Skip to content
Opens in a new window
Listen to this chapter • 6:26

[1] ನಾನು ಕ್ರಿಸ್ತನಲ್ಲಿದುಕೊಂಡು ಸುಳ್ಳಾಡದೆ, ಸತ್ಯವಾಗಿ ಹೇಳುತ್ತೇನೆ. ಪವಿತ್ರಾತ್ಮನಿಂದ ನೆಲೆಗೊಂಡಿರುವ ನನ್ನ ಮನಸ್ಸಾಕ್ಷಿಯೇ ಇದಕ್ಕೆ ಸಾಕ್ಷಿ.

[2] ನನಗೆ ಹೆಚ್ಚಾದ ದುಃಖವೂ, ನನ್ನ ಹೃದಯದಲ್ಲಿ ಎಡೆಬಿಡದೆ ವೇದನೆಯೂ ಉಂಟು.

[3] ನನ್ನ ಸ್ವಜನರೂ ರಕ್ತಸಂಬಂಧಿಕರೂ ಆದ ನನ್ನ ಪ್ರಿಯರಿಗೋಸ್ಕರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕ್ರಿತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ.

[4] ಅವರು ಇಸ್ರಾಯೇಲಿನ ವಂಶದವರು. ದೇವರು ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡನು; ಇವರಿಗೆ ತನ್ನ ಮಹಿಮೆಯನ್ನು ವ್ಯಕ್ತಪಡಿಸಿದನು; ಅವರ ಸಂಗಡ ದೇವರು ಒಡಂಬಡಿಕೆಗಳನ್ನು ಮಾಡಿಕೊಂಡಿದ್ದಾನೆ ಅವರಿಗೆ ಧರ್ಮಶಾಸ್ತ್ರವು, ದೇವಾಲಯದಲ್ಲಿ ನಡೆಯುವ ಆರಾಧನೆಯೂ, ವಾಗ್ದಾನಗಳೂ ಕೊಡಲ್ಪಟ್ಟವು.

[5] ಅವರ ಪೂರ್ವಿಕರು ಇವರಿಗೆ ಸಂಬಂಧಪಟ್ಟವರೇ, ಕ್ರಿಸ್ತನು ಶರೀರಸಂಬಂಧವಾಗಿ ಅವರ ವಂಶದಲ್ಲಿಯೇ ಹುಟ್ಟಿದನು. ಆತನು ಎಲ್ಲಾದರ ಮೇಲೆ ಒಡೆಯನೂ, ನಿರಂತರ ಸ್ತುತಿ ಹೊಂದತಕ್ಕ ದೇವರೂ ಆಗಿದ್ದಾನೆ. ಆಮೆನ್.

[6] ದೇವರ ವಾಕ್ಯವು ವ್ಯರ್ಥವಾಯಿತೆಂದು ನಾವು ಭಾವಿಸಬಾರದು. ಯಾಕೆಂದರೆ ಇಸ್ರಾಯೇಲ ವಂಶದಲ್ಲಿ ಹುಟ್ಟಿದವರೆಲ್ಲರೂ ಇಸ್ರಾಯೇಲ್ಯರಲ್ಲ.

[7] ಹಾಗೆಯೇ ಅಬ್ರಹಾಮನ ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಅವರೆಲ್ಲರೂ ಮಕ್ಕಳೆಂದು ಎಣಿಸಲ್ಪಡುವುದಿಲ್ಲ. ಆದರೆ “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು.” ಎಂದು ದೇವರು ಹೇಳಿದನು.

[8] ಆ ಮಾತಿನ ಅರ್ಥವೇನಂದರೆ ಶರೀರಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ಅಬ್ರಹಾಮನ ಸಂತತಿಯವರೆಂದು ಎಣಿಸಲ್ಪಡುವರು ಎಂಬುದು.

[9] “ಮುಂದಿನ ವರ್ಷದಲ್ಲಿ ಇದೇ ಕಾಲದಲ್ಲಿ ನಾನು ಬರುವೆನು ಆಗ ಸಾರಳಿಗೆ ಮಗನು ಇರುವನು” ಎಂಬ ವಾಗ್ದಾನವಾಗಿದೆ.

[10] ಇದು ಮಾತ್ರವಲ್ಲದೆ ರೆಬೆಕ್ಕಳು ಸಹ ನಮ್ಮ ಮೂಲಪಿತೃವಾದ ಇಸಾಕನಿಂದ ಅವಳಿ ಜವಳಿ ಮಕ್ಕಳಿಗೆ ಬಸುರಾದಾಗ ಅದರಂತೆಯೇ ಆಯಿತು.

