆರವೇರುವುದಕ್ಕಾಗಿಯೇ ಹೀಗಾಯಿತು.

1 ಕೊರಿಂಥದವರಿಗೆ — Chapters