Skip to content
Opens in a new window
Listen to this chapter • 8:30

[1] ಇದಾದ ಮೇಲೆ ಕರ್ತನು ಇನ್ನೂ ಎಪ್ಪತ್ತು ಮಂದಿಯನ್ನು ತನ್ನ ಶಿಷ್ಯರನ್ನಾಗಿ ನೇಮಿಸಿ, ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು.

[2] ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ಬೆಳೆಯು ಹೇರಳವಾಗಿದೆ, ಕೊಯ್ಲುಗಾರರು ಕೆಲವರೂ ಮಾತ್ರ ಇದ್ದಾರೆ; ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸಬೇಕೆಂದು ಬೆಳೆಯ ಯಜಮಾನನನ್ನು ಬೇಡಿಕೊಳ್ಳಿರಿ.

[3] ಹೋಗಿರಿ, ತೋಳಗಳ ನಡುವೆ ಕುರಿಮರಿಗಳಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ.

[4] ನೋಡಿರಿ, ನೀವು ಹೋಗುವಾಗ ಹಣದ ಚೀಲವನ್ನಾಗಲಿ, ಪ್ರವಾಸದ ಚೀಲವನ್ನಾಗಲಿ, ಕಾಲಿಗೆ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ.

[5] ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ, ‘ಈ ಮನೆಗೆ ಸಮಾಧಾನವಾಗಲಿ’ ಎಂದು ಮೊದಲು ಹೇಳಿರಿ.

[6] ಸಮಾಧಾನ ಹೊಂದಲು ಯೋಗ್ಯನು ಆ ಮನೆಯಲ್ಲಿ ಇದ್ದರೆ ನಿಮ್ಮ ಸಮಾಧಾನವು ಅವನ ಮೇಲೆ ನಿಲ್ಲುವುದು, ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವುದು.

[7] ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳಿದುಕೊಳ್ಳಬೇಡಿರಿ.

[8] ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಊರಿನ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ.

[9] ಅಲ್ಲಿರುವ ರೋಗಿಗಳನ್ನು ವಾಸಿಮಾಡಿ ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ’ ಎಂದು ಹೇಳಿರಿ.

[10] ಆದರೆ ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸ್ವೀಕರಿಸದ್ದಿದ್ದರೆ, ನೀವು ಆ ಊರ ಬೀದಿಗಳಿಗೆ ಬಂದು,

[11] ‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮ್ಮ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ಆದಾಗ್ಯೂ ದೇವರ ರಾಜ್ಯವು ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ’ ಎಂಬುದಾಗಿ ಹೇಳಿರಿ.

[12] ಆ ದಿನದಲ್ಲಿ ಅಂತಹ ಊರಿನ ಗತಿಯು ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಹೇಳುತ್ತೇನೆ.

[13] ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು, ಬೂದಿಯಲ್ಲಿ ಕುಳಿತುಕೊಂಡು ಪಶ್ಚಾತ್ತಾಪಪಡುತ್ತಿದ್ದರು.

[14] ಆದರೆ ನ್ಯಾಯವಿಚಾರಣೆಯಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು.

[15] ಎಲೈ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? ಇಲ್ಲ! ಪಾತಾಳಕ್ಕೇ ಇಳಿಯುವಿ.

[16] ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು.

[17] ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು, “ಕರ್ತನೇ, ದೆವ್ವಗಳು ಕೂಡಾ ನಿನ್ನ ಹೆಸರಿನಲ್ಲಿ ನಮಗೆ ಅಧೀನವಾಗುತ್ತವೆ” ಅಂದರು.

[18] ಯೇಸು ಅವರಿಗೆ, “ಸೈತಾನನು ಮಿಂಚಿನಂತೆ ಆಕಾಶದಿಂದ ಬೀಳುವುದನ್ನು ಕಂಡೆನು.

[19] ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ.

[20] ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು.

[21] ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನನಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ, “ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಮತ್ತು ವಿವೇಕಿಗಳಿಗೂ ಈ ವಿಷಯಗಳನ್ನು ಮರೆಮಾಡಿ, ಮಕ್ಕಳಿಗೆ ಪ್ರಕಟಮಾಡಿರುವುದರಿಂದ ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.

[22] ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ಮಗನು ಎಂಥವನೆಂದು ತಂದೆಯ ಹೊರತು ಮತ್ತಾರೂ ತಿಳಿದಿರುವುದಿಲ್ಲ, ತಂದೆ ಎಂಥವನೆಂದು ಮಗನ ಹೊರತು ಇನ್ನಾರು ತಿಳಿದಿರುವುದಿಲ್ಲ ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಮನಸ್ಸುಳ್ಳವನಾಗಿದ್ದಾನೋ, ಅವನೂ ಆತನನ್ನು ತಿಳಿದವನಾಗಿದ್ದಾನೆ” ಅಂದನು.