[11] ಆ ಮಕ್ಕಳು ಒಬ್ಬ ತಂದೆಯ ಮಕ್ಕಳಾಗಿದ್ದರೂ ಅವರು ಇನ್ನು ಹುಟ್ಟದೆಯೂ, ಒಳ್ಳೆದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡುವ ಮೊದಲೇ “ಹಿರಿಯನು ಕಿರಿಯನಿಗೆ ಸೇವೆಮಾಡುವನೆಂಬುದಾಗಿ” ಆಕೆಗೆ ಹೇಳಲ್ಪಟ್ಟಿತು. ಇದರಿಂದ ದೇವರು ತನಗೆ ಮನಸ್ಸಿದ್ದವರನ್ನು ಆರಿಸಿಕೊಳ್ಳುತ್ತಾನೆಂಬ ಸಂಕಲ್ಪವು ಒಳ್ಳೆಯ ಕಾರ್ಯಗಳ ಮೇಲೆ ಆಧಾರಗೊಳ್ಳದೆ ಕರೆಯುವಾತನ ಚಿತ್ತದ ಮೇಲೆಯೇ ಆಧಾರಗೊಂಡಿದೆ.

[13] ಇದಕ್ಕನುಸಾರವಾಗಿ “ಯಾಕೋಬನನ್ನು ಪ್ರೀತಿಸಿದೆನು ಹಾಗೂ ಏಸಾವನನ್ನು ದ್ವೇಷಿಸಿದನು” ಎಂದು ಬರೆದದೆ.

[14] ಹಾಗಾದರೆ ಏನು ಹೇಳೋಣ? ದೇವರಲ್ಲಿ ಅನ್ಯಾಯ ಉಂಟೋ? ಎಂದಿಗೂ ಇಲ್ಲ.

[15] “ಯಾವನ ಮೇಲೆ ನನಗೆ ಕರುಣೆ ಉಂಟೋ ಅವನನ್ನು ಕರುಣಿಸುವೆನು, ಯಾವನ ಮೇಲೆ ನನ್ನ ಕನಿಕರವಿದೆಯೋ ಅವನಿಗೆ ಕನಿಕರ ತೋರಿಸುವೆನು” ಎಂದು ದೇವರು ಮೋಶೆಗೆ ಹೇಳಿರುತ್ತಾನೆ.

[16] ಆದ್ದರಿಂದ ದೇವರ ದಯೆಯು ಮನುಷ್ಯರಿಗೆ ಅಪೇಕ್ಷಿಸುವುದರಿಂದಾಗಲಿ, ಪ್ರಯತ್ನಿಸುವುದರಿಂದಾಗಲಿ ದೊರೆಯದೆ ದೇವರು ಕರುಣಿಸುವುದರಿಂದಲೇ ದೊರೆಯುತ್ತದೆ.

[17] ದೇವರು ಫರೋಹನನನ್ನು ಕುರಿತು “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತ ಸ್ಥಾನಕ್ಕೆ ತಂದಿದ್ದೇನೆಂದು ಹೇಳಿದನೆಂಬುದಾಗಿ” ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ.

[18] ದೇವರು ಯಾರನ್ನು ಕರುಣಿಸಿದರೋ, ಯಾರನ್ನು ಕಠಿಣಪಡಿಸಿದರೋ ಅದೆಲ್ಲವೂ ಆತನ ಇಷ್ಟಾನುಸಾರವಾಗಿಯೇ ಇದೆ ಎಂಬುದು ಇದರಿಂದ ತೋರಿಬರುತ್ತದೆ.

[19] “ದೇವರ ಚಿತ್ತವನ್ನು ಎದುರಿಸುವವರು ಇಲ್ಲದಿರುವಾಗ ಆತನು ತಪ್ಪು ಹುಡುಕುವುದು ಹೇಗೆ” ಎಂದು ನೀನು ನನ್ನನ್ನು ಕೇಳುವಿ.

[20] ಎಲೋ ಮನುಷ್ಯನೇ ಹಾಗೆನ್ನಬೇಡ ದೇವರಿಗೆ ವಿರುದ್ಧವಾಗಿ ಮಾತನಾಡುವುದಕ್ಕೆ ನೀನು ಎಷ್ಟರವನು? ರೂಪಿಸಲ್ಪಟ್ಟದ್ದು ರೂಪಿಸಿದವನಿಗೆ, “ಏಕೆ ನನ್ನನ್ನು ಹೀಗೆ ರೂಪಿಸಿದೆ”, ಎಂದು ಕೇಳುವುದುಂಟೇ?

[21] ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ, ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮಣ್ಣಿನ ಮುದ್ದೆಯಿಂದ ಮಾಡುವುದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?

[22] ಆದರೆ ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ತಾಳ್ಮೆಯಿಂದ ಸಹಿಸಿಕೊಂಡಿದ್ದಾನೆ.

[23] ಮತ್ತು ಮಹಿಮೆ ಹೊಂದುವುದಕ್ಕೆ ತಾನು ಮೊದಲೇ ಸಿದ್ಧಪಡಿಸಿರುವ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ.

[24] ಆತನು ಕರುಣಿಸಿದ ನಮ್ಮನ್ನು ಯೆಹೂದ್ಯರೊಳಗಿಂದ ಮಾತ್ರ ಕರೆಯದೆ ಹೋಶೇಯನ ಗ್ರಂಥದ ವಚನದಲ್ಲಿ ತಾನು ಸೂಚಿಸಿರುವಂತೆ ಅನ್ಯಜನರೊಳಗಿಂದ ಸಹ ಕರೆದನು.

[25] ಆ ವಚನವೇನಂದರೆ, “ನನ್ನ ಜನವಲ್ಲದವರನ್ನು ನನ್ನ ಜನರೆಂದು ನನಗೆ ಅಪ್ರಿಯವಾದವಳನ್ನು ಪ್ರಿಯಳೆಂದೂ ಹೇಳುವೆನು.

[26] ಮತ್ತು ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲವೆಂದು’ ಅವರಿಗೆ ಹೇಳಲ್ಪಟ್ಟಿತೋ ಆ ಸ್ಥಳದಲ್ಲಿಯೇ ಅವರು ‘ಜೀವವುಳ್ಳ ದೇವರ ಮಕ್ಕಳು ಎನಿಸಿಕೊಳ್ಳುವರು’” ಎಂಬುದೇ.

[27] ಇದಲ್ಲದೆ ಯೆಶಾಯನು ಇಸ್ರಾಯೇಲ್ ಜನರ ವಿಷಯದಲ್ಲಿ ಹೀಗೆಂದು ಘೋಷಿಸಿದ್ದಾನೆ: “ಇಸ್ರಾಯೇಲರ ಸಂಖ್ಯೆಯು ಸಮುದ್ರದ ಉಸುಬಿನಂತಿದ್ದರೂ ಅವರಲ್ಲಿ ಕೆಲವರು ಮಾತ್ರ ರಕ್ಷಿಸಲ್ಪಡುವರು” “ಕರ್ತನು ಭೂಮಿಯಲ್ಲಿ ತನ್ನ ವಚನವನ್ನು ಕ್ಷಣದಲ್ಲಿ ನೆರವೆರಿಸಿಮುಗಿಸುವನು” ಎಂದು ಕೂಗಿ ಹೇಳುತ್ತಾನೆ.

[28] ಅದೇ ಅಭಿಪ್ರಾಯದಿಂದ ಯೆಶಾಯನು ಮತ್ತೊಂದು ವಚನದಲ್ಲಿ,

[29] “ಸೇನಾಧೀಶ್ವರನಾದ ಕರ್ತನು ನಮಗೆ ಒಂದು ಸಂತಾನವನ್ನು ಉಳಿಸದೆ ಹೋಗಿದ್ದರೆ “ಸೊದೋಮಿನ ಗತಿಯೇ ನಮಗಾಗುತ್ತಿತ್ತು ಗೊಮೋರದ ದುರ್ದೆಸೆಯೇ ಸಂಭವಿಸುತ್ತಿತ್ತು” ಎಂದು ಮೊದಲೇ ತಿಳಿದುಕೊಂಡು ಹೇಳಿದ್ದಾರೆ.

[30] ಹಾಗಾದರೆ ಏನು ಹೇಳೋಣ? ನೀತಿಯನ್ನು ಅನುಸರಿಸದ ಅನ್ಯಜನರಿಗೆ ನೀತಿಯು ಅಂದರೆ ನಂಬಿಕೆಯಿಂದುಂಟಾದ ನೀತಿಯು ದೊರಕಿತು.

[31] ಆದರೆ ನೀತಿಯನ್ನು ಹಿಂಬಾಲಿಸಿದ್ದ ಇಸ್ರಾಯೇಲ್ಯರು ನೀತಿಯನ್ನು ದೊರಕಿಸುವ ಧರ್ಮವನ್ನು ಹಿಡಿಯಲಾರದೆ ಹೋದರೆಂದು ಹೇಳಬೇಕು.

[32] ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಅನುಸರಿಸದೆ ನೇಮನಿಷ್ಠೆಗಳನ್ನು ಹಿಂಬಾಲಿಸಿದ್ದರಿಂದ,

[33] ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು. ಧರ್ಮಶಾಸ್ತ್ರದಲ್ಲಿ ಹೀಗೆ ಬರೆಯಲ್ಪಟ್ಟಿದೆ, “ಇಗೋ ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನಲ್ಲಿ ನಂಬಿಕೆಯಿಡುವವನು ಆಶಾಭಂಗಪಡುವುದಿಲ್ಲ” ಎಂಬುದೇ.

ರೋಮಾಪುರದವರಿಗೆ — Chapters