[1] ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಾಗಲಿ ಎಂದು ನಾವು ಇನ್ನೂ ಪಾಪವನ್ನು ಮಾಡುತ್ತಲೇ ಇರಬೇಕೋ? ಹಾಗೆ ಎಂದಿಗೂ ಹಾಗಾಗಬಾರದು.
[2] ಪಾಪದ ಪಾಲಿಗೆ ಸತ್ತವರಾದ ನಾವು ಇನ್ನು ಅದರಲ್ಲೇ ಬದುಕುವುದು ಹೇಗೆ?
[3] ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?
[4] ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.
[5] ಹೇಗೆಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.
[6] ನಮಗೆ ತಿಳಿದಿರುವಂತೆ, ನಮ್ಮ ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ.
[7] ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ.
[8] ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ.
[9] ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ.
[10] ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ,
[11] ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ.
[12] ಹೀಗಿರುವುದರಿಂದ ಸಾವಿಗೆ ಒಳಗಾಗುವ ಈ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ.
[13] ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.
[14] ಯಾಕೆಂದರೆ ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
[15] ಹಾಗಾದರೇನು? ನಾವು ಧರ್ಮಶಾಸ್ತ್ರಾಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಎಂದಿಗೂ ಮಾಡಬಾರದು.
[16] ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ನೀವು ಒಪ್ಪಿಸಿ ಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬುದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; ನಂಬಿಕೆಯೆಂಬ ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ
[17] ಆದರೆ ನೀವು ಮೊದಲು ಪಾಪಕ್ಕೆ ದಾಸರಾಗಿದ್ದರೂ ನಿಮಗೆ ಕಲಿಸಿಕೊಟ್ಟ ಬೋಧನೆಗೆ ನೀವು ಮನಃಪೂರ್ವಕವಾಗಿ ಅಧೀನರಾದ್ದರಿಂದಲೂ,
[18] ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದ್ದರಿಂದಲೂ ದೇವರಿಗೆ ಸ್ತೋತ್ರವಾಗಲಿ.
[19] ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು ಲೋಕದ ರೀತಿಯಾಗಿ ಮಾತನಾಡುತ್ತೇನೆ. ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.
[20] ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಗೆ ಒಳಗಾಗಿರಲಿಲ್ಲ.
[21] ಆದರೆ ನೀವು ಮೊದಲು ಮಾಡಿದ್ದ ಕೃತ್ಯಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯಾಗುತ್ತಿದೆ. ಕೊನೆಗೆ ಅವುಗಳಿಂದ ಬರುವುದು ಮರಣವಲ್ಲವೇ?
[22] ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದ್ದರಿಂದ ನಿಮಗೆ ಶುದ್ಧೀಕರಣವೆಂಬ ಫಲವು ದೊರಕಿರುವುದಲ್ಲದೆ ಅಂತ್ಯದಲ್ಲಿ ನಿತ್ಯ ಜೀವವನ್ನು ಹೊಂದುವಿರಿ.
[23] ಯಾಕೆಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಕೃಪಾವರವು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವವೇ ಆಗಿದೆ.