Skip to content
Opens in a new window
Listen to this chapter • 4:40

[1] ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ನಮಗೆ ಸಮಾಧಾನವುಂಟು.

[2] ಈಗ ನಾವು ನೆಲೆಗೊಂಡಿರುವ ದೇವರ ಕೃಪಾಶ್ರಯಕ್ಕೆ ಆತನ ಮುಖಾಂತರವೇ ನಂಬಿಕೆಯಿಂದ ಸೇರಿದವರಾಗಿದ್ದೇವೆ ಮತ್ತು ದೇವರ ಮಹಿಮೆಯ ನಿರೀಕ್ಷೆಯಲ್ಲಿ ಉಲ್ಲಾಸಪಡುತ್ತೇವೆ.

[3] ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಕಷ್ಟಸಂಕಟಗಳಲ್ಲಿಯೂ ಉಲ್ಲಾಸವಾಗಿದ್ದೇವೆ.

[4] ಏಕೆಂದರೆ ಕಷ್ಟಸಂಕಟಗಳು ತಾಳ್ಮೆಯನ್ನು, ತಾಳ್ಮೆಯೂ ಸದ್ಗುಣವನ್ನು, ಸದ್ಗುಣವು ನಿರೀಕ್ಷೆಯನ್ನು ಉಂಟುಮಾಡುತ್ತದೆಂದು ಬಲ್ಲೆವು.

[5] ಈ ನಿರೀಕ್ಷೆಯು ನಮ್ಮನ್ನು ಆಶಾಭಂಗಪಡಿಸುವುದಿಲ್ಲ, ಏಕೆಂದರೆ, ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಸುರಿಸಿದ್ದಾನೆ.

[6] ನಾವು ಬಲಹೀನರಾಗಿದ್ದಾಗಲೇ ಕ್ರಿಸ್ತನು ನಿಯಮಿತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು.

[7] ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಿಗಾಗಿ ಪ್ರಾಣಕೊಡುವುದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಬಹುದು.

[8] ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ.

[9] ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕವಾಗಿ ದೇವರ ಕೋಪದಿಂದ ಖಂಡಿತವಾಗಿಯೂ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ?

[10] ನಾವು ದೇವರಿಗೆ ಶತ್ರುಗಳಾಗಿದ್ದಾಗಲೇ ನಮಗೆ ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಂಧಾನವಾಯಿತು ಆತನ ಕೂಡ ಸಂಧಾನವಾದ ನಮಗೆ ಮಗನ ಜೀವದಿಂದ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ?

[11] ಇಷ್ಟು ಮಾತ್ರವಲ್ಲದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಸಂಧಾನವಾದದ್ದರಿಂದ ಆತನ ಮುಖಾಂತರ ದೇವರಲ್ಲಿ ಉಲ್ಲಾಸಪಡುತ್ತೇವೆ.

[12] ಈ ವಿಷಯ ಹೇಗೆಂದರೆ ಒಬ್ಬ ಮನುಷ್ಯನಾದ ಆದಾಮನಿಂದಲೇ ಪಾಪವೂ ಲೋಕದೊಳಗೆ ಪ್ರವೇಶಿಸಿತು ಮತ್ತು ಮರಣವು ಪಾಪದ ನಿಮಿತ್ತ, ಹಾಗು, ಮರಣವು ಎಲ್ಲರು ಪಾಪಮಾಡಿದ್ದರಿಂದ ಎಲ್ಲರಿಗೂ ಪ್ರಾಪ್ತಿಯಾಯಿತು.

[13] ಧರ್ಮಶಾಸ್ತ್ರವು ಕೊಡುವುದಕ್ಕೆ ಮುಂಚೆಯೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರವಿಲ್ಲದಿರುವಾಗ ಪಾಪವು ಗಣನೆಗೆ ಬರುವುದಿಲ್ಲ.

[14] ಆದರೂ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣದ ಆಳ್ವಿಕೆಯು ನಡೆಯುತ್ತಿತ್ತು. ಆದಾಮನು ದೇವರ ಆಜ್ಞೆಯನ್ನು ಮೀರಿ ಮಾಡಿದ ಪಾಪಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. ಆ ಆದಾಮನು ಬರಬೇಕಾದ ಒಬ್ಬಾತನಾದ ಕ್ರಿಸ್ತನಿಗೆ ಪ್ರತಿರೂಪನಾಗಿದ್ದಾನೆ.

[15] ಆದರೆ ಆ ಅಪರಾಧದ ಸಂಗತಿಗೂ ದೇವರ ಕೃಪಾದಾನದ ಸಂಗತಿಗೂ ಬಹಳ ವ್ಯತ್ಯಾಸವುಂಟು. ಹೇಗೆಂದರೆ ಆ ಒಬ್ಬನ ಅಪರಾಧದಿಂದ ಬಹುಮಂದಿ ಸತ್ತರು ಹೀಗಿರಲಾಗಿ ದೇವರ ಕೃಪೆಯು ಯೇಸು ಕ್ರಿಸ್ತನೆಂಬ ಈ ಒಬ್ಬ ಪುರುಷನ ಕೃಪೆಯಿಂದ ಸಿಕ್ಕುವ ವರವೂ ಅನೇಕರಿಗೆ ಹೇರಳವಾಗಿ ಸಿದ್ಧವಾಗಿರುವುದು ನಿಶ್ಚಯವಲ್ಲವೇ.

[16] ದೇವರ ವರವು ಒಬ್ಬ ಮನುಷ್ಯನ ಪಾಪದ ಫಲದಂತಿರುವುದಿಲ್ಲ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ಅಪರಾಧಿಗಳಾಗಿದ್ದಾರೆಂದು ನಿರ್ಣಯಿಸಲ್ಪಟ್ಟಿತು. ಆದರೆ ದೇವರ ಕೃಪಾದಾನವು ಅನೇಕರ ಪಾಪಗಳನ್ನು ವಿಮೋಚಿಸಿ ಅವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೆ ಕಾರಣವಾಯಿತು.

[17] ಒಬ್ಬನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಮರಣವು ಆಳುವುದಾದರೆ ದೇವರು ಧಾರಾಳವಾಗಿ ಅನುಗ್ರಹಿಸುವ ಕೃಪಾದಾನವನ್ನೂ, ನೀತಿಯೆಂಬ ವರವನ್ನೂ ಹೊಂದಿದವರು ಯೇಸು ಕ್ರಿಸ್ತನೆಂಬ ಈ ಒಬ್ಬ ಪುರುಷನ ಮೂಲಕ ಜೀವಭರಿತರಾಗಿ ಆಳುವುದು ಮತ್ತೂ ನಿಶ್ಚಯವಲ್ಲವೇ.

[18] ಹೀಗಿರಲಾಗಿ ಆದಾಮನ ಒಂದೇ ಅಪರಾಧದ ಮೂಲಕ ಎಲ್ಲಾ ಮನುಷ್ಯರಿಗೆ ಮರಣವೆಂಬ ನಿರ್ಣಯವು ಹೇಗೆ ಉಂಟಾಯಿತೋ ಹಾಗೆಯೇ ಕ್ರಿಸ್ತನ ಒಂದೇ ಸತ್ಕಾರ್ಯದಿಂದ ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವು ಫಲಿಸಿತು.

[19] ಒಬ್ಬನ ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು.

[20] ಅಪರಾಧಗಳು ಹೆಚ್ಚಾಗುತ್ತಾ ಬಂದೆಂತಲ್ಲಾ ಧರ್ಮಶಾಸ್ತ್ರವು ಅದರೊಂದಿಗೆ ಪ್ರವೇಶಿಸಿತು. ಆದರೆ ಪಾಪವು ಹೆಚ್ಚಾದಾಗಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.

[21] ಹೀಗೆ ಪಾಪವು ಮರಣವನ್ನುಂಟು ಮಾಡುತ್ತಾ ಅಧಿಕಾರವನ್ನು ನಡಿಸಿದ ಹಾಗೆಯೇ ದೇವರ ಕೃಪೆಯು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನೀತಿಯಿಂದ ನಿತ್ಯಜೀವವನ್ನುಂಟುಮಾಡುತ್ತಾ ಆಳುವಂತಾಯಿತು.

ರೋಮಾಪುರದವರಿಗೆ — Chapters