Skip to content
Opens in a new window
Listen to this chapter • 7:30

[1] ಯೇಸು ತನ್ನ ಶಿಷ್ಯರಿಗೂ ಹೇಳಿದ್ದೇನಂದರೆ, “ಐಶ್ವರ್ಯವಂತನಾದ ಒಬ್ಬ ಮನುಷ್ಯನಿಗೆ ಒಬ್ಬ ಪಾರುಪಾತ್ಯಗಾರನಿದ್ದನು. ಅವನ ಕುರಿತು ಯಜಮಾನನ ಬಳಿಯಲ್ಲಿ, ಇವನು ನಿನ್ನ ಆಸ್ತಿಯನ್ನು ಹಾಳುಮಾಡುತ್ತಾ ಇದ್ದಾನೆ ಎಂದು ಯಾರೋ ದೂರು ಹೇಳಿರಲಾಗಿ,

[2] ಯಜಮಾನನು ಅವನನ್ನು ಕರೆದು, ‘ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವ ಸಂಗತಿ? ನಿನ್ನ ಪಾರುಪಾತ್ಯೆಯ ಲೆಕ್ಕವನ್ನು ಒಪ್ಪಿಸು, ನೀನು ಇನ್ನು ಪಾರುಪಾತ್ಯಗಾರನಾಗಿರುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಿದನು.

[3] ಹೀಗಿರಲಾಗಿ ಆ ಪಾರುಪಾತ್ಯಗಾರನು, ‘ನಾನೇನು ಮಾಡಲಿ? ನನ್ನ ಯಜಮಾನನು ನನ್ನಿಂದ ಈ ಪಾರುಪಾತ್ಯೆಯ ಕೆಲಸವನ್ನು ತೆಗೆದುಬಿಡುತ್ತಾನಲ್ಲಾ. ಅಗೆಯುವದಕ್ಕೆ ನನಗೆ ಬಲವಿಲ್ಲ, ಭಿಕ್ಷೆ ಬೇಡುವುದಕ್ಕೆ ನನಗೆ ನಾಚಿಕೆಯಾಗುತ್ತದೆ.

[4] ಈ ಪಾರುಪಾತ್ಯೆಯ ಕೆಲಸದಿಂದ ನನ್ನನ್ನು ತೆಗೆದ ಮೇಲೆ ಜನರು ನನ್ನನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ತನ್ನೊಳಗೆ ಅಂದುಕೊಂಡು,

[5] ತನ್ನ ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನೂ ಕರೆದು ಮೊದಲನೆಯವನನ್ನು, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕು?’ ಎಂದು ಕೇಳಲು,

[6] ಅವನು ‘ನೂರು ಬುದ್ದಲಿ ಎಣ್ಣೆ’ ಎಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಬೇಗ ಐವತ್ತು ಬುದ್ದಲಿ ಎಂದು ಬರೆ’ ಎಂದು ಹೇಳಿದನು.

[7] ಬಳಿಕ ಮತ್ತೊಬ್ಬನನ್ನು, ‘ನೀನು ಎಷ್ಟು ಕೊಡಬೇಕು?’ ಎಂದು ಕೇಳಲು ಅವನು, ‘ನೂರು ಖಂಡುಗ ಗೋದಿ’ ಅಂದಾಗ ಅವನಿಗೆ, ‘ಈ ನಿನ್ನ ಪತ್ರವನ್ನು ತೆಗೆದುಕೊಂಡು ಎಂಭತ್ತು ಖಂಡುಗ ಎಂದು ಬರೆ’ ಎಂದು ಹೇಳಿದನು.

[8] ಯಜಮಾನನು ಇದನ್ನು ಕೇಳಿ ಅಪ್ರಾಮಾಣಿಕನಾದ ಆ ಪಾರುಪಾತ್ಯಗಾರನನ್ನು ಕುರಿತು, ಇವನು ಜಾಣತನ ಮಾಡಿದನು ಎಂದು ಹೊಗಳಿದನು. ಏಕೆಂದರೆ ಈ ಲೋಕದ ಜನರು ತಮ್ಮ ವಿಷಯಗಳಲ್ಲಿ ಬೆಳಕಿನ ಜನರಿಗಿಂತಲೂ ಜಾಣರಾಗಿದ್ದಾರೆ.

[9] “ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು ಎಂದು ನಾನು ನಿಮಗೆ ಹೇಳುತ್ತೇನೆ.

[10] ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. ಸಣ್ಣ ವಿಷಯಗಳಲ್ಲಿ ಅಪ್ರಾಮಾಣಿಕನಾಗಿರುವವನು ಬಹಳವಾದದ್ದರಲ್ಲಿಯೂ ಅಪ್ರಾಮಾಣಿಕನಾಗಿರುವನು.

