Skip to content
Opens in a new window
Listen to this chapter • 13:03

[1] ಸನ್ಮಾನ್ಯನಾದ ಥೆಯೊಫಿಲನೇ, ನಮ್ಮ ಮಧ್ಯೆ ನೆರವೇರಿರುವ ಘಟನೆಗಳನ್ನು ಕ್ರಮವಾಗಿ ಬರೆಯುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ.

[2] ಪ್ರಾರಂಭದಿಂದಲೂ ಕಣ್ಣಾರೆ ಕಂಡು ಸುವಾರ್ತಾವಾಕ್ಯವನ್ನು ಸಾರುತ್ತಿದ್ದವರು ನಮಗೆ ತಿಳಿಸಿದ ಪ್ರಕಾರ ಆ ಘಟನೆಗಳನ್ನು,

[3] ನಾನು ಅಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಒಳ್ಳೆಯದೆಂದು ನನಗೂ ತೋಚಿತು.

[4] ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನೀನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

[5] ಯೂದಾಯದ ಅರಸನಾದ ಹೆರೋದನ ಕಾಲದಲ್ಲಿ ಅಬೀಯನ ಯಾಜಕೀಯ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ವಂಶದವಳಾಗಿದ್ದಳು. ಆಕೆಯ ಹೆಸರು ಎಲಿಸಬೇತ್.

[6] ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ, ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡೆದುಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು.

[7] ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ; ಇದಲ್ಲದೆ ಅವರಿಬ್ಬರೂ ವಯೋವೃದ್ಧರಾಗಿದ್ದರು.

[8] ಒಂದು ದಿನ ಜಕರೀಯನ ವರ್ಗದ ಸರದಿ ಬಂದಾಗ ಅವನು ದೇವರ ಸನ್ನಿಧಿಯಲ್ಲಿ ಯಾಜಕಧರ್ಮವನ್ನು ನಡೆಸುತ್ತಿದ್ದನು.

[9] ದೇವಾಲಯದೊಳಕ್ಕೆ ಹೋಗಿ ಧೂಪವನ್ನರ್ಪಿಸುವುದಕ್ಕೆ ಯಾಜಕರ ಪದ್ಧತಿಯ ಪ್ರಕಾರ ಚೀಟು ಹಾಕಲು ಅದು ಅವನ ಪಾಲಿಗೆ ಬಂದಿತು.

[10] ಧೂಪವನ್ನು ಅರ್ಪಿಸುವ ಹೊತ್ತಿನಲ್ಲಿ ಜನಸಮೂಹದವರೆಲ್ಲರು ಹೊರಗೆ ನಿಂತು ಪ್ರಾರ್ಥಿಸುತ್ತಿರಲಾಗಿ,

[11] ಕರ್ತನ ದೂತನು ಧೂಪಪೀಠದ ಬಲಗಡೆಯಲ್ಲಿ ನಿಂತುಕೊಂಡವನಾಗಿ ಅವನಿಗೆ ಕಾಣಿಸಿಕೊಂಡನು.

[12] ಜಕರೀಯನು ಅವನನ್ನು ಕಂಡು ತತ್ತರಗೊಂಡು ಭಯಭ್ರಾಂತನಾದನು.

[13] ಆದರೆ ಆ ದೂತನು ಅವನಿಗೆ, “ಜಕರೀಯನೇ, ಭಯಪಡಬೇಡ; ದೇವರು ನಿನ್ನ ವಿಜ್ಞಾಪನೆ ಕೇಳಿದ್ದಾನೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು.

[14] ನಿನಗೆ ಸಂತೋಷವೂ ಉಲ್ಲಾಸವೂ ಉಂಟಾಗುವುದು; ಮತ್ತು ಅವನು ಹುಟ್ಟಿದ್ದಕ್ಕೆ ಬಹುಜನರು ಸಂತೋಷಪಡುವರು.

[15] ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು; ದ್ರಾಕ್ಷಾರಸವನ್ನಾಗಲಿ, ಯಾವ ಮದ್ಯವನ್ನಾಗಲಿ ಕುಡಿಯಬಾರದು; ಅವನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.

[16] ಇಸ್ರಾಯೇಲರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು.

