[1] ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷ ಹುಡುಕುವ ನೀನು ಯಾವನಾದರೂ ಸರಿಯೇ, ನಿನಗೆ ಅದರಿಂದ ಕ್ಷಮೆಯಿಲ್ಲ. ಯಾಕೆಂದರೆ, ಮತ್ತೊಬ್ಬರಲ್ಲಿ ದೋಷ ಹುಡುಕುವುದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ಮಾಡುತ್ತೀಯಲ್ಲಾ.
[2] ಅಂಥವುಗಳನ್ನು ಅನುಸರಿಸುವವರ ವಿಷಯದಲ್ಲಿ ದೇವರು ಕೊಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು.
[3] ಇದನ್ನು ಪರಿಗಣಿಸು ಎಲೈ ಮನುಷ್ಯನೇ, ಅಂಥವುಗಳನ್ನು ಅನುಸರಿಸುವವರಲ್ಲಿ ದೋಷಹುಡುಕಿ, ನೀನು ಅವುಗಳನ್ನೇ ಮಾಡುತ್ತಿರುವಲ್ಲಿ ದೇವರ ದಂಡನೆಯ ತೀರ್ಪನ್ನು ತಪ್ಪಿಸಿಕೊಂಡೇನೆಂದು ಯೋಚಿಸುತ್ತೀಯೋ?
[4] ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ?
[5] ನೀನು ನಿನ್ನ ಮೊಂಡತನವನ್ನೂ, ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸಿ ನ್ಯಾಯತೀರ್ಪಿನ ದಿನದವರೆಗೂ ನಿನಗಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಾ ಇದ್ದೀ.
[6] ದೇವರು ಪ್ರತಿಯೊಬ್ಬರಿಗೆ ಅವರವರ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವನು,
[7] ಯಾರು ಪ್ರಶಂಸೆ, ಗೌರವ, ಮತ್ತು ಭ್ರಷ್ಟರಹಿತ ಜೀವನ ಹೊಂದಬೇಕೆಂದು ಒಳ್ಳೆಯದನ್ನು ಬೇಸರಗೊಳ್ಳದೆ ಮಾಡುತ್ತಾರೋ, ಅವರಿಗೆ ನಿತ್ಯಜೀವವನ್ನು ಕೊಡುವನು.
[8] ಯಾರು ಸ್ವಾರ್ಥಸಾಧಕರಾಗಿದ್ದು, ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ, ಅವರ ಮೇಲೆ ದೇವರ ಕೋಪ ಮತ್ತು ರೌದ್ರಗಳು ಬರುವವು.
[9] ಯೆಹೂದ್ಯರಿಗೆ ಮೊದಲು ಅನಂತರ ಗ್ರೀಕರಿಗೆ, ಕೆಟ್ಟದ್ದನ್ನು ಅನುಸರಿಸುವ ಪ್ರತಿಯೊಬ್ಬ ಮನುಷ್ಯನ ಮೇಲೂ ಸಂಕಟವೂ, ಯಾತನೆಯೂ ಬರುವವು.
[10] ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ, ಒಳ್ಳೆಯದನ್ನು ಅನುಸರಿಸುವ ಪ್ರತಿಯೊಬ್ಬನಿಗೆ ಗೌರವವೂ, ಮಾನವೂ, ಮನಶಾಂತಿಯೂ ಉಂಟಾಗುವವು.
[11] ದೇವರಲ್ಲಿ ಪಕ್ಷಪಾತವಿಲ್ಲ.
[12] ಧರ್ಮಶಾಸ್ತ್ರವಿಲ್ಲದೆ ಪಾಪಮಾಡಿದವರು ಧರ್ಮಶಾಸ್ತ್ರವಿಲ್ಲದವರಾಗಿ ನಾಶಹೊಂದುವರು; ಮತ್ತು ಧರ್ಮಶಾಸ್ತ್ರಕ್ಕನುಸಾರವಾಗಿದ್ದು ಪಾಪಮಾಡಿದವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು.
[13] ಧರ್ಮಶಾಸ್ತ್ರವನ್ನು ಕೇಳಿದ ಮಾತ್ರದಿಂದಲೇ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗುವುದಿಲ್ಲ; ಅದನ್ನು ಅನುಸರಿಸುವವರೇ ನೀತಿವಂತರೆಂದು ನಿರ್ಣಯಿಸಲ್ಪಡುವರು.
[14] ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ, ತಮಗೆ ತಾವೇ ಧರ್ಮಶಾಸ್ತ್ರವಾಗಿದ್ದಾರೆ.
