[1] ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ, ಅದು ಮೆಲೀತೆ ದ್ವೀಪವೆಂದು ತಿಳಿದುಬಂತು.
[2] ಅನ್ಯಭಾಷೆಯವರಾದ ಆ ದ್ವೀಪದವರು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆಯು ಆಗಲೇ ಹೊಯ್ದು ಚಳಿಯಾಗುತ್ತಿದ್ದುದರಿಂದ, ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.
[3] ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ, ತಂದು ಬೆಂಕಿಯ ಮೇಲೆ ಹಾಕಲು, ಆ ಶಾಖಕ್ಕೆ ಒಂದು ಸರ್ಪವು ಹೊರಗೆ ಬಂದು, ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.
[4] ಆ ಸರ್ಪವು ಅವನ ಕೈಯಿಂದ ಜೋತಾಡುವುದನ್ನು ದ್ವೀಪದವರು ನೋಡಿ; “ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯದೇವತೆಯು ಇವನನ್ನು ಬದುಕಗೊಡಿಸುವುದಿಲ್ಲವೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[5] ಆದರೆ ಪೌಲನು ಆ ಸರ್ಪವನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಅವನಿಗೆ ಏನೂ ಅಪಾಯ ಉಂಟಾಗಲಿಲ್ಲ.
[6] ಅವರು; “ಇವನ ಮೈ ಈಗ ಊದಿಕೊಳ್ಳುತ್ತದೆ, ಇಲ್ಲವೆ ಇವನು ಫಕ್ಕನೆ ಸತ್ತುಬೀಳುತ್ತಾನೆ” ಎಂದು ಕಾದಿದ್ದರು. ಎಷ್ಟು ಹೊತ್ತು ಕಾದರು ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು “ಇವನೊಬ್ಬ ದೇವನೇ” ಇರಬೇಕು ಎಂದುಕೊಂಡರು.
[7] ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಸಮೀಪದಲ್ಲಿ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು.
[8] ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು.
[9] ಇದಾದ, ನಂತರ ಆ ದ್ವೀಪದಲ್ಲಿದ್ದ ಉಳಿದ ರೋಗಿಗಳು, ಪೌಲನ ಬಳಿಗೆ ಬಂದು ಸ್ವಸ್ಥರಾದರು.
[10] ಅವರು ನಮ್ಮನ್ನು ಬಹಳವಾಗಿ ಸನ್ಮಾನಿಸಿದ್ದಲ್ಲದೆ, ನಾವು ಅಲ್ಲಿಂದ ನಮ್ಮ ಪಯಣ ಮುಂದುವರಿಸಿದಾಗ, ನಮಗೆ ಅವಶ್ಯವಾದ ಪದಾರ್ಥಗಳನ್ನು ತಂದು ಹಡಗಿನಲ್ಲಿಟ್ಟರು.
[11] ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು, ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆಯಲು ತಂಗಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ ಇತ್ತು.
[12] ನಾವು ಸುರಕೂಸಿಗೆ ತಲುಪಿ ಅಲ್ಲಿ ಮೂರು ದಿನ ತಂಗಿದೆವು.
[13] ಅಲ್ಲಿಂದ ಮುಂದುವರೆದು ರೇಗಿಯ ಪಟ್ಟಣಕ್ಕೆ ಸೇರಿದೆವು. ಒಂದು ದಿನವಾದ ಮೇಲೆ ತೆಂಕಣ ಗಾಳಿ ಬೀಸಿದ್ದರಿಂದ, ಎರಡನೆಯ ದಿನದಲ್ಲಿ ಪೊತಿಯೋಲಕ್ಕೆ ಬಂದೆವು.
[14] ಅಲ್ಲಿ ಕ್ರೈಸ್ತ ಸಹೋದರರನ್ನು ಕಂಡೆವು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿನ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು.
[15] ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ, ನಮ್ಮನ್ನು ಭೇಟಿಮಾಡುವುದಕ್ಕಾಗಿ ಕೆಲವರು ಅಪ್ಪಿಯಪೇಟೆಯ ವರೆಗೂ, ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಧೈರ್ಯಗೊಂಡನು.
[16] ನಾವು ರೋಮಾಪುರಕ್ಕೆ ಬಂದ ಮೇಲೆ, ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು.
