[1] ಹಾಗಾದರೆ ದೇವರು ತನ್ನ ಸ್ವಂತ ಜನರನ್ನು ಬೇಡವೆಂದು ತಿರಸ್ಕರಿಸಿದನೋ ಎಂದು ಕೇಳುತ್ತೇನೆ ಎಂದಿಗೂ ಇಲ್ಲ. ನಾನು ಸಹ ಇಸ್ರಾಯೇಲ್ಯನು, ಅಬ್ರಹಾಮನ ಸಂತತಿಯವನು, ಬೆನ್ಯಾಮೀನನ ಕುಲದವನು ಆಗಿದ್ದೇನಲ್ಲಾ.
[2] ದೇವರು ತಾನು ಮುಂದಾಗಿ ತನ್ನ ಜನರಾಗುವುದಕ್ಕೆ ಗೊತ್ತುಮಾಡಿಕೊಂಡಿದ್ದ ಪ್ರಜೆಗಳನ್ನು ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಧರ್ಮಶಾಸ್ತ್ರವು ಹೇಳುವ ಮಾತು ನಿಮಗೆ ತಿಳಿಯದೋ?
[3] ಅವನು ದೇವರ ಮುಂದೆ, “ಕರ್ತನೇ ಅವರು ನಿನ್ನ ಪ್ರವಾದಿಗಳನ್ನು ಸಂಹರಿಸಿದ್ದಾರೆ, ನಿನ್ನ ಯಜ್ಞವೇದಿಗಳನ್ನು ಒಡೆದು ಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಅವರು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ” ಎಂದು ಇಸ್ರಾಯೇಲ್ಯರ ಮೇಲೆ ದೂರು ಹೇಳಿದ್ದಕ್ಕೆ.
[4] ದೇವರ ಉತ್ತರವೇನೆಂದರೆ, “ಬಾಳನ ವಿಗ್ರಹಕ್ಕೆ ಅಡ್ಡಬೀಳದೆ ಇರುವ ಏಳುಸಾವಿರ ಪುರುಷರನ್ನು ನನಗಾಗಿ ಉಳಿಸಿಕೊಂಡಿದ್ದೇನೆ” ಎಂಬುದೇ.
[5] ಅದರಂತೆ ಈಗಿನ ಕಾಲದಲ್ಲಿಯೂ ದೇವರ ಕೃಪೆಯಿಂದ ಆರಿಸಿಕೊಂಡವರಾದ ಒಂದು ಭಾಗವು ಉಳಿದಿದ್ದಾರೆ.
[6] ಕೃಪೆಯಿಂದ ಆರಿಸಿಕೊಂಡನು ಅಂದ ಮೇಲೆ ಒಳ್ಳೆಯ ಕಾರ್ಯದಿಂದಲ್ಲ. ಹಾಗಲ್ಲದ ಪಕ್ಷಕ್ಕೆ ಕೃಪೆಯನ್ನು ಇನ್ನು ಕೃಪೆಯನ್ನುವುದಕ್ಕಾಗುವುದಿಲ್ಲ.
[7] ಇದರಿಂದ ತಿಳಿಯತಕ್ಕದ್ದೇನು? ಇಸ್ರಾಯೇಲ್ಯರು ಹುಡುಕಿದ್ದನ್ನು ಅವರು ಹೊಂದಲಿಲ್ಲ. ಅವರೊಳಗೆ ಆರಿಸಲ್ಪಟ್ಟವರಿಗೆ ಅದು ದೊರೆಯಿತು. ಉಳಿದವರು ಮೊಂಡರಾದರು.
[8] “ದೇವರು ಅವರಿಗೆ ಮಂದಬುದ್ಧಿಯ ಆತ್ಮನನ್ನು, ಅಂದರೆ ಕಾಣದ ಕಣ್ಣುಗಳನ್ನೂ, ಕೇಳದ ಕಿವಿಗಳನ್ನೂ ಕೊಟ್ಟನು. ಈ ಭಾವವು ಈ ಹೊತ್ತಿನವರೆಗೂ ಹಾಗೆಯೇ ಇದೆ” ಎಂದು ಬರೆದ ಪ್ರಕಾರ ಅವರಿಗೆ ಆಯಿತು.