[17] ಅವನು ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ ಕರ್ತನ ಮುಂದೂತನಾಗಿ ಹೋಗುವನು. ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ, ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತನಿಗಾಗಿ ಜನರನ್ನು ಸಿದ್ಧಪಡಿಸುವನು” ಎಂದು ಹೇಳಿದನು.

[18] ಜಕರೀಯನು ಆ ದೂತನಿಗೆ, “ಈ ಮಾತು ನೆರವೇರುವುದೆಂದು ನಾನು ತಿಳಿದುಕೊಳ್ಳುವುದಾದರೂ ಹೇಗೆ? ನಾನು ಮುದುಕನು; ನನ್ನ ಹೆಂಡತಿಗೂ ಮುಪ್ಪಿನ ವಯಸ್ಸು” ಎಂದು ಹೇಳಿದನು.

[19] ಅದಕ್ಕೆ ಆ ದೂತನು, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನೊಂದಿಗೆ ಮಾತನಾಡಿ ಈ ಶುಭವಾರ್ತೆಯನ್ನು ನಿನಗೆ ತಿಳಿಸುವುದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ.

[20] ಇಗೋ, ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವುದು; ಆದರೆ ನೀನು ಇದನ್ನು ನಂಬದೆಹೋದುದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವೆ” ಎಂದು ಅವನಿಗೆ ಉತ್ತರಕೊಟ್ಟನು.

[21] ಇತ್ತ ಜನರು ಜಕರೀಯನಿಗಾಗಿ ಕಾದುಕೊಂಡಿದ್ದು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.

[22] ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತನಾಡಲಾರದೆ ಇರಲು ಅವರು, ಇವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನವಾಗಿರಬೇಕು ಎಂದು ತಿಳಿದುಕೊಂಡರು. ಜಕರೀಯನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು.

[23] ಆತನ ಯಾಜಕವರ್ಗದ ಸೇವೆಯ ದಿನಗಳು ಮುಗಿದ ನಂತರ ಜಕರೀಯನು ತನ್ನ ಮನೆಗೆ ಹೋದನು.

[24] ಕೆಲವು ದಿನಗಳಾದ ನಂತರ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದಳು.

[25] “ಕರ್ತನು ಈ ವಯಸ್ಸಿನಲ್ಲಿ ನನ್ನನ್ನು ಕಟಾಕ್ಷಿಸಿ, ನನಗೆ ಈ ರೀತಿಯಾಗಿ ಮಾಡಿ, ಜನರ ಮಧ್ಯದಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ” ಎಂದು ಹೇಳಿದಳು.

[26] ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ, ನಜರೇತೆಂಬ ಊರಿಗೆ, ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದನು;

[27] ಆ ಕನ್ನಿಕೆಯ ಹೆಸರು ಮರಿಯಳು; ಆಕೆಗೆ ದಾವೀದನ ಮನೆತನದ ಯೋಸೇಫನೆಂಬ ಪುರುಷನೊಂದಿಗೆ ನಿಶ್ಚಿತಾರ್ಥವಾಗಿತ್ತು.

[28] ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು.

[29] ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು.

[30] ಆ ದೂತನು ಆಕೆಗೆ, “ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ.

[31] ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು.

[32] ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು.

[33] ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು.

[34] ಆಗ ಮರಿಯಳು ಆ ದೂತನಿಗೆ, “ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ” ಎಂದು ಕೇಳಿದಳು.

[35] ಅದಕ್ಕೆ ದೂತನು, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು.

[36] ಇಗೋ, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡು ಮಗುವಿದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಈಗ ಆರನೆಯ ತಿಂಗಳು.

[37] ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಅಂದನು.

[38] ಆಗ ಮರಿಯಳು “ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ” ಅಂದಳು. ಆ ಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.

[39] ಇದಾದ ನಂತರ ಮರಿಯಳು ಎದ್ದು ತ್ವರೆಯಾಗಿ ಯೆಹೂದದ ಮಲೆನಾಡಿನಲ್ಲಿರುವ ಒಂದು ಊರಿಗೆ ಹೋದಳು.

[40] ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು.

[41] ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು.

[42] ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು.

[43] ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು?

[44] ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು.

[45] ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.”

[46] ಆಗ ಮರಿಯಳು, “ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ,

[47] ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ.

