[1] ಆದ್ದರಿಂದ ಸಹೋದರರೇ, ದೇವರ ಕನಿಕರವನ್ನು ನೆನಪಿಸುತ್ತಾ, ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ, ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಸಮರ್ಪಿಸಿರೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಇದೇ ವಿವೇಕ ಪೂರ್ವಕವಾದ ಆರಾಧನೆಯು.
[2] ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತವನ್ನು ತಿಳಿದವರಾಗಿ ಉತ್ತಮವಾದದ್ದೂ, ಮೆಚ್ಚಿಕೆಯಾದದ್ದೂ, ದೋಷವಿಲ್ಲದ್ದೂ ಯಾವ ಯಾವುದೆಂದು ವಿವೇಚಿಸುವಿರಿ.
[3] ದೇವರು ನನಗೆ ಕೃಪೆಮಾಡಿದ ಸೇವೆಯನ್ನು ಮಾಡುತ್ತಾ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವುದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ನಂಬಿಕೆಯ ಬಲವನ್ನು ಕೊಟ್ಟಿರುವನೋ, ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ತಾನು ಭಾವಿಸಿಕೊಳ್ಳಬೇಕು.
[4] ಯಾಕೆಂದರೆ ನಮಗೆ ಒಂದೇ ದೇಹದಲ್ಲಿ ಬಹಳ ಅಂಗಗಳಿರಲಾಗಿ ಆ ಎಲ್ಲಾ ಅಂಗಗಳಿಗೆ ಹೇಗೆ ಒಂದೇ ಕೆಲಸ ಇರುವುದಿಲ್ಲವೋ
[5] ಹಾಗೆಯೇ ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬೊಬ್ಬರಾಗಿ ವಿವಿಧ ಅಂಗಗಳಾಗಿದ್ದೇವೆ.
[6] ದೇವರು ನಮಗೆ ಕೃಪೆಮಾಡಿದ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ಹೊಂದಿದ ವರವು ಪ್ರವಾದನೆ ರೂಪವಾಗಿದ್ದರೆ, ನಮ್ಮ ನಂಬಿಕೆಗೆ ತಕ್ಕ ಹಾಗೆ ಪ್ರವಾದನೆ ಹೇಳೋಣ.
[7] ಅದು ಸಭಾಸೇವೆಯ ರೂಪವಾಗಿದ್ದರೆ ಪ್ರಾಮಾಣಿಕವಾಗಿ ಸಭಾಸೇವೆಯನ್ನು ಮಾಡುತ್ತಾ ಇರೋಣ.
[8] ಬೋಧಿಸುವವನು ಬೋಧಿಸುವುದರಲ್ಲಿಯೂ, ಬುದ್ಧಿಹೇಳುವವನು ಬುದ್ಧಿ ಹೇಳುವುದರಲ್ಲಿಯೂ ನಿರತನಾಗಿರಲಿ. ದಾನಕೊಡುವವನು ಯಥಾರ್ಥಮನಸ್ಸಿನಿಂದ ಕೊಡಲಿ. ದಾರಿ ತೋರಿಸುವವನು ಆಸಕ್ತಿಯಿಂದ ಅದನ್ನು ಮಾಡಲಿ. ಕಷ್ಟದಲ್ಲಿರುವವರಿಗೆ ಉಪಕಾರಮಾಡುವವನು ಸಂತೋಷವಾಗಿ ಮಾಡಲಿ.
[9] ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನವನ್ನು ತಿರಸ್ಕರಿಸಿರಿ, ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.
[10] ಕ್ರೈಸ್ತ ಸಹೋದರರು ಅಣ್ಣ ತಮ್ಮಂದಿರೆಂದು ತಿಳಿದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವಮರ್ಯಾದೆಗಳನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.
[11] ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರಿ.
[12] ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರಿ, ಕಷ್ಟಗಳಲ್ಲಿ ಸೈರಣೆಯುಳ್ಳವರಾಗಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.
[13] ದೇವಜನರಿಗೆ ಕೊರತೆ ಬಂದಾಗ ಸಹಾಯ ಮಾಡಿರಿ. ಅತಿಥಿಸತ್ಕಾರವನ್ನು ಆಚರಿಸಿರಿ.
[14] ನಿಮ್ಮನ್ನು ಹಿಂಸಿಸುವವರಿಗೆ ಆಶೀರ್ವಾದ ಮಾಡಿರಿ; ಶಪಿಸದೆ ಆಶೀರ್ವದಿಸಿರಿ.
[15] ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.
[16] ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರಿ ದೊಡ್ಡಸ್ತಿಕೆಯ ಮೇಲೆ ಮನಸ್ಸಿಡದೆ ದೀನರನ್ನು ಸ್ವೀಕರಿಸಿರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.
[17] ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಯುಕ್ತವಾದದ್ದೋ ಅದನ್ನೇ ಯೋಚಿಸಿ ಒಳ್ಳೆಯದನ್ನು ಮಾಡಿರಿ.
[18] ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.
[19] ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕೆಂದರೆ “‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು’ ಎಂದು ಕರ್ತನು ಹೇಳುತ್ತಾನೆಂಬುದಾಗಿ” ಬರೆದಿದೆ.
[20] ಹಾಗಾದರೆ “ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವುದಕ್ಕೆ ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವುದು”.
[21] ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೆತನದಿಂದ ಕೆಟ್ಟತನವನ್ನು ಸೋಲಿಸಿರಿ.