Skip to content
Opens in a new window
Listen to this chapter • 3:56

[1] ಸಹೋದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬುದೇ ನನ್ನ ಮನೋಭಿಲಾಷೆಯೂ ಮತ್ತು ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.

[2] ದೇವರ ಬಗ್ಗೆ ಆಸಕ್ತಿಯುಳ್ಳವರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿ ಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದುದಲ್ಲ.

[3] ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವಂತ ನೀತಿಯನ್ನೇ; ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದುದ್ದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ.

[4] ನಂಬುವವರೆಲ್ಲರಿಗೆ ನೀತಿಯನ್ನು ದೊರಕಿಸಿಕೊಡುವುದಕ್ಕಾಗಿ ಕ್ರಿಸ್ತನೇ ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು.

[5] ಧರ್ಮಶಾಸ್ತ್ರದ ನೀತಿಯನುಸಾರ, “ಅದನ್ನು ಅನುಸರಿಸಿದವನು ಅದರಿಂದಲೇ ಜೀವಿಸುವನೆಂದು” ಮೋಶೆಯು ಬರೆಯುತ್ತಾನೆ.

[6] ಆದರೆ ನಂಬಿಕೆಯಿಂದುಂಟಾಗುವ ನೀತಿಯು ಈ ರೀತಿಯಾಗಿ ಹೇಳುತ್ತದೆ. “‘ಕ್ರಿಸ್ತನನ್ನು ಭೂಮಿಗಿಳಿಸಿಕೊಂಡು ಬರುವುದಕ್ಕಾಗಿ ಮೇಲಣ ಲೋಕಕ್ಕೆ ಏರಿಹೋದವರಾರು?’

[7] ಎಂದಾಗಲಿ ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರುವುದಕ್ಕಾಗಿ ಯಾರು ಪಾತಾಳಲೋಕಕ್ಕೆ ಇಳಿದುಹೋದರು? ಎಂದಾಗಲಿ ನಿನ್ನ ಮನಸ್ಸಿನಲ್ಲಿ ಅಂದುಕೊಳ್ಳಬಾರದು.’” ಆದರೆ ಅದು ಏನನ್ನು ಹೇಳುತ್ತದೆ.

[8] “ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ, ನಿನ್ನ ಹೃದಯದಲ್ಲಿಯೂ ಇದೆ.” ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.

[9] ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ.

[10] ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ.

[11] “ಆತನ ಮೇಲೆ ನಂಬಿಕೆಯಿಡುವ ಒಬ್ಬನಾದರೂ ಆಶಾಭಂಗಪಡುವುದಿಲ್ಲವೆಂದು” ಧರ್ಮಶಾಸ್ತ್ರವು ಹೇಳುತ್ತದೆ.

[12] ಈ ವಿಷಯದಲ್ಲಿ ಯೆಹೂದ್ಯರಿಗೂ ಅಥವಾ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವುದಕ್ಕೆ ಶಕ್ತನಾಗಿದ್ದಾನೆ.

[13] ಆದ್ದರಿಂದ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ.

[14] ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ?

[15] ಇದಕ್ಕೆ ಸರಿಯಾಗಿ “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ” ಎಂದು ಬರೆದಿದೆ.

[16] ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, “ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?” ಎಂದು ನುಡಿಯುತ್ತಾನೆ.

[17] ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.

[18] ಆದರೂ “ಅವರಿಗೆ ಕೇಳಿಸಲಿಲ್ಲವೇನೋ?” ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.”

[19] ಆದರೆ “ಇಸ್ರಾಯೇಲ್ಯರು ಆ ವಾರ್ತೆಯನ್ನು ತಿಳಿದುಕೊಳ್ಳಲಿಲ್ಲವೇನು” ಎಂದು ಹೇಳುತ್ತೇನೆ. ಈ ವಿಷಯದಲ್ಲಿ, “ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಅಸೂಯೆ ಹುಟ್ಟುವಂತೆ ಪ್ರೆರೇಪಿಸುತ್ತೇನೆ; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ರೊಚ್ಚಿಗೆಬ್ಬಿಸುವೆನು” ಎಂದು ಮೊದಲು ಮೋಶೆಯು ಹೇಳುತ್ತಾನೆ.

[20] ಇದಲ್ಲದೆ ಯೆಶಾಯನು ಧೈರ್ಯವಾಗಿ ಮಾತನಾಡಿ, “ನನ್ನನ್ನು ಹುಡುಕದವರಿಗೂ ನಾನು ಸಿಕ್ಕಿದೆನು, ನನ್ನನ್ನು ಕೇಳದವರಿಗೆ ನಾನು ಪ್ರತ್ಯಕ್ಷನಾದೆನು,” ಎಂದು ಹೇಳುತ್ತಾನೆ.

[21] ಆದರೆ ಅವನು ಇಸ್ರಾಯೇಲ್ಯರನ್ನು ಕುರಿತು, “ನನ್ನ ಮಾತಿಗೆ ಅವಿಧೇಯರಾಗಿ ಎದುರುಮಾತನಾಡುವ ಜನರನ್ನು ನಾನು ದಿನವೆಲ್ಲಾ ಎಡೆಬಿಡದೆ ಕೈ ಚಾಚಿ ಕರೆದೆನೆಂದು” ಆತನು ಹೇಳುತ್ತಾನೆ.

ರೋಮಾಪುರದವರಿಗೆ — Chapters