[48] ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಗೆ ಎಲ್ಲರೂ ನನ್ನನ್ನು ಧನ್ಯಳೆಂದು ಹೊಗಳುವರು,

[49] ಏಕೆಂದರೆ ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ; ಆತನ ನಾಮವು ಪರಿಶುದ್ಧವಾದುದು.

[50] ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯೆಯು ತಲತಲಾಂತರದ ವರೆಗೂ ಇರುವುದು.

[51] ಆತನು ತನ್ನ ಭುಜಪರಾಕ್ರಮದಿಂದ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ.

[52] ಪ್ರಭುಗಳನ್ನು ಸಿಂಹಾಸನಗಳಿಂದ ಕೆಳಗೆ ದೊಬ್ಬಿ, ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ.

[53] ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ, ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ.

[54] ಆತನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬುದನ್ನು ನೆನಪಿಸಿಕೊಂಡು, ತನ್ನ ಸೇವಕನಾದ ಇಸ್ರಾಯೇಲನಿಗೆ ನೆರವಾಗಿದ್ದಾನೆ” ಎಂದಳು.

[56] ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿ ಹೋದಳು.

[57] ಹೆರಿಗೆಕಾಲ ಬಂದಾಗ ಎಲಿಸಬೇತಳು ಗಂಡು ಮಗುವನ್ನು ಹೆತ್ತಳು.

[58] ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ವಿಶೇಷ ದಯೆಯನ್ನು ತೋರಿಸಿದ್ದಾನೆಂಬುದನ್ನು ಕೇಳಿ ಆಕೆಯ ಸಂಗಡ ಸಂತೋಷಪಟ್ಟರು.

[59] ಎಂಟನೆಯ ದಿನದಲ್ಲಿ ಅವರು ಆ ಮಗುವಿಗೆ ಸುನ್ನತಿಮಾಡುವುದಕ್ಕಾಗಿ ಬಂದು ಅದಕ್ಕೆ ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು.

[60] ಈ ವಿಷಯದಲ್ಲಿ ಎಲಿಸಬೇತಳು “ಅದು ಬೇಡ, ಯೋಹಾನನೆಂದು ಹೆಸರಿಡಬೇಕು” ಅನ್ನಲು,

[61] ಅವರು, “ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ” ಎಂದು ಆಕೆಗೆ ಹೇಳಿದರು.

[62] ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬುದಾಗಿ ಜಕರೀಯನಿಗೆ ಸನ್ನೆಮಾಡಿ ಕೇಳಿದರು.

[63] ಅವನು ಒಂದು ಹಲಗೆಯನ್ನು ತರಿಸಿಕೊಂಡು, “ಆತನ ಹೆಸರು ಯೋಹಾನನು” ಎಂದು ಬರೆದನು. ಅದಕ್ಕೆ ಎಲ್ಲರೂ ಆಶ್ಚರ್ಯಪಟ್ಟರು.

[64] ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು, ನಾಲಿಗೆ ಸಡಿಲವಾಯಿತು, ಅವನು ಮಾತನಾಡುವವನಾಗಿ ದೇವರನ್ನು ಕೊಂಡಾಡಿದನು.

[65] ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

[66] ಈ ಸಂಗತಿಗಳನ್ನು ಕೇಳಿದವರೆಲ್ಲರೂ, “ಆಹಾ, ಈ ಕೂಸು ಎಂಥವನಾಗುವನೋ?” ಅಂದುಕೊಂಡರು, ಆದರೆ ಕರ್ತನ ಅಭಯ ಹಸ್ತವು ಅವನ ಮೇಲೆ ಇತ್ತು.

[67] ಇದಲ್ಲದೆ ಆ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ನುಡಿದ ಪ್ರವಾದನೆ ಏನೆಂದರೆ,

[68] “ಇಸ್ರಾಯೇಲರ ದೇವರಾಗಿರುವ ಕರ್ತನಿಗೆ ಸ್ತೋತ್ರವು; ತನ್ನ ಪ್ರಜೆಯನ್ನು ಸಂಧಿಸಿ ಅವರಿಗೆ ಬಿಡುಗಡೆಯನ್ನುಂಟುಮಾಡಿದ್ದಾನೆ;

[69] ತನ್ನ ಸೇವಕನಾದ ದಾವೀದನ ಮನೆತನದಲ್ಲಿ, ನಮಗೋಸ್ಕರ ಒಬ್ಬ ರಕ್ಷಣಾವೀರನನ್ನು ಎಬ್ಬಿಸಿದ್ದಾನೆ.