[9] ಇದಲ್ಲದೆ “ಅವರ ಭೋಜನವೇ ಅವರಿಗೆ ಬಲೆಯೂ, ಜಾಲವೂ, ಅಡೆತಡೆಯೂ, ಪ್ರತಿಕಾರವೂ ಆಗಲಿ;
[10] ಅವರ ಕಣ್ಣು ಮೊಬ್ಬಾಗಿ ಕಾಣದೆಹೋಗಲಿ ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರುವಂತೆ ಮಾಡು” ಎಂದು ದಾವೀದನು ಹೇಳುತ್ತಾನೆ.
[11] ಹಾಗಾದರೆ “ಅವರು ಬಿದ್ದೇಹೋಗುವಂತೆ ಎಡವಿದರೇನು” ಎಂದು ಕೇಳುತ್ತೇನೆ. ಹಾಗೆ ಎಂದಿಗೂ ಆಗಬಾರದು ಅವರು ಬಿದ್ದುಹೋದದ್ದರಿಂದ ಕ್ರಿಸ್ತನಿಂದ ಉಂಟಾಗುವ ರಕ್ಷಣೆಯು ಅನ್ಯಜನರಿಗೆ ಉಂಟಾಯಿತು. ಇದರಿಂದ ದೇವರು ಅವರಲ್ಲಿ ಅಸೂಯೆ ಹುಟ್ಟಿಸುತ್ತಾನೆ.
[12] ಅವರು ಬಿದ್ದುಹೋದದ್ದು ಸರ್ವಲೋಕದ ಸೌಭಾಗ್ಯಕ್ಕೂ, ಅವರು ಸೋತುಹೋದದ್ದು ಅನ್ಯಜನಗಳ ಸಂಪತ್ತಿಗೂ ಮಾರ್ಗವಾಗಿರಲಾಗಿ ಅವರ ಪೂರ್ಣ ಪುನಃಸ್ಥಾಪನೆಯು ಪ್ರಪಂಚಕ್ಕೆ ಎಷ್ಟೋ ಹೆಚ್ಚಾದ ಭಾಗ್ಯಕ್ಕೆ ಕಾರಣವಾಗುವುದು.
[13] ಅನ್ಯಜನರಾಗಿರುವ ನಿಮಗೆ ನಾನು ಹೇಳುವುದೇನಂದರೆ, ನಾನು ಅನ್ಯಜನರಿಗೆ ಅಪೊಸ್ತಲನಾಗಿರಲಾಗಿ ನನ್ನ ಸೇವೆಯ ಬಗ್ಗೆ ಹೊಗಳಿಕೊಳ್ಳುತ್ತಿದ್ದೇನೆ.
[14] ಇದರಿಂದಾಗಿ ಸ್ವಜನರಲ್ಲಿ ಅಸೂಯೆಯನ್ನು ಕೆರಳಿಸಿ ಅವರಲ್ಲಿ ಕೆಲವರನ್ನು ರಕ್ಷಣೆಯ ಮಾರ್ಗಕ್ಕೆ ತಂದೇನು.
[15] ಯಾಕೆಂದರೆ ಇಸ್ರಾಯೇಲ್ಯರನ್ನು ನಿರಾಕರಿಸುವುದರಿಂದ ಲೋಕವು ದೇವರ ಸಂಗಡ ಸಂಧಾನವಾಗುವುದಕ್ಕೆ ಮಾರ್ಗವಾದ ಮೇಲೆ ಅವರನ್ನು ಸೇರಿಸಿಕೊಳ್ಳುವುದರಿಂದ ಏನಾಗುವುದು? ಸತ್ತವರು ಜೀವಿತರಾಗಿ ಎದ್ದುಬಂದತಾಗುವುದಿಲ್ಲವೇ.
[16] ಕಣಕದಲ್ಲಿ ಪ್ರಥಮಫಲವನ್ನು ದೇವರಿಗರ್ಪಿಸಿದ ಮೇಲೆ ಕಣಕವೆಲ್ಲಾ ಪವಿತ್ರವಾಯಿತು. ಬೇರು ಶುದ್ಧವಾಗಿದ್ದ ಮೇಲೆ ಕೊಂಬೆಗಳೂ ಹಾಗೆಯೇ.