[17] ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿಕೊಂಡನು. ಅವರು ಬಂದಾಗ ಅವನು ಅವರಿಗೆ; “ಸಹೋದರರೇ, ನಾನು ನಮ್ಮ ಜನರಿಗೂ, ನಮ್ಮ ಪೂರ್ವಿಕರ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇಮಿನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು.
[18] ಅವರು ನನ್ನನ್ನು ವಿಚಾರಣೆಮಾಡಿ, ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು.
[19] ಅದಕ್ಕೆ ಯೆಹೂದ್ಯರು ವಿರೋಧಿಸಿದ್ದರಿಂದ, ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂದಿತು. ನನ್ನ ಸ್ವಂತ ದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ.
[20] ಈ ಕಾರಣದಿಂದ ನಾನು ನಿಮ್ಮನ್ನು ಕಂಡು ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲ್ ಜನರ ನಿರೀಕ್ಷೆಯ ನಿಮಿತ್ತವಾಗಿ ಈ ಬೇಡಿಯಿಂದ ಬಂಧಿತನಾಗಿದ್ದೇನೆ” ಎಂದು ಹೇಳಿದನು.
[21] ಅದಕ್ಕೆ ಅವರು ಅವನಿಗೆ; “ನಿನ್ನ ವಿಷಯವಾಗಿ ನಮಗೆ ಯೂದಾಯದಿಂದ ವರದಿ ಬರಲಿಲ್ಲ, ಸಹೋದರರಲ್ಲಿ ಒಬ್ಬರೂ ಬಂದು ನಿನ್ನ ವಿಷಯವಾಗಿ ಕೆಟ್ಟದ್ದನ್ನು ತಿಳಿಸಲೂ ಇಲ್ಲ, ಮಾತನಾಡಲೂ ಇಲ್ಲ.
[22] ಆದರೆ, ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವುದು ನಮಗೆ ಯುಕ್ತವೆಂದು ತೋರುತ್ತದೆ. ಆ ಪಂಥದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತನಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಅಂದರು.
[23] ಅವರು ಅವನಿಗೆ ಒಂದು ದಿನವನ್ನು ಗೊತ್ತುಮಾಡಲು, ಬಹುಮಂದಿ ಅವನ ಬಿಡಾರದಲ್ಲಿ ಅವನ ಬಳಿಗೆ ಬಂದರು. ಅವನು ಬೆಳಗ್ಗಿನಿಂದ ಸಾಯಂಕಾಲದ ವರೆಗೂ ದೇವರ ರಾಜ್ಯವನ್ನು ಕುರಿತು ಪ್ರಾಮಾಣಿಕವಾಗಿ ಸಾಕ್ಷಿಹೇಳುತ್ತಾ, ಮೋಶೆಯ ಧರ್ಮಶಾಸ್ತ್ರವನ್ನೂ, ಪ್ರವಾದಿಗಳ ಗ್ರಂಥಗಳನ್ನೂ, ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು.
[24] ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು.
[25] ಅವರು ಒಮ್ಮತವಿಲ್ಲದೆ ಇರುವಾಗ ಪೌಲನು ಅವರಿಗೆ; “ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಬಾಯಿಂದ
[26] ನಿಮ್ಮ ಪೂರ್ವಿಕರಿಗೆ ವಿವರವಾಗಿ ಹೇಳಿದ್ದೇನೆಂದರೆ; “‘ನೀನು ಈ ಜನರ ಬಳಿಗೆ ಹೋಗಿ ಅವರಿಗೆ; ನೀವು ಕಿವಿಯಿದ್ದು ಕೇಳಿಕೊಂಡರೂ ತಿಳಿದುಕೊಳ್ಳುವುದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವುದೇ ಇಲ್ಲ, ಎಂಬುದಾಗಿ ಹೇಳು.
[27] ಏಕೆಂದರೆ, ಈ ಜನರ ಹೃದಯವು ಕಲ್ಲಾಗಿದೆ; ಇವರ ಕಿವಿ ಕಿವುಡಾಗಿದೆ; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ; ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಹೀಗೆ ಮಾಡಿಕೊಂಡಿದ್ದಾರೆ’ ಎಂಬುದೇ.
[28] “ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು” ಎಂದು ಹೇಳಿದನು.
[29] ಅವನು ಈ ಮಾತನ್ನು ಹೇಳಿದ ಮೇಲೆ ಅವರು ಹೊರಟುಹೋದರು.
[30] ತರುವಾಯ ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು.
[31] ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.