Skip to content
Opens in a new window
Listen to this chapter • 3:05

[1] ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ. ಯಾಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವು ದೊರೆತಿರುವುದಿಲ್ಲ. ಇರುವ ಅಧಿಕಾರಿಗಳಾದರೋ ದೇವರಿಂದ ನೇಮಿಸಲ್ಪಟ್ಟವರು.

[2] ಆದುದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮವನ್ನು ಎದುರಿಸುತ್ತಾನೆ. ಎದುರಿಸುವವರು ಶಿಕ್ಷೆಗೊಳಗಾಗುವರು.

[3] ಕೆಟ್ಟಕೆಲಸ ಮಾಡುವವನಿಗೆ ಅಧಿಪತಿಯಿಂದ ಭಯವಿರುವುದೇ ಹೊರತು ಒಳ್ಳೆಕೆಲಸ ಮಾಡುವವನಿಗೆ ಭಯವೇನೂ ಇರುವುದಿಲ್ಲ. ನೀನು ಅಧಿಕಾರಿಗೆ ಭಯಪಡದೇ ಇರಬೇಕೆಂದು ಅಪೇಕ್ಷಿಸುತ್ತೀಯೋ ಒಳ್ಳೆಯದನ್ನು ಮಾಡು. ಆಗ ಆ ಅಧಿಕಾರಿಯೇ ನಿನ್ನನ್ನು ಹೊಗಳುವನು.

[4] ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಮಾಡುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.

[5] ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಾಕ್ಷಿಗೆ ಒಪ್ಪುವಂತೆಯು ಅವನಿಗೆ ಅಧೀನನಾಗಿರು.

[6] ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕೆಂದರೆ ಕಂದಾಯ ಸಂಗ್ರಹಿಸುವವರು ದೇವರ ಸೇವಕರಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ.

[7] ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು ಸಲ್ಲಿಸಿರಿ. ಯಾರಿಗೆ ಭಯಪಡಬೇಕೋ ಅವರಿಗೆ ಭಯಪಡಿರಿ ಯಾರಿಗೆ ಮರ್ಯಾದೆ ತೋರಿಸಬೇಕೋ ಅವರಿಗೆ ಗೌರವವನ್ನು ಸಲ್ಲಿಸಿರಿ.

[8] ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮ್ಮ ಮೇಲೆ ಇರಬಾರದು. ತನ್ನ ನೆರೆಹೊರೆಯವರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನೆಲ್ಲಾ ನೆರವೇರಿಸಿದ್ದಾನೆ.

[9] ಹೇಗೆಂದರೆ “ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಪರರ ಸೊತ್ತನ್ನು ಆಶಿಸಬಾರದು.” ಈ ಮೊದಲಾದ ಎಲ್ಲಾ ಕಟ್ಟಳೆಗಳು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ.

[10] ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಶಾಸ್ತ್ರವು ನೆರವೇರುತ್ತದೆ.

[11] ಈಗಿನ ಕಾಲವು ನಿದ್ದೆಯಿಂದ ಎಚ್ಚರವಾಗಿರತಕ್ಕ ಕಾಲವೆಂದು ಅರಿತು ಇದನ್ನೆಲ್ಲಾ ಮಾಡಿರಿ. ನಾವು ಕ್ರಿಸ್ತನನ್ನು ಮೊದಲು ನಂಬಿದ ಕಾಲದಲ್ಲಿ ಇದ್ದುದಕ್ಕಿಂತ ಈಗ ನಮ್ಮ ವಿಮೋಚನೆಯ ಕಾಲವು ಹತ್ತಿರವಾಗಿದೆ.

[12] ಇರುಳು ಬಹಳ ಮಟ್ಟಿಗೆ ಕಳೆಯಿತು; ಹಗಲು ಸಮೀಪವಾಯಿತು. ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು ಬೆಳಕಿಗೆ ಅನುಗುಣವಾದ ರಕ್ಷಣೆಯ ಆಯುಧಗಳನ್ನು ಧರಿಸಿಕೊಳ್ಳೋಣ.

[13] ದುಂದೌತಣ ಕುಡಿಕತನಗಳಲ್ಲಾಗಲಿ, ಕಾಮವಿಲಾಸ, ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೆಕಿಚ್ಚುಗಳಲ್ಲಿಯಾಗಲಿ ಕಾಲ ಕಳೆಯದೆ ಹಗಲಿನಲ್ಲಿರ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ.

[14] ದೇಹದ ಆಸೆಗಳನ್ನು ಪೂರೈಸುವುದಕ್ಕಾಗಿ ಚಿಂತಿಸದೇ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.

ರೋಮಾಪುರದವರಿಗೆ — Chapters