[70] ಆತನು ಪೂರ್ವಕಾಲದಲ್ಲಿಯೇ ತನ್ನ ಪರಿಶುದ್ಧ ಪ್ರವಾದಿಗಳ ಮೂಲಕ ತಾನು ಹೇಳಿದಂತೆಯೇ,

[71] ನಮ್ಮ ವೈರಿಗಳಿಂದಲೂ, ನಮ್ಮನ್ನು ದ್ವೇಷಿಸುವವರೆಲ್ಲರ ಕೈಯಿಂದಲೂ ನಮ್ಮನ್ನು ತಪ್ಪಿಸಿ ರಕ್ಷಿಸಿದ್ದಾನೆ.

[72] ಆತನು ನಮ್ಮ ಪೂರ್ವಿಕರಿಗೆ ದಯೆಯನ್ನು ತೋರಿಸುವುದರ ಮೂಲಕ ನಮ್ಮ ಮೂಲಪಿತೃವಾದ ಅಬ್ರಹಾಮನಿಗೆ ಪ್ರಮಾಣಮಾಡಿ ಕೊಟ್ಟ ತನ್ನ ಪರಿಶುದ್ಧವಾದ ಒಡಂಬಡಿಕೆಯನ್ನು ನೆನಪಿಸಿಕೊಳ್ಳುವವನಾಗಿದ್ದಾನೆ.

[74] ಹೀಗೆ ನಾವು ನಮ್ಮ ವೈರಿಗಳ ಕೈಯಿಂದ ಬಿಡುಗಡೆಹೊಂದಿ ಭಯವಿಲ್ಲದವರಾಗಿದ್ದು, ನಮ್ಮ ಜೀವಮಾನದಲ್ಲೆಲ್ಲಾ ನಿರ್ಮಲಚಿತ್ತದಿಂದಲೂ ನೀತಿಯಿಂದಲೂ ತನ್ನ ಸನ್ನಿಧಿಯಲ್ಲಿ ಸೇವೆಮಾಡುವಂತೆ ನಮಗೆ ಅನುಕೂಲಮಾಡಿದ್ದಾನೆ.

[76] ಮಗುವೇ, ನೀನಾದರೋ ಪರಾತ್ಪರನಾದ ದೇವರ ಪ್ರವಾದಿಯೆನಿಸಿಕೊಳ್ಳುವಿ. ನೀನು ಕರ್ತನ ಮುಂದೆ ಹೋಗಿ ಆತನ ಹಾದಿಗಳನ್ನು ಸಿದ್ಧಮಾಡುವವನಾಗಿಯೂ,

[77] ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಕ್ಷಮೆಯೆಂಬ ರಕ್ಷಣೆಯ ತಿಳಿವಳಿಕೆಯನ್ನು ಆತನ ಪ್ರಜೆಗೆ ತಿಳಿಸಿಕೊಡುವವನಾಗಿಯೂ ಇರುವಿ. ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ,

[79] ಅದು ಕತ್ತಲಲ್ಲಿಯೂ, ಮರಣಾಂಧಕಾರದಲ್ಲಿಯೂ ವಾಸಿಸುತ್ತಿದ್ದ ನಮಗೆ ಬೆಳಕನ್ನು ಕೊಟ್ಟು ನಮ್ಮ ಕಾಲುಗಳನ್ನು ಸಮಾಧಾನದ ಮಾರ್ಗದಲ್ಲಿ ಸೇರಿಸಿ ನಡಿಸುವುದು.”

[80] ಆ ಬಾಲಕನು ಬೆಳೆದು ಆತ್ಮದಲ್ಲಿ ಬಲವುಳ್ಳವನಾದನು. ಮತ್ತು ಇಸ್ರಾಯೇಲ್ ಜನರಿಗೆ ತನ್ನನ್ನು ತೋರ್ಪಡಿಸಿಕೊಳ್ಳುವ ದಿನದವರೆಗೂ ಮರುಭೂಮಿಯ ಪ್ರದೇಶಗಳಲ್ಲಿ ಇದ್ದನು.

ಲೂಕನು — Chapters