[23] ಆ ಮೇಲೆ ಆತನು ಶಿಷ್ಯರ ಕಡೆಗೆ ತಿರುಗಿಕೊಂಡು ಪ್ರತ್ಯೇಕವಾಗಿ ಹೇಳಿದ್ದೇನೆಂದರೆ, “ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು.

[24] ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ಸಾಧ್ಯವಾಗಲಿಲ್ಲ, ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ ಎಂಬುದಾಗಿ ನಿಮಗೆ ಹೇಳುತ್ತೇನೆ” ಅಂದನು.

[25] ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವುದಕ್ಕಾಗಿ, “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಲು,

[26] ಆತನು ಅವನಿಗೆ, “ಧರ್ಮಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ?” ಎಂದು ಕೇಳಿದನು.

[27] ಅದಕ್ಕೆ ಅವನು, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.’ ಮತ್ತು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಬರೆದದೆ” ಅಂದನು.

[28] ಆತನು ಅವನಿಗೆ, “ನೀನು ಸರಿಯಾಗಿ ಉತ್ತರಕೊಟ್ಟಿರುವಿ, ಅದರಂತೆ ಮಾಡು, ಮಾಡಿದರೆ ನಿತ್ಯಜೀವಕ್ಕೆ ಬಾಧ್ಯನಾಗುವಿ” ಎಂದು ಹೇಳಿದನು.

[29] ಆದರೆ ಅವನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳುವುದಕ್ಕೆ ಅಪೇಕ್ಷಿಸಿ, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಕೇಳಲು,

[30] ಯೇಸು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ, “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನ ಬೆಟ್ಟದ ಪ್ರದೇಶದಿಂದ ಇಳಿದು ಯೆರಿಕೋ ಎಂಬ ಊರಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು, ಹೊಡೆದು, ಅವನನ್ನು ಅರೆಜೀವಮಾಡಿ ಬಿಟ್ಟುಹೋದರು.

[31] ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ಓರೆಯಾಗಿ ಹೋದನು.

[32] ಅದೇ ರೀತಿಯಲ್ಲಿ ಒಬ್ಬ ಲೇವಿಯು ಆ ಸ್ಥಳಕ್ಕೆ ಬಂದು ಅವನನ್ನು ಕಂಡು ಓರೆಯಾಗಿ ಹೋದನು.

[33] ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನು ಬಿದಿದ್ದ ಸ್ಥಳಕ್ಕೆ ಬಂದಾಗ ಅವನನ್ನು ಕಂಡು ಕನಿಕರಿಸಿ,

[34] ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಗಾಯವನು ಕಟ್ಟಿ ತನ್ನ ಸ್ವಂತ ವಾಹನ ಪಶುವಿನ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರೆದುಕೊಂಡು ಹೋಗಿ ಅವನನ್ನು ಆರೈಕೆಮಾಡಿದನು.

[35] ಮರುದಿನ ಅವನು ಎರಡು ದಿನಾರಿಗಳನ್ನು ತೆಗೆದು ಛತ್ರದವನಿಗೆ ಕೊಟ್ಟು, ‘ಇವನನ್ನು ಆರೈಕೆಮಾಡು, ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು’ ಅಂದನು.

[36] ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಕೇಳಿದ್ದಕ್ಕೆ,

[37] ಆ ಧರ್ಮೋಪದೇಶಕನು, “ಅವನಿಗೆ ದಯೆ ತೋರಿಸಿದವನೇ” ಅಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆ ಮಾಡು” ಎಂದು ಹೇಳಿದನು.

[38] ಅವರು ಸಂಚಾರಮಾಡುತ್ತಿರುವಾಗ ಆತನು ಒಂದು ಹಳ್ಳಿಗೆ ಬಂದನು. ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಉಳಿಸಿಕೊಂಡಳು.

[39] ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು.

[40] ಆದರೆ ಮಾರ್ಥಳು ಉಪಚಾರ ಸೇವೆಯ ವಿಷಯವಾಗಿ ಬಹಳ ಬೇಸತ್ತು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು” ಅಂದಳು.

[41] ಆದರೆ, ಕರ್ತನು ಆಕೆಗೆ, “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ.

[42] ಆದರೆ ಅಗತ್ಯವಾದದ್ದು ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ, ಅದು ಆಕೆಯಿಂದ ತೆಗೆಯಲ್ಪಡುವುದಿಲ್ಲ” ಎಂದು ಉತ್ತರಕೊಟ್ಟನು.

ಲೂಕನು — Chapters