[11] ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸಿಕೊಟ್ಟಾರು?

[12] ಮತ್ತೊಬ್ಬನ ಸೊತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಮ್ಮದನ್ನು ನಿಮಗೆ ಯಾರು ಒಪ್ಪಿಸಿಕೊಟ್ಟಾರು?

[13] ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು, ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಒಟ್ಟಿಗೆ ಸೇವಿಸಲಾರಿರಿ” ಅಂದನು.

[14] ಫರಿಸಾಯರು ಹಣದಾಸೆಯುಳ್ಳವರಾಗಿದ್ದರಿಂದ ಈ ಮಾತುಗಳನ್ನೆಲ್ಲಾ ಕೇಳಿ ಆತನನ್ನು ಹಾಸ್ಯ ಮಾಡಿದರು.

[15] ಆಗ ಆತನು ಅವರಿಗೆ ಹೇಳಿದ್ದೇನಂದರೆ, “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು, ಆದರೆ ದೇವರು ನಿಮ್ಮ ಹೃದಯಗಳನ್ನು ಬಲ್ಲವನಾಗಿದ್ದಾನೆ. ಮನುಷ್ಯರ ದೃಷ್ಟಿಯಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.

[16] “ಧರ್ಮಶಾಸ್ತ್ರವೂ ಪ್ರವಾದನೆಗಳೂ ಯೋಹಾನನ ತನಕವೇ. ಆ ನಂತರದ ದಿನಗಳಿಂದ ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತಲಿದೆ. ಅದರಲ್ಲಿ ಎಲ್ಲರೂ ಬಲವಂತವಾಗಿ ನುಗ್ಗಲು ಯತ್ನಿಸುತ್ತಿದ್ದಾರೆ.

[17] ಧರ್ಮಶಾಸ್ತ್ರದೊಳಗಿನ ಒಂದು ಗುಡಸಾದರೂ ಬಿದ್ದು ಹೋಗುವುದಕ್ಕಿಂತಲೂ ಆಕಾಶವೂ ಭೂಮಿಯೂ ಅಳಿದುಹೋಗುವುದು ಸುಲಭ.

[18] “ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ. ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.

[19] “ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಬೆಲೆಬಾಳುವ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು, ಪ್ರತಿದಿನವು ಸುಖಸಂತೋಷಗಳಲ್ಲಿ ಜೀವಿಸುತ್ತಿದ್ದನು.

[20] ಅವನ ಮನೇ ಬಾಗಿಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು.

[21] ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು. ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.

[22] ಹೀಗಿರುವಲ್ಲಿ ಸ್ವಲ್ಪ ಕಾಲವಾದ ಮೇಲೆ ಆ ಭಿಕ್ಷುಕನು ಸತ್ತನು. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು. ಅವನನ್ನು ಹೂಣಿಟ್ಟರು.

[23] ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ,

[24] ‘ತಂದೆಯೇ, ಅಬ್ರಹಾಮನೇ ನನ್ನ ಮೇಲೆ ಕರುಣೆ ಇಟ್ಟು ಲಾಜರನನ್ನು ಕಳುಹಿಸು ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ಏಕೆಂದರೆ ಈ ಉರಿಯಲ್ಲಿ ಸಂಕಟಪಡುತ್ತಿದ್ದೇನೆ’ ಎಂದು ಕೂಗಿ ಹೇಳಿದನು.

[25] ಆದರೆ ಅಬ್ರಹಾಮನು, ‘ಕಂದಾ, ನೀನು ಆಶಿಸಿದ ಸುಖಸಂಪತ್ತನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ. ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ.

[26] ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಆಳವಾದ ಕಂದಕ ಇದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು. ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರಿಂದಲೂ ಬರಲಿಕ್ಕಾಗದು’ ಅಂದನು.

[27] ಆಗ ಅವನು, ‘ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.

[28] ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ. ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ತಿಳಿಸಿ ಹೇಳಲಿ’ ಅಂದನು.

[29] ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ, ಅವುಗಳನ್ನು ಕೇಳಲಿ’ ಅನ್ನಲು,

[30] ಅವನು ‘ತಂದೆಯೇ, ಅಬ್ರಹಾಮನೇ ಹಾಗಲ್ಲ. ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವರು’ ಅಂದನು.

[31] ಅಬ್ರಹಾಮನು ಅವನಿಗೆ, ‘ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವುದಿಲ್ಲ’ ಎಂದು ಹೇಳಿದನು.”

ಲೂಕನು — Chapters