[1] ಹಾಗಾದರೆ ವಂಶಾನುಕ್ರಮವಾಗಿ ನಮಗೆ ಮೂಲಪಿತೃವಾಗಿರುವ ಅಬ್ರಹಾಮನು ಈ ವಿಷಯದಲ್ಲಿ ಏನು ಪಡೆದುಕೊಂಡನೆಂದು ಹೇಳಬೇಕು?
[2] ಅಬ್ರಹಾಮನು ಪುಣ್ಯಕ್ರಿಯೆಯಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವುದಕ್ಕೆ ಅವನಿಗೆ ಆಸ್ಪದವಿರುವುದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಆಸ್ಪದವಿರುವುದಿಲ್ಲ.
[3] ಇದರ ವಿಷಯದಲ್ಲಿ ಧರ್ಮಶಾಸ್ತ್ರವು ಹೇಳುವುದನ್ನು ಆಲೋಚಿಸಿರಿ, “ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು” ಎಂದು ಹೇಳುತ್ತದೆ.
[4] ಕೆಲಸ ಮಾಡಿದವನಿಗೆ ಬರುವ ಕೂಲಿಯು ಕೃಪೆಯಿಂದ ದೊರಕುವಂಥದೆಂದು ಎಣಿಕೆಯಾಗುವುದಿಲ್ಲ; ಅದು ಅವನಿಗೆ ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವುದು.
[5] ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಪಾಪಾತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವುದು.
[6] ದೇವರು ಯಾವನನ್ನು ಪುಣ್ಯಕ್ರಿಯೆಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗೆಂದರೆ,
[7] “ಯಾರ ಅಪರಾಧಗಳು ಪರಿಹಾರವಾಗಿದೆಯೋ, ಯಾರ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಅವರೇ ಧನ್ಯರು.
[8] ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವುದಿಲ್ಲವೋ ಆ ಮನುಷ್ಯನೇ ಧನ್ಯನು.”
[9] ಈ ಶುಭವು ಸುನ್ನತಿಯಾದವರಿಗೆ ಮಾತ್ರವೋ? ಅಥವಾ ಸುನ್ನತಿಯಿಲ್ಲದವರಿಗೆ ಸಹ ಉಂಟೋ? “ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತು” ಎಂಬುದಾಗಿ ನಾವು ಹೇಳುತ್ತೇವೆ.
[10] ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗುವುದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವುದಕ್ಕೆ ಮೊದಲೇ ಎಣಿಸಲ್ಪಟ್ಟಿತು.
[11] ಅನಂತರ ಸುನ್ನತಿಯನ್ನು, ಮೊದಲೇ ಅವನಿಗಿದ್ದ ನಂಬಿಕೆಯ ಗುರುತಾಗಿಯೂ, ಮುದ್ರೆಯಾಗಿಯೂ ಹೊಂದಿದನು. ಹೀಗಿರುವುದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾಗಿದಾಗ್ಯೂ ಮೂಲಪಿತೃವಾದನು; ಇದರಿಂದ ಅವರು ನೀತಿವಂತರೆಂದು ಎಣಿಸಲ್ಪಟ್ಟರು.
[12] ಇದಲ್ಲದೆ ಸುನ್ನತಿಯವರಲ್ಲಿ ಸುನ್ನತಿಹೊಂದಿದ್ದವರಿಗೆ ಮಾತ್ರವಲ್ಲದೆ, ನಮ್ಮ ಪಿತೃವಾಗಿರುವ ಅಬ್ರಹಾಮನಿಗೆ ಸುನ್ನತಿಯಾಗುವುದಕ್ಕೂ ಮೊದಲೇ ಇದ್ದ ನಂಬಿಕೆಯ ಕ್ರಮವನ್ನು ಅನುಸರಿಸಿ ನಡೆಯುತ್ತಾರೋ ಅವರಿಗೆ ಸಹ ಮೂಲ ತಂದೆಯಾಗಿದ್ದಾನೆ.
[13] ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ; ನಂಬಿಕೆಯಿಂದ ಬರುವ ನೀತಿಯಾಗಿದೆ.
[14] ಧರ್ಮಶಾಸ್ತ್ರವನ್ನು ಅನುಸರಿಸುವವರು ಲೋಕಕ್ಕೆ ಬಾಧ್ಯರಾಗಿದ್ದರೆ ನಂಬಿಕೆಯು ವ್ಯರ್ಥವಾಯಿತು, ವಾಗ್ದಾನವು ನಿರರ್ಥಕವಾಯಿತು.
[15] ಯಾಕೆಂದರೆ ಧರ್ಮಶಾಸ್ತ್ರವು ಜನರನ್ನು ದೇವರ ಕೋಪಕ್ಕೆ ಗುರಿಮಾಡುವಂಥದ್ದು, ಆದರೆ ಧರ್ಮಶಾಸ್ತ್ರವಿಲ್ಲದ ಪಕ್ಷದಲ್ಲಿ ಅದರ ಉಲ್ಲಂಘನೆಯೂ ಇಲ್ಲ.
[16] ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದ್ದಾಗಿದೆ, ಅದು ನಂಬಿಕೆಯ ಮೂಲಕವೇ ಸಿಕ್ಕುತ್ತದೆ, ಹೀಗೆ ಆ ವಾಗ್ದಾನವು ನಮ್ಮೆಲ್ಲರ ತಂದೆಯಾದಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ, ಅಬ್ರಹಾಮನಂಥ ನಂಬಿಕೆ ಇರುವವರೆಲ್ಲರಿಗೂ ಸಹ ಸ್ಥಿರವಾಗಿದೆ.
[17] “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು.
[18] “ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂಬುದಾಗಿ ತನಗೆ ಹೇಳಲ್ಪಟ್ಟ ಆ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ಅಬ್ರಹಾಮನು ತಾನು ಬಹು ಜನಾಂಗಗಳಿಗೆ ಪಿತನಾಗುವೆನೆಂದು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಿ ನಂಬಿದನು.
[19] ಅವನು ಹೆಚ್ಚು ಕಡಿಮೆ ನೂರು ವರ್ಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದು ಹೋಯಿತೆಂದು ಪರಿಗಣಿಸಿದ್ದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ.
[20] ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.
[21] ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು ಪೂರ್ಣದೃಢತೆಯುಳ್ಳವನಾದನು.
[22] ಆದ್ದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.
[23] ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತೆಂಬುದು ಅವನಿಗೋಸ್ಕರ ಮಾತ್ರವಲ್ಲದೆ ನಮಗೋಸ್ಕರವೂ ಬರೆದಿರುವುದು.
[24] ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರನ್ನು ನಂಬುವ ನಮಗೂ ಆ ನಂಬಿಕೆಯು ನೀತಿಯೆಂದು ಎಣಿಸಲ್ಪಡುವುದು.
[25] ದೇವರು ಯೇಸುವನ್ನು ನಮ್ಮ ಅಪರಾಧಗಳ ನಿಮಿತ್ತ ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವುದಕ್ಕಾಗಿಯೇ ಜೀವದಿಂದ ಎಬ್ಬಿಸಲ್ಪಟ್ಟನು.