[17] ಆದರೆ ಕೆಲವು ಕೊಂಬೆಗಳನ್ನು ಮುರಿದುಹಾಕಿ ಕಾಡೆಣ್ಣೆ ಮರದಂತಿರುವ ನಿನ್ನನ್ನು ಅವುಗಳ ಜಾಗದಲ್ಲಿ ಕಸಿಮಾಡಿರಲಾಗಿ ಊರೆಣ್ಣೇಮರದ ರಸವತ್ತಾದ ಬೇರಿನಲ್ಲಿ ಅದು ಪಾಲುಹೊಂದಿದ್ದರೂ ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಅಂಟಿಸಿದ ಮೇಲೆ ನೀನು ಕೊಂಬೆಯ ಕುರಿತು ಹೆಚ್ಚಿಸಿಕೊಳ್ಳಬೇಡ.
[18] ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ. ಅದು ನಿನಗೆ ಆಧಾರವಾಗಿದೆ.
[19] ಈ ಮಾತಿಗೆ, “ನನ್ನನ್ನು ಕಸಿಮಾಡುವುದಕ್ಕಾಗಿ ಕೊಂಬೆಗಳು ಮುರಿದುಹಾಕಲ್ಪಟ್ಟವಲ್ಲಾ” ಎಂದು ನೀನು ಒಂದು ವೇಳೆ ಹೇಳಬಹುದು.
[20] ನೀನು ಹೇಳುವುದು ನಿಜ. ಅವರು ನಂಬದೇ ಹೋದ್ದದರಿಂದ ಮುರಿದುಹಾಕಲ್ಪಟ್ಟರು. ನೀನು ನಿಂತಿರುವುದು ನಂಬಿಕೆಯಿಂದಲೇ.
[21] ಗರ್ವಪಡಬೇಡ, ಭಯದಿಂದಿರು. ದೇವರು ಹುಟ್ಟುಕೊಂಬೆಗಳನ್ನು ಉಳಿಸದೆ ಇದ್ದ ಮೇಲೆ ನಿನ್ನನ್ನೂ ಉಳಿಸುವುದಿಲ್ಲ.
[22] ಆದ್ದರಿಂದ ದೇವರ ದಯೆಯನ್ನೂ, ದಂಡನೆಯನ್ನು ನೋಡು; ಬಿದ್ದವರಿಗೆ ದಂಡನೆಯನ್ನೂ, ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ಆತನ ದಯೆಯನ್ನು ಹೊಂದುವಿ. ಇಲ್ಲವಾದರೆ ನಿನ್ನನ್ನೂ ಕಡಿದುಹಾಕುವನು.
[23] ಇಸ್ರಾಯೇಲ್ಯರ ಕೂಡ ಇನ್ನು ಅಪನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಅವರನ್ನೂ ಕಸಿಮಾಡುವನು. ದೇವರು ಅವರನ್ನು ತಿರುಗಿ ಕಸಿಕಟ್ಟುವುದಕ್ಕೆ ಸಮರ್ಥನಾಗಿದ್ದಾನೆ.
[24] ನೀನು ಹುಟ್ಟು ಕಾಡುಮರದಿಂದ ಕಡಿದು ತೆಗೆಯಲ್ಪಟ್ಟು ನಿನಗೆ ಸಂಬಂಧಪಡದ ಊರು ಮರದಲ್ಲಿ ಕಸಿಕಟ್ಟಿಸಿಕೊಂಡವನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವುದು ಎಷ್ಟೋ ಯುಕ್ತವಾಗಿದೆಯಲ್ಲವೇ.
[25] ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತರೆಂಬುದಾಗಿ ಎಣಿಸಿಕೊಳ್ಳದೆ ಇರಲು ಇದುವರೆಗೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿಸಬೇಕೆಂದು ಅಪೇಕ್ಷಿಸುತ್ತೇನೆ ಅದೇನೆಂದರೆ ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಮೊಂಡತನವು ಯಾವಾಗಲೂ ಇರದೆ ಅನ್ಯಜನಗಳ ಸಮುದಾಯವು ದೇವರ ರಾಜ್ಯದಲ್ಲಿ ಸೇರುವ ತನಕ ಮಾತ್ರ ಇರುವುದು.
[26] ಆ ನಂತರ ಇಸ್ರಾಯೇಲ್ ಜನರೆಲ್ಲರೂ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ ಧರ್ಮಶಾಸ್ತ್ರದಲ್ಲಿ ಬಿಡಿಸುವವನು “ಚೀಯೋನಿನೊಳಗಿಂದ ಹೊರಟು ಬಂದು ಯಾಕೋಬನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆಮಾಡುವನು.
[27] ನಾನು ಅವರ ಸಂಗಡ ಮಾಡಿಕೊಂಡ ಈ ಒಡಂಬಡಿಕೆಯು ನಾನು ಅವರ ಪಾಪಗಳನ್ನು ಪರಿಹರಿಸುವಾಗ ನೆರವೇರುವುದು.” ಎಂದು ಬರೆದಿದೆ.
[28] ಅವರು ಸುವಾರ್ತೆಯನ್ನು ಬೇಡವೆಂದದ್ದರಿಂದ ದೇವರು ನಿಮಗೆ ಹಿತವನ್ನು ಉಂಟುಮಾಡಿ ಅವರನ್ನು ಶತ್ರುಗಳೆಂದೆಣಿಸಿದ್ದಾನೆ. ಆದರೂ ಅವರು ತಾನು ಆರಿಸಿಕೊಂಡ ಪೂರ್ವಿಕರ ವಂಶಸ್ಥರಾಗಿರುವುದರಿಂದ ಅವರನ್ನು ಪ್ರಿಯರೆಂದು ಎಣಿಸಿದ್ದಾನೆ.
[29] ದೇವರು ವರಗಳನ್ನು ಅನುಗ್ರಹಿಸುವುದಕ್ಕೆ ಜನರನ್ನು ಕರೆಯುವುದ್ದಕ್ಕೂ ಮನಸ್ಸು ಬದಲಾಯಿಸುವವನಲ್ಲ.
[30] ಯಾವ ಪ್ರಕಾರ ನೀವು ಪೂರ್ವದಲ್ಲಿ ಅವಿಧೇಯರಾಗಿದ್ದರೂ ಈಗ ಅವರ ಅವಿಧೇಯತೆಯ ದೆಸೆಯಿಂದ ಕರುಣೆ ಹೊಂದಿದ್ದೀರೋ,
[31] ಅದೇ ಪ್ರಕಾರವಾಗಿ ಇಸ್ರಾಯೇಲ್ಯರೂ ಈಗ ಅವಿಧೇಯರಾಗಿದ್ದರೂ ನಿಮಗೆ ದೊರಕಿದ ಕರುಣೆಯನ್ನು ಅವರು ಹೊಂದುವರು.
[32] ಯಾಕೆಂದರೆ ದೇವರು ಎಲ್ಲರಿಗೂ ಕರುಣೆಯನ್ನು ತೋರಿಸಬೇಕೆಂಬ ಉದ್ದೇಶವುಳ್ಳವನಾಗಿದ್ದು ಎಲ್ಲರನ್ನೂ ಅವಿಧೇಯತೆಯೆಂಬ ದುಸ್ಥಿತಿಯಲ್ಲಿ ಮುಚ್ಚಿಹಾಕಿದ್ದಾನೆ.
[33] ಆಹಾ ದೇವರ ಐಶ್ವರ್ಯವೂ, ಜ್ಞಾನವೂ, ವಿವೇಕವೂ ಅಗಾಧ. ಆತನ ನ್ಯಾಯತೀರ್ಪುಗಳು ಎಷ್ಟೋ ಆಗಮ್ಯವಾದದ್ದು. ಆತನ ಮಾರ್ಗಗಳು ಆಗೋಚರವಾದವುಗಳೂ ಆಗಿವೆ.
[34] “ಕರ್ತನ ಮನಸ್ಸನ್ನು ತಿಳಿದುಕೊಂಡವರಾರು? ಆತನಿಗೆ ಆಲೋಚನಾಕರ್ತನಾಗಿದ್ದವನು ಯಾರು?
[35] ಮುಂಗಡವಾಗಿ ಆತನಿಗೆ ಕೊಟ್ಟು ಆನಂತರ ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?”
[36] ಸಮಸ್ತವೂ ಆತನಿಂದ ಉತ್ಪತ್ತಿಯಾಗಿ, ಆತನಿಂದ ನಡೆಯುತ್ತಾ, ಇರುವುದೆಲ್ಲವೂ ಅತನಿಗೋಸ್ಕರವೇ. ಆತನಿಗೇ ಸದಾಕಾಲವೂ ಮಹಿಮೆಯುಂಟಾಗಲಿ ಸ್ತೋತ್ರ. ಅಮೆನ್.