Skip to content
Opens in a new window
Listen to this chapter • 8:19

[1] ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರೊಂದಿಗಿತ್ತು; ಆ ವಾಕ್ಯವು ದೇವರಾಗಿತ್ತು.

[2] ಆ ವಾಕ್ಯವೆಂಬಾತನು ಆದಿಯಲ್ಲಿ ದೇವರೊಂದಿಗಿದ್ದನು.

[3] ಸಮಸ್ತವೂ ಆತನ ಮೂಲಕವಾಗಿ ಸೃಷ್ಟಿಯಾಯಿತು. ಸೃಷ್ಟಿಯಾದ ಎಲ್ಲವುಗಳಲ್ಲಿ ಆತನಿಲ್ಲದೆ ಒಂದಾದರೂ ಸೃಷ್ಟಿಯಾಗಲಿಲ್ಲ.

[4] ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು.

[5] ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲು ಆ ಬೆಳಕನ್ನು ಮುಸುಕಲಿಲ್ಲ.

[6] ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು. ಅವನ ಹೆಸರು ಯೋಹಾನನು.

[7] ಆ ಯೋಹಾನನು ಸಾಕ್ಷಿಗಾಗಿ ಬಂದನು. ತನ್ನ ಮೂಲಕವಾಗಿ ಎಲ್ಲರೂ ನಂಬುವಂತೆ ಅವನು ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡಲು ಬಂದನು.

[8] ಅವನೇ ಆ ಬೆಳಕಲ್ಲ; ಆದರೆ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ನೀಡಲೆಂದೇ ಬಂದವನು.

[9] ನಿಜವಾದ ಬೆಳಕು ಲೋಕಕ್ಕೆ ಬರುವುದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು.

[10] ಆತನು ಲೋಕದಲ್ಲಿ ಇದ್ದನು ಮತ್ತು ಲೋಕವು ಆತನ ಮೂಲಕ ಉಂಟಾಯಿತು, ಆದರೂ ಲೋಕವು ಆತನನ್ನು ಅರಿತುಕೊಳ್ಳಲಿಲ್ಲ.

[11] ಆತನು ತನ್ನ ಸ್ವಂತ ಜನರ ಬಳಿಗೆ ಬಂದನು; ಆದರೆ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.

[12] ಆದರೂ ಯಾರಾರು ಆತನನ್ನು ಸ್ವೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು.

[13] ಇವರು ರಕ್ತಸಂಬಂಧದಿಂದಾಗಲಿ, ಶರೀರದ ಇಚ್ಛೆಯಿಂದಾಗಲಿ, ಪುರುಷ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ; ದೇವರಿಂದಲೇ ಹುಟ್ಟಿದವರು.

[14] ಆ ವಾಕ್ಯವೆಂಬುವವನು ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ, ಸತ್ಯದಿಂದಲೂ ತುಂಬಿದವನಾಗಿದ್ದನು.

[15] ಆತನ ವಿಷಯವಾಗಿ ಯೋಹಾನನು ಸಾಕ್ಷಿಕೊಡುತ್ತಾನೆ, ಹೇಗೆಂದರೆ “‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದಾತನು ಈತನೇ” ಎಂದು ಘೋಷಿಸಿದನು.

[16] ಯೇಸು ಕ್ರಿಸ್ತನ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು.

[17] ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಆದರೆ ಕೃಪೆಯೂ, ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು.

[18] ದೇವರನ್ನು ಯಾರೂ ಎಂದೂ ನೋಡಿಲ್ಲ. ತಂದೆಯ ಹೃದಯದಲ್ಲಿರುವ ಏಕಪುತ್ರನೂ ಸ್ವತಃ ದೇವರೂ ಆಗಿರುವಾತನೇ, ತಂದೆಯನ್ನು ತಿಳಿಯಪಡಿಸಿದ್ದಾನೆ.

[19] ಯೆಹೂದ್ಯರು ಯೆರೂಸಲೇಮಿನಿಂದ ಯಾಜಕರನ್ನೂ, ಲೇವಿಯರನ್ನೂ ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದ್ದಕ್ಕೆ,

[20] ಅವನು ಮರೆಮಾಡದೆ ಎಲ್ಲರ ಮುಂದೆ, “ನಾನು ಕ್ರಿಸ್ತನಲ್ಲ,” ಎಂದು ಹೇಳಿದನು.

