[1] ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡಿ ಮುಗಿಸಿದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಕರ್ತನೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು” ಎಂದು ಕೇಳಿದನು.
[2] ಅದಕ್ಕಾತನು, “ನೀವು ಪ್ರಾರ್ಥಿಸುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ, “ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ.
[3] ನಮ್ಮ ಅನುದಿನದ ಆಹಾರವನ್ನು ಪ್ರತಿದಿನವೂ ದಯಪಾಲಿಸು.
[4] ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ಶೋಧನೆಯೊಳಗೆ ಸೇರಿಸದಂತೆ ಪಾರುಮಾಡು ಎಂದು ಹೇಳಿರಿ” ಅಂದನು.
[5] ಮತ್ತು ಯೇಸು ಅವರಿಗೆ ಹೇಳಿದ್ದೇನಂದರೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ, ಅವನು, ‘ಸ್ನೇಹಿತನೆ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು.
[6] ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಬಂದಿದ್ದಾನೆ. ಅವನಿಗೆ ಊಟಕ್ಕೆ ಕೊಡಲು ನನ್ನಲ್ಲಿ ಏನೂ ಇಲ್ಲ’ ಎಂದು ಕೇಳಲು,
[7] ಆ ಸ್ನೇಹಿತನು, ‘ನನಗೆ ತೊಂದರೆ ಕೊಡಬೇಡ; ಈಗ ಬಾಗಿಲು ಹಾಕಿದೆ, ನನ್ನ ಮಕ್ಕಳು ನನ್ನೊಂದಿಗೆ ಮಲಗಿದ್ದಾರೆ, ನಾನು ಎದ್ದು ನಿನಗೆ ಕೊಡುವುದಕ್ಕಾಗುವುದಿಲ್ಲ, ಎಂದು ಒಳಗಿನಿಂದ ಉತ್ತರಕೊಡುವನು.’
[8] ಆದರೂ, ಸ್ನೇಹದ ನಿಮಿತ್ತವಾಗಿ ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟು ರೊಟ್ಟಿಗಳನ್ನು ಕೊಡುತಾನೆಂಬುದು ನಿಜ.
[9] ಹಾಗೆಯೇ ನಾನು ನಿಮಗೆ ಹೇಳುವುದೇನಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಕ್ಕುವುದು; ತಟ್ಟಿರಿ, ನಿಮಗೆ ತೆರೆಯುವುದು.
[10] ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯುವುದು.
[11] ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ?
[12] ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುವನೇ?
[13] ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನೇ ಕೊಡುವನಲ್ಲವೇ?” ಅಂದನು.
[14] ಒಮ್ಮೆ ಯೇಸು ಮೂಗದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು; ಅದನ್ನು ನೋಡಿದ ಜನರು ಆಶ್ಚರ್ಯಪಟ್ಟರು.
[15] ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ” ಅಂದರು.
[16] ಬೇರೆ ಕೆಲವರು ಆತನನ್ನು ಪರೀಕ್ಷಿಸುವುದಕ್ಕಾಗಿ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿತೋರಿಸು” ಎಂದು ಕೇಳಿದರು.
[17] ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ತಮ್ಮತಮ್ಮೊಳಗೆ ಭೇದ ಹುಟ್ಟಿದ ರಾಜ್ಯವು ನಾಶವಾಗುವುದು ಮತ್ತು ತನ್ನಲ್ಲಿ ಕಚ್ಚಾಡಿ ಭೇದಹುಟ್ಟಿಸುವ ಕುಟುಂಬ ಬಿದ್ದುಹೋಗುವುದು.
[18] ಅದರಂತೆ ಸೈತಾನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯವು ಹೇಗೆ ಉಳಿದೀತು? ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತೀ ಎಂದು ನನಗೆ ಹೇಳುತ್ತೀರಲ್ಲಾ,
[19] ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.
[20] ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮಲ್ಲಿಗೆ ಈಗಾಗಲೇ ಬಂದಿದೆ ಎಂಬುದು ಸ್ಪಷ್ಟ.
[21] “ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು;
[22] ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಗೆದ್ದು ಅವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಮಾಡಿದ್ದನ್ನು ಹಂಚಿಕೊಡುತ್ತಾನೆ.
[23] ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ.
[24] “ಬೋಧನೆಯನ್ನು ಮುಂದುವರಿಸುತ್ತಾ ಯೇಸು, ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ಹಿಂತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು,
[25] ಆ ಮನೆ ಗುಡಿಸಿ ವ್ಯವಸ್ಥಿತವಾಗಿರುವುದನ್ನು ಕಂಡು ಹೊರಟುಹೋಗಿ,
[26] ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುವುದು. ಅವು ಒಳಹೊಕ್ಕು ಅಲ್ಲಿ ವಾಸಮಾಡುವವು, ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವುದು” ಅಂದನು.
[27] ಯೇಸು ಈ ಮಾತುಗಳನ್ನು ಹೇಳುತ್ತಿರುವಾಗ ಜನರಲ್ಲಿ ಒಬ್ಬ ಸ್ತ್ರೀಯು, “ನಿನ್ನನ್ನು ಹೊತ್ತ ಗರ್ಭವೂ, ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು” ಎಂದು ಕೂಗಿದಳು.
[28] ಅದಕ್ಕೆ ಯೇಸು, “ಹಾಗನ್ನ ಬೇಡ, ದೇವರ ವಾಕ್ಯವನ್ನು ಕೇಳಿ ಅದನ್ನು ಅನುಸರಿಸುವವನು ಹೆಚ್ಚು ಧನ್ಯನು” ಅಂದನು.
[29] ಜನರು ಗುಂಪುಗುಂಪಾಗಿ ಸೇರಿಬರುತ್ತಿರುವಾಗ ಯೇಸು ಹೇಳುವುದಕ್ಕೆ ತೊಡಗಿದ್ದೇನಂದರೆ, “ಈ ಸಂತತಿ ಕೆಟ್ಟ ಸಂತತಿಯೇ; ಇದು ಸೂಚಕಕಾರ್ಯವನ್ನು ಸಂಕೇತವಾಗಿ ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಈ ಸಂತತಿಗೆ ಸಿಕ್ಕುವುದಿಲ್ಲ.
[30] ಹೇಗೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಗುರುತಾದ ಹಾಗೆಯೇ ಮನುಷ್ಯಕುಮಾರನು ಈ ಸಂತತಿಗೆ ಗುರುತಾಗಿರುವನು.
[31] ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆ ದಿನದಲ್ಲಿ ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವಳು. ಆಕೆಯು ಸೊಲೊಮೋನನ ಜ್ಞಾನವನ್ನು ತಿಳಿದುಕೊಳ್ಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಆದರೆ ಇಗೋ, ಸೊಲೊಮೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.
[32] ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವರು. ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ಇಗೋ, ಯೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.
[33] “ಯಾರೂ ದೀಪವನ್ನು ಹಚ್ಚಿ ಮರೆಯಲ್ಲಾಗಲಿ ಕೊಳಗದೊಳಗಾಗಲಿ ಇಡುವುದಿಲ್ಲ. ಮನೆಯೊಳಗೆ ಬರುವವರಿಗೆ ಬೆಳಕು ಕಾಣಿಸುವಂತೆ ಆ ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
[34] ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ, ನಿನ್ನ ಕಣ್ಣು ನೆಟ್ಟಗಿರುವಾಗ ಅದರಂತೆ ನಿನ್ನ ದೇಹವೆಲ್ಲಾ ಬೆಳಕಾಗಿರುವುದು; ಅದು ಕೆಟ್ಟದ್ದಾಗಿರುವಾಗ ಅದರಂತೆ ನಿನ್ನ ದೇಹವು ಕತ್ತಲಾಗಿರುವುದು.
[35] ಆದುದರಿಂದ ನಿನ್ನೊಳಗಿರುವ ಬೆಳಕೇ ಕತ್ತಲಾಗಿದೆಯೋ ಏನೋ ನೋಡು.
[36] ನಿನ್ನ ದೇಹವೆಲ್ಲಾ ಬೆಳಕಾಗಿದ್ದು ಯಾವುದೊಂದು ಭಾಗದಲ್ಲೂ ಕತ್ತಲಿಲ್ಲದ್ದಾಗಿದ್ದರೆ, ದೀಪವು ಹೊಳೆದು ನಿನಗೆ ಬೆಳಕನ್ನು ಕೊಡುವ ಹಾಗೆಯೇ ನಿನ್ನ ದೇಹವು ಪೂರ್ಣವಾಗಿ ಬೆಳಕಾಗಿರುವುದು” ಅಂದನು.
[37] ಯೇಸು ಮಾತನಾಡುತ್ತಿರುವಾಗ ಒಬ್ಬ ಫರಿಸಾಯನು ಆತನನ್ನು ಊಟಕ್ಕೆ ಬರಬೇಕೆಂದು ಕೇಳಿಕೊಳ್ಳಲು ಆತನು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡನು.
[38] ಆತನು ಕೈತೊಳೆದುಕೊಳ್ಳದೆ ಊಟಕ್ಕೆ ಕುಳಿತದ್ದನ್ನು ಆ ಫರಿಸಾಯನು ಕಂಡು ಆಶ್ಚರ್ಯಪಟ್ಟನು.
[39] ಆದರೆ ಕರ್ತನು ಅವನಿಗೆ, “ಫರಿಸಾಯರಾದ ನೀವು ಪಂಚಪಾತ್ರೆ ತಟ್ಟೆ ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ ಸರಿ, ಆದರೆ ನಿಮ್ಮ ಒಳಭಾಗವು ದುರಾಶೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ.
[40] ಬುದ್ಧಿಯಿಲ್ಲದವರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಿದನಲ್ಲವೇ.
[41] ಹೇಗೂ ಒಳಗಿರುವಂಥದನ್ನು ದಾನಕೊಡಿರಿ, ಆಗ ಸಕಲವೂ ನಿಮಗೆ ಶುದ್ಧವಾಗಿರುವುದು.
[42] “ಅಯ್ಯೋ ಫರಿಸಾಯರೇ, ನೀವು ಪುದೀನ, ಮರುಗಪತ್ರೆ ಸದಾಪು ಮುಂತಾದ ಸಕಲ ವಿಧವಾದ ಸೊಪ್ಪುಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಬಿಟ್ಟಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಮಾಡಬೇಕಾಗಿತ್ತು.
[43] “ಅಯ್ಯೋ ಫರಿಸಾಯರೇ, ಸಭಾಮಂದಿರಗಳಲ್ಲಿ ಉನ್ನತ ಸ್ಥಾನಗಳನ್ನೂ ಅಂಗಡಿ ಬೀದಿಗಳಲ್ಲಿ ವಂದನೆಗಳನ್ನೂ ನೀವು ಬಯಸುತ್ತೀರಿ.
[44] ನಿಮ್ಮ ಗತಿಯನ್ನು ಏನು ಹೇಳಲಿ, ನೆಲಸಮವಾದ ಸಮಾಧಿಗಳ ಹಾಗಿದ್ದೀರಿ. ಅವುಗಳ ಮೇಲೆ ತಿರುಗಾಡುವ ಜನರಿಗೆ ಇವು ಸಮಾಧಿಗಳೆಂದು ತಿಳಿಯದು” ಎಂದು ಹೇಳಿದನು.
[45] ಇದನ್ನು ಕೇಳಿ ಒಬ್ಬ ಧರ್ಮೋಪದೇಶಕನು ಯೇಸುವಿಗೆ, “ಬೋಧಕನೇ, ಈ ಮಾತುಗಳನ್ನು ಹೇಳುವುದರಿಂದ ನಮ್ಮನ್ನೂ ನಿಂದಿಸಿದ ಹಾಗಾಯಿತು” ಎಂದು ಹೇಳಲು,
[46] ಆತನು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನೂ ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ, ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವುದಿಲ್ಲ.
[47] ನಿಮ್ಮ ಗತಿಯನ್ನು ಏನು ಹೇಳಲಿ? ನೀವು ಪ್ರವಾದಿಗಳ ಗೋರಿಗಳನ್ನು ಕಟ್ಟುತ್ತೀರಿ. ಅವರನ್ನು ಕೊಂದವರು ನಿಮ್ಮ ಪೂರ್ವಿಕರೇ.
[48] ಹೀಗಿರುವುದರಿಂದ ನಿಮ್ಮ ಪೂರ್ವಿಕರು ಮಾಡಿದ್ದಕ್ಕೆ ನೀವೇ ಸಾಕ್ಷಿಗಳಾಗಿರುವವರಲ್ಲದೆ ಅವರ ಕೃತ್ಯಗಳಿಗೆ ಒಪ್ಪಿಕೊಂಡ ಹಾಗಾಯಿತು. ಹೇಗೆಂದರೆ ಅವರು ಪ್ರವಾದಿಗಳನ್ನು ಕೊಂದರು, ನೀವು ಗೋರಿಗಳನ್ನು ಕಟ್ಟುತ್ತೀರಿ.
[49] ಆದುದರಿಂದ ದೇವರ ಜ್ಞಾನವು ಹೇಳಿದ್ದೇನಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಕೊಲ್ಲುವರು, ಕೆಲವರನ್ನು ಹಿಂಸೆಪಡಿಸುವರು.’
[50] ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲುಗೊಂಡು, ಯಜ್ಞವೇದಿಗೂ ದೇವಾಲಯಕ್ಕೂ ನಡುವೆ ಕೊಲ್ಲಲ್ಪಟ್ಟ ಜಕರೀಯನ ರಕ್ತದವರೆಗೂ ಈ ಸಂತತಿಯವರು ಲೆಕ್ಕಕೊಡಬೇಕಾಗುವುದು ಎಂಬುದೇ. ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.
[52] ಅಯ್ಯೋ ಧರ್ಮೋಪದೇಶಕರೇ, ದೈವಿಕ ಜ್ಞಾನದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವೂ ಒಳಕ್ಕೆ ಪ್ರವೇಶಿಸಲಿಲ್ಲ, ಒಳಕ್ಕೆ ಹೋಗ ಬಯಸುವವರಿಗೂ ಅಡ್ಡಿಮಾಡಿದೀರಿ” ಅಂದನು.
[53] ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಶಾಸ್ತ್ರಿಗಳೂ ಫರಿಸಾಯರೂ ಆತನನ್ನು ಕಠಿಣವಾಗಿ ಕೆಣಕಿ, ವಿರೋಧಿಸಿ ಅನೇಕ ವಿಷಯಗಳನ್ನು ಕುರಿತು ಆತನನ್ನು ಅಡ್ಡಾದಿಡ್ಡೀ ಪ್ರಶ್ನೆಮಾಡುತ್ತಾ,
[54] ಆತನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.