Skip to content
Opens in a new window
Listen to this chapter • 12:28

[1] ಇಷ್ಟರಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ತುಳಿಯುವಷ್ಟು ಕೂಡಿಬಂದಿರಲಾಗಿ ಯೇಸು ಮೊದಲು ತನ್ನ ಶಿಷ್ಯರಿಗೆ ಉಪದೇಶಿಸಿ ಹೇಳಿದ್ದೇನೆಂದರೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ, ಅಂದರೆ ಅವರ ಕಪಟತನದ ವಿಷಯದಲ್ಲಿ ಜಾಗರೂಕರಾಗಿರಿ.

[2] ಮರೆಯಾಗಿರುವಂಥದ್ದು ವ್ಯಕ್ತವಾಗುವುದು. ರಹಸ್ಯವಾಗಿರುವಂಥದ್ದು ಪ್ರಕಟವಾಗುವುದು.

[3] ಹೀಗಿರುವುದರಿಂದ ನೀವು ಕತ್ತಲಲ್ಲಿ ಹೇಳಿದಂಥದು ಬೆಳಕಿನಲ್ಲಿ ಕೇಳಲಾಗುವುದು. ಮತ್ತು ನೀವು ಕೋಣೆಗಳೊಳಗೆ ಪಿಸುಗುಟ್ಟಿದ್ದು ಮಾಳಿಗೆಗಳ ಮೇಲೆ ಸಾರಲಾಗುವುದು.

[4] “ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ, ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿ. ಕೊಂದು ಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.

[5] ಆದರೆ ನೀವು ಯಾರಿಗೆ ಭಯಪಡಬೇಕೆಂದು ತೋರಿಸುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ.

[6] ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ.

[7] ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ, ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.

[8] “ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.

[9] ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.

[10] ಮನುಷ್ಯಕುಮಾರನ ವಿರುದ್ಧ ಮಾತನಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವುದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ.

[11] ಅವರು ನಿಮ್ಮನ್ನು ಸಭಾಮಂದಿರಗಳಿಗೂ, ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ, ಅಧಿಪತಿಗಳ ಎದುರಿಗೂ, ಹಿಡಿದುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು? ಎಂದು ಚಿಂತೆಮಾಡಬೇಡಿರಿ.

[12] ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” ಅಂದನು.

[13] ಆಗ ಜನರಲ್ಲಿ ಒಬ್ಬನು, “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡುವಂತೆ ನನ್ನ ಅಣ್ಣನಿಗೆ ಹೇಳು” ಎಂದು ಯೇಸುವನ್ನು ಕೇಳಿಕೊಳ್ಳಲು,

[14] ಅದಕ್ಕೆ ಯೇಸು, “ಮನುಷ್ಯನೇ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಎಂದು ಅವನನ್ನು ಕೇಳಿ,

[15] ಜನರಿಗೆ, “ಎಲ್ಲಾ ದುರಾಶೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಹೇಳಿ, ಒಂದು ಸಾಮ್ಯವನ್ನು ಹೇಳಿದನು.

[16] ಅದೇನೆಂದರೆ “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು.

[17] ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವುದಕ್ಕೆ ನನಗೆ ಸ್ಥಳವಿಲ್ಲವಲ್ಲಾ?’ ಎಂದು ಆಲೋಚಿಸಿ,

[18] ‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,

[19] ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.

[20] “ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.

[21] ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು.

[22] ಇದಲ್ಲದೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬುದಾಗಿ ನಿಮಗೆ ಹೇಳುತ್ತೇನೆ.

[23] ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು.

[24] ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.

[25] ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಹೆಚ್ಚಿಸಲು ನಿಮ್ಮಲ್ಲಿ ಯಾರಿಂದಾದೀತು?

[26] ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವುದೇಕೆ?

[27] ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಅಡವಿಯ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ.

[28] ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.

[29] ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ.

[30] ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.

[31] ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವವು.

[32] ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.

[33] ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.

[34] ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುತ್ತದಷ್ಟೆ.

[35] “ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.

[36] ನೀವಂತೂ ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವಂಥ ಮತ್ತು ಆತನು ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವಂಥ ಆಳುಗಳಂತೆ ಇರಿ.

[37] ಯಜಮಾನನು ಬಂದು ಯಾವ ಆಳು ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಏಕೆಂದರೆ, ಯಜಮಾನನೇ ನಡುಕಟ್ಟಿಕೊಂಡು ಆ ಆಳುಗಳನ್ನು ಊಟಕ್ಕೆ ಕುಳ್ಳಿರಿಸಿ, ಹತ್ತಿರಕ್ಕೆ ಬಂದು ಅವರಿಗೆ ಊಟವನ್ನು ಬಡಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[38] ಯಜಮಾನನು ಬರುವಾಗ ನಡು ರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಆತನು ಬರುವಾಗ ಎಚ್ಚರವಾಗಿ ಕಾಣಿಸಿಕೊಳ್ಳುವ ಆಳುಗಳು ಧನ್ಯರು.

[39] ಕಳ್ಳನು ಬರುವ ಗಳಿಗೆಯು ಮನೆ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು, ತನ್ನ ಮನೆಗೆ ಕನ್ನಾ ಹಾಕಗೊಡಿಸುತ್ತಿರಲಿಲ್ಲವೆಂದು ತಿಳಿದುಕೊಳ್ಳಿರಿ.

[40] ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಅಂದನು.

[41] ಆಗ ಪೇತ್ರನು, “ಕರ್ತನೇ, ನೀನು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತಿದ್ದೀಯೋ ಅಥವಾ ಎಲ್ಲರಿಗೋ?” ಎಂದು ಕೇಳಲು,

[42] ಕರ್ತನು ಹೇಳಿದ್ದೇನಂದರೆ, “ಹೊತ್ತು ಹೊತ್ತಿಗೆ ಅವಶ್ಯಕತೆಗೆ ಬೇಕಾದದ್ದನ್ನು ಅಳೆದು ಕೊಡುವುದಕ್ಕಾಗಿ ಯಜಮಾನನು ತನ್ನ ಆಳುಗಳ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆದ ಮೇಲ್ವಿಚಾರಕ ಯಾರು?

[43] ಯಜಮಾನನು ಬಂದು ಯಾವ ಆಳು ಹೀಗೆ ಮಾಡುವುದನ್ನು ಕಾಣುವನೋ ಆ ಆಳು ಧನ್ಯನು.

[44] ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[45] ಆದರೆ ಆ ಆಳು, ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ,

[46] ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು.

[47] ತನ್ನ ಯಜಮಾನನ ಇಷ್ಟಾರ್ಥವನ್ನು ಆಳು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಕಠಿಣವಾದ ಶಿಕ್ಷೆಗೆ ಗುರಿಯಾಗುವನು.

[48] ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು.

[49] “ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ.

[50] ಆದರೆ ನಾನು ಹೊಂದತಕ್ಕ ದೀಕ್ಷಾಸ್ನಾನ ಒಂದುಂಟು, ಅದು ನೆರವೇರುವ ತನಕ ನನಗೆ ನೆಮ್ಮದಿಯಿಲ್ಲ.

[51] ನಾನು ಭೂಮಿಯಲ್ಲಿ ಸಮಾಧಾನವನ್ನುಂಟು ಮಾಡುವುದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭಿನ್ನಭೇದಗಳನ್ನು ಉಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.

[52] ಹೇಗೆಂದರೆ, ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು.

[53] ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು” ಅಂದನು.

[54] ಇದಲ್ಲದೆ ಯೇಸು ಜನಸಮೂಹಕ್ಕೆ ಹೇಳಿದ್ದೇನಂದರೆ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ, ಹಾಗೆಯೇ ಆಗುತ್ತದೆ.

[55] ದಕ್ಷಿಣ ದಿಕ್ಕಿನಿಂದ ಗಾಳಿ ಬೀಸಲಾಗಿ ಸೆಕೆ ಹುಟ್ಟುತ್ತದೆ ಅನ್ನುತ್ತೀರಿ. ಅದೂ ಹಾಗೆಯೇ ಆಗುತ್ತದೆ.

[56] ಕಪಟಿಗಳೇ, ನೀವು ಭೂಮ್ಯಾಕಾಶಗಳ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಬಲ್ಲಿರಿ, ಆದರೆ ಪ್ರಸ್ತುತ ಕಾಲವನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದದೆ ಹೋಗಿದ್ದಿರಾ?

[57] “ಇದಲ್ಲದೆ ನ್ಯಾಯವಾದದ್ದು ಯಾವುದೆಂದು ನೀವೇ ಯಾಕೆ ತೀರ್ಮಾನ ಮಾಡಿಕೊಳ್ಳುವುದಿಲ್ಲ?

[58] ನೀನು ಪ್ರತಿವಾದಿಯ ಸಂಗಡ ನ್ಯಾಯಾಧಿಪತಿಯ ಬಳಿಗೆ ಹೋಗುತ್ತಿರುವಾಗ ದಾರಿಯಲ್ಲಿಯೇ ಜಗಳವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳಕೊಂಡು ಹೋದಾನು. ನ್ಯಾಯಾಧಿಪತಿಯು ನಿನ್ನನ್ನು ಸೆರೆ ಯಜಮಾನನ ವಶಕ್ಕೆ ಒಪ್ಪಿಸಾನು. ಸೆರೆಯಜಮಾನನು ನಿನ್ನನ್ನು ಸೆರೆಮನೆಯಲ್ಲಿ ಹಾಕಿಯಾನು.

[59] ನೀನು ಕೊನೆಯ ಕಾಸನ್ನು ಕೊಟ್ಟು ತೀರಿಸುವವರೆಗೂ ಅಲ್ಲಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲವೆಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಅಂದನು.

ಲೂಕನು — Chapters