[21] ಅದಕ್ಕೆ ಅವರು, “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ” ಅಂದನು. “ನೀನು ಬರಬೇಕಾದ ಆ ಪ್ರವಾದಿಯೋ?” ಎಂದು ಕೇಳಿದ್ದಕ್ಕೆ “ಅಲ್ಲ,” ಅಂದನು.

[22] ಆಗ ಅವರು, “ಹಾಗಾದರೆ ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡಬೇಕಲ್ಲಾ. ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.

[23] ಅದಕ್ಕೆ ಯೋಹಾನನು, “ಪ್ರವಾದಿಯಾದ ಯೆಶಾಯನು ಹೇಳಿದಂತೆ, ‘ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಧ್ವನಿಯೇ ನಾನು’” ಎಂದು ಉತ್ತರ ಕೊಟ್ಟನು.

[24] ಅಲ್ಲಿ ಬಂದವರು ಫರಿಸಾಯರ ಕಡೆಯವರಾಗಿದ್ದರು.

[25] ಅವರು ಅವನಿಗೆ, “ನೀನು ಕ್ರಿಸ್ತನಾಗಲಿ, ಎಲೀಯನಾಗಲಿ ಆ ಪ್ರವಾದಿಯಾಗಲಿ ಆಗಿರದಿದ್ದರೆ, ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.

[26] ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದೆ ಇರುವ ಒಬ್ಬಾತನು ನಿಮ್ಮ ಮಧ್ಯದಲ್ಲಿದ್ದಾನೆ.

[27] ಆತನೇ ನನ್ನ ನಂತರ ಬರತಕ್ಕವನು. ಆತನ ಚಪ್ಪಲಿಗಳ ಪಟ್ಟಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಅಂದನು.

[28] ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಯಲ್ಲಿರುವ ಬೇಥಾನ್ಯ ಎಂಬ ಊರಿನಲ್ಲಿ ನಡೆಯಿತು.

[29] ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ, “ಅಗೋ, ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದಕುರಿಮರಿ.

[30] ‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ.

[31] ನನಗೂ ಆತನ ಗುರುತಿರಲಿಲ್ಲ. ಆದರೆ ಆತನನ್ನು ಇಸ್ರಾಯೇಲ್ಯರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನವನ್ನು ಮಾಡಿಸುವವನಾಗಿ ಬಂದೆನು.”

[32] ಇದಲ್ಲದೆ ಯೋಹಾನನು ಸಾಕ್ಷಿ ಕೊಟ್ಟು ಹೇಳಿದ್ದೇನೆಂದರೆ, “ದೇವರಾತ್ಮನು ಪರಲೋಕದಿಂದ ಪಾರಿವಾಳದಂತೆ ಇಳಿಯುವುದನ್ನು ಮತ್ತು ಆತನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.

[33] ನನಗೂ ಆತನು ಯಾರೆಂಬುದು ತಿಳಿದಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವುದಕ್ಕೆ ನನ್ನನ್ನು ಕಳುಹಿಸಿದಾತನು ‘ಯಾರ ಮೇಲೆ ಆತ್ಮನು ಇಳಿದುಬಂದು ನೆಲೆಯಾಗಿರುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತನು’ ಎಂದು ತಾನೇ ನನಗೆ ಹೇಳಿದನು.

[34] ನಾನು ಅದನ್ನು ನೋಡಿದ್ದೇನೆ ಮತ್ತು ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ” ಎಂದು ಹೇಳಿದನು.

[35] ಮರುದಿನ ಪುನಃ ಯೋಹಾನನೂ ತನ್ನ ಇಬ್ಬರು ಶಿಷ್ಯರೊಂದಿಗೆ ನಿಂತುಕೊಂಡಿದ್ದನು,

[36] ಆಗ ಅಲ್ಲಿ ಯೇಸು ಹೋಗುತ್ತಿರುವುದನ್ನು ನೋಡಿ, ಯೋಹಾನನೂ ಅಗೋ, “ಯಜ್ಞಕ್ಕೆ ದೇವರು ನೇಮಿಸಿರುವ ಕುರಿಮರಿ” ಎಂದು ಹೇಳಿದನು.

[37] ಆ ಇಬ್ಬರು ಶಿಷ್ಯರು ಯೋಹಾನನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು.

[38] ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು ಅವರು, “ರಬ್ಬಿಯೇ, (ಅಂದರೆ ಗುರುವೇ) ನೀನು ವಾಸಿಸುವುದು ಎಲ್ಲಿ?” ಎಂದು ಕೇಳಿದರು.

[39] ಆತನು ಅವರಿಗೆ, “ನೀವೇ ಬಂದು ನೋಡಿರಿ” ಎಂದು ಹೇಳಲು, ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿನ ಆತನ ಸಂಗಡ ಇದ್ದರು. ಆಗ ಹೆಚ್ಚುಕಡಿಮೆ ಸಂಜೆ ನಾಲ್ಕು ಗಂಟೆಯಾಗಿತ್ತು.

[40] ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಒಬ್ಬನು.

[41] ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ “ನಾವು ಮೆಸ್ಸೀಯನನ್ನು ಕಂಡುಕೊಂಡೆವು” (ಮೆಸ್ಸೀಯನು ಎಂದರೆ ಕ್ರಿಸ್ತನು) ಎಂದು ಹೇಳಿ,

[42] ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಅವನನ್ನು ನೋಡಿ “ನೀನು ಯೋಹಾನನ ಮಗನಾದ ಸೀಮೋನನು. ಇನ್ನು ಮೇಲೆ ನೀನು ‘ಕೇಫ’ ಎಂದು ಕರೆಯಲ್ಪಡುವಿ” ಎಂದು ಹೇಳಿದನು. (ಕೇಫ ಎಂದರೆ ಪೇತ್ರ ಇಲ್ಲವೆ ಬಂಡೆ ಎಂದು ಅರ್ಥ)

[43] ಮರುದಿನ ಯೇಸು ಗಲಿಲಾಯಕ್ಕೆ ಹೋಗಬೇಕೆಂದಿರುವಾಗ ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದನು.

[44] ಈ ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರರ ಪಟ್ಟಣವಾದ ಬೆತ್ಸಾಯಿದದವನಾಗಿದ್ದನು.

[45] ಫಿಲಿಪ್ಪನು ನತಾನಯೇಲನನ್ನು ಕಂಡು ಅವನಿಗೆ “ಮೋಶೆಯು ಧರ್ಮಶಾಸ್ತ್ರದಲ್ಲಿ ಯಾರ ವಿಷಯವಾಗಿ ಬರೆದನೋ ಮತ್ತು ಪ್ರವಾದಿಗಳು ಯಾರ ವಿಚಾರವಾಗಿ ಬರೆದರೋ ಆತನು ನಮಗೆ ಸಿಕ್ಕಿದನು, ಆತನು ಯಾರೆಂದರೆ ಯೋಸೇಫನ ಮಗನಾದ ನಜರೇತಿನ ಯೇಸುವೇ” ಎಂದು ಹೇಳಿದನು.

[46] ನತಾನಯೇಲನು “ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ಕೇಳಲು, ಫಿಲಿಪ್ಪನು “ಬಂದು ನೋಡು,” ಅಂದನು.

[47] ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು ಕಂಡು ಅವನನ್ನು ಕುರಿತು “ಇಗೋ, ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.

[48] ಅದಕ್ಕೆ ನತಾನಯೇಲನು “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮೊದಲೇ ನೀನು ಆ ಅಂಜೂರದ ಮರದ ಕೆಳಗಿರುವುದನ್ನು ನಾನು ನೋಡಿದೆನು” ಎಂದು ಹೇಳಿದನು.

[49] ಅದಕ್ಕೆ ನತಾನಯೇಲನು, “ಗುರುವೇ, ನೀನು ದೇವಕುಮಾರನು! ನೀನೇ ಇಸ್ರಾಯೇಲಿನ ಅರಸನು” ಎಂದನು.

[50] ಅದಕ್ಕೆ ಯೇಸು “ಆ ಅಂಜೂರದ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ನಾನು ನಿನಗೆ ಹೇಳಿದ ಮಾತ್ರಕ್ಕೆ ನಂಬುತ್ತೀಯೋ? ನೀನು ಇವುಗಳಿಗಿಂತಲೂ ಹೆಚ್ಚಿನ ಮಹತ್ಕಾರ್ಯಗಳನ್ನು ನೋಡುವೆ,” ಎಂದನು.

[51] ಯೇಸು “ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರು ಏರುತ್ತಾ ಇಳಿಯುತ್ತಾ ಇರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.

ಯೋಹಾನನು — Chapters