[1] ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು.
[2] ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು,
[3] ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ.
[4] ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು.
[5] ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು?
[6] ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು.
[8] ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು,
[9] ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು.
[10] ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು.
[11] ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು.
[12] ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.
[13] ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಏಳು ಮೈಲು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ,
[14] ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆಮಾಡುತ್ತಿದ್ದರು.
[15] ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಸಾಗಿದನು.
[16] ಅವರ ಕಣ್ಣುಕಟ್ಟಿದಂತೆ ಇದುದ್ದರಿಂದ ಅವರು ಆತನ ಗುರುತನ್ನು ಹಿಡಿಯಲಿಲ್ಲ.
[17] ಯೇಸು, “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತನಾಡಿಕೊಳ್ಳುವ ಈ ಸಂಗತಿಗಳೇನು” ಎಂದು ಕೇಳಲು, ಅವರು ದುಃಖದ ಮುಖವುಳ್ಳವರಾಗಿ ನಿಂತರು.
[18] ಅವರಲ್ಲಿ ಕ್ಲೆಯೋಫನೆಂಬವನು ಆತನಿಗೆ, “ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿನಗಳಲ್ಲಿ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ?” ಎಂದು ಕೇಳಲು,
[19] ಆತನು ಅವರನ್ನು, “ಯಾವ ಸಂಗತಿಗಳು” ಎಂದು ಕೇಳಿದನು. ಅದಕ್ಕೆ ಅವರು, “ನಜರೇತಿನವನಾದ ಯೇಸುವಿನ ಸಂಗತಿಗಳೇ. ಆತನು ದೇವರ ಮುಂದೆ ಮತ್ತು ಮನುಷ್ಯರ ಮುಂದೆ ಕೃತ್ಯದಲ್ಲಿಯೂ ಮಾತಿನಲ್ಲಿಯೂ ಉನ್ನತನಾದ ಪ್ರವಾದಿಯಾಗಿದ್ದನು.
[20] ಆತನನ್ನು ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು.
[21] ನಾವಾದರೋ ಇಸ್ರಾಯೇಲ್ ಜನರನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು. ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಇಂದಿಗೆ ಮೂರನೆಯ ದಿನ.
[22] ಆದರೆ ನಮ್ಮಲ್ಲಿ ಕೆಲವು ಮಂದಿ ಸ್ತ್ರೀಯರು ಬೆಳಗಾಗುವಾಗ ಸಮಾಧಿಯ ಬಳಿಗೆ ಹೋಗಿ ಆತನ ದೇಹವನ್ನು ಕಾಣದೇ, ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ, ಆತನು ಬದುಕಿದ್ದಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತ್ಯಾಶ್ಚರ್ಯವನ್ನುಂಟುಮಾಡಿದರು.
[24] ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು. ಆತನನ್ನು ಮಾತ್ರ ಕಾಣಲಿಲ್ಲ” ಎಂದು ಹೇಳಿದರು.
[25] ಯೇಸು ಅವರಿಗೆ, “ಎಲಾ ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬದ ಮಂದ ಹೃದಯವುಳ್ಳವರೇ,
[26] ಕ್ರಿಸ್ತನು ಇಂಥ ಶ್ರಮೆಗಳನ್ನು ಅನುಭವಿಸಿ ತನ್ನ ಮಹಿಮಾಪದವಿಗೆ ಸೇರುವುದು ಅಗತ್ಯವಾಗಿತ್ತಲ್ಲವೇ” ಎಂದು ಹೇಳಿದನು.
[27] ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.
[28] ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಅವರನ್ನು ದಾಟಿ ಇನ್ನೂ ಮುಂದಕ್ಕೆ ಹೋಗುವವನಂತೆ ತೋರ್ಪಡಿಸಿಕೊಂಡನು.
[29] ಆದರೆ ಅವರು, “ನಮ್ಮ ಸಂಗಡ ಇರು. ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂದಿತು” ಎಂದು ಆತನಿಗೆ ಹೇಳಿ ಬಲವಂತ ಮಾಡಲು, ಆತನು ಅವರ ಕೂಡ ಇರುವುದಕ್ಕೆ ಹೋದನು.
[30] ಆತನು ಅವರ ಸಂಗಡ ಊಟಕ್ಕೆ ಕುಳಿತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ, ಮುರಿದು ಅವರಿಗೆ ಕೊಡುತ್ತಿರಲಾಗಿ,
[31] ಅವರ ಕಣ್ಣುಗಳು ತೆರೆದವು. ಆಗ ಅವರು ಆತನ ಗುರುತು ಹಿಡಿದರು. ಆತನು ಅವರ ಕಣ್ಣಿಗೆ ಕಾಣದಂತೆ ಮಾಯವಾದನು.
[32] ಆಗ ಅವರು ಒಬ್ಬರಿಗೊಬ್ಬರು, “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತನಾಡಿದಾಗಲೂ, ಗ್ರಂಥಗಳ ಅರ್ಥವನ್ನು ನಮಗೆ ಬಿಡಿಸಿ ಹೇಳಿದಾಗಲೂ, ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ?” ಎಂದು ಹೇಳಿಕೊಂಡು,
[33] ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದರು.
[34] “ಕರ್ತನು ಎದ್ದದ್ದು ನಿಜ. ಆತನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳುತ್ತಿದ್ದರು.
[35] ಆಗ ಅವರಿಬ್ಬರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವುದರಲ್ಲಿ ತಾವು ಆತನ ಗುರುತು ಹಿಡಿದೆವೆಂಬುದನ್ನೂ ವಿವರಿಸಿದರು.
[36] ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು.
[37] ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು.
[38] ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ?
[39] ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು.
[40] ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು.
[41] ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು,
[42] ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು.
[43] ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು.
[44] ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು.
[45] ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು.
[46] ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ,
[47] ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ.
[48] ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.
[49] ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು.
[50] ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು.
[51] ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು ಪರಲೋಕಕ್ಕೆ ಒಯ್ಯಲ್ಪಟ್ಟನು.
[52] ಅವರು ಆತನನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿ ಹೋಗಿ,
[53] ನಿರಂತರವಾಗಿ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು.