[1] ಹಾಗಾದರೆ ಯೆಹೂದ್ಯರ ವೈಶಿಷ್ಟ್ಯವೇನು? ಸುನ್ನತಿ ಮಾಡಿಸಿಕೊಂಡದರಿಂದ ಲಾಭವೇನು?
[2] ಎಲ್ಲಾ ವಿಷಯಗಳನ್ನು ಕುರಿತು ಹೇಳಲು ಬಹಳ ಉಂಟು. ಮೊದಲನೇಯದಾಗಿ ದೈವೋಕ್ತಿಗಳು ಅವರ ವಶಕ್ಕೆ ಸಮರ್ಪಿಸಿ ಒಪ್ಪಿಸಲ್ಪಟ್ಟಿವೆ.
[3] ಅವರಲ್ಲಿ ಕೆಲವರಿಗೆ ನಂಬಿಕೆ ಇರಲಿಲ್ಲವಾದರೂ? ಅವರ ಅಪನಂಬಿಕೆಯಿಂದ ದೇವರು ನಂಬಿಕೆಗೆ ತಪ್ಪುವವನಾದಾನೋ? ಎಂದಿಗೂ ಇಲ್ಲ.
[4] ಬದಲಾಗಿ, “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.” ಎಂದು ಗ್ರಂಥಗಳಲ್ಲಿ ಬರೆದಿರುವ ಹಾಗೆಯೇ, ಎಲ್ಲಾ ಮಾನವರು ಸುಳ್ಳುಗಾರರಾದರೂ, ದೇವರು ಮಾತ್ರ ಸತ್ಯವಂತನೇ.
[5] ಆದರೆ ನಮ್ಮ ಅನ್ಯಾಯದ ನಡವಳಿಕೆಯಿಂದ ದೇವರು ನೀತಿವಂತನೆಂದು ಪ್ರಸಿದ್ಧಿಗೆ ಬರುವುದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. ಈ ಮಾತನ್ನು ಮನುಷ್ಯನ ರೀತಿಯಲ್ಲಿ ಆಡುತ್ತಿದ್ದೇನೆ.
[6] ದೇವರು ಅನ್ಯಾಯಗಾರನಾಗಿದ್ದರೆ ಲೋಕಕ್ಕೆ ನ್ಯಾಯ ತೀರ್ಪಾಗುವುದಾದರೂ ಹೇಗೆ?
[7] ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾಗುವುದಾದರೆ ಇನ್ನು ನನ್ನನ್ನು ಪಾಪಿಯೆಂದು ಪರಿಗಣಿಸುವುದು ಯಾಕೆ?
[8] “ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು.
[9] ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಶ್ರೇಷ್ಠರೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಗಾಗಿ ಅಪರಾಧಿಗಳಾಗಿದ್ದಾರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.
[10] ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;
[11] ತಿಳಿವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ.
[12] ಎಲ್ಲರೂ ದಾರಿತಪ್ಪಿ ನಡೆಯುತ್ತಾ, ಕೆಟ್ಟುಹೋಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.
[13] ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ನಾಲಿಗೆಯಿಂದ ವಂಚನೆಯ ಮಾತುಗಳನ್ನಾಡುತ್ತಾರೆ. ಅವರ ತುಟಿಯ ಹಿಂದೆ ಹಾವಿನ ವಿಷವಿದೆ.
[14] ಅವರ ಬಾಯಿ ಶಾಪದಿಂದಲೂ ಕ್ರೋಧದ ಮಾತುಗಳಿಂದಲೂ, ತುಂಬಿದೆ.
[15] ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರಪಡುತ್ತವೆ.
[16] ಅವರು ಹೋದ ದಾರಿಗಳಲ್ಲಿ ನಾಶಸಂಕಟಗಳು ಪೀಡೆಗಳು ಉಂಟಾಗುತ್ತವೆ.
[17] ಸಮಾಧಾನದ ಮಾರ್ಗವನ್ನೇ ಅರಿಯರು.
[18] ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ” ಎಂದು ಹೀಗೆ ಬರೆದಿದೆಯಲ್ಲಾ.