[15] ಇದರಿಂದ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಆಲೋಚನೆಗಳು ವಾದಿಪ್ರತಿವಾದಿಗಳಂತೆ, ಇದು ತಪ್ಪೆಂದು ಅದು ತಪ್ಪಲ್ಲವೆಂದು ಹೇಳುತ್ತದೆ.
[16] ನಾನು ಸಾರುವ ಸುವಾರ್ತೆಯಲ್ಲಿ ಬೋಧಿಸಿರುವ ಪ್ರಕಾರ ದೇವರು ಯೇಸು ಕ್ರಿಸ್ತನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ಹಿಡಿದು ವಿಚಾರಿಸುವ ದಿನದಂದು ಸೂಚಿಸುತ್ತದೆ. ಆ ದಿನದಲ್ಲಿ ಇದೆಲ್ಲಾ ತಿಳಿದು ಬರುವುದು.
[17] ನೀನು ಯೆಹೂದ್ಯನೆನಸಿಕೊಂಡು, ಧರ್ಮಶಾಸ್ತ್ರದಲ್ಲಿ ಭರವಸವಿಟ್ಟು, ದೇವರಲ್ಲಿ ಹೆಮ್ಮೆಯಿಂದ ಸಂತೋಷಿಸಿ,
[18] ಧರ್ಮಶಾಸ್ತ್ರದಿಂದ ಉಪದೇಶವನ್ನು ಹೊಂದಿ, ಆತನ ಚಿತ್ತವನ್ನು ಬಲ್ಲವನೂ, ಇದು ತಕ್ಕದ್ದು ಅದು ತಕ್ಕದ್ದಲ್ಲವೆಂದು ವಿವೇಚಿಸುವವನೂ ಆಗಿದ್ದೀಯೆ.
[19] ಧರ್ಮಶಾಸ್ತ್ರದಲ್ಲಿ ಜ್ಞಾನಸತ್ಯಗಳ ಸ್ವರೂಪವೇ ನಿನಗೆ ತಿಳಿದಿರುವುದರಿಂದ ಕುರುಡರಿಗೆ ದಾರಿತೋರಿಸುವವನೂ, ಕತ್ತಲೆಯಲ್ಲಿರುವವರಿಗೆ ಬೆಳಕೂ,
[20] ತಿಳಿವಳಿಕೆಯಿಲ್ಲದವರಿಗೆ ಶಿಕ್ಷಕನೂ, ಬಾಲಕರಿಗೆ ಉಪಾಧ್ಯಾಯನೂ, ಆಗಿದ್ದೇನೆಂದು ನಂಬಿಕೊಂಡಿದ್ದಿಯೇ,
[21] ಮತ್ತೊಬ್ಬನಿಗೆ ಉಪದೇಶ ಮಾಡುವ ನಿನಗೆ ನೀನೇ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನೇ ಕಳ್ಳತನ ಮಾಡುತ್ತಿಯೇನು?
[22] ಹಾದರ ಮಾಡಬಾರದೆಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತಿಯೇನು?
[23] ಧರ್ಮಶಾಸ್ತ್ರದಲ್ಲಿ ಹೆಮ್ಮೆಯಿಂದ ಹೆಚ್ಚಳಪಡುವ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದು ದೇವರನ್ನು ಅವಮಾನಪಡಿಸುತ್ತೀಯೋ?
[24] “ನಿಮ್ಮ ದೆಸೆಯಿಂದ ಅನ್ಯಜನರ ಮಧ್ಯದಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆಂದು” ಬರೆದಿದೆಯಲ್ಲಾ.
[25] ನೀನು ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ನಿನಗೆ ಪ್ರಯೋಜನಕರವಾಗಿದೆ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.
[26] ಹೀಗಿರಲಾಗಿ ಸುನ್ನತಿಯಿಲ್ಲದವನು ಧರ್ಮಶಾಸ್ತ್ರದ ನೇಮಗಳ ಪ್ರಕಾರ ನಡೆದರೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸಲ್ಪಡುವುದಿಲ್ಲವೇ?
[27] ನೀವು ಸುನ್ನತಿ ಮಾಡಿಸಿಕೊಂಡಿದ್ದಿರಿ; ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ಮೀರಿ ನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿ ಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ.
[28] ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.
[29] ಆದರೆ ಆಂತರಿಕವಾಗಿ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಸುನ್ನತಿಯನ್ನು ಹೃದಯದಲ್ಲಿ ಹೊಂದಿರುವವನೇ ಸುನ್ನತಿಯುಳ್ಳವನು. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥ ಮನುಷ್ಯನಿಗೆ ಬರುವ ಪ್ರಶಂಸೆಯು, ದೇವರಿಂದಲೇ ಹೊರತು ಮನುಷ್ಯರಿಂದ ಬರುವುದಿಲ್ಲ.