[19] ಧರ್ಮಶಾಸ್ತ್ರದ ನುಡಿಗಳೆಲ್ಲವು ಆ ಶಾಸ್ತ್ರಕ್ಕೆ ಒಳಗಾದವರಿಗೆ ಹೇಳಿವೆಯೆಂದು ಬಲ್ಲೆವಷ್ಟೆ. ಹೀಗೆ ಎಲ್ಲರ ಬಾಯಿ ಕಟ್ಟಿಹೋಗುವುದು. ಲೋಕವೆಲ್ಲಾ ದೇವರ ಮುಂದೆ ಅಪರಾಧಿಯಾಗಿ ನಿಲ್ಲುವುದು.
[20] ಯಾಕೆಂದರೆ ಯಾವ ಮನುಷ್ಯನಾದರೂ ನೇಮನಿಷ್ಠೆಗಳನ್ನು ಅನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. ಧರ್ಮಶಾಸ್ತ್ರದಿಂದ ಪಾಪದ ಅರಿವು ಉಂಟಾಗುತ್ತದಷ್ಟೆ.
[21] ಈಗಲಾದರೋ ದೇವರಿಂದ ದೊರಕುವ ನೀತಿಯು ನಂಬುವವರೆಲ್ಲರಿಗೆ ಧರ್ಮಶಾಸ್ತ್ರ ನಿಯಮಗಳಿಲ್ಲದೆ ಪ್ರಕಟವಾಗಿದೆ. ಅದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತವೆ.
[22] ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರಿಗೆ ದೇವರ ನೀತಿಯು ಉಂಟಾಗುತ್ತದೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ.
[23] ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ.
[24] ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಅದು ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವುದು.
[25] ಪೂರ್ವ ಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ನಂಬಿಕೆಯುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತನನ್ನು ರಕ್ತಧಾರೆ ಎರೆಯುವಂತೆ ಮಾಡಿದನು.
[26] ಯೇಸುಕ್ರಿಸ್ತನಲ್ಲಿ ನಂಬಿಕೆ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯು ತಾನು ಸತ್ಯಸ್ವರೂಪನೂ, ನೀತಿವಂತನೂ ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಹೀಗೆ ಮಾಡಿದರು.
[27] ಹಾಗಾದರೆ ನಮ್ಮನ್ನು ನಾವು ಹೊಗಳಿಕೊಳ್ಳುವುದಕ್ಕೆ ಅವಕಾಶವೆಲ್ಲಿ? ಅದು ಇಲ್ಲದೆ ಹೋಯಿತು. ಯಾವ ಆಧಾರದಿಂದ? ಕರ್ಮಮಾರ್ಗವನ್ನು ಅನುಸರಿಸುವುದರಿಂದಲೋ? ಅಲ್ಲ. ನಂಬಿಕೆಮಾರ್ಗವನ್ನು ಅನುಸರಿಸುವುದರಿಂದಲೇ.
[28] ಧರ್ಮಶಾಸ್ತ್ರ ಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡುವರೆಂಬುದಾಗಿ ನಿಶ್ಚಯಮಾಡಿಕೊಂಡಿದ್ದೇವಲ್ಲಾ
[29] ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ.
[30] ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೆ ಅವರ ನಂಬಿಕೆಯೇ ಆಧಾರ. ಹಾಗೆಯೇ ಸುನ್ನತಿಯಿಲ್ಲದವರನ್ನು ನಿರ್ಣಯಿಸುವುದಕ್ಕೂ ನಂಬಿಕೆಯೇ ಕಾರಣ.
[31] ಹಾಗಾದರೆ ನಂಬಿಕೆಯಿಂದ ಧರ್ಮಶಾಸ್ತ್ರವನ್ನು ತೆಗೆದು ಹಾಕುತ್ತೇವೋ? ಎಂದಿಗೂ ಇಲ್ಲ. ಧರ್ಮಶಾಸ್ತ್ರವನ್ನು ಸ್ಥಿರಪಡಿಸುತ್ತೇವಷ್